ADVERTISEMENT

ಗ್ರಿಲ್‌ನಲ್ಲಿ ಬೇಯಿಸಿದ ಮೆಕ್ಸಿಕನ್‌ ತಿನಿಸು

ರಮೇಶ ಕೆ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST
ಗ್ರಿಲ್‌ನಲ್ಲಿ ಬೇಯಿಸಿದ ಮೆಕ್ಸಿಕನ್‌ ತಿನಿಸು
ಗ್ರಿಲ್‌ನಲ್ಲಿ ಬೇಯಿಸಿದ ಮೆಕ್ಸಿಕನ್‌ ತಿನಿಸು   

ಮೆಕ್ಸಿಕನ್ನರಂತೆ ವೇಷಭೂಷಣ ಧರಿಸಿದ್ದ ಯುವಕರು, ಕೆಂಡವಿರುವ ಕಬ್ಬಿಣದ ಡಬ್ಬವನ್ನು ಟೇಬಲ್‌ ಮಧ್ಯದ ಖಾಲಿ ಜಾಗದಲ್ಲಿ ತಂದಿಟ್ಟರು. ನಂತರ ಅರ್ಧ ಸುಟ್ಟಿದ್ದ ಮೀನು, ಚಿಕನ್‌, ಸಿಗಡಿ, ಅನಾನಸ್‌, ಅಣಬೆ, ಪನ್ನೀರ್‌ಗಳಿರುವ ಗ್ರಿಲ್‌ಗಳನ್ನು ಡಬ್ಬದ ಮೇಲಿಟ್ಟರು. 

ಈ ಸ್ಟಾರ್ಟರ್‌ಗಳು ಕೆಂಡದ ಬಿಸಿಗೆ ಸಂಪೂರ್ಣ ಬೆಂದವು. ಸ್ಟಾರ್ಟರ್‌ಗೆ ಹಾಕಿಕೊಳ್ಳಲು ಮೂರು ಬಗೆಯ ಸಾಸ್‌ಗಳನ್ನು ಅಲ್ಲಿಟ್ಟಿದ್ದರು. ಹುಟ್ಟುಹಬ್ಬ ಸಂಭ್ರಮಾಚರಣೆಗಾಗಿ ಬಂದಿದ್ದ ಕುಟುಂಬ ಸದಸ್ಯರು ಸ್ಟಾರ್ಟರ್‌ಗಳ ರುಚಿ ನೋಡಿದರು.

ರೆಸ್ಟೊರೆಂಟ್‌ ಗೋಡೆಯ ಮೇಲೂ ಮೆಕ್ಸಿಕನ್ನರ ಸಂಸ್ಕೃತಿ ಬಿಂಬಿಸುವ ಚಿತ್ರಗಳು. ರಾಜಾಜಿನಗರ ರಾಜಕುಮಾರ್‌ ರಸ್ತೆಯಲ್ಲಿರುವ ಬಾರ್ಬೆಕ್ಯು ನೇಷನ್‌ನಲ್ಲಿ  ನಡೆಯುತ್ತಿರುವ ಮೆಕ್ಸಿಕನ್‌ ಆಹಾರೋತ್ಸವದಲ್ಲಿ ಕಂಡ ದೃಶ್ಯಗಳಿವು.

ADVERTISEMENT

ಬೆಂಗಳೂರಿನಲ್ಲಿ ಮೆಕ್ಸಿಕನ್‌ ಆಹಾರ ಹೆಚ್ಚು ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಬಾರ್ಬೆಕ್ಯು ನೇಷನ್‌ ರೆಸ್ಟೊರೆಂಟ್‌ ಮೊದಲ ಬಾರಿ ಮೆಕ್ಸಿಕನ್‌ ಆಹಾರೋತ್ಸವ ಹಮ್ಮಿಕೊಂಡಿದೆ.

