ADVERTISEMENT

ನಮ್ಮ ಖುಷಿಯ ವಿಧಾತರು ಯಾರು?

ಪ್ರಜಾವಾಣಿ ವಿಶೇಷ
Published 18 ಏಪ್ರಿಲ್ 2017, 19:30 IST
Last Updated 18 ಏಪ್ರಿಲ್ 2017, 19:30 IST
ನಮ್ಮ ಖುಷಿಯ ವಿಧಾತರು ಯಾರು?
ನಮ್ಮ ಖುಷಿಯ ವಿಧಾತರು ಯಾರು?   

ಜಗತ್ತಿನ ಅತ್ಯಂತ ಸಂತೋಷದ ಸವಿ ಮತ್ತು ಅದಕ್ಕೆ ತದ್ವಿರುದ್ಧವಾದ ಘೋರ ಹತಾಶೆಯ ಕಹಿ ಎರಡನ್ನೂ ಎದುರಿಗಿಟ್ಟರೆ ಬಹುತೇಕ ಜನರು ಹತಾಶೆಯನ್ನೇ ಆರಿಸಿಕೊಳ್ಳುತ್ತಾರೆ. ಮನುಷ್ಯನ ಈ ಸ್ವಭಾವವೇ ನಿಗೂಢ.

ನಮಗೆ ಗೊತ್ತಿಲ್ಲದೆಯೇ ನಾವು ಇಂಥ ಹತಾಶೆಯ ಹಾದಿಯನ್ನು ಆರಿಸಿಕೊಂಡಿರುತ್ತೇವೆ. ನಾವು ಎಲ್ಲಿದ್ದೇವೆ ಎಂಬುದನ್ನು ತಿಳಿದುಕೊಳ್ಳಲು ತುಂಬ ಕಷ್ಟಪಡಬೇಕಾಗಿಲ್ಲ. ಸುಮ್ಮನೆ ನಮ್ಮ ದಿನನಿತ್ಯದ ನಡವಳಿಕೆಯನ್ನೊಮ್ಮೆ ವಸ್ತುನಿಷ್ಠವಾಗಿ ಅವಲೋಕಿಸಿಕೊಂಡರೂ ಸಾಕು.

ನಿಮ್ಮ ದೇಹದ ಬಗ್ಗೆ, ಸೌಂದರ್ಯದ ಬಗ್ಗೆ ನಿಮಗೆ ಕೀಳರಿಮೆ ಇದೆಯೇ? ನೀವು ಏನಾಗಿದ್ದೀರೋ ಅದರ ಬಗ್ಗೆ ಅತೃಪ್ತಿ ಇದೆಯೇ? ನಿಮ್ಮ ಸಹೋದ್ಯೋಗಿಗಳ ಬಗ್ಗೆ, ನಿಮ್ಮ ಅಧೀನದಲ್ಲಿ ಕೆಲಸ ಮಾಡುವವರ ಬಗ್ಗೆ ಅನುಮಾನಗಳಿವೆಯೇ? ಇನ್ನೊಬ್ಬರ ಪ್ರತಿಭೆ ಮತ್ತು ಒಳ್ಳೆಯತನದ ಬಗ್ಗೆ ಅಕಾರಣ ಶಂಕೆಪಡುವುದು ನಿಮ್ಮ ಗುಣವೇ?

ನಿಮ್ಮ ಬದುಕಿನಲ್ಲಿನ ಬಹುತೇಕ ವಿಷಯಗಳು ಮತ್ತು ವ್ಯಕ್ತಿಗಳ ಬಗ್ಗೆ ತೀರಾ ನಿಷ್ಠುರವಾಗಿದ್ದೀರೇ? ಬೇರೆಯವರ ದಡ್ಡತನದ ಬಗ್ಗೆ ಹೀಗಳೆಯುವುದು, ಮೂದಲಿಸುವುದು ನಿಮ್ಮ ಅಭ್ಯಾಸವೇ? ಹಾಗಾದರೆ ನೀವು ಈಗಾಗಲೇ ನಿರಾಶೆಯ ಕೂಪದ ಹಾದಿಯನ್ನು ಆಯ್ದುಕೊಂಡಿದ್ದೀರಿ ಎಂತಲೇ ಅರ್ಥ.

