ADVERTISEMENT

ಯಕೃತ್ತಿನ ಬಗ್ಗೆ ಇರಲಿ ಎಚ್ಚರ

​ಪ್ರಜಾವಾಣಿ ವಾರ್ತೆ
Published 5 ಮೇ 2017, 19:30 IST
Last Updated 5 ಮೇ 2017, 19:30 IST
ಯಕೃತ್ತಿನ ಬಗ್ಗೆ ಇರಲಿ ಎಚ್ಚರ
ಯಕೃತ್ತಿನ ಬಗ್ಗೆ ಇರಲಿ ಎಚ್ಚರ   

-ಡಾ. ಕಿಶೋರ್‌ ಜಿಎಸ್‌ಬಿ

*

ಮಾನವ ದೇಹದಲ್ಲಿ ಯಕೃತ್ತು ಅತಿದೊಡ್ಡ ಅಂಗ. ಅರ್ಧ ಕಿಲೋ ತೂಕ ಇರುವ ಇದು, ದಿನದ 24 ಗಂಟೆಯೂ ಕಾರ್ಖಾನೆಯಂತೆ ಕೆಲಸ ಮಾಡುತ್ತದೆ.  ರಕ್ತ ಹೆಪ್ಪುಗಟ್ಟುವಿಕೆ, ರೋಗನಿರೋಧಕ ಶಕ್ತಿ ಹೆಚ್ಚುವ ನಿಟ್ಟಿನಲ್ಲಿ ಕೆಲಸ ಮಾಡುವ ಯಕೃತ್‌ – ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶ ಮತ್ತು ಇತರೆ ಪೌಷ್ಟಿಕಾಂಶಗಳನ್ನು ಸಂಗ್ರಹಿಸುತ್ತದೆ.

ADVERTISEMENT

ಪೆಟ್ಟು, ಅನಾರೋಗ್ಯ, ಶಸ್ತ್ರಚಿಕಿತ್ಸೆ ಮುಂತಾದ ಆಘಾತಗಳಿಂದ ಚೇತರಿಸಿಕೊಳ್ಳುವ ಸಾಮರ್ಥ್ಯ ಯಕೃತ್‌ಗೆ ಇದೆ. ಈ ವಿಶೇಷ ಸಾಮರ್ಥ್ಯದಿಂದಾಗಿ ಹೆಚ್ಚಿನ ಯಕೃತ್ತಿನ ಶಸ್ತ್ರಚಿಕಿತ್ಸೆ ಮತ್ತು ಕಸಿಚಿಕಿತ್ಸೆಯು ಸಾಧ್ಯವಿದೆ. ದುರದೃಷ್ಟವಶಾತ್, ಯಕೃತ್ತಿನ ಅನಾರೋಗ್ಯ ಕುರಿತು ಎಚ್ಚರಿಕೆ ಮೂಡಿಸುವ ಯಾವುದೇ ಅಂಶಗಳು ಮೇಲ್ನೋಟಕ್ಕೆ ಕಾಣಸಿಗುವುದಿಲ್ಲ.

ಯಕೃತ್ತು ಯಾವುದೇ ಪ್ರತಿರೋಧ, ಸೂಚನೆಯಿಲ್ಲದೆ ಅನೇಕ ನೋವುಗಳನ್ನು ಮೌನದಲ್ಲೇ ಸಹಿಸುತ್ತದೆ. ಜಾಂಡೀಸ್, ಹೊಟ್ಟೆಯಲ್ಲಿ ಅನವಶ್ಯಕ ದ್ರವ ಸೇರುವುದು, ರಕ್ತವಾಂತಿ – ಈ ಲಕ್ಷಣಗಳೆಲ್ಲವೂ ಯಕೃತ್ತು ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗಿರುವ ಲಕ್ಷಣವಾಗಿರಬಹುದು. ಈ ತೊಂದರೆಗಳಿಗೆ ಮೊದಲು – ಸುಸ್ತು, ವಾಂತಿ ಮತ್ತು ನಿರ್ದಿಷ್ಟವಲ್ಲದ ಸೂಚನೆಗಳು ಕಾಣಿಸುತ್ತವೆ.

ಯಕೃತ್ತಿನ ಕಾರ್ಯಶೈಲಿ ಹಾಗೂ ಯಕೃತ್ತಿನ ಆರೋಗ್ಯದ ಬಗ್ಗೆ ತಿಳಿಯಲು ಸಾಮಾನ್ಯವಾಗಿ ರಕ್ತಪರೀಕ್ಷೆ ಅಥವಾ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡಿಸಲಾಗುತ್ತದೆ.

