ADVERTISEMENT

ಸಕ್ಕರೆಯ ಕಾಯಿಲೆಗೂ ಇದೆ ಲೈಂಗಿಕತೆಯ ನಂಟು

ಡಾ.ಎಸ್.ಎಸ್.ವಾಸನ್
Published 10 ಫೆಬ್ರುವರಿ 2017, 19:30 IST
Last Updated 10 ಫೆಬ್ರುವರಿ 2017, 19:30 IST
ಡಾ. ಎಸ್.ಎಸ್. ವಾಸನ್, ಆ್ಯಂಡ್ರೊಲಜಿಸ್ಟ್ info@manipalfertility.com
ಡಾ. ಎಸ್.ಎಸ್. ವಾಸನ್, ಆ್ಯಂಡ್ರೊಲಜಿಸ್ಟ್ info@manipalfertility.com   
ಸಕ್ಕರೆ ಕಾಯಿಲೆ ಇದ್ದರೆ ನಿಮಿರುವಿಕೆ ಸಮಸ್ಯೆಯನ್ನು ನಿರ್ಲಕ್ಷಿಸದಿರಿ.
 
ನೀವು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಪುರುಷರಾಗಿದ್ದರೆ ನಿಮ್ಮ ಲೈಂಗಿಕ ಜೀವನಕ್ಕೆ ಸಂಬಂಧಿಸಿದ ಕೆಟ್ಟ ಮತ್ತು ಒಳ್ಳೆಯ ಸುದ್ದಿಗಳು ನಮ್ಮ ಬಳಿ ಇವೆ.
 
ಕೆಟ್ಟ ಸುದ್ದಿ
ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಪುರುಷನನ್ನು ಇತರರಿಗೆ ಹೋಲಿಸಿದರೆ ಲೈಂಗಿಕ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಮೂರು ಪಟ್ಟು ಹೆಚ್ಚು.
ಇಂಥವರು ಎದುರಿಸುವ ಸಾಮಾನ್ಯ ಲೈಂಗಿಕ ಸಮಸ್ಯೆ ನಿಮಿರುವಿಕೆ ದೌರ್ಬಲ್ಯ.
 
ನಿಮಿರುವಿಕೆಯ ದೌರ್ಬಲ್ಯವನ್ನು ತೀರಾ ಖಾಸಗಿ ಮತ್ತು ಅವಮಾನಕರವಾದ ಎಂದು ಪುರುಷರು ಭಾವಿಸುತ್ತಾರೆ. ವೈದ್ಯರೊಂದಿಗೆ ಚರ್ಚಿಸಲೂ ಅನೇಕರು ಹಿಂಜರಿಯುತ್ತಾರೆ. ಕೆಲವರು ತಮ್ಮ ಸಂಗಾತಿಯೊಂದಿಗೂ ಈ ವಿಚಾರವನ್ನು ಚರ್ಚಿಸುವುದಿಲ್ಲ. ಹೀಗಾಗಿ ಈ ಸಮಸ್ಯೆಗೆ ಚಿಕಿತ್ಸೆ ದೊರಕದೆ ಪರಿಸ್ಥಿತಿ ಮತ್ತಷ್ಟು ವಿಷಮಿಸುವ ಸಾಧ್ಯತೆ ಇದೆ.
 
ಒಳ್ಳೆಯ ಸುದ್ದಿ
ಸಕ್ಕರೆ ಕಾಯಿಲೆಯಿಂದ ಕಾಣಿಸಿಕೊಳ್ಳುವ ಸಮಸ್ಯೆಗಳ ಪೈಕಿ ನಿಮಿರುವಿಕೆ ದೌರ್ಬಲ್ಯಕ್ಕೆ ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದೆ.  ಶೇ. 95ರಷ್ಟು ಪ್ರಕರಣಗಳಲ್ಲಿ ಚಿಕಿತ್ಸೆ ಯಶಸ್ವಿಯಾಗಿದೆ. ಉತ್ತಮ ಚಿಕಿತ್ಸಾಕ್ರಮಗಳು ಲಭ್ಯವಿರುವುದರಿಂದ,  ನಿಮಿರು ದೌರ್ಬಲ್ಯದಿಂದ ಬಳಲುತ್ತಿರುವ ಪುರುಷರಿಗೆ ಹಲವು ಆಯ್ಕೆಗಳಿವೆ. ನೀವು ನಿಮ್ಮ ಸಂಗಾತಿ ಜೀವನಪೂರ್ತಿ ಅನುಭವಿಸಲೇಬೇಕಾದ ತೊಂದರೆಯಾಗಿ ಅದು ಉಳಿದಿಲ್ಲ.  ಚಿಕಿತ್ಸೆಯನ್ನು ಪಡೆಯಲು ನಿಮಗೇಕೆ ಹಿಂಜರಿಕೆ? ಚಿಕಿತ್ಸೆಯು ನಿಮ್ಮ ಜೀವನವನ್ನು ಉಳಿಸಬಲ್ಲದು.
 