ನೆನಪಿಡಿ, ನಂದನವನವನ್ನು ನಿರ್ಮಿಸಬಲ್ಲ ಮನುಷ್ಯನೇ ಮಸಣವನ್ನೂ ಸೃಷ್ಟಿಸಬಲ್ಲನು. ಈ ಎರಡೂ ಅವನೊಳಗೇ ಇರುವ ಮನಸ್ಥಿತಿಗಳು. ಯಾವುದನ್ನು ಜಾಗೃತವಾಗಿರಿಸಿಕೊಳ್ಳಬೇಕು ಎಂಬ ಆಯ್ಕೆಯೂ ಅವನಿಗೆ ಸಂಬಂಧಿಸಿದ್ದು. ಒಂದು ನಿದರ್ಶನದ ಮೂಲಕ ಈ ಮನಸ್ಥಿತಿಯನ್ನು ಇನ್ನಷ್ಟು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.

ಒಂದು ಹೋಟೆಲಿನಲ್ಲಿ ಕಾಯಂ ಬರುವ ಗಿರಾಕಿ,  ಯಾವಾಗಲೂ ‘ಒಂದೇ ಇಡ್ಲಿಯನ್ನು ಕೊಡುತ್ತೀರಿ. ತಾನು ಕೊಡುವ ಬೆಲೆಗೆ ಇನ್ನೂ ಹೆಚ್ಚು ಕೊಡಬೇಕು’ ಎಂದು ಗೊಣಗುತ್ತಿದ್ದನು. ಇದನ್ನು ನೋಡಿ ಹೋಟೆಲ್‌ ಮಾಣಿಯು ಮರುದಿನ ಅವನಿಗೆ ಎರಡು ಇಡ್ಲಿಯನ್ನು ಕೊಟ್ಟನು.  ಅದಕ್ಕೆ ಆ ಗಿರಾಕಿ ‘ಎರಡು ಯಾತಕ್ಕೆ ಸಾಕಾದೀತು? ನಾನು ಕೊಡುವ ಬೆಲೆಗೆ ಇನ್ನೂ ಹೆಚ್ಚು ಇಡ್ಲಿ ಕೊಡಬೇಕು’ ಎಂದು ದೂರಿದನು. ಮರುದಿನ ಅವನ ಟೇಬಲ್‌ ಮೇಲೆ ಎಂಟು ಇಡ್ಲಿಗಳಿದ್ದವು. ಆಗಲೂ ಆ ಗಿರಾಕಿಯ ಪ್ರತಿಕ್ರಿಯೆ ಆಶಾದಾಯಕವೇನೂ ಆಗಿರಲಿಲ್ಲ.

‘ಓ... ನೀವಿನ್ನೂ ನಿಮ್ಮ ಜಿಪುಣತನವನ್ನು ಪೂರ್ತಿ ಬಿಟ್ಟಿಲ್ಲ. ಇಷ್ಟು ಕಮ್ಮಿ ಇಡ್ಲಿ ಕೊಟ್ಟಿದ್ದೀರಿ’. ಹೋಟೆಲ್‌ನವರಿಗೆ ಸಾಕಾಗಿಹೋಯ್ತು. ಹೇಗಾದರೂ ಮಾಡಿ ಇವನನ್ನು ತೃಪ್ತಿಗೊಳಿಸಿ ಗೊಣಗಾಟ ನಿಲ್ಲಿಸಿಬಿಡಬೇಕು ಎಂದು ಹಟ ತೊಟ್ಟರು.

ಮ್ಯಾನೇಜರ್‌ ಖುದ್ದಾಗಿ ನಿಂತು ಎರಡು ಜನರು ಹಿಡಿದು ಸಾಗಿಸಬಹುದಾದಷ್ಟು ದೊಡ್ಡದಾದ ಒಂದು ಇಡ್ಲಿಯನ್ನು ಮಾಡಿಸಿದನು. ಹತ್ತು ಜನರೂ ತಿಂದು ಮಿಗುವಷ್ಟು ದೊಡ್ಡದಿತ್ತು ಆ ಇಡ್ಲಿ. ಗೊಣಗಾಟದ ಗಿರಾಕಿ ಬಂದ ಕೂಡಲೇ ಮ್ಯಾನೇಜರ್‌ ಸ್ವಂತ ಹೋಗಿ ಇಬ್ಬರು ಮಾಣಿಗಳ ಸಹಾಯದಿಂದ ಆ ದೊಡ್ಡ ಇಡ್ಲಿಯನ್ನು ಹೊತ್ತು ತಂದು ಟೇಬಲ್‌ ಮೇಲಿಟ್ಟು, ಗಿರಾಕಿಯ ಪ್ರತಿಕ್ರಿಯೆಗಾಗಿ ಕಾದು ನಿಂತರು.

ಒಮ್ಮೆ ಬೃಹತ್‌ ಇಡ್ಲಿಯ ಮೇಲೆಲ್ಲ ಕೈಯಾಡಿಸಿ, ಒಮ್ಮೆ ಮೂಸಿ ನೋಡಿ, ವ್ಯಂಗ್ಯವಾಗಿ ನಕ್ಕು ಆ ಗಿರಾಕಿ ಹೇಳಿದ್ದು,
‘ಹಂ! ಅಂತೂ ನೀವು ಮತ್ತೆ ಮೊದಲಿನಂತೆ ಒಂದೇ ಒಂದು ಇಡ್ಲಿ ಕೊಡುವ ಮಟ್ಟಕ್ಕೆ ಬಂದಿರಿ, ಅಲ್ಲವೇ?’.

***


ಪ್ರಾರಂಭದಲ್ಲಿಯೇ ಹೇಳಿದಂತೆ ನಿಜಕ್ಕೂ ಮನುಷ್ಯನ ಸ್ವಭಾವ ಒಂದು ನಿಗೂಢವೇ! ಸಕಾರಾತ್ಮಕ ಯೋಚನೆಯಿಂದ, ಮನಃತೃಪ್ತಿಯಿಂದ ನೆಮ್ಮದಿಯ ದೀಪವನ್ನು ಹಚ್ಚುವುದನ್ನು ಬಿಟ್ಟು, ಯಾಕೆ ಜನರು ನಿರಾಶೆಯ ಗಾಳಿ ಊದಿ ಅದನ್ನು ಆರಿಸುತ್ತಾರೆ? ಯಾಕೆ ತಮ್ಮ ಕೈಯಾರೆ ಕತ್ತಲೆಯನ್ನೇ ತಂದುಕೊಳ್ಳುತ್ತಾರೆ?

ಮನಸ್ಸೆಂಬ ಕನ್ನಡಿ
ಮ್ಯಾಥ್ಯೂ ರಿಚರ್ಡ್‌ ಒಬ್ಬ ಪ್ರಸಿದ್ಧ ಮಾಂಕ್‌. ಧ್ಯಾನದಿಂದ ಮಿದುಳಿನ ಮೇಲೆ ಆಗುವ ಪರಿಣಾಮಗಳ ಬಗ್ಗೆ ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಯಗಳಲ್ಲಿಯೂ ಭಾಗಿಯಾಗಿರುವ ಅವರ ಪ್ರಕಾರ ಮನಸ್ಸು ಒಂದು ಕನ್ನಡಿಯಂತೆ. ಈ ಕನ್ನಡಿ ಸಿಡುಕು ಮತ್ತು ನಗು ಎರಡನ್ನೂ ಪ್ರತಿಫಲಿಸುತ್ತದೆ.

