ADVERTISEMENT

ತಡವಾದ ಪಿತೃತ್ವ: ಮಗುವಿಗೆ ತೊಂದರೆಯೇ?

ಡಾ.ಎಸ್.ಎಸ್.ವಾಸನ್
Published 12 ಮೇ 2017, 19:30 IST
Last Updated 12 ಮೇ 2017, 19:30 IST
ಡಾ. ವಾಸನ್,  ಆ್ಯಂಡ್ರೊಲಜಿಸ್ಟ್ info@manipalfertility.com
ಡಾ. ವಾಸನ್, ಆ್ಯಂಡ್ರೊಲಜಿಸ್ಟ್ info@manipalfertility.com   

73 ವಯಸ್ಸಿನ ರಾಕ್‌ ಗಾಯಕ ಮಿಕ್ ಜಾಗರ್, ಇತ್ತೀಚೆಗೆ ಎಂಟನೇ ಮಗುವನ್ನು ಪಡೆದು ಸುದ್ದಿಯಲ್ಲಿದ್ದರು. ಇದರ ಬೆನ್ನಲ್ಲೇ ಪ್ರಶ್ನೆಗಳೂ ಹುಟ್ಟಿಕೊಂಡವು. ಮಹಿಳೆಯರಿಗೆ ವಯಸ್ಸಾಗುತ್ತಿದ್ದಂತೆ ಗರ್ಭವನ್ನು ಧರಿಸುವ ಸಾಧ್ಯತೆ ಕ್ಷೀಣಿಸುತ್ತಾ ಹೋಗುವಂತೆ ಪುರುಷರಲ್ಲೂ ಯಾವುದೇ ಬದಲಾವಣೆ ಆಗುವುದಿಲ್ಲವೇ? ಪುರುಷರಲ್ಲೂ ವಯಸ್ಸಾದಂತೆ ಫಲವಂತಿಕೆಯ ಅಂಶ ಕಡಿಮೆಯಾಗುವುದಿಲ್ಲವೇ?

ತಾಯಿಯಾಗಬಯಸುವ ಮಹಿಳೆಯು ತನ್ನ ದೈಹಿಕ ಅಂಶಗಳ ಮೇಲೆ ಸಾಕಷ್ಟು ಗಮನ ಹರಿಸಬೇಕಾಗುತ್ತದೆ. ಆದರೆ ಪುರುಷರಿಗೆ ಹಾಗಿಲ್ಲವೇ? ಪುರುಷರಿಗೆ ಮೆನೋಪಾಸ್‌ನಂಥ ಸಮಸ್ಯೆ ಇಲ್ಲದಿರುವುದರಿಂದ ಮಹಿಳೆಯರಂತೆ ಚಿಂತಿಸುವ ಅಗತ್ಯ ಇಲ್ಲ. ಎಷ್ಟು ವಯಸ್ಸಿಗೆ ಬೇಕಾದರೂ ಮಕ್ಕಳನ್ನು ಪಡೆಯಬಹುದು ಎಂಬ ಮಾತಿದೆ. ಆದರೆ ಇದು ಎಷ್ಟು ಆರೋಗ್ಯಕರ ಎಂಬುದನ್ನೂ ಯೋಚಿಸಬೇಕಿದೆ.

ತಡವಾಗಿ ಮಕ್ಕಳನ್ನು ಪಡೆಯುವುದು ಸಾಧ್ಯವೇ ಆಗಿದ್ದರೂ ವಯಸ್ಸಾದ  ಅಪ್ಪಂದಿರು ತಮ್ಮ ಮಕ್ಕಳಿಗೆ ಕೆಲವು ಆರೋಗ್ಯ ಸಮಸ್ಯೆಗಳನ್ನು ದಾಟಿಸುವ ಸಾಧ್ಯತೆಗಳೂ ಹೆಚ್ಚಿರುತ್ತವೆ ಎಂಬ ಅಂಶವನ್ನು ತಳ್ಳಿಹಾಕುವಂತಿಲ್ಲ.

*ಹೆಚ್ಚು ವಯಸ್ಸಾದಷ್ಟು ಮಗುವಿಗೆ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯೂ ಹೆಚ್ಚಿರುತ್ತದೆ.

*ಮಕ್ಕಳಲ್ಲಿ ಮೂರ್ಛೆರೋಗ, ಆಟಿಸಂ ಹಾಗೂ ಸ್ತನ ಕ್ಯಾನ್ಸರ್‌ನ ಸಾಧ್ಯತೆಗಳೂ ಇರುತ್ತವೆ.

*ವಯಸ್ಸಾದ ತಂದೆಗೆ ಜನಿಸಿದ ಮಕ್ಕಳಿಗೆ ಮಾನಸಿಕ ಸಮಸ್ಯೆಗಳೂ ಎದುರಾಗಬಹುದು.