ಯಕೃತ್ತಿನಲ್ಲಿ ಹೆಚ್ಚುವರಿ ಬೊಜ್ಜು ಇದ್ದರೆ ಅದು ಅಪಾಯಕಾರಿ. ಈ ಹೆಚ್ಚುವರಿ ಬೊಜ್ಜನ್ನು ಅಲ್ಟ್ರಾಸೌಂಡ್ ಮೂಲಕ ಕಂಡುಹಿಡಿಯಬಹುದು. ಈ ಸಮಸ್ಯೆಯನ್ನು ವೈದ್ಯಕೀಯವಾಗಿ ‘ಸ್ಟಿಟೋಹೆಪಟೈಟಿಸ್’ ಎನ್ನಲಾಗುತ್ತದೆ. ಗಮನಿಸದೇ ಇದ್ದರೆ ಇದು ‘ಫೈಬ್ರೊಸಿಸ್’ ಮತ್ತು ‘ಸಿರೋಸಿಸ್’ ಆಗಿ ಪರಿವರ್ತನೆಯಾಗುವ ಸಂಭವವಿದೆ.

ಯಕೃತ್ತಿನ ಬೊಜ್ಜು ತಡೆಯಲು ಹೀಗೆ ಮಾಡಿ
* ಆರೋಗ್ಯಕರ ಜೀವನ ಶೈಲಿ
* ಪ್ರತಿದಿನ ಅರ್ಧಗಂಟೆ ವ್ಯಾಯಾಮ
* ವಾರದಲ್ಲಿ ನಾಲ್ಕು ದಿನ ಕಸರತ್ತು
* ಪ್ರೊಟೀನ್‌ಯುಕ್ತ ಹಣ್ಣು–ತರಕಾರಿ ಸೇವನೆ

ಯಕೃತ್ತಿನ ಆರೋಗ್ಯ ಕೆಡಿಸುವಲ್ಲಿ ಮದ್ಯಪಾನಕ್ಕೆ ಮೊದಲ ಸ್ಥಾನ ಇದೆ.  ಕೆಲವು ಪಾಶ್ಚಾತ್ಯದೇಶಗಳಲ್ಲಿ  ಸುರಕ್ಷಿತ ಮದ್ಯಪಾನ ಮಿತಿ ರೂಢಿಯಲ್ಲಿದೆ. ಈ ಮಿತಿ, ವಾರಕ್ಕೆ 14 ಯುನಿಟ್ ಆಗಿದೆ. ಒಂದು ಆಲ್ಕೋಹಾಲ್ ಯುನಿಟ್ ಎಂದರೆ 8 ಗ್ರಾಂ. ಇದು 25 ಎಂ.ಎಲ್. ವಿಸ್ಕಿ ಅಥವಾ ಪಿಂಟ್‌ಗೆ ಸಮವಾಗಿದೆ.  ಇದರ ಜೊತೆಗೆ 48 ಗಂಟೆ ಮದ್ಯಪಾನ ಮುಕ್ತ ಅವಧಿಯನ್ನು ಹೊಂದಿರಬೇಕು.

ಮದ್ಯಪಾನ ಸೇವನೆಯ ಸಾಮರ್ಥ್ಯದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಿರುತ್ತದೆ. ಇದು ಭಾರತೀಯರಿಗೆ ಕಡಿಮೆ ಆಗಿರುತ್ತದೆ.  ಮದ್ಯಪಾನದಿಂದ ಸಾಮಾಜಿಕ, ವ್ಯಕ್ತಿಗತ, ಕೌಟುಂಬಿಕ, ವೈವಾಹಿಕ ಹಾಗೂ ಕಾನೂನು ಸಮಸ್ಯೆಗಳು ಕಾಡುತ್ತವೆ. ಕೆಲವೊಂದು ಬಾರಿ ಇದು ವೈದ್ಯಕೀಯ ಚಿಕಿತ್ಸೆಯನ್ನು ಮೀರಿದ ತೊಡಕು ಆಗಿರುತ್ತದೆ.

ಮದ್ಯಪಾನವನ್ನು ಹೊರತುಪಡಿಸಿ, ಸೋಂಕು ಕೂಡ ಯಕೃತ್ತಿನ ಅನಾರೋಗ್ಯಕ್ಕೆ ಕಾರಣವಾಗಿದೆ. ‘ಹೆಪಟೈಟಿಸ್ ಬಿ’ ಒಂದು ಪರಿಣಾಮಕಾರಿ  ಲಸಿಕೆ ಆಗಿದೆ. ‘ಹೆಪಟೈಟಿಸ್ ಎ’ ಮತ್ತು ‘ಇ’ ಆಹಾರ ಮತ್ತು ನೀರಿನಿಂದ ಹರಡುವ ಯಕೃತ್‌ ಸಮಸ್ಯೆಗಳಾಗಿವೆ.  ಹೀಗಾಗಿ ಸುರಕ್ಷತೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ‘ವೈರಲ್ ಹೆಪಟೈಟಿಸ್’ ಅನ್ನು ಸ್ವಚ್ಛತೆಯಿಂದ ಕ್ರಮಗಳಿಂದ ಗುಣಪಡಿಸಬಹುದು.

ಕೆಲವೊಂದು ಬಾರಿ ಯಕೃತ್ ವೈಫಲ್ಯವೂ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರವಾಗಿಸುತ್ತದೆ. ಹೀಗಾಗಿ, ಪರ್ಯಾಯ ಕ್ರಮಗಳನ್ನು ಪಾಲಿಸುವಾಗ ಹೆಚ್ಚಿನ ಜಾಗೃತಿ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.