ADVERTISEMENT

ಮಜ್ಜಿಗೆ ಅಡುಗೆ

ನಮ್ಮೂರ ಊಟ

ಸಹನಾ ಕಾಂತಬೈಲು
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು. ಇದು ಸರ್ವಋತು ಪಾನೀಯ. ಆಯುರ್ವೇದದಲ್ಲಿ ಮಜ್ಜಿಗೆಯನ್ನು ‘ಭೂಮಿ ಮೇಲಿನ ಅಮೃತ’ವೆಂದು ಹೇಳಲಾಗಿದೆ. ಮಜ್ಜಿಗೆ ಹಲವು ರೋಗಗಳಿಗೆ ಔಷಧಿ. ಇದರಲ್ಲಿ ಕೊಬ್ಬಿನ ಅಂಶ ತುಂಬ ಕಡಿಮೆ. ಇದು ಆಹಾರ ಜೀರ್ಣವಾಗುವಂತೆ ಮಾಡಿ ಪಚನ ಕ್ರಿಯೆಗೆ ಸಹಕಾರಿಯಾಗುತ್ತದೆ. ಮಧುಮೇಹಿಗಳಿಗೆ ಮೊಸರಿಗಿಂತ ಮಜ್ಜಿಗೆ ಉತ್ತಮ. ಮಜ್ಜಿಗೆಯನ್ನು ನೀರು ಸೇರಿಸಿ ತಿಳಿ ಮಾಡಿ. ಅದಕ್ಕೆ ಉಪ್ಪು, ಶುಂಠಿ, ಹಸಿಮೆಣಸು ಹಾಕಿ ನಿಂಬೆಹಣ್ಣು ಹಿಂಡಿ ಕುಡಿಯಲು ಬೇಸಿಗೆಯಲ್ಲಿ ತುಂಬ ಹಿತಕರ. ಮಜ್ಜಿಗೆಯಿಂದ ರುಚಿಯಾದ ಅಡುಗೆ ಮಾಡಬಹುದು.

ಮಜ್ಜಿಗೆ ದೋಸೆ

ಸಾಮಗ್ರಿ: ಬೆಳ್ತಿಗೆ ಅಕ್ಕಿ 3ಕಪ್, ಅವಲಕ್ಕಿ ಒಂದು ಹಿಡಿ, ತೆಂಗಿನಕಾಯಿ ಅರ್ಧ, ದಪ್ಪ ಸಿಹಿ ಮಜ್ಜಿಗೆ 1 ಕಪ್, ಮೊಸರು 1 ಕಪ್, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ ದೊಡ್ಡ ನಿಂಬೆ ಗಾತ್ರ, ತುಪ್ಪ ಸ್ವಲ್ಪ.

ವಿಧಾನ: ಅಕ್ಕಿಯನ್ನು ನೆನೆಹಾಕಿ ತೊಳೆದು ಅವಲಕ್ಕಿ, ಕಾಯಿತುರಿ, ಮಜ್ಜಿಗೆ, ಬೆಲ್ಲ, ಉಪ್ಪು ಸೇರಿಸಿ ಸ್ವಲ್ಪ ಗಟ್ಟಿಯಾಗಿ ರುಬ್ಬಿ ತೆಗೆದಿಡಿ. ಮಾರನೆ ದಿನ ಮೊಸರು ಹಾಕಿ ಬೆರೆಸಿ ಬಳಿಕ ಕಾವಲಿಯ ಮೇಲೆ ದೋಸೆ ಹಾಕಿ. ಇದನ್ನು ಸ್ವಲ್ಪ ಹರಡಬೇಕು. ಬೆಂದಾಗ ಚೂರು ತುಪ್ಪ ಹಾಕಿ ಕವುಚಿ ಹಾಕಿ ತೆಗೆಯಿರಿ. ಬಿಸಿಬಿಸಿ ದೋಸೆ ಬ್ರೆಡ್‌ನಂತೆ ಮೆತ್ತಗಾಗಿರುತ್ತದೆ. ಸಿಹಿ ಇರುವುದರಿಂದ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಚಟ್ನಿಯೊಂದಿಗೆ ತಿನ್ನಲು ತುಂಬ ರುಚಿ.

