ADVERTISEMENT

ಹೊಳೆಯುವ ಹಲ್ಲುಗಳಿಗೆ ಕುಡಿಯಿರಿ ನೀರು!

ಡಾ .ಕೆ.ಎಸ್.ಚೈತ್ರಾ
Published 9 ಡಿಸೆಂಬರ್ 2016, 19:30 IST
Last Updated 9 ಡಿಸೆಂಬರ್ 2016, 19:30 IST
ಹೊಳೆಯುವ ಹಲ್ಲುಗಳಿಗೆ ಕುಡಿಯಿರಿ ನೀರು!
ಹೊಳೆಯುವ ಹಲ್ಲುಗಳಿಗೆ ಕುಡಿಯಿರಿ ನೀರು!   
ನೀರು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ವೈದ್ಯರು ಹೇಳುತ್ತಲೇ ಬಂದಿದ್ದಾರೆ; ಮಾತ್ರವಲ್ಲ ಸಂಶೋಧನೆಗಳಿಂದಲೂ ಸಾಬೀತಾಗಿದೆ. ದೇಹದ ಕಲ್ಮಶಗಳನ್ನು ಹೊರಹಾಕಿ, ಚರ್ಮವನ್ನು ಸ್ವಚ್ಛಗೊಳಿಸಿ, ಮಾಂಸಖಂಡಗಳ ಚಲನೆ ಮತ್ತು ದೇಹದೆಲ್ಲೆಡೆ ಪೋಷಕಾಂಶಗಳ ಸರಿಯಾದ ವಿತರಣೆಗೆ ಅಗತ್ಯವಾಗಿರುವ ನೀರು, ನಿಜಕ್ಕೂ ಜೀವದ್ರವ್ಯ. ಆದರದು ಹೊಳೆಯುವ, ಆರೋಗ್ಯಕರ ಹಲ್ಲಿಗೂ ಸಹಾಯಕ ಎಂಬುದು ಗೊತ್ತಿದೆಯೇ?
 
ಸ್ವಚ್ಛ ಬಾಯಿ
ನಾವು ತಿನ್ನುವ ಆಹಾರದ ಸಣ್ಣ ಕಣಗಳು ನಮ್ಮ ಹಲ್ಲುಗಳ ಸಂಧಿಗಳಲ್ಲಿ ಸಿಕ್ಕಿಕೊಂಡಿರುತ್ತದೆ. ಈ ಉಳಿದ ಕಣಗಳು ಸೂಕ್ಷ್ಮಾಣುಜೀವಿಗಳ ನೆಚ್ಚಿನ ಆಹಾರ.  ಇದರಲ್ಲಿರುವ ಸಕ್ಕರೆ, ಪಿಷ್ಟಗಳನ್ನು ಬಳಸಿಕೊಂಡು ಸೂಕ್ಷ್ಮಾಣುಜೀವಿಗಳು ತೀಕ್ಷ್ಣ ಆಮ್ಲಗಳನ್ನು ಉತ್ಪಾದಿಸುತ್ತವೆ.
 
ಈ ಆಮ್ಲ ನಮ್ಮ ಹಲ್ಲಿನ ಹೊರಕವಚವಾದ ‘ಎನಾಮೆಲ್’ನ ಮೇಲೆ ದಾಳಿ ನಡೆಸುತ್ತವೆ. ಇದು ಹುಳುಕಿನ ಆರಂಭ. ನಂತರ ಒಳಪದರಗಳಿಗೆ ಹಬ್ಬಿ ಹಲ್ಲನ್ನು ದುರ್ಬಲಗೊಳಿಸುತ್ತದೆ. ಊಟ –ತಿಂಡಿಯ ನಂತರ ನೀರು ಕುಡಿದಾಗ ಅದು ಈ ಅಳಿದುಳಿದ ಆಹಾರವನ್ನು ಸಡಿಲಗೊಳಿಸಿ ಹೊರಹಾಕುತ್ತದೆ. ಹಾಗೆಯೇ ಸೂಕ್ಷ್ಮಾಣುಜೀವಿಗಳು ಉತ್ಪಾದಿಸಿದ ಆಮ್ಲವನ್ನು ದುರ್ಬಲಗೊಳಿಸುತ್ತವೆ. ಪರಿಣಾಮವಾಗಿ ಬಾಯಿ ಸ್ವಚ್ಛವಾಗಿ, ಹಲ್ಲುಗಳಲ್ಲಿ ಹುಳುಕು ಉಂಟಾಗುವ ಸಾಧ್ಯತೆ ಕಡಿಮೆಯಾಗುತ್ತದೆ.
 
ತೇವಯುಕ್ತ ಬಾಯಿ
ಬಾಯಿಯಲ್ಲಿರುವ ಜೊಲ್ಲುರಸ ಆಹಾರವನ್ನು ಸುಲಭವಾಗಿ ಜೀರ್ಣವಾಗಲೂ ಸಹಾಯ ಮಾಡುತ್ತದೆ. ಹಾಗೆಯೇ ಹಲ್ಲನ್ನು ತೊಳೆಯುವ ಕೆಲಸ ನಿರ್ವಹಿಸುತ್ತದೆ. ಜೊಲ್ಲುರಸದಲ್ಲಿರುವ ಪ್ರೊಟೀನ್ ಮತ್ತು ಮಿನರಲ್‌ಗಳು ಸೂಕ್ಷ್ಮಾಣುಜೀವಿಗಳು ಉತ್ಪಾದಿಸಿದ ಆಮ್ಲದ ವಿರುದ್ಧ ಹೋರಾಡುತ್ತದೆ. ಹೀಗೆ ಜೊಲ್ಲುರಸ ಎಂಬುದು ನೈಸರ್ಗಿಕ ಹುಳುಕು ರಕ್ಷಣಾದ್ರವ. ಶೇಕಡ ತೊಂಬತ್ತೈದು ಭಾಗ ನೀರಿನಿಂದ ಕೂಡಿದ ಜೊಲ್ಲುರಸದ ಪ್ರಮಾಣ ಸರಿಯಾಗಿರಲು ನೀರು ಆವಶ್ಯಕ. 
 
ಶಕ್ತಿಯುತ ಹಲ್ಲುಗಳು
ನೀರಿನಲ್ಲಿ ಸರಿಯಾದ ಪ್ರಮಾಣದಲ್ಲಿ ಫ್ಲೋರೈಡ್ ಇದ್ದಾಗ ಅದು ಹಲ್ಲನ್ನು ಶಕ್ತಿಯುತಗೊಳಿಸುತ್ತದೆ. ಹೀಗಾಗಿ ಹುಳುಕನ್ನು ನಿಯಂತ್ರಿಸಲು ಸಾಧ್ಯ. ವಿಶೇಷವಾಗಿ ಬೆಳವಣಿಗೆಯ ಹಂತದಲ್ಲಿರುವ ಮಕ್ಕಳಲ್ಲಿ ಇದು ಪರಿಣಾಮಕಾರಿ.
 
ದುರ್ವಾಸನೆ ದೂರ
ಬಾಯಿಯಲ್ಲಿ ನೀರಿನಂಶ ಕಡಿಮೆಯಾದಾಗ ಒಣಗುವುದು ಸಹಜ. ಇಂಥ ವಾತಾವರಣದಲ್ಲಿ ದುರ್ವಾಸನೆ ಉಂಟುಮಾಡುವ ಸೂಕ್ಷ್ಮಾಣುಜೀವಿಗಳು ಹೆಚ್ಚುತ್ತವೆ. ರಾತ್ರಿ ಮಲಗಿದಾಗ ಬಾಯಿಯಲ್ಲಿ ಜೊಲ್ಲುರಸದ ಉತ್ಪಾದನೆ ತೀರಾ ಕಡಿಮೆಯಾಗುತ್ತದೆ. ಆಗ  ಬಾಯಿ ಒಣಗುತ್ತದೆ. ಇದೇ ಕಾರಣಕ್ಕಾಗಿ ಬೆಳಿಗ್ಗೆ ಎದ್ದಕೂಡಲೇ ಬಾಯಿಯಲ್ಲಿ ವಾಸನೆ ಕಂಡುಬರುತ್ತದೆ. ಹಾಗೆಯೇ ಮುಂದುವರಿದು ದಿನವಿಡೀ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಬಾಯಿಂದ ದುರ್ವಾಸನೆ ಹೊಮ್ಮುತ್ತದೆ. 
 
ಕಲೆಗಳನ್ನು ತಡೆಯುವಿಕೆ 
ನಾವು ದಿನನಿತ್ಯ ಸೇವಿಸುವ ಆಹಾರ ಮತ್ತು ದ್ರವ್ಯಗಳಲ್ಲಿ ಅನೇಕವು ಗಾಢಬಣ್ಣ ಹೊಂದಿರುತ್ತದೆ. ಇವು ಬಿಳಿಹಲ್ಲಿನ ಮೇಲೆ ಕಲೆಯನ್ನು ಉಂಟುಮಾಡಬಹುದು. ಉದಾಹರಣೆಗೆ ಕಾಫಿ, ಸಾಸ್, ನೇರಳೆಹಣ್ಣು ಇತ್ಯಾದಿ. ಈ ಕಲೆಗಳು ತಾತ್ಕಾಲಿಕವಾದರೂ ಅದನ್ನು ತೊಳೆಯದೇ ಹಾಗೇ ಬಿಟ್ಟಲ್ಲಿ ಹಲ್ಲಿನ ಬಣ್ಣ ಬದಲಾಗುವ ಸಾಧ್ಯತೆ ಇದೆ. ಹೀಗಾಗಿ ಆಗಾಗ್ಗೆ ನೀರಿನಿಂದ ಬಾಯಿ ಮುಕ್ಕಳಿಸುವುದರ ಜೊತೆ ನೀರನ್ನು ಸೇವಿಸಿದಾಗ ಕಲೆ ಮಾಯವಾಗಿ ಹಲ್ಲು ಫಳ ಫಳ ಹೊಳೆಯುತ್ತದೆ.
 
ಕಾಲೋರಿ ಇಲ್ಲ
ನೀರು ದೇಹಕ್ಕೆ ಅತ್ಯವಶ್ಯಕವಾದರೂ ಅದರಲ್ಲಿ ಯಾವುದೇ ರೀತಿಯ ಕಾಲೋರಿ ಇಲ್ಲ. ಆದ್ದರಿಂದ ಅನಗತ್ಯ ಕೊಬ್ಬು ಶೇಖರಣೆಯಾಗಿ ತೂಕ ಹೆಚ್ಚುವ ಸಂಭವವಿಲ್ಲ.
ನೀರು ದೇಹಕ್ಕೆ ಬೇಕು ಎಂಬುದು ನಿಜವಾದರೂ ನೀರಿರುವ ಎಲ್ಲ ದ್ರವಾಹಾರ ಒಳ್ಳೆಯದು ಎನ್ನುವಂತಿಲ್ಲ. ಹಣ್ಣಿನ ರಸವು ಬಾಯಿಗೆ ರುಚಿ ಮತ್ತು ಆರೋಗ್ಯಕರ ಎನಿಸಿದರೂ ಅದರಲ್ಲಿ ಸೇರಿಸಿರುವ ಸಕ್ಕರೆಯ ಅಂಶದ ಬಗ್ಗೆ ಗಮನ ಹರಿಸಬೇಕು.
 
ಸಿಹಿಯಾಗಲೆಂದು ಸಕ್ಕರೆ ಬೆರೆಸಿದ ಈ ರಸಗಳು ಹಲ್ಲಿನ ಹುಳುಕು ಮತ್ತು ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಆರೋಗ್ಯದ ದೃಷ್ಟಿಯಿಂದ ಹಣ್ಣುಗಳನ್ನು ಇಡಿಯಾಗಿ ಸೇವಿಸುವುದು ಅಥವಾ ಸಕ್ಕರೆ ಬೆರೆಸದ ರಸ ಸೇವಿಸುವುದು ಸೂಕ್ತ. ಇನ್ನು ಎಲ್ಲೆಡೆ ಸಿಗುವ ಆಕರ್ಷಕ ಮತ್ತು ಜನಪ್ರಿಯ ಸೋಡಾಯುಕ್ತ ತಂಪು ಪಾನೀಯ - ಎನರ್ಜಿ ಡ್ರಿಂಕ್‌ಗಳಲ್ಲಿ ಆಮ್ಲೀಯ ಗುಣ ಹೆಚ್ಚಿರುತ್ತದೆ. ಇವುಗಳ ಸತತ ಸೇವನೆಯಿಂದ ಹಲ್ಲಿನ ಹೊರಕವಚ ‘ಎನಾಮೆಲ್’ ಸವೆದು ಜುಂ ಎನ್ನುವ ಸಂವೇದನೆ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ವಿಟಮಿನ್ ಸಿ ಹೊಂದಿದ್ದು ದಾಹ ನೀಗಿಸುವಲ್ಲಿ ಒಳ್ಳೆಯದು ಎಂದು ಭಾವಿಸಿರುವ ನಿಂಬೆಹಣ್ಣಿನ ಪಾನಕ ಮತ್ತು ಕಿತ್ತಳೆ ಹಣ್ಣಿನ ರಸಗಳು ಕೂಡ ಆಮ್ಲೀಯವಾಗಿರುತ್ತದೆ. ಹೀಗಾಗಿ ಇವುಗಳ ಅತಿಯಾಗಿ ಸೇವಿಸಿದಲ್ಲಿ ಹಲ್ಲು ಸವೆಯುವ ಸಂಭವವಿದೆ. 
 
ಹಾಗೆಂದು ನೀರನ್ನು ಹೊರತುಪಡಿಸಿ ಇನ್ನಾವ ದ್ರವಗಳನ್ನೂ ಸೇವಿಸಬಾರದು ಎಂದಲ್ಲ. ನೀರು ಮತ್ತು ಹಾಲು, ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು. ಆಮ್ಲಯುಕ್ತ ಪಾನೀಯಗಳನ್ನು ಸೇವಿಸುವಾಗ ಎಚ್ಚರವಿರಲಿ. ಆದಷ್ಟೂ ಅವುಗಳ ಸೇವನೆ ಮಿತವಾಗಿರಲಿ. ಸೇವಿಸಲೇಬೇಕಾದಾಗ ಆಹಾರದ ಜೊತೆಗೆ ಕುಡಿದರೆ ಹಾನಿ ಕಡಿಮೆ. ದಿನವಿಡೀ ಆಗಾಗ್ಗೆ ಸೇವಿಸುವುದರ ಬದಲು ಒಂದೇ ಸಲ ಕುಡಿಯುವುದರಿಂದ ಆಮ್ಲಗಳ ದಾಳಿಗೆ ಹಲ್ಲುಗಳು ತುತ್ತಾಗುವ ಸಮಯ ಕಡಿಮೆಯಾಗುತ್ತದೆ. ಕಪ್‌ನಲ್ಲಿ  ಕುಡಿಯುವ ಬದಲು ಸ್ಟ್ರಾದಿಂದ ಹೀರಿದರೆ ಆಮ್ಲ ತಾಗುವ ಹಲ್ಲಿನ ಭಾಗ ಕಡಿಮೆಯಾಗುತ್ತದೆ.
 
ಆಹಾರ ತಿಂದ ಕೂಡಲೇ ಬಾಯಿಯನ್ನು ನೀರಿನಿಂದ ಚೆನ್ನಾಗಿ ಮುಕ್ಕಳಿಸಬೇಕು. ಆದರೆ ತತ್‌ಕ್ಷಣವೆ  ಹಲ್ಲು ಉಜ್ಜಬಾರದು.ಏ ಕೆಂದರೆ ಆಮ್ಲಗಳು ಹಲ್ಲಿನ ‘ಎನಾಮೆಲ್’ ಅನ್ನು ದುರ್ಬಲಗೊಳಿಸಿರುತ್ತವೆ. ಕೂಡಲೇ ರಭಸವಾಗಿ ಬ್ರಶ್‌ನಿಂದ ಉಜ್ಜುವುದರಿಂದ ಮತ್ತಿಷ್ಟು ಸವೆಯುತ್ತದೆ. ಬದಲಿಗೆ ಜೊಲ್ಲುರಸ ತನ್ನ ಸಹಜ ರಕ್ಷಣೆಯ  ಕೆಲಸ ಮಾಡಲು ಅರ್ಧ ಗಂಟೆ ಸಮಯ ನೀಡಿ ನಂತರ ಹಲ್ಲು ಉಜ್ಜಬೇಕು.
 
 ನೀರು ಕುಡಿಯುವುದರಿಂದ ಮತ್ತು ಅದರಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲು–ಬಾಯಿ ಸ್ವಚ್ಛವಾದರೂ ದಿನಕ್ಕೆರಡು ಬಾರಿ ಹಲ್ಲುಜ್ಜುವುದು ಕಡ್ಡಾಯ. ಒಟ್ಟಿನಲ್ಲಿ ಹಲ್ಲು ಹೊಳೆಯಲು, ಬಾಯಿ ಶುಚಿಯಾಗಿರಲು ನೀರು ಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.