ADVERTISEMENT

ಬಿಸಿಲಿಗೆ ಸಜ್ಜಾಗಿ

ಎನ್.ವಾಣಿ
Published 29 ಮಾರ್ಚ್ 2013, 19:59 IST
Last Updated 29 ಮಾರ್ಚ್ 2013, 19:59 IST
ಬಿಸಿಲಿಗೆ ಸಜ್ಜಾಗಿ
ಬಿಸಿಲಿಗೆ ಸಜ್ಜಾಗಿ   

ಸೂರ್ಯನ ಪ್ರಖರತೆಗೆ ಜನ ತತ್ತರಿಸುತ್ತಿದ್ದಾರೆ. ರವಿ ನೆತ್ತಿಗೇರಿದರೆ ಸಾಕು ಬೆವರು ಸುರಿಯಲು ಶುರುವಾಗುತ್ತದೆ. ದೇಹ ಪರಿತಪಿಸುತ್ತದೆ. ಅದರಲ್ಲೂ ನಾವು ಆಹಾರದ ವಿಷಯದಲ್ಲಿ ಭಾರಿ ಎಚ್ಚರ ವಹಿಸಬೇಕು. ಏಕೆಂದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಆರೋಗ್ಯದಲ್ಲಿ ಎಡವಟ್ಟು ಆಗಿಬಿಡುತ್ತದೆ. ಹೀಗಾಗಿ ಬೇಸಿಗೆಯಲ್ಲಿ ನಮ್ಮ ಆಹಾರ ಪದ್ಧತಿಯನ್ನು ಕೊಂಚ ಬದಲಿಸಿಕೊಂಡರೆ ಒಳ್ಳೆಯದು. ವಿಶೇಷವಾಗಿ ಕೆಲವು ಹಣ್ಣು ಮತ್ತು ತರಕಾರಿಗಳನ್ನು ಬಳಸುವುದರಿಂದ ಬಿಸಿಲಿನ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಹಾಗಿದ್ದರೆ ಆ ಹಣ್ಣು ಮತ್ತು ತರಕಾರಿಗಳು ಯಾವುವು, ಅವುಗಳನ್ನು ತಿಂದರೆ ಬಿಸಿಲ ಬೇಗೆಯನ್ನು ಹೇಗೆ ನಿವಾರಿಸಿಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.

*************

ಸೌತೆಕಾಯಿ
ಬೇಸಿಗೆಗೆ ಸೌತೆಕಾಯಿ ಹೇಳಿ ಮಾಡಿಸಿದ ತರಕಾರಿ. ಏಕೆಂದರೆ ಇದರಲ್ಲಿ ಹೆಚ್ಚಿನ ನೀರಿನ ಪ್ರಮಾಣವಿದೆ. ವಿಟಮಿನ್ ಸಿ ಇರುವುದರಿಂದ ಚರ್ಮ ಒಣಗುವುದನ್ನು ತಡೆಯುತ್ತದೆ. ಚರ್ಮ ಮೃದುವಾಗಿ ಇರಲು ನೆರವಾಗುತ್ತದೆ. ಇದಿಷ್ಟೇ ಅಲ್ಲ, ಚರ್ಮದ ಕಾಯಿಲೆಗಳಿಂದಲೂ ಮುಕ್ತಿ ಸಿಗುತ್ತದೆ. ಹೀಗಾಗಿ ಈ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿ ಸೇವಿಸುವುದನ್ನು ರೂಢಿ ಮಾಡಿಕೊಳ್ಳಿ.

ADVERTISEMENT

ಕಲ್ಲಂಗಡಿ

ಇನ್ನು ಬೇಸಿಗೆ ಬಂದ ತಕ್ಷಣ ಎಲ್ಲರ ಕಣ್ಣಿಗೂ ಕಾಣಿಸುವುದು ಕಲ್ಲಂಗಡಿ. ಬೇಸಿಗೆಯಲ್ಲೇ ಇದರ ಆರ್ಭಟ ಹೆಚ್ಚು. ಕಲ್ಲಂಗಡಿಯಲ್ಲಿ ಉಪ್ಪಿನಾಂಶ, ಖನಿಜಾಂಶ ಮತ್ತು ನೈಸರ್ಗಿಕ ಸಕ್ಕರೆಯ ಪ್ರಮಾಣವಿದೆ. ಹೀಗಾಗಿ ಇದು ಸುಸ್ತನ್ನು ಹೋಗಲಾಡಿಸುತ್ತದೆ. ಪುಷ್ಟಿದಾಯಕ ಕೃತಕ ಪಾನೀಯಗಳಿಗಿಂತಲೂ ಕಲ್ಲಂಗಡಿ ಜ್ಯೂಸ್ ಭಾರಿ ಒಳ್ಳೆಯದು.