ಅಮೆರಿಕದ  ಜನಸಂಖ್ಯೆಯಲ್ಲಿ 1980ರಿಂದ ಏರಿಕೆಯಾಯಿತು. ಅದರಲ್ಲಿ 35–49ರ ವಯೋಮಾನದ ಪುರುಷರ ಪ್ರಮಾಣದಲ್ಲಿ ಶೇ.40ರಷ್ಟು ಹೆಚ್ಚಿತ್ತು. ಆದರೆ 30ಕ್ಕೂ ಕಡಿಮೆ ವಯೋಮಾನದ ಪುರುಷರಲ್ಲಿ ಈ ಪ್ರಮಾಣ ಶೇ.20ರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ. 45ರಿಂದ 79 ವಯೋಮಾನದ ನಡುವೆ ತಂದೆಯಾದವರನ್ನು ‘ವಯಸ್ಸಾದ ತಂದೆ’ ಎಂದು ಪರಿಗಣಿಸಲಾಗಿದೆ.

20–24 ವಯಸ್ಸಿನ ಪುರುಷರಿಗೆ ಜನಿಸಿದ ಮಕ್ಕಳಿಗೆ ಹೋಲಿಸಿದರೆ, ವಯಸ್ಸಾದ ತಂದೆಗೆ ಜನಿಸಿದ  ಮಕ್ಕಳು ಬೈಪೋಲಾರ್ ಸಮಸ್ಯೆಗೆ (ಒಂದು ಬಗೆಯ ಮಾನಸಿಕ ಸಮಸ್ಯೆ) ಒಳಗಾಗುವ ಸಾಧ್ಯತೆಯು 25 ಪಟ್ಟು ಹೆಚ್ಚಿರುತ್ತದೆ. ಈ ಮಕ್ಕಳಲ್ಲಿ ಹೈಪರ್‌–ಆ್ಯಕ್ಟಿವಿಟಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಯು 13 ಪಟ್ಟು ಹೆಚ್ಚಿದ್ದು, ಆಟಿಸಂ ಸಮಸ್ಯೆ ಬರುವ ಸಾಧ್ಯತೆಯು 3.5 ಪಟ್ಟು ಹೆಚ್ಚಿರುತ್ತದೆ.

ಇದರೊಂದಿಗೆ,  ವಯಸ್ಸಾದ ಪುರುಷರಿಗೆ ಹುಟ್ಟಿದ ಮಕ್ಕಳಲ್ಲಿ ಮಾದಕವಸ್ತು ಸೇವನೆ, ಆತ್ಮಹತ್ಯೆ, ಶೈಕ್ಷಣಿಕ ವೈಫಲ್ಯ ಸಮಸ್ಯೆಗಳ ಸಾಧ್ಯತೆಯೂ ಹೆಚ್ಚಿಗೆ ಇರುತ್ತದೆ ಎಂಬುದು ದೀರ್ಘಾವಧಿ ಅಧ್ಯಯನವೊಂದರಿಂದ ತಿಳಿದುಬಂದಿದೆ.

ಹಾಗೆಂದು ವಯಸ್ಸಾದ ಪುರುಷರಿಗೆ ಜನಿಸಿದ ಎಲ್ಲಾ ಮಕ್ಕಳಿಗೂ ಮಾನಸಿಕ ಸಮಸ್ಯೆ ಎದುರಾಗುತ್ತದೆ ಎಂದು ಹೇಳುವಂತಿಲ್ಲ. ಆದರೆ ಸಮಸ್ಯೆಯ ಸಾಧ್ಯತೆಗಳನ್ನು ಹತ್ತಿರಕ್ಕೆ ತಂದುಕೊಳ್ಳದೇ,  ತಮ್ಮ ವೈದ್ಯರೊಂದಿಗೆ ಚರ್ಚಿಸಿ ತಡವಾಗಿ ಮಗುವನ್ನು ಪಡೆಯುವುದರಿಂದ ಇರುವ ಅನುಕೂಲ, ಅನನುಕೂಲಗಳ ಕುರಿತು ತಿಳಿವಳಿಕೆ ಪಡೆಯುವುದು ಒಳಿತು.

