ADVERTISEMENT

ಎಲ್ಲ ಅಂಡಾಣುಗಳು ಫಲ ಕೊಡುವುದಿಲ್ಲ

ಡಾ.ಬೀನಾ ವಾಸನ್
Published 8 ಸೆಪ್ಟೆಂಬರ್ 2017, 19:30 IST
Last Updated 8 ಸೆಪ್ಟೆಂಬರ್ 2017, 19:30 IST
ಎಲ್ಲ ಅಂಡಾಣುಗಳು ಫಲ ಕೊಡುವುದಿಲ್ಲ
ಎಲ್ಲ ಅಂಡಾಣುಗಳು ಫಲ ಕೊಡುವುದಿಲ್ಲ   

ನಮಗೆ ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಹಲವರು ವೈದ್ಯರನ್ನು ನಾವಿಬ್ಬರೂ ಕಂಡು, ಪರೀಕ್ಷೆ ಮಾಡಿಸಿಕೊಂಡಿದ್ದೇವೆ. ಏನೂ ಸಮಸ್ಯೆ ಇಲ್ಲ ಎನ್ನುತ್ತಾರೆ. ಆದರೆ ಐಯುಐ ಮಾಡಿಸಿಕೊಳ್ಳಲು ಸಲಹೆ ಮಾಡಿದರು. ಇದುವರೆಗೂ ನಾಲ್ಕು ಬಾರಿ ಮಾಡಿಸಿಕೊಂಡಿದ್ದೇವೆ. ಆದರೆ ಫಲ ಕೊಟ್ಟಿಲ್ಲ. ಇದರಿಂದಾಗಿ ತುಂಬ ಬೆಸರ ಮತ್ತು ಹತಾಶೆ ಕಾಡುತ್ತಿವೆ. ಏನು ಮಾಡುವುದು ಎಂದು ತಿಳಿಯುತ್ತಿಲ್ಲ. ಮಾರ್ಗದರ್ಶನ ಮಾಡಿ.

ಐಯುಐ ಏಕೆ ವಿಫಲವಾಗುತ್ತವೆ?

ಎಷ್ಟೋ ದಂಪತಿಗಳಲ್ಲಿ ಐಯುಐ (ಕೃತಕ ವೀರ್ಯಾಣು ಧಾರಣೆ) ವಿಫವಾಗುತ್ತಿವೆ. ಯಶಸ್ಸಿನ ಪ್ರಮಾಣ ಶೇ. 5ರಿಂದ ಶೇ. 25ರವರೆಗೆ ಮಾತ್ರವೇ.

ADVERTISEMENT

ವಯಸ್ಸು: ಎಲ್ಲ ಕೃತಕ ಗರ್ಭಧಾರಣೆಗೂ ಅನ್ವಯಿಸುವಂತೆ ಮಹಿಳೆಯ ವಯಸ್ಸು ಐಯುಐನಲ್ಲೂ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ವಯಸ್ಸು ಹೆಚ್ಚಿದಂತೆಲ್ಲ (35 ಮತ್ತು ಅದಕ್ಕೂ ಹೆಚ್ಚು) ಯಶಸ್ಸಿನ ಪ್ರಮಾಣ ಕಡಿಮೆಯಾಗುತ್ತಹೋಗುತ್ತದೆ. ವಯಸ್ಸು ಹೆಚ್ಚಾಗುತ್ತಿದ್ದಂತೆ ಅಂಡಾಣುಗಳ ಗುಣಮಟ್ಟದಲ್ಲಿ ಇಳಿಕೆಯಾಗುತ್ತಿರುತ್ತದೆ. 18 ವಯಸ್ಸಿನ ಕನ್ಯೆಯೊಬ್ಬಳು ಗರ್ಭಧರಿಸುವ ಸಾಧ್ಯತೆ ಶೇ.25ರಷ್ಟು ಇದ್ದರೆ, ಇದೇ ಪ್ರಮಾಣ 40ರ ಮಹಿಳೆಯಲ್ಲಿ ಕೇವಲ ಶೇ.4–6ರಷ್ಟು ಮಾತ್ರವೇ ಇರುವುದು. ವಯಸ್ಸಾಗುತ್ತಿದ್ದತಂತೆ ಅಂಡಾಣುಗಳ ಒಟ್ಟು ಉತ್ಪತ್ತಿಯ ಪ್ರಮಾಣದಲ್ಲಿಯೇ ಇಳಿಕೆಯಾಗುತ್ತದೆ.