ತನ್ನೆದುರಿನ ಹಲವು ರೀತಿಯ ಭಿನ್ನ ಬಿಂಬಗಳನ್ನು ಪ್ರತಿಫಲಿಸುವುದು ಕನ್ನಡಿಯ ಗುಣಧರ್ಮ. ಆದರೆ ಅವುಗಳಲ್ಲಿ ಒಂದೂ ಕನ್ನಡಿಯ ಭಾಗವಲ್ಲ. ಕನ್ನಡಿಯಲ್ಲಿ ಅಂತರ್ಗತವಾದವುಗಳಲ್ಲ. ತನ್ನ ಎದುರಿನ ವಸ್ತುವನ್ನು ಪ್ರತಿಫಲಿಸುವುದಷ್ಟೇ ಅದಕ್ಕೆ ಗೊತ್ತು.

ಉದಾಹರಣೆಗೆ, ಮನಸ್ಸೆಂಬ ಕನ್ನಡಿಯ ಮುಂದೆ ನೀವು ಸಿಡುಕಿನ ಮುಖವನ್ನೇ ಇರಿಸಿದರೆ ಅದು ಅದನ್ನೇ ಪೂರ್ತಿಯಾಗಿ ಪ್ರದರ್ಶಿಸುತ್ತದೆ. ನಗುಮುಖದ ಪ್ರದರ್ಶನಕ್ಕೆ ಅಲ್ಲಿ ಅವಕಾಶವೇ ಇರುವುದಿಲ್ಲ.

ಮನಸ್ಸು ಈ ರೀತಿಯ ಪ್ರತಿಫಲನಗುಣವನ್ನು ಹೊಂದಿದ್ದು, ಖುಷಿ, ನೋವು, ಸಿಟ್ಟು, ಹತಾಶೆ ಹೀಗೆ ಹಲವು ಭಿನ್ನ ಆಲೋಚನೆಗಳನ್ನು ಪ್ರತಿಫಲಿಸುತ್ತಿರುತ್ತದೆ. ಆದರೆ ಅವ್ಯಾವುವೂ ಮನಸ್ಸಿನ ಭಾಗವಲ್ಲ. ಬರೀ ಪ್ರತಿಬಿಂಬಗಳಷ್ಟೆ.

‘ಮನಸ್ಸು ಕನ್ನಡಿಯ ಹಾಗೆ ಕೆಲಸ ಮಾಡುವ ಕಾರಣದಿಂದಲೇ ಸಿಡುಕಿನ ಮುಖದ ಬಿಂಬದ ಸ್ಥಾನವನ್ನು ಮಂದಸ್ಮಿತವೂ ತುಂಬಬಹುದು. ಅದೇ ರೀತಿ ನಿರಾಶೆಯ ಭಾವದ ಜಾಗವನ್ನು ಸಂತೋಷದ ಭಾವವೂ ಆವರಿಸಬಹುದು. ಒಂದು ಸಂತೋಷದ ಆಲೋಚನೆಯು ಎಲ್ಲ ನಕಾರಾತ್ಮಕ ಆಲೋಚನೆಗಳಿಗೆ ಔಷಧವಾಗಿ ಪರಿಣಮಿಸಬಹುದು’ ಎನ್ನುತ್ತಾರೆ ಮ್ಯಾಥ್ಯೂ.

ಅವರ ಮಾತನ್ನು ಸರಿಯಾಗಿ ಅರ್ಥಮಾಡಿಕೊಂಡು, ನಕಾರಾತ್ಮಕ ಯೋಚನೆಗಳು ನಮ್ಮ ಆರೋಗ್ಯ ಮತ್ತು ನೆಮ್ಮದಿ ಎರಡನ್ನೂ ಹಾಳುಮಾಡುತ್ತವೆ ಎಂಬುದನ್ನು ಅರಿತುಕೊಳ್ಳಬೇಕು. ಆಗ ಸಂತೋಷದ ಔಷಧವನ್ನು ಮಾತ್ರ ಸ್ವೀಕರಿಸುತ್ತಿರುತ್ತೇವೆ.

