ADVERTISEMENT

ಸಖರಾಯಪಟ್ಟಣ: ಬಾಯಲ್ಲಿ ನೀರು ತರಿಸುವ ಖಾರ!

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 19:30 IST
Last Updated 9 ಸೆಪ್ಟೆಂಬರ್ 2017, 19:30 IST
ಸಖರಾಯಪಟ್ಟಣ: ಬಾಯಲ್ಲಿ ನೀರು ತರಿಸುವ ಖಾರ!
ಸಖರಾಯಪಟ್ಟಣ: ಬಾಯಲ್ಲಿ ನೀರು ತರಿಸುವ ಖಾರ!   

–ದಿನೇಶ ಪಟವರ್ಧನ್

*

ಒಮ್ಮೆ ಕಡೂರಿನತ್ತ ಗೆಳೆಯರೊಂದಿಗೆ ಹೋಗುತ್ತಿದ್ದಾಗ ಸಖರಾಯಪಟ್ಟಣದ ಕೃಷ್ಣ ಹೊಟೇಲ್ ಬಳಿ ಕಾರು ಫಕ್ಕನೆ ನಿಂತಿತು. ಅರ್ಧಗಂಟೆ ಮೊದಲು ಹೊಟ್ಟೆ ಬಿರಿಯುವಷ್ಟು ತಿಂದಿದ್ದರೂ ಇನ್ನೂ ಇವರ ಹಸಿವು ಇಂಗಿಲ್ಲವಲ್ಲ ಎಂದು ಮನಸ್ಸಿನಲ್ಲೇ ಗೊಣಗಿದೆ.

ADVERTISEMENT

ಒಳಹೊಕ್ಕ ತಕ್ಷಣ ಎರಡು ಪ್ಲೇಟ್ ಖಾರ, ಒಂದೆರಡು ಜಿಲೇಬಿ, ಬಾದುಶಾಹ ತರಲು ಹೇಳಿದ ಸ್ನೇಹಿತ. ‘ನಿಂದೇನು ಹೊಟ್ಟೆನೋ...’ ಎಂದು ಕೇಳಿದಾಗ ಸ್ನೇಹಿತ ನಕ್ಕ. ‘ನನಗೆ ಬೇಡ, ನೀವು ತೆಗೆದುಕೊಳ್ಳಿ’ ಎಂದು ಹೇಳಿ ಸುಮ್ಮನಾದೆ.

ಆರ್ಡರ್‌ ಕೊಟ್ಟ ತಿಂಡಿಗಳನ್ನು ಸಪ್ಲೈಯರ್ ಎದುರಿಗಿಟ್ಟ. ಇವರು ಒಂದೇ ಸಮನೆ ತಿನ್ನತೊಡಗಿದರು. ಮಧ್ಯೆ ಮಧ್ಯೆ ಆಹಾ ಎನ್ನುವ ಒಗ್ಗರಣೆ ಬೇರೆ. ಇದು ನನ್ನ ಹೊಟ್ಟೆ ಉರಿಸಲು ಎಂದು ತಿಳಿಯಿತು. ತಾಳಲಾರದೆ ನಾನೂ ಕೈಹಾಕಿ ಖಾರ ತಿಂದೆ.

ಇಲ್ಲಿಗೆ ಬಂದಿದ್ದ ಇವರ ಉದ್ದೇಶ ಅರ್ಥವಾಗಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ‘ಇನ್ನೊಂದು ಪ್ಲೇಟ್ ತನ್ನಿ’ ಎಂದಾಗ ಮುಸಿಮುಸಿ ನಗುವ ಸರದಿ ಗೆಳೆಯರದು. ಅಂದಿನಿಂದ ಇಂದಿನವರೆಗೆ ಸಖರಾಯಪಟ್ಟಣಕ್ಕೆ ಹೋದರೆ ಮನೆಗೆ ಖಾರ ತರಲು ಮರೆಯುವುದಿಲ್ಲ.

ಒಂದೊಂದು ಊರು ತನ್ನದೇ ಆದ ವೈಶಿಷ್ಟ್ಯ, ವಿಭಿನ್ನ ಗುಣದ ಮೂಲಕ ನಾಡಿನ ಗಮನ ಸೆಳೆದಿರುತ್ತದೆ. ಸಿಹಿ ಹಲಸಿಗೆ ಹೆಸರಾದ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಇನ್ನೊಂದು ಹೆಗ್ಗಳಿಕೆ ಇಲ್ಲಿ ನಿತ್ಯ ಸಿಗುವ ಖಾರ (ಮಿಕ್ಸ್‌ಚರ್).

ಚಿಕ್ಕಮಗಳೂರಿನಿಂದ ಕಡೂರಿಗೆ ತೆರಳುವ ಮಾರ್ಗ ಮಧ್ಯೆ ಸಿಗುವ ಊರು ಸಖರಾಯಪಟ್ಟಣ. ರಾಜ ರುಕ್ಮಾಂಗದ ದೊರೆ ಆಳ್ವಿಕೆ ನಡೆಸಿದ ಸ್ಥಳವಿದು. ಅನೇಕ ಪ್ರವಾಸಿ ಸ್ಥಳಗಳೂ ಇಲ್ಲಿವೆ. ಅದೆಲ್ಲದಕ್ಕೂ ಮಿಗಿಲಾದುದು ಇಲ್ಲಿ ಸಿಗುವ ಖಾರ.