ಏಕೆ ಹೀಗಾಗುತ್ತದೆ?
ಹೊಸ ಅಧ್ಯಯನವೊಂದು ಹೀಗೆ ಹೇಳುತ್ತದೆ–ವಯಸ್ಸಾಗುತ್ತಿದ್ದಂತೆ ಪುರುಷರಲ್ಲಿ ಉಂಟಾಗುವ ಅನುವಂಶಿಕ ಧಾತುವಿನ ರೂಪಾಂತರವು ತಂದೆಯ ಮೂಲಕ ಮಕ್ಕಳಿಗೆ ದಾಟಿ, ಅವರು ಪ್ರೌಢಾವಸ್ಥೆ ತಲುಪಿದ ನಂತರ ಪ್ರತಿ 16.5 ವರ್ಷಕ್ಕೆ ಅದು ದ್ವಿಗುಣಗೊಳ್ಳುತ್ತಾ ಸಾಗುತ್ತದೆ.
ಮಗು ಪಡೆಯುವ ಅವಧಿಯಲ್ಲಿ ಗಂಡನಂತೆ ಹೆಂಡತಿಗೂ ವಯಸ್ಸಾದ ಕಾರಣ ಗರ್ಭ ಫಲಿಸದೇ ಇರುವ ಕಾರಣವಿದ್ದರೂ ಏರುತ್ತಿರುವ ಪುರುಷರ ವಯಸ್ಸಿಗೂ ತಡವಾದ ಗರ್ಭಧಾರಣೆಗೂ ಸಂಬಂಧವಿದೆ ಎಂಬುದೂ ನಿಜವೇ.

ಇದಕ್ಕೆ ವಯೋಸಂಬಂಧಿ ಆರೋಗ್ಯ ಸಮಸ್ಯೆಗಳು, ವೀರ್ಯದ ಗುಣಮಟ್ಟ ಕುಸಿಯುವುದು, ಡಿಎನ್‌ಎ ವಿಘಟನೆಯ ಸಂಖ್ಯೆ ಏರುವುದೂ ಇದಕ್ಕೆ ಕಾರಣವಾಗಿರುತ್ತದೆ. ಹೀಗಾಗುವುದು ವರ್ಣತಂತುಗಳು ಅಸಹಜವಾಗಲು ಹಾಗೂ ಕೆಲವು ಜನ್ಮದೋಷಗಳಿಗೂ ಎಡೆಮಾಡಿಕೊಡುತ್ತವೆ.

ವಯಸ್ಸು ಹಾಗೂ ವೀರ್ಯ ಉತ್ಪತ್ತಿ
ಪುರುಷರಲ್ಲಿ, ಪ್ರತಿ ಹೃದಯಬಡಿತಕ್ಕೂ 1000 ಚಲನಯುಕ್ತ ವೀರ್ಯ ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ ಸೌತ್ ಏಷಿಯನ್ ಸೊಸೈಟಿ ಫಾರ್ ಸೆಕ್ಷುಯಲ್ ಮೆಡಿಸಿನ್‌ನ ವಕ್ತಾರ ಡಾ. ಅರುಣ್ ಕಾರ್ತಿಕ್. ಆದರೆ ಎಷ್ಟೋ ಬಾರಿ ಅವು ಅಂಡಾಣುವನ್ನು ಫಲಿಸದೇ ಇರಬಹುದು. ಹಾಗೆಯೇ ವಯಸ್ಸು 30 ದಾಟುತ್ತಿದ್ದಂತೆ, ದೈಹಿಕ ಕಾರ್ಯವೈಖರಿಯಲ್ಲೂ ಕೆಲವು ಬದಲಾವಣೆಯಾಗುತ್ತವೆ. ಕಲುಷಿತ ವಾತಾವರಣಕ್ಕೆ ತೆರೆದುಕೊಳ್ಳುವುದು, ವಿಕಿರಣಗಳಿಗೆ ಒಡ್ಡಿಕೊಳ್ಳುವುದು – ಹೀಗೆ ಹಲವು ಕಾರಣಗಳು ವೀರ್ಯ ಉತ್ಪತ್ತಿಯ ಮೇಲೆ ಪರಿಣಾಮ ಬೀರುತ್ತವೆ.

ವಯಸ್ಸಾಗುವುದರ ಜೊತೆ ಈ ಅಂಶಗಳು ಸೇರಿಕೊಂಡರೆ ಸಮಸ್ಯೆಯ ಸಾಧ್ಯತೆಯೂ ಹೆಚ್ಚಾದಂತೆ. ಪುರುಷರ ಲೈಂಗಿಕ ಹಾರ್ಮೋನಾದ ಟೆಸ್ಟೊಸ್ಟೆರಾನ್‌ ಉತ್ಪತ್ತಿಗೆ ಕಾರಣವಾಗುವ ಲೇಡಿಗ್‌ ಹಾಗೂ ಹೊಸ ವೀರ್ಯವನ್ನು ಪೋಷಿಸುವ ಸರ್ಟೊಲಿ ಕೋಶಗಳು ಕ್ಷೀಣಿಸುವುದರಿಂದ ತಡವಾದ ಗರ್ಭಧಾರಣೆ ಹಾಗೂ ಗರ್ಭಧಾರಣೆಯಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಜೊತೆಗೆ ದೋಷಯುಕ್ತ ವೀರ್ಯ ಉತ್ಪತ್ತಿ ಆಗುವುದರಿಂದ ಮಕ್ಕಳ ಮೇಲೆ ಪರಿಣಾಮ ಬೀರಬಹುದು.
(ಮುಂದುವರೆಯುತ್ತದೆ)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.