ಈ ಸಂತೋಷವೆಂಬುದು ಒಂದು ಸಲ ತೆಗೆದುಕೊಂಡು ಬಿಟ್ಟುಬಿಡುವ ಔಷಧ ಅಲ್ಲವೇ ಅಲ್ಲ. ಅದನ್ನು ನಾವು ಆಜೀವ ಪರ್ಯಂತ, ಪ್ರತಿದಿನ, ಪ್ರತಿಕ್ಷಣವೂ ತೆಗೆದುಕೊಳ್ಳುತ್ತಲೇ ಇರಬೇಕು.

ಬದುಕು ತುಂಬ ಮುಕ್ತವಾಗಿ–ಮುಗ್ಧವಾಗಿ ಇಂಥ ಸಂತೋಷದ ಔಷಧದ ಕೊಡುಗೆಗಳನ್ನು ನೀಡುತ್ತಲೇ ಇರುತ್ತದೆ. ಎಂದೂ ಮುಗಿಯದ ಉದಾರತೆ ಅದರದು. ಆದರೆ ನಾವು? ಬದುಕು ನೀಡಿದ ಇಂಥ ಅಮೂಲ್ಯ ಕೊಡುಗೆಗಳನ್ನು ನಾವು ಹೇಗೆ ಸ್ವೀಕರಿಸುತ್ತೇವೆ?

ಈ ಕ್ಷಣವಷ್ಟೇ ನಮ್ಮದು
ಸುಂದರವಾದ ನೀತಿಕಥೆಯೊಂದು ಹೀಗಿದೆ: ಒಬ್ಬ ಮನುಷ್ಯ ಸತ್ತ ನಂತರ ಜೋಳಿಗೆಯನ್ನು ಹಿಡಿದು ನಿಂತಿರುವ ದೇವರನ್ನು ನೋಡುತ್ತಾನೆ. ಆ ದೇವರು ಮನುಷ್ಯನಿಗೆ ಹೇಳುತ್ತಾನೆ, ‘ಬಾ ಮಗೂ, ಹೊರಡುವ ಸಮಯ ಬಂದಿದೆ’. ಮನುಷ್ಯ ‘ನಿನ್ನ ಜೋಳಿಗೆಯಲ್ಲಿ ಏನಿದೆ?’ ಕೇಳುತ್ತಾನೆ. ‘ನಿನಗೆ ಸಂಬಂಧಪಟ್ಟ ವಸ್ತುಗಳು’ ಎಂದು ದೇವರು ಉತ್ತರಿಸುತ್ತಾನೆ.

‘ನನ್ನ ಹಣ, ಬಟ್ಟೆಗಳು, ಪುಸ್ತಕಗಳು ಎಲ್ಲ ಇವೆಯಾ?’ ಮನುಷ್ಯ ಕುತೂಹಲದಿಂದ ಕೇಳುತ್ತಾನೆ.
ದೇವರು ಉತ್ತರಿಸುತ್ತಾನೆ. ‘ಅದು ಭೂಮಿಗೆ ಸಂಬಂಧಿಸಿದವು ಮಗೂ, ಯಾವತ್ತೂ ನಿನ್ನವಾಗಿರಲಿಲ್ಲ’.

‘ನನ್ನ ನೆನಪುಗಳು?’ ಮನುಷ್ಯ ಕೊಂಚ ಅಳುಕಿನಿಂದಲೇ ಕೇಳುತ್ತಾನೆ.
ದೇವರ ಉತ್ತರ ಸ್ಪಷ್ಟ. ‘ಅವು ಕಾಲಕ್ಕೆ ಸಂಬಂಧಿಸಿದವು’.

‘ನನ್ನ ಸ್ನೇಹಿತರು, ಕುಟುಂಬ, ಸಂಬಂಧಗಳು?’ – ಮನುಷ್ಯನ ಧ್ವನಿಯಲ್ಲಿ ಇನ್ನಷ್ಟು ಕುತೂಹಲ ಸೇರಿಕೊಂಡಿರುತ್ತದೆ.
ದೇವರು ಶಾಂತನಾಗೇ ಉತ್ತರಿಸುತ್ತಾನೆ. ‘ಅವು ನೀನು ಪ್ರಯಾಣಿಸಿದ ದಾರಿಗೆ ಸಂಬಂಧಿಸಿದವು’.

ಮನುಷ್ಯನ ಕಣ್ಣಿನಲ್ಲಿ ನೀರು ತುಂಬಿಕೊಂಡವು. ಜಾರುತ್ತಿರುವ ಕಂಬನಿಯನ್ನು ಒರೆಸಿಕೊಳ್ಳಲೂ ಯತ್ನಿಸದೆ ತಾನೇ ಆ ದೇವರ ಜೋಳಿಗೆಯನ್ನು ತೆರೆಯುತ್ತಾನೆ. 

ಅದು ಖಾಲಿಯಾಗಿತ್ತು!
‘ನನಗೆ ಸಂಬಂಧಿಸಿದ್ದು ಏನೂ ಇಲ್ಲವೇ?’ ಈ ಸಲ ಮನುಷ್ಯ ತನಗೆ ತಾನೇ ಎಂಬಂತೆ ಹೇಳಿಕೊಳ್ಳುತ್ತಾನೆ. ಒಮ್ಮೆ ನಕ್ಕು ಮಾತು ಮುಂದುವರಿಸುವ ದೇವರು ‘ಅದು ನಿಜ ಮಗೂ, ನಿನಗೆ ಸಂಬಂಧಿಸಿದ್ದು ಏನೂ ಇಲ್ಲ. ಒಂದನ್ನು ಹೊರತುಪಡಿಸಿ...’ ಎಂದು ಮಾತನ್ನು ಅರ್ಧಕ್ಕೇ ನಿಲ್ಲಿಸುತ್ತಾನೆ. ಮನುಷ್ಯ ಅಚ್ಚರಿಯಿಂದ ಕಣ್ಣುಬಿಡುತ್ತಾ, ‘ಏನು? ಏನನ್ನು ಹೊರತು ಪಡಿಸಿ?’ ಕೇಳುತ್ತಾನೆ.

‘ಈ ಕ್ಷಣ! ನೀನು ನೀನಾಗಿ ಬದುಕಿದ ಪ್ರತಿಕ್ಷಣ!’
ಕಥೆ ಇಲ್ಲಿಗೆ ಕೊನೆಗೊಳ್ಳುತ್ತದೆ.
ಈ ಕಥೆಯಲ್ಲಿ ದೇವರು ಹೇಳುವ ಕೊನೆಯ ಮಾತು ಎಂಥ ಸತ್ಯ ಅಲ್ಲವೇ?
ಈ ಕ್ಷಣ, ನಾನು ಬದುಕಿರುವ–ಬದುಕುತ್ತಿರುವ ಪ್ರತಿಕ್ಷಣ ಪೂರ್ತಿಯಾಗಿ ನಮ್ಮದು.

ಆತ್ಮಾವಲೋಕನ ಮಾಡಿಕೊಳ್ಳಿ. ಹೇಗೆ ಪ್ರತಿಕ್ಷಣವನ್ನೂ ನಮ್ಮದಾಗಿಸಿಕೊಳ್ಳುವುದು ಸಾಧ್ಯ? ದಯೆ, ಶಾಂತಿ, ಪ್ರಾಮಾಣಿಕತೆ, ಪ್ರೇಮ, ಆರೋಗ್ಯಕರ ಮನಸ್ಥಿತಿ, ಈಗಿರುವ ಬದುಕನ್ನು ಒಪ್ಪಿಕೊಳ್ಳುವುದು ಎಷ್ಟೆಲ್ಲ ದಾರಿಗಳಿವೆ...

ನಮ್ಮ ಸಿಟ್ಟು, ಸಿಡುಕು ಇತರ ನಕಾರಾತ್ಮಕ ಗುಣಗಳನ್ನು ಪೂರ್ತಿಯಾಗಿ ನಾಶಮಾಡಲು ಸಾಧ್ಯವಿಲ್ಲದಿರಬಹುದು. ಆದರೆ ಅವುಗಳನ್ನು ನಮ್ಮಿಂದ ದೂರ ಇರಿಸಿಕೊಳ್ಳಬಹುದು, ನಿರ್ಲಕ್ಷಿಸಬಹುದು. ಹೀಗೆ ನಿರ್ಲಕ್ಷಿಸಿದಾಗ ಅವು ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳಲಾರವು. ನಾವು ಅವುಗಳಿಂದ ಪ್ರಭಾವಿತ ಆಗದೇ ಇದ್ದರೆ, ಅವು ನಮ್ಮನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ.

ಗುರುಗಳೊಬ್ಬರು ಹೀಗೆ ಹೇಳುತ್ತಾರೆ: ‘ಒಂದು ಆಲೋಚನೆ, ಹಲವಾರು ಸಂಗತಿಗಳು ಮತ್ತು ಸಂದರ್ಭಗಳ ಕ್ಷಣಿಕ ಸಂಯೋಜನೆಯಿಂದ ಹುಟ್ಟುತ್ತದೆ. ಅದು ತಾನಾಗಿಯೇ ಆಗಮಿಸುವುದೂ ಇಲ್ಲ, ನಿರ್ಗಮಿಸುವುದೂ ಇಲ್ಲ. ನಿಮ್ಮಲ್ಲಿ ನಕಾರಾತ್ಮಕ ಆಲೋಚನೆಯೊಂದು ಹುಟ್ಟಿಕೊಂಡಾಗ ಅದರ ಮೂಲದಲ್ಲಿನ ಶೂನ್ಯತೆಯನ್ನು ಕಂಡುಕೊಳ್ಳಿ. ಆಗ ಅದು ತಂತಾನೇ ತನ್ನ ಪ್ರಖರತೆಯನ್ನು ಕಳೆದುಕೊಳ್ಳುತ್ತದೆ. ಈ ಶೂನ್ಯಭಾವವು ನಕಾರಾತ್ಮಕ ಆಲೋಚನೆಗಳ ಕೊಂಡಿಯನ್ನೂ ತುಂಡರಿಸುತ್ತದೆ.’

ನಿರಂತರ ಸಕಾರಾತ್ಮಕ ಜ್ಞಾನವನ್ನು ಬೆಳೆಸಿಕೊಳ್ಳುತ್ತಾ ಹೋದರೆ ನಕಾರಾತ್ಮಕ ಯೋಚನಾಲಹರಿಯನ್ನು ತಟಸ್ಥಗೊಳಿಸುತ್ತದೆ. ಕೆಟ್ಟ ಯೋಚನೆಗಳು ನಮ್ಮ ಮನಸ್ಸನ್ನು ನಿಯಂತ್ರಿಸಿ ನೆಮ್ಮದಿಯನ್ನು ಕೆಡಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತವೆ.

ಹೀಗೆ ನಮ್ಮ ಆಲೋಚನೆಗಳನ್ನು ನಾವೇ ನಿಯಂತ್ರಿಸುವುದನ್ನು ಕಲಿತುಕೊಂಡರೆ ಬದುಕಿನ ಪ್ರತಿಕ್ಷಣವೂ ಶ್ರೀಮಂತವಾಗಿರುತ್ತದೆ, ಸಮೃದ್ಧವಾಗಿರುತ್ತದೆ. ಖುಷಿಯ ಮೂಲ ಇರುವುದೂ ಅಲ್ಲಿಯೇ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.