ಮಜ್ಜಿಗೆ ಸುಟ್ಟವು

ADVERTISEMENT

ಸಾಮಗ್ರಿ: ಬೆಳ್ತಿಗೆ ಅಕ್ಕಿ 2 ಕಪ್, ಉದ್ದಿನಬೇಳೆ 1 ಮುಷ್ಟಿ, ಅವಲಕ್ಕಿ 1 ಮುಷ್ಟಿ, ಮೊಸರು ಅಥವಾ ಸಿಹಿ ಮಜ್ಜಿಗೆ 1 ಸೌಟು, ಹಸಿಮೆಣಸು 1, ಶುಂಠಿ 1 ತುಂಡು, ಕರಿಬೇವು 1 ಕಂತೆ, ಕೊತ್ತಂಬರಿ ಸೊಪ್ಪು 1 ಕಂತೆ, ಸಕ್ಕರೆ 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಅಕ್ಕಿ ಮತ್ತು ಬೇಳೆಯನ್ನು ನಾಲ್ಕು ಗಂಟೆ ನೆನೆಸಿ ತೊಳೆದು ಅವಲಕ್ಕಿ ಸೇರಿಸಿ ನುಣ್ಣಗೆ ರುಬ್ಬಿ. ಇಡ್ಲಿ ಹಿಟ್ಟಿನ ಹದ ಇರಲಿ. ತೆಗೆದ ಮೇಲೆ ಉಪ್ಪು, ಮೊಸರು, ಸಕ್ಕರೆ ಸೇರಿಸಿ ಕಲಸಿ 6 ಗಂಟೆ ಕಾಲ ಮುಚ್ಚಿಡಿ. ಬೆಳಿಗ್ಗೆ ರುಬ್ಬಿ ಇಟ್ಟರೆ ಸಾಯಂಕಾಲದ ತಿಂಡಿಗೆ ಮಾಡಬಹುದು. ಎರೆಯುವ ಸಮಯದಲ್ಲಿ ಸಣ್ಣಗೆ ಹೆಚ್ಚಿದ ಹಸಿಮೆಣಸು, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಬೆರಸಿ. ನಂತರ ಅಪ್ಪದ ಕಾವಲಿಗೆ ಅರ್ಧ ಚಮಚ ತುಪ್ಪ ಹಾಕಿ ಬಿಸಿ ಮಾಡಿ ಒಂದು ಸೌಟಿನಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟನ್ನು ಸುರಿಯಿರಿ. ಬೆಂದು ತಳ ಬಿಟ್ಟಾಗ ಕವುಚಿ ಹಾಕಿ ತೆಗೆಯಿರಿ. ಈ ಸುಟ್ಟವು ಸಿಹಿ, ಖಾರ ಮಿಶ್ರಿತವಾಗಿದ್ದು ಮೆತ್ತಗಿರುತ್ತದೆ. ಹಾಗೆಯೇ ತಿನ್ನಬಹುದು ಅಥವಾ ಈರುಳ್ಳಿ ಹಾಕಿದ ಕೆಂಪು ಚಟ್ನಿಯೊಂದಿಗೂ ಸವಿಯಬಹುದು.

ಮಜ್ಜಿಗೆ ಅವಲಕ್ಕಿ

ಸಾಮಗ್ರಿ: ಅವಲಕ್ಕಿ 2 ಕಪ್, ಸಿಹಿ ಮಜ್ಜಿಗೆ 2 ಕಪ್, ಹಾಲು ಅರ್ಧ ಕಪ್, ಸಕ್ಕರೆ 2 ಚಮಚ, ಉಪ್ಪು ಚಿಟಿಕೆ.

ವಿಧಾನ: ಅವಲಕ್ಕಿ ಹೊರತು ಉಳಿದೆಲ್ಲಾ ವಸ್ತುಗಳನ್ನು ಒಟ್ಟಿಗೆ ಹಾಕಿ ಬೆರೆಸಿ. ಕೊನೆಗೆ ಅವಲಕ್ಕಿ ಹಾಕಿ ಬೆರೆಸಿ. ಕೂಡಲೇ ತಿನ್ನಲು ರುಚಿ. ಬಿಸಿಲ ಝಳಕ್ಕೆ ಇದರ ಸೇವನೆ ಹೊಟ್ಟೆಗೆ ಹಿತ.

