ADVERTISEMENT

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 8 ನವೆಂಬರ್ 2013, 19:30 IST
Last Updated 8 ನವೆಂಬರ್ 2013, 19:30 IST

ವೃತ್ತಿಜೀವನದಲ್ಲಿ ಕಷ್ಟಪಟ್ಟು ಮೇಲಕ್ಕೆ ಏರಿದ್ದ ಎಲಿಜಬೆತ್‌ಗೆ ಕ್ಯಾನ್ಸರ್ ಅಂಟಿಕೊಂಡಿತು. 'ಅಬ್ಬಾ ನಾನೀಗ ಕಷ್ಟಪಟ್ಟು ಕೆಲಸ ಮಾಡಬೇಕಿಲ್ಲ. ಬಡ್ತಿ, ಹೆಚ್ಚಿನ ಸಂಬಳಕ್ಕೆ ಆಸೆ ಪಡಬೇಕಿಲ್ಲ. ನಾನು ನಾನಾಗಿಯೇ ಇರಬಹುದು. ನನಗೆ ಇಷ್ಟವಾದುದನ್ನು ಮಾಡಬಹುದು. ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬಹುದು’ ಎಂದು ಎಲಿಜಬೆತ್ ಉದ್ಗರಿಸಿದಳು.

ವರ್ಷಗಳ ಹಿಂದೆ ಕ್ಯಾನ್ಸರ್ ಬರುವ ಮೊದಲೇ ಎಲಿಜಬೆತ್ ಈ ನಿರ್ಧಾರ ತೆಗೆದುಕೊಂಡಿದ್ದಲ್ಲಿ, ಮಹತ್ವಾಕಾಂಕ್ಷೆಯನ್ನು ಬಿಟ್ಟು ದೈಹಿಕ, ಮಾನಸಿಕ ವಿಶ್ರಾಂತಿ ಪಡೆದಿದ್ದಲ್ಲಿ ಅವಳಿಗೆ ಈ ಕಾಯಿಲೆಯೇ ಅಂಟುತ್ತಿರಲಿಲ್ಲ. ಈ ಅಂಕಣದ ಎಲ್ಲ ಓದುಗರಿಗೂ ನಾನು ಇದೇ ಮಾತನ್ನೇ ಹೇಳುತ್ತೇನೆ. ಎಲಿಜಬೆತ್ ತರಹ ಕಾಯಿಲೆ ಬರುವತನಕ ಕಾಯಬೇಡಿ. ಸಾಕಷ್ಟು ವಿಶ್ರಾಂತಿ ಪಡೆಯಿರಿ. ನಿಮ್ಮ ಸಾಮರ್ಥ್ಯ ಮೀರಿ ಕೆಲಸ ಮಾಡಲು  ಹೋಗಬೇಡಿ. ನಿಮಗೆ ಇಷ್ಟವಾದುದನ್ನು ಮಾಡುತ್ತಾ ಆರೋಗ್ಯವಂತರಾಗಿ ಇರಿ.

ನಮ್ಮೆಲ್ಲರಿಗೂ ವೈಯಕ್ತಿಕವಾದ ಇಷ್ಟಾನಿಷ್ಟಗಳು, ಹವ್ಯಾಸಗಳು ಇರುತ್ತವೆ. ನಮ್ಮ ಕುಟುಂಬ ಸದಸ್ಯರು ಅದರ ಬಗ್ಗೆ ಹೀಯಾಳಿಸಬಹುದು. ಅಂತಹವರಿಗೆ ನಮ್ಮ ಹೃದಯದಾಳದಿಂದ ಕೆಲಸ ಮಾಡಿದಾಗ ಸಿಗುವ ಖುಷಿಯ ಬಗ್ಗೆ ಗೊತ್ತಿರುವುದಿಲ್ಲ. ನಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ನಾವು ಮೊದಲ ಸ್ಥಾನದಲ್ಲಿ ಇದ್ದರೂ, ಸಾವಿರದ ಸ್ಥಾನದಲ್ಲಿ ಇದ್ದರೂ ಪರವಾಗಿಲ್ಲ. ಆ ಹವ್ಯಾಸವನ್ನು ಮುಂದುವರಿಸಬೇಕು. ಕಾಡಿನಲ್ಲಿ ಅತಿ ಇಂಪಾಗಿ ಹಾಡುವ ಹಕ್ಕಿಗಳಷ್ಟೇ ಹಾಡುತ್ತಿದ್ದರೆ ಕಾಡು ಇರುತ್ತಲೇ ಇರಲಿಲ್ಲ. ಇಂತಹ ಮನೋಭಾವ ಇದ್ದಾಗ ಸೋಲಿನ ಭಯ, ಗೆಲುವಿನ ಮೋಹ ಎರಡೂ ಇರುವುದಿಲ್ಲ. ಆಗ ದೈವಿಕ ಶಕ್ತಿಗೆ ನಿಮ್ಮನ್ನು ಮುನ್ನಡೆಸಲು ನೀವು ಅವಕಾಶ ನೀಡುತ್ತೀರಿ.