ಅಂಡಾಣುಗಳ ಗುಣಮಟ್ಟ: ಮಹಿಳೆಯೊಬ್ಬಳಲ್ಲಿ ಅಂಡಗಳ ಉತ್ಪತ್ತಿ ಆಗುತ್ತಿದೆ ಎಂದ ಮಾತ್ರಕ್ಕೆ ಅವೆಲ್ಲವೂ ಆರೋಗ್ಯಪೂರ್ಣವೇ ಆಗಿರುತ್ತವೆ ಎಂದೇನೂ ಅಲ್ಲ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಕುಂಠಿತ ಗುಣಮಟ್ಟದ ಅಂಡಾಣುಗಳು ಹಲವು ರೀತಿಯ ಆಂತರಿಕ ದೋಷಗಳಿಗೆ ಒಳಗಾಗಿರುತ್ತವೆ. ಕ್ರೋಮೊಸೋಮ್‌ಗಳ ಸಮಸ್ಯೆ ಮತ್ತು ಶಕ್ತಿ ಉತ್ಪಾದನೆಯ ವಿಫಲತೆ – ಇಂಥ ಸಮಸ್ಯೆಗಳಿಗೆ ಅವು ತುತ್ತಾಗಿರುತ್ತವೆ. ಅಂಡಾಣುಗಳ ಗುಣಮಟ್ಟವನ್ನು ಹೆಚ್ಚಿಸಬಲ್ಲಂಥ ಮಾರ್ಗೋಪಾಯ ಸದ್ಯಕ್ಕಂತೂ ಯಾವುದೂ ಇಲ್ಲ ಎನ್ನದೆ ವಿಧಿಯಿಲ್ಲ. ಹೀಗಾಗಿ ಈ ಸಮಸ್ಯೆಗೆ ಒಳಗಾಗಿರುವ ದಂಪತಿಗಳು ಅನಿವಾರ್ಯವಾಗಿ ದಾನಿ–ಅಂಡಾಣುಗಳನ್ನೇ ಆಶ್ರಯಿಸಬೇಕಾಗುತ್ತದೆ. ಕೃತಕ ಗರ್ಭಧಾರಣೆಯ ಚಕ್ರ ಮುಗಿಯುವ ಮೊದಲೇ ಅಂಡಾಣುಗಳ ಗುಣಮಟ್ಟದ ಪರೀಕ್ಷೆಯನ್ನು ನಡೆಸುವುದು ಉತ್ತಮ. ಇದೊಂದು ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸಾ ವಿಧಾನ. ಒಮ್ಮೆ ಅಂಡಾಣುಗಳನ್ನು ಪುನರೂರ್ಜಿತಗೊಳಿಸಿದ ಬಳಿಕ ಅವುಗಳ ಗುಣಮಟ್ಟವನ್ನು ಪರೀಕ್ಷಿಸಲು ಆಗಲಾರದು. ಅಂಡಾಣುಗಳ ರೂಪವಿಜ್ಞಾನವನ್ನು (Egg Morphology) ಸರಿಯಾಗಿ ಅಧ್ಯಯನ ಮಾಡದಿದ್ದಾಗ ಕೃತಕ ಗರ್ಭಧಾರಣೆ ಅಥವಾ ಐಯುಐ ವಿಫಲವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಂಡಾಣುಗಳ ಗುಣಮಟ್ಟವನ್ನು ತಿಳಿದುಕೊಳ್ಳುವುದು ತುಂಬ ಮುಖ್ಯವಾದ ಸಂಗತಿ. ಬಿಡುಗಡೆಯಾದ ಅಂಡಾಣುಗಳು  ಪ್ರೌಢಾವಸ್ಥೆಯನ್ನು ತಲುಪದಿದ್ದಾಗಲೂ ಗರ್ಭಧಾರಣೆ ಸಾಧ್ಯವಾಗದು. ಗರ್ಭಧಾರಣೆಯ ಸಹಜ ಪ್ರಕ್ರಿಯೆಯಲ್ಲಿ ಕೆಲವು ಹಾರ್ಮೋನ್‌ಗಳು ಅಂಡಾಣುಗಳನ್ನು ಅವು ಫಲವಂತೆಯನ್ನು ಪಡೆಯುವಂತಾಗಲು ಸಿದ್ಧಗೊಳಿಸುತ್ತವೆ.

(ಮುಂದುವರೆಯುತ್ತದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.