ಮಜ್ಜಿಗೆ ಸಾರು

ಸಾಮಗ್ರಿ: ಮಜ್ಜಿಗೆ 2 ಕಪ್, ಕಾಯಿತುರಿ ಅರ್ಧ ಕಪ್, ಕೊತ್ತಂಬರಿ 1ಚಮಚ, ಮೆಂತೆ ಅರ್ಧ  ಚಮಚ, ಜೀರಿಗೆ 1 ಚಮಚ, ಉದ್ದಿನ ಬೇಳೆ ಅರ್ಧ ಚಮಚ, ಕಡಲೆಬೇಳೆ ಅರ್ಧ ಚಮಚ, ಕರಿಬೇವು 2 ಎಸಳು, ಒಣಮೆಣಸು 6, ಎಣ್ಣೆ 1 ಚಮಚ, ಬೆಲ್ಲ ಹುಣಸೆ ಬೀಜದ ಗಾತ್ರ, ಉಪ್ಪು ರುಚಿಗೆ ತಕ್ಕಷ್ಟು.

ವಿಧಾನ: ಬಾಣಲೆಗೆ ಎಣ್ಣೆ ಹಾಕಿ ಒಣಮೆಣಸು, ಕೊತ್ತಂಬರಿ, ಮೆಂತೆ, ಜೀರಿಗೆ, ಉದ್ದಿನ ಬೇಳೆ, ಕಡಲೆಬೇಳೆ, ಕರಿಬೇವು ಎಲೆ ಹಾಕಿ ಹುರಿಯಿರಿ. ಇವನ್ನು ಕಾಯಿತುರಿಯ ಜೊತೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಇದಕ್ಕೆ 4 ಕಪ್ ನೀರು ಹಾಕಿ, ಮಜ್ಜಿಗೆ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಕರಿಬೇವಿನ ಒಗ್ಗರಣೆ ಕೊಡಿ. ಊಟಕ್ಕೆ ರುಚಿ. ಸೂಪ್‌ನಂತೆ ಕುಡಿಯಲೂ ಚೆನ್ನಾಗಿರುತ್ತದೆ. ಅಜೀರ್ಣಕ್ಕೆ ಉತ್ತಮ. ಬಾಣಂತಿಯರಿಗೂ ಒಳ್ಳೆಯದು.

ಮಜ್ಜಿಗೆ ಮೆಣಸು

ಸಾಮಗ್ರಿ: ಹಸಿ ಮೆಣಸು 1 ಕೆ.ಜಿ., ಉಪ್ಪು 200 ಗ್ರಾಂ, ದಪ್ಪ ಮಜ್ಜಿಗೆ ಅರ್ಧ ಲೀಟರ್.

ವಿಧಾನ: ಹಿಂದಿನ ರಾತ್ರಿ ಹಸಿಮೆಣಸನ್ನು ತೊಳೆದು ತೊಟ್ಟು ತೆಗೆದು ತುದಿಯನ್ನು ಅರ್ಧದವರೆಗೆ ಸೀಳಿ ಮಜ್ಜಿಗೆಗೆ ಉಪ್ಪು ಬೆರೆಸಿ ಸೀಳಿದ ಹಸಿಮೆಣಸನ್ನು ಹಾಕಿ ಬೆರೆಸಿ ಇಡಿ. ಮಾರನೆ ದಿನ ಮಜ್ಜಿಗೆಯಿಂದ ತೆಗೆದು ಬಿಸಿಲಿನಲ್ಲಿ ಒಣಗಿಸಿ. ಸಾಯಂಕಾಲ ಬಿಸಿಲಿನಿಂದ ತೆಗೆದು ಪುನ: ಅದೇ ಮಜ್ಜಿಗೆಯಲ್ಲಿ ಬೆರೆಸಿ ಇಡಿ. ಹೀಗೆ ಮೂರು ದಿನ ಮಾಡಿ. ನಂತರ ಚೆನ್ನಾಗಿ ಒಣಗಿಸಿ ಡಬ್ಬದಲ್ಲಿ ಹಾಕಿಡಿ. ಬೇಕೆಂದಾಗ ಎಣ್ಣೆಯಲ್ಲಿ ಗರಿಗರಿಯಾಗಿ ಕರಿದು ಊಟಕ್ಕೆ ಉಪಯೋಗಿಸಿ. ಒಂದು ತುತ್ತು ಅನ್ನ ಹೆಚ್ಚೇ ಹೊಟ್ಟೆ ಸೇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.