ಯಾಂಗ್ ಚು ಎಂಬ ಚೀನಾದ ಸಂತರು ಟಾವೊ ಸಿದ್ಧಾಂತವನ್ನು ಸುಂದರವಾಗಿ ಬಣ್ಣಿಸಿದ್ದಾರೆ. ಕಿವಿ ಏನನ್ನು ಕೇಳಲು ಕಾತರವಾಗಿದೆಯೋ ಅದು ಕೇಳಲಿ. ಕಣ್ಣು ಯಾವುದನ್ನು ನೋಡಲು ಕಾತರವಾಗಿದೆಯೋ ಅದು ಕಣ್ಣಿಗೆ ಬೀಳಲಿ. ಮೂಗು ಯಾವ ಸುವಾಸನೆಯನ್ನು ಹೀರಿಕೊಳ್ಳಬೇಕೋ ಆ ಪರಿಮಳ ಮೂಗಿಗೆ ಬಡಿಯಲಿ. ಯಾವ ಸತ್ಯವನ್ನು ನುಡಿಯಬೇಕೋ ಬಾಯಿ ಅದನ್ನೇ ಹೇಳಲಿ. ದೇಹಕ್ಕೆ ವಿಶ್ರಾಂತಿ ಸಿಗಲಿ. ಮನಸ್ಸು ತನಗೆ ಇಷ್ಟವಾದುದ್ದನ್ನು ಮಾಡಲಿ.
ಕಿವಿಗೆ ಸಂಗೀತ ಕೇಳಬೇಕು ಅನಿಸಿರುತ್ತದೆ. ಅದನ್ನು ತಡೆಯುವುದು ಕೇಳುವ ಶಕ್ತಿಯನ್ನು ಕಳೆದುಕೊಂಡಂತೆ. ಕಣ್ಣಿಗೆ ನಿಸರ್ಗದ ಸಹಜ ಸೌಂದರ್ಯ ನೋಡಬೇಕು ಎನಿಸುತ್ತದೆ. ಹಾಗೆ ಮಾಡದಿದ್ದಾಗ ಕಣ್ಣಿದ್ದರೂ ಕುರುಡಾದಂತೆ. ಆರ್ಕಿಡ್‌ಗಳ ತಾಜಾ ಪರಿಮಳ ಹೀರಿಕೊಳ್ಳಲು ಮೂಗು ಕಾತರಿಸಿರುತ್ತದೆ.

ಅದಕ್ಕೆ ಅವಕಾಶ ಮಾಡಕೊಡದಿದ್ದಾಗ ಆಘ್ರಾಣಿಸುವ ಶಕ್ತಿ ಕಳೆದುಕೊಂಡಂತೆ ಇರುತ್ತದೆ. ಬಾಯಿ ಯಾವಾಗಲೂ ಸತ್ಯ ನುಡಿಯಲು ಕಾತರಿಸುತ್ತಾ ಇರುತ್ತದೆ. ಹಾಗೆ ಮಾಡದಿದ್ದಾಗ ಜ್ಞಾನವನ್ನು ಹತ್ತಿಕ್ಕಿದಂತೆ. ದೇಹಕ್ಕೆ ಆಗಾಗ ವಿಶ್ರಾಂತಿ ಬೇಕಾಗುತ್ತದೆ. ಅದನ್ನು ನಿರ್ಲಕ್ಷಿಸಿದಾಗ ಅದರ ಸಹಜ ಶಕ್ತಿ ಕುಂದುತ್ತದೆ. ಮನಸ್ಸಿಗೆ ಸ್ವಾತಂತ್ರ್ಯ ಬೇಕಾಗುತ್ತದೆ. ಅದು ಸಿಗದಿದ್ದಾಗ ನಮ್ಮ ವ್ಯಕ್ತಿತ್ವ ಕುಗ್ಗಿಹೋಗುತ್ತದೆ.

ಸಮಾಜದ ರೀತಿ ನೀತಿಗೆ ಅಂಜಿ ನಮ್ಮನ್ನು ನಾವು ಹತ್ತಿಕ್ಕಿಕೊಳ್ಳುವುದರಿಂದ, ನಮ್ಮಲ್ಲೇ ನಾವು ಮುದುಡಿಹೋಗುವುದರಿಂದ ನಮ್ಮ ಚೈತನ್ಯ ನರಳುತ್ತದೆ. ರೋಗಗ್ರಸ್ಥವಾಗುತ್ತದೆ. ಅಂತಹ ಚೈತನ್ಯ, ದೇಹದಲ್ಲಿ ರೋಗವನ್ನು ಆಹ್ವಾನಿಸುತ್ತದೆ. ಅನಗತ್ಯ ಒತ್ತಡ, ನಿರೀಕ್ಷೆಗಳಿಂದ ಬದುಕು ಸಂಕೀರ್ಣವಾಗುತ್ತಾ ಹೋಗುತ್ತದೆ. ನೂರೆಂಟು ಕೆಲಸಗಳ ಮಧ್ಯೆ ನಮ್ಮ ಇಷ್ಟದ, ನಮ್ಮ ಮನಸ್ಸು, ಹೃದಯಕ್ಕೆ ಉಲ್ಲಾಸ, ಆಹ್ಲಾದ ತರುವ ಹವ್ಯಾಸ ಅಪ್ಪಿಕೊಳ್ಳಲು ಸಮಯವೇ ಸಿಗುವುದಿಲ್ಲ.

ರೋಗವೊಂದು ನಿಮ್ಮ ಮೇಲೆ ಮೇಲುಗೈ ಸಾಧಿಸಲು ಬಿಡಬೇಡಿ. ಫಿಟ್ನೆಸ್ ಕಾಪಾಡಿಕೊಂಡು ಸುಂದರವಾಗಿ ಬದುಕಿ. ನಿಯಮಿತವಾಗಿ ವ್ಯಾಯಾಮ ಮಾಡಿದಾಗ ನಿಮ್ಮ ರೋಗ ಪ್ರತಿರೋಧಕ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತದೆ. ಕಡಿಮೆ ಕೊಬ್ಬಿನ ಆಹಾರ ಸೇವಿಸಿದಾಗ ರಕ್ತನಾಳಗಳು, ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕೆಲಸ ಮಾಡುತ್ತದೆ. ದೇಹದಲ್ಲಿ ವಿಷವಸ್ತುಗಳು ಸಂಗ್ರಹವಾಗುವುದಿಲ್ಲ. ನಿಮಗೆ ಇಷ್ಟವಾಗುವ ಕೆಲಸ ಮಾಡಿದಾಗ ನಿಮ್ಮಿಂದ ಒತ್ತಡ ದೂರವಾಗುತ್ತದೆ. ಆಗ ರಕ್ತನಾಳಗಳು ಅಗಲವಾಗುತ್ತವೆ. ಹಾರ್ಮೋನ್‌ಗಳು ಸರಿಯಾಗಿ ಸ್ರವಿಸುತ್ತವೆ. ಯಾವುದೇ ನೋವು ನಿಮ್ಮನ್ನು ಕಾಡುವುದಿಲ್ಲ.