ಆರಂಭದಲ್ಲಿ ಕೊಡುವ ಚಿಪ್ಸ್‌ ಪ್ಲಾಟರ್‌ನಲ್ಲಿ ನಾಚೋಸ್‌ಗಳಿರುತ್ತವೆ. ಗರಿಗರಿ ಎನ್ನುವ ನಾಚೋಸ್‌ನೊಂದಿಗೆ ನೆಂಜಿಕೊಳ್ಳಲು ಖಾರವೆನಿಸುವ ಅಲಿಪಿನೊ ಸಾಲ್ಸ, ಸೋರ್‌ ಕ್ರೀಂ, ಬಟರ್‌ ಫ್ರೂಟ್‌ನಿಂದ ಮಾಡಿದ ಕ್ರೀಂ ಇರುತ್ತದೆ. ನಂತರ ರಾಜ್ಮಾದಿಂದ ಮಾಡಿದ ಮೆಕ್ಸಿಕನ್‌ ಸೂಪ್‌ ಕುಡಿಯಲು ಕೊಡುತ್ತಾರೆ. ಸುಮಾರು ಎರಡು ಇಂಚಿನ ಗಾಜಿನ ಲೋಟದಲ್ಲಿ ಕೊಡುವ ಸೂಪ್‌ಅನ್ನು ಒಂದೇ ಬಾರಿ ಬಾಯಿಗಿಳಿಸಬಹುದು.

ಮಾಂಸಾಹಾರಿ ಹಾಗೂ ಸಸ್ಯಾಹಾರಿ ಸ್ಟಾರ್ಟರ್‌ ಮಾಡಲು ಮೆಕ್ಸಿಕನ್‌ ಪೆರಿಪೆರಿ ಮೆಣಸಿನಕಾಯಿ ಹಾಗೂ ಸಾಸ್‌ಗಳನ್ನು ಬಳಸಲಾಗಿರುತ್ತದೆ.
ಬೇಯಿಸಿದ ಆಲೂಗಡ್ಡೆ ಒಳಗೆ ಸ್ಟಫ್‌ ತುಂಬಿ ಮಾಡಿದ ‘ಬೇಕ್ಡ್‌ ಪೊಟ್ಯಾಟೊಸ್‌ ವೆಜ್‌, ಮಟನ್‌ ಸೀಖ್ ಕಬಾಬ್‌, ಚಿಕನ್‌ ಲೆಗ್‌ಪಿಸ್‌ ಸಹ ವಿಶೇಷ ತಿನಿಸುಗಳಾಗಿವೆ. ಸ್ಟಾರ್ಟರ್‌ ಗಳೆಲ್ಲವನ್ನೂ ಟೇಬಲ್‌ನಲ್ಲೇ ಕುಳಿತು ಅನಿಯಮಿತವಾಗಿ ತಿನ್ನುವ ಅವಕಾಶ ಗ್ರಾಹಕರಿಗೆ ಇದೆ. ಸ್ಟಾರ್ಟರ್‌ಗಳು ಸಾಕೆನ್ನಿಸಿದಾಗ ಬಾವುಟವನ್ನು ಬಗ್ಗಿಸಿದರೆ ಮಾತ್ರ ಅವುಗಳ ಸರಬರಾಜು ಬಂದ್‌ ಆಗುತ್ತದೆ. 

‘ಬೆಂಗಳೂರಿನಲ್ಲಿ ಮೆಕ್ಸಿಕನ್‌ ಆಹಾರವನ್ನು ಇಷ್ಟಪಡುವವರು ಹೆಚ್ಚಿದ್ದಾರೆ, ಮೆಕ್ಸಿಕನ್‌ ರೆಸ್ಟೊರೆಂಟ್‌ಗಳೂ ಆರಂಭವಾಗುತ್ತಿವೆ. ಹಾಗಾಗಿ ನಮ್ಮಲ್ಲಿ ಈ ಆಹಾರೋತ್ಸವ ಹಮ್ಮಿಕೊಂಡಿದ್ದೇವೆ. ರಾಜ್ಮಾದಿಂದ ಮಾಡಿದ  ಸಾರು, ಸೂಪ್‌, ಸಲಾಡ್‌ ಜೊತೆಗೆ ಬರಿಟೊ, ಟಾಕೊಸ್‌, ಚಿಮ್ಮಿಚಾಂಗ್‌, ಮೆಕ್ಸಿಕನ್‌ ರೈಸ್‌, ಗೋವನ್‌ ಫಿಶ್‌ ಕರ್ರಿ, ಹಾಟ್‌ಪಾಟ್‌ ಮೆಕ್ಸಿಕನ್‌ ತಿನಿಸುಗಳಿವೆ. ಇಲ್ಲಿ ಬಫೆ ವ್ಯವಸ್ಥೆಯಿದೆ’ ಎನ್ನುತ್ತಾರೆ ರೆಸ್ಟೊರೆಂಟ್‌ನ ವ್ಯವ ಸ್ಥಾಪಕ ಬಸಂತ್‌ ನಾಯಕ್‌.