ಭಾರತದಲ್ಲಿ ಸಕ್ಕರೆ ಕಾಯಿಲೆ
ರಕ್ತಪರಿಚಲನೆಯ ವ್ಯವಸ್ಥೆಯಲ್ಲಿ ಸಕ್ಕರೆಯ ಅಂಶ ವಿಪರೀತ ಹೆಚ್ಚಾದ ಸ್ಥಿತಿಯನ್ನು ‘ಸಕ್ಕರೆ ಕಾಯಿಲೆ’ ಎನ್ನುತ್ತಾರೆ. ಸಕ್ಕರೆ ಕಾಯಿಲೆಯಲ್ಲಿ ಎರಡು ಮುಖ್ಯ ವಿಧಗಳಿವೆ:
 
ಟೈಪ್–1 ಡಯಾಬಿಟಿಸ್: ದೇಶದಲ್ಲಿ ಒಟ್ಟು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರ ಪೈಕಿ ಶೇ. 10ರಷ್ಟು ಮಂದಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಶೇ. 90ರಷ್ಟು ಪ್ರಕರಣಗಳು ಟೈಪ್ 2 ಡಯಾಬಿಟಿಸ್ ಆಗಿರುತ್ತವೆ. 
 
ಟೈಪ್ 2 ಡಯಾಬಿಟಿಸ್ ಸಮಸ್ಯೆಗೆ ಅತಿತೂಕ, ಚಟುವಟಿಕೆ ಇಲ್ಲದ ಜಡತ್ವ ಮುಖ್ಯ ಕಾರಣ. ನಮ್ಮ ದೇಶದ ಒಂದು ಕೋಟಿ ಜನರು ಟೈಪ್–2 ಡಯಾಬಿಟಿಸ್ ನಿಂದ ಬಳಲುತ್ತಿದ್ದಾರೆ.
 
ಟೈಪ್ 1 ಮತ್ತು ಟೈಪ್ 2: ಎರಡೂ ಮಾದರಿಯ ಡಯಾಬಿಟಿಸ್ ಸಮಸ್ಯೆ ಎದುರಿಸುತ್ತಿರುವವರಿಗೆ ನಿಮಿರು ದೌರ್ಬಲ್ಯದ ಅಪಾಯ ತಪ್ಪಿದ್ದಲ್ಲ.
ಯಾವುದು ನಿಮಿರು ದೌರ್ಬಲ್ಯ ಮತ್ತು ಯಾವುದು ಅಲ್ಲ?
 
ಯಶಸ್ವಿ ಸಂಭೋಗಕ್ಕೆ ಅಗತ್ಯವಿರುವಷ್ಟು ಕಾಲ ಶಿಶ್ನದ ನಿಮಿರುವಿಕೆಯನ್ನು ಕಾಪಾಡಿಕೊಳ್ಳಲು ಪದೇಪದೇ ವಿಫಲವಾಗುವ ಸ್ಥಿತಿಯನ್ನು ನಿಮಿರುವಿಕೆಯ ದೌರ್ಬಲ್ಯ ಎನ್ನುತ್ತಾರೆ.
 
ವಯಸ್ಸು ಹೆಚ್ಚಾದಂತೆ ಲೈಂಗಿಕ ಆಸಕ್ತಿಯು ಕಡಿಮೆಯಾಗುವುದು ಸಹಜ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವ ಮನುಷ್ಯ ವಯಸ್ಸಿನ ಹಂಗಿಲ್ಲದೇ ಉದ್ರೇಕ ಮತ್ತು ಸಂಭೋಗವನ್ನು ಅನುಭವಿಸಲು ಸಮರ್ಥನಾಗುತ್ತಾನೆ.
 
ನಿಮಿರುವಿಕೆ ದೌರ್ಬಲ್ಯವನ್ನು ವಯಸ್ಸಾದವರೆಲ್ಲಾ ಅನುಭವಿಸಲೇಬೇಕು ಎಂಬ ಯಾವುದೇ ನಿಯಮವಿಲ್ಲ.
(ಮುಂದಿನ ವಾರ: ಯಾವುದು ನಿಮಿರುವಿಕೆ ದೌರ್ಬಲ್ಯವಲ್ಲ?)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.