ಉತ್ತಮ ಅರೋಗ್ಯಕ್ಕಾಗಿ ನಿಮ್ಮ ವೈಯಕ್ತಿಕ ಮಾಂತ್ರಿಕತೆಯೊಂದನ್ನು ಕಂಡುಕೊಳ್ಳಿ. ಓ ಆ ಪುಸ್ತಕ ಓದಬೇಕಿತ್ತು. ಸಂಗೀತ ಕಲಿಯಬೇಕಿತ್ತು, ಡ್ರೈವಿಂಗ್ ಕಲಿಯಬೇಕಿತ್ತು. ಚಾರಣಕ್ಕೆ ಹೋಗಬೇಕಿತ್ತು, ಈಜು ಹೊಡೆಯಬೇಕಿತ್ತು, ಪೇಂಟಿಂಗ್ ಮಾಡಬೇಕಿತ್ತು ಎಂದು ಅನಿಸಿದಾಗ ಅದನ್ನು ಹತ್ತಿಕ್ಕಬೇಡಿ. ನನ್ನ ಬಳಿ ಅದಕ್ಕೆಲ್ಲ ಸಮಯವಿಲ್ಲ ಎಂದು ತಳ್ಳಿಹಾಕಬೇಡಿ. ಏನಾದರೂ ಮಾಡಬೇಕು ಎಂದು ಅನಿಸಿದಾಗ ಅದನ್ನು ತಕ್ಷಣ ಮಾಡಿ. ಅದನ್ನು ನಿಮ್ಮ ಜೀವನದ ಗುರಿಯಾಗಿಸಿಕೊಳ್ಳಬೇಡಿ. ಗುರಿ ಸಾಧಿಸುವ ಛಲ ಬಂದಾಗ ಅಲ್ಲಿ ನಿಮ್ಮ ಅಹಂಕಾರ ತಲೆ ಎತ್ತುತ್ತದೆ. ನೀವು ಫಲಿತಾಂಶಕ್ಕಾಗಿ ಎದುರು ನೋಡುತ್ತೀರಿ. ನಿರೀಕ್ಷಿತ ಫಲಿತಾಂಶ ಬರದಾಗ ನಿರಾಶರಾಗುತ್ತೀರಿ. ಅನಗತ್ಯ ಒತ್ತಡ ಹುಟ್ಟುಹಾಕಿಕೊಳ್ಳುತ್ತೀರಿ. ನಿಮ್ಮ ವೈಯಕ್ತಿಕ ಹವ್ಯಾಸವೊಂದನ್ನು ಸಮಾಜದಲ್ಲಿ ಮೇಲೆ ಏರಲು ರಾಜಕೀಯ ಆಟವಾಗಿ ಬಳಸಿಕೊಳ್ಳುತ್ತೀರಿ.

ಫಲಿತಾಂಶದ ಮೇಲೆ ಕಣ್ಣು ಇದ್ದಾಗ, ಅತಿಯಾದ ನಿರೀಕ್ಷೆ ಇದ್ದಾಗ ಆ ಕ್ಷಣದ ಸಂತಸವನ್ನು ನೀವು ಕಳೆದುಕೊಳ್ಳುತ್ತೀರಿ. ಆ ವಿಶ್ವಶಕ್ತಿ ನಿಮ್ಮ ಮೂಲಕ ಮಾಡಿಸುವ ವಿಶೇಷ ಕೆಲಸದ ಖುಷಿಯನ್ನು ಕಳೆದುಕೊಳ್ಳುತ್ತೀರಿ. ನೀವು ಯಾವುದೇ ಒತ್ತಡ, ನಿರೀಕ್ಷೆ ಇಲ್ಲದೇ ಕೆಲಸ ಮಾಡಿದಾಗ ಯಾವುದೇ ಸ್ಪರ್ಧೆಯ, ಶತ್ರುತ್ವದ ಭಯ ನಿಮಗೆ ಇರುವುದಿಲ್ಲ. ಸಿಹಿಯಾದ ಜೀವ ಝರಿಯೊಂದು ನಿಮ್ಮ ಮೂಲಕ ಹರಿಯುತ್ತಿರುತ್ತದೆ. ನೀವೊಂದು ಅದ್ಭುತ ಚೈತನ್ಯ ಎಂಬುದರ ಅರಿವು ನಿಮಗಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.