‘ಕ್ರಿಕೆಟಿಗನಾಗುವ ಆಸೆಯಿತ್ತು’
ಗುವಾಹಟಿಯಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡಿದೆ.  ನಂತರ ಬಾರ್ಬೆಕ್ಯು ನೇಷನ್‌ನಲ್ಲಿ ಮೆಡಿಟರೇನಿಯನ್‌ ಖಾದ್ಯಗಳನ್ನು ಮಾಡುವ ತರಬೇತಿ ಪಡೆದೆ. ತರಬೇತಿಯಲ್ಲಿ ಲೆಬನೀಸ್‌, ಮೆಕ್ಸಿಕನ್‌ ಹಾಗೂ ಇಟಲಿಯ ಅಡುಗೆ ಕಲೆಯನ್ನು ಕಲಿತೆವು.

ಮೆಕ್ಸಿಕನ್ನರು ಆಹಾರದಲ್ಲಿ ರಾಜ್ಮಾ ಹಾಗೂ ಪೆರಿಪೆರಿ ಚಿಲ್ಲಿ ಹೆಚ್ಚಾಗಿ ಬಳಸುತ್ತಾರೆ. ನಮ್ಮ ಆಹಾರೋತ್ಸವದಲ್ಲೂ ರಾಜ್ಮಾದಿಂದ ಮಾಡಿದ ತಿನಿಸುಗಳಿವೆ. ಕಾಶ್ಮೀರಿ ಮಟನ್‌ ರೋಗನ್‌ ಜೋಶ್ ನನ್ನ ಸಿಗ್ನೇಚರ್‌ ತಿನಿಸು. ನಾನು ಬಾಣಸಿಗ ಆಗದಿದ್ದರೆ ಕ್ರಿಕೆಟಿಗ ಅಥವಾ ಫುಟ್‌ಬಾಲ್‌ ಆಟಗಾರ ನಾಗುತ್ತಿದ್ದೆ’ ಎನ್ನುತ್ತಾರೆ ಕಾರ್ಯನಿರ್ವಾಹಕ ಬಾಣಸಿಗ ತಿಲಕ್‌ ದಹಾಲ್‌.

ಈ ರೆಸ್ಟೊರೆಂಟ್‌ನಲ್ಲಿ ಮಾಂಸವನ್ನು ಅಡುಗೆಗೆ ಬಳಸುವುದಕ್ಕೂ ಮುಂಚೆ ಪರೀಕ್ಷಿಸಿ ಖರೀದಿಸುತ್ತಾರೆ. ಬಾಸಾ ಮೀನನ್ನು ವಿಯೆಟ್ನಾಂನಿಂದ ತರಿಸುತ್ತಾರಂತೆ. ಏಕೆಂದರೆ ಅಲ್ಲಿ ದೊಡ್ಡ ದೊಡ್ಡ ಬಾಸಾ ಮೀನುಗಳು ಸಿಗುತ್ತವೆಯಂತೆ. ಅಂದಹಾಗೆ, ಮೆಕ್ಸಿಕನ್ ಆಹಾರೋತ್ಸವವು  ಇಂದಿರಾನಗರ, ಜೆ.ಪಿ.ನಗರ, ಹಲಸೂರು ಲಿಡೊ, ಕಲ್ಯಾಣನಗರ ಹಾಗೂ ಮಾರತ್ತಹಳ್ಳಿ ಬ್ರಾಂಚ್‌ಗಳಲ್ಲೂ ನಡೆಯುತ್ತಿದೆ.

ಕೊನೆಯ ದಿನ: ಏಪ್ರಿಲ್ 30
ಸ್ಥಳ: ನೆಲಮಹಡಿ,  ವೆಸ್ಟ್‌ಗೇಟ್‌ ಮಾಲ್‌, ಡಾ.ರಾಜಕುಮಾರ್‌ ರಸ್ತೆ, 4ನೇ ಬ್ಲಾಕ್‌, ರಾಜಾಜಿನಗರ.
ಸ್ಥಳ ಕಾಯ್ದಿರಿಸಲು: 080 6060 0000

ರೆಸ್ಟೊರೆಂಟ್‌: ಬಾರ್ಬೆಕ್ಯು ನೇಷನ್‌
ವಿಶೇಷ: ಮೆಕ್ಸಿಕನ್‌ ಆಹಾರ
ಸಮಯ: ಬೆಳಿಗ್ಗೆ 11.30ರಿಂದ ರಾತ್ರಿ 10.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.