ಬದನೆಕಾಯಿ
ಇದು ತೂಕ ಇಳಿಸುವ ತರಕಾರಿ ಎಂದು ಜನಪ್ರಿಯವಾಗಿದೆ. ಇದರಲ್ಲಿ ಹೆಚ್ಚಿನ ನಾರಿನಂಶ ಇದೆ. ಜೊತೆಗೆ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಎಣ್ಣೆಯ ಅಂಶ ಕಡಿಮೆ ಇರುವುದರಿಂದ ಬೇಸಿಗೆ ಕಾಲಕ್ಕೆ ಇದು ಹೇಳಿ ಮಾಡಿಸಿದ ತರಕಾರಿ. ಅಡುಗೆಯಲ್ಲಿ ಹೆಚ್ಚಾಗಿ ಬದನೆಕಾಯಿಯನ್ನು ಬಳಸುವುದರಿಂದ ಬೇಸಿಗೆಯ ಪ್ರಖರತೆಯನ್ನು ತಾಳಿಕೊಳ್ಳಬಹುದು.

ಸೇಬು
ದಿನಕ್ಕೊಂದು ಸೇಬು ತಿಂದರೆ ವೈದ್ಯರನ್ನು ದೂರ ಇಡಬಹುದು ಎನ್ನುವ ಮಾತಿದೆ. ಇದು ನಿಜಕ್ಕೂ ಸತ್ಯ. ಏಕೆಂದರೆ ಇದರಲ್ಲಿ ಹೆಚ್ಚಿನ ಕೊಬ್ಬಿನಾಂಶ ಇರುವುದಿಲ್ಲ. ತೂಕ ಇಳಿಸಲು ನೆರವಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ, ಆಸ್ತಮಾ, ಕ್ಯಾನ್ಸರ್ ನಿಯಂತ್ರಣಕ್ಕೂ ಹೆಚ್ಚು ಉಪಯುಕ್ತ. ಬೇಸಿಗೆಯ ಪ್ರಖರತೆಯನ್ನು ತಾಳಿಕೊಳ್ಳುವ ಶಕ್ತಿ ನೀಡಬಲ್ಲ ಸಾಮರ್ಥ್ಯ ಈ ಹಣ್ಣಿನಲ್ಲಿದೆ.

ಪೈನಾಪಲ್
ಈ ಹಣ್ಣು ಕೂಡಾ ಬೇಸಿಗೆಗೆ ಹೆಚ್ಚು ಉಪಯುಕ್ತ. ನೀರಿನಾಂಶದ ಜೊತೆಗೆ ಹೆಚ್ಚಿನ ಪ್ರೊಟೀನ್ ಒಳಗೊಂಡಿದೆ. ಇದರಿಂದ ನೀರಿನ ದಾಹವನ್ನು ನಿವಾರಿಸಲು ಅನುಕೂಲವಾಗುತ್ತದೆ. ಜ್ಯೂಸ್ ಮಾಡಿಕೊಂಡು ಸಹ ಕುಡಿಯಬಹುದು.

ಮಾವು
ಇನ್ನು ಬೇಸಿಗೆಯಲ್ಲಿ ಸದ್ದು ಮಾಡುವ ಮತ್ತೊಂದು ಹಣ್ಣು ಮಾವು. ಇದರಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲೊರಿ ಇರುತ್ತದೆ. ವಿಟಮಿನ್ ಎ, ಬಿ6 ಮತ್ತು ಸಿ ವಿಟಮಿನ್ ಕೂಡಾ ಇದೆ. ಜೊತೆಗೆ ನಾರಿನಾಂಶ ಕೂಡಾ ಇರುವುದರಿಂದ ಬಿಸಿಲಿನ ಪ್ರಖರತೆಯನ್ನು ತಡೆಯಲು ನೆರವಾಗುತ್ತದೆ.

ಟೊಮ್ಯೋಟೊ ಸಾಸ್

ಇನ್ನು ಟೊಮ್ಯೋಟೊ ವಿಷಯಕ್ಕೆ ಬಂದರೆ ಇದರಲ್ಲಿ ಶೇ 90ರಷ್ಟು ನೀರಿನ ಪ್ರಮಾಣ ಇರುತ್ತದೆ. ಅರ್ಧ ಕಪ್ ಟೊಮ್ಯೋಟೊ ಸಾಸ್ ಸೇವಿಸುವುದರಿಂದ ಹೆಚ್ಚಿನ ಕ್ಯಾಲೊರಿ ಸಿಗುತ್ತದೆ. ಜೊತೆಗೆ ಕೊಬ್ಬಿನ ಅಂಶ ಇರುವುದಿಲ್ಲ. ಹೀಗಾಗಿ ಟೊಮ್ಯೋಟೊ ಸಾಸ್ ಜೊತೆಗೆ ಟೊಮ್ಯೋಟೊವಿನಿಂದ ತಯಾರಿಸಿದ ಪಾನೀಯಗಳನ್ನು ಕುಡಿಯುವುದರಿಂದ ಬಿಸಿಲಿನ ಬೇಗೆಯನ್ನು ನಿವಾರಿಸಿಕೊಳ್ಳಬಹುದು. ದೇಹವನ್ನು ತಂಪಾಗಿಡಲು ಅದು ಸಹಕರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.