ಒಮ್ಮೆ ತಿಂದರೆ ಮತ್ತೊಮ್ಮೆ ತಿನ್ನಬೇಕು ಎಂದು ಅನಿಸುವಷ್ಟು ಸ್ವಾದ. ಅಷ್ಟೊಂದು ರುಚಿ. ಬಾಯಿಗೆ ಇಟ್ಟೊಡನೆ ಕರುಗುವ ಗುಣ. ತಿಂದವರು ಬಾಯಿ ಚಪ್ಪರಿಸದೆ ಇರಲಾರರು.

ಖಾರದ ಸವಿ ಹೆಚ್ಚಿಸಲು ಜೊತೆಗೆ ಕರಿಬೇವು, ಹುರಿಗಡಲೆ, ನೆಲಗಡಲೆಯನ್ನೂ ಹಾಕಿರುತ್ತಾರೆ. ಕಳೆದ 20 ವರ್ಷಗಳಿಂದಲೂ ಒಂದೇ ಬಗೆಯ ರುಚಿಯನ್ನು ಕಾಯ್ದುಕೊಂಡಿರುವುದು ನಿಜಕ್ಕೂ ಮೆಚ್ಚುವ ಸಂಗತಿ.

ಪ್ರತಿ ದಿನ ಬೆಳಿಗ್ಗೆ 6ರಿಂದ ಇಲ್ಲಿನ ಖಾರ ದೂರದ ಊರುಗಳಿಗೆ ಹೋಗತೊಡಗುತ್ತದೆ. ಹಿಂದಿನ ದಿನವೇ ತಮಗೆಷ್ಟು ಖಾರ ಬೇಕು ಎಂದು ಸುತ್ತಮುತ್ತಲ, ದೂರದ ಊರುಗಳ ಅಂಗಡಿಯವರು ಬುಕ್ ಮಾಡಿ ಹೋಗುತ್ತಾರೆ. ಅದಕ್ಕನುಗುಣವಾಗಿ ಬೆಳಿಗ್ಗೆ ಕೋಳಿ ಕೂಗುವ ಮೊದಲೇ ಎದ್ದು ಖಾರ ಸಿದ್ಧಪಡಿಸಲಾಗುತ್ತದೆ.

ಅಂಗಡಿಗಳಿಗೆ ಕೊಡುವುದರ ಜೊತೆಗೆ ಇತರೆ ಗ್ರಾಹಕರಿಗೂ ಲಭ್ಯ. ಹೊಟೇಲ್ ಕೃಷ್ಣಕ್ಕೆ ಹೋದರೆ ಮೊದಲು ಕಾಣ ಸಿಗುವುದು ಖಾರ ಕಟ್ಟಿಟ್ಟ ಸಣ್ಣ, ಸಣ್ಣ ಪೊಟ್ಟಣಗಳು. ಪ್ರತಿಯೊಂದರಲ್ಲಿ ಕಾಲು ಕೆ.ಜಿ. ಇರುತ್ತದೆ. ಕೆ.ಜಿ. ಒಂದರ ಬೆಲೆ ₹ 200. ನಿತ್ಯ ನೂರಾರು ಕೆ.ಜಿ. ಖಾರ ಬಿಕರಿ ಆಗುತ್ತದೆ.

20 ವರ್ಷಗಳ ಹಿಂದೆ ಪ್ಲೇಟ್ ಖಾರ ಒಂದಕ್ಕೆ ಇದ್ದ ಬೆಲೆ ₹ 4 ಮಾತ್ರ. ಅಂದಿನಿಂದ ಇಂದಿನವರೆಗೂ ಗುಣಮಟ್ಟ ಮತ್ತು ರುಚಿಯಲ್ಲಿ ರಾಜಿ ಆಗದಿರುವುದು ವಿಶೇಷ. ಅಂದು ಸಿದ್ಧಪಡಿಸಿದ್ದು ಅಂದೇ ಸಿಗುತ್ತದೆ. ಹೀಗಾಗಿ ಇಲ್ಲಿನ ಖಾರಕ್ಕೆ ಅತ್ಯಧಿಕ ಬೇಡಿಕೆ. ಸರಿಸುಮಾರು ಮಧ್ಯಾಹ್ನದ ವೇಳೆಗೆ, ಕೆಲವೊಮ್ಮೆ 10 ಗಂಟೆಗೆ ಪೂರ್ತಿ ಖಾಲಿ ಆದ ನಿದರ್ಶನಗಳೂ ಇವೆ.

ಖಾರದ ಜೊತೆಗೆ ಜಿಲೇಬಿ, ಬಾದುಶಾ, ಮೈಸೂರ್ ಪಾಕ್ ಕೂಡಾ ಪ್ರಸಿದ್ಧ. ಇತ್ತ ಬಂದಾಗ ನೀವೂ ಸಖರಾಯಪಟ್ಟಣದ ಖಾರ ಖರೀದಿಸಿ ಸವಿಯಲು ಮರೆಯಬೇಡಿ. ಹಾಗೇ ಹೋದರೆ ಖಂಡಿತ ಮಿಸ್ ಮಾಡಿಕೊಳ್ತೀರಿ ಅಪರೂಪದ ರುಚಿಯನ್ನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.