ADVERTISEMENT

ಅಂಬಿಗರ ಮಕ್ಕಳಿಗಿಲ್ಲ ಅಕ್ಷರ ಭಾಗ್ಯ

ಮಲ್ಲೇಶ್ ನಾಯಕನಹಟ್ಟಿ
Published 27 ಫೆಬ್ರುವರಿ 2017, 19:30 IST
Last Updated 27 ಫೆಬ್ರುವರಿ 2017, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   
ನದಿಯ ಒಡಲೆಂದರೆ ಈ ಮಕ್ಕಳಿಗೆ ಅಚ್ಚುಮೆಚ್ಚು. ನದಿಯಲ್ಲಿಯೇ ಅವರ ಆಟ, ಪಾಠ, ತುಂಟಾಟ. ಮಳೆಗಾಲದಿಂದ ಹಿಡಿದು ಪ್ರತಿತಿಂಗಳು ನದಿಯಲ್ಲಿನ ನೀರಿನ ಮಟ್ಟ ಎಷ್ಟಿರುತ್ತದೆ, ಅದರ ಒಡಲಿನಲ್ಲಿರುವ ಜಲಚರ, ಜಲಸಸ್ಯಗಳ್ಯಾವುವು... ಯಾವ ಸ್ಥಳದಲ್ಲಿ ಸುಳಿ ಇದೆ, ಎಲ್ಲೆಲ್ಲಿ ಮೊಸಳೆಗಳಿವೆ... ಎಲ್ಲಿ ಬಲೆ ಎಸೆದರೆ ಮೀನು ಶಿಕಾರಿ ಸುಲಭ... ಹೀಗೆ ಸಮಗ್ರ ಮಾಹಿತಿ ಆ ಮಕ್ಕಳ ಮಸ್ತಕದಲ್ಲಿದೆ. ಈ ಬಗ್ಗೆ ಕೇಳುವ ಪ್ರಶ್ನೆಗಳಿಗೆ ಅವರಿಂದ ಅರಳು ಹುರಿದಂತೆ ಪಟಪಟನೆ ಉತ್ತರ ಬರುತ್ತದೆ. 
 
ಇದು ಬಹುತೇಕ ಎಲ್ಲಾ ನದಿತೀರಗಳ ಮಕ್ಕಳ ಕಥೆಯೂ ಹೌದು. ಮಳೆಗಾಲದಲ್ಲಿ ಅಥವಾ ಪ್ರವಾಹದ ಸಂದರ್ಭದಲ್ಲಿ ನದಿಯ ದಡಗಳಲ್ಲಿ ಯಾವ್ಯಾವ ಸ್ಥಳಗಳು ಹೆಚ್ಚು ಅಪಾಯಕಾರಿ ಎಂಬ ಸತ್ಯದ ಅರಿವೂ ಇವರಿಗೆ ಉಂಟು. ಆದರೆ, ನದಿತಟವನ್ನು ಬಿಟ್ಟರೆ ಬೇರೆ ಲೋಕದ ಉಸಾಬರಿ ಇವರಿಗೆ ಬೇಕಿಲ್ಲ. ನದಿತೀರವೇ ಇವರಿಗೆ ಸರ್ವಸ್ವ. ಅಲ್ಲಿಯೇ ಅವರ ಕ್ಷಣಕ್ಷಣದ ಬದುಕು. ಅದರಾಚಿನ ಜೀವನ ಇಲ್ಲಿನ ಮಕ್ಕಳಿಗೆ ಮರೀಚಿಕೆ!
 
ಇಂಥದ್ದೇ ಒಂದು ಜೀವನ ಚಿತ್ರಣ ಕಾಣಸಿಗುವುದು ಯಾದಗಿರಿ ಜಿಲ್ಲೆಯ ಭೀಮಾನದಿ ದಂಡೆಯ ತಟದಲ್ಲಿ. ಅಂಬಿಗರ  ನೂರಾರು ಕುಟುಂಬಗಳು ವಾಸವಿರುವ ನದಿತೀರವಿದು. ‘ಆಯನೂರು ಕೆ.’ ಮತ್ತು ‘ಗೂಡೂರು’ ಭೀಮಾನದಿ ದಂಡೆಯಲ್ಲಿ 50ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳು ನೆಲೆ ನಿಂತಿರುವ ಊರುಗಳು. ಇಲ್ಲಿನ ಕುಟುಂಬಗಳಲ್ಲಿ 40ಕ್ಕೂ ಅಧಿಕ ಸಂಖ್ಯೆಯಲ್ಲಿ 6–14 ವರ್ಷದ ಮಕ್ಕಳಿದ್ದಾರೆ. ಅವರಲ್ಲಿ ಕೇವಲ ಬೆರಳೆಣಿಕೆಯಷ್ಟು ಮಕ್ಕಳನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಮುಖ್ಯವಾಹಿನಿಯಿಂದ ವಿಮುಖರಾಗಿದ್ದಾರೆ.
 
(ಗೂಡೂರು ಗ್ರಾಮದ ಭೀಮಾ ನದಿಯ ದಂಡೆಯಲ್ಲಿನ ಮೀನುಗಾರ ಕುಟುಂಬದಲ್ಲಿ ಕಲಿಕೆಯಿಂದ ಹೊರಗುಳಿದ ಮಕ್ಕಳು)
 
ಶಿಕ್ಷಣವನ್ನು ಮೂಲ ಹಕ್ಕನ್ನಾಗಿಸಿದ ಸರ್ಕಾರ, ಸಾಕ್ಷರತೆಯ ಹೆಚ್ಚಳಕ್ಕಾಗಿ ನಾನಾ ಕಸರತ್ತು ನಡೆಸುತ್ತಿದ್ದರೂ ಇಲ್ಲಿಯ ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. 
 
ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ. ಕ್ಷೀರ ಭಾಗ್ಯದ ನಡುವೆಯೂ ಇಲ್ಲಿನ ಮಕ್ಕಳು ಅಕ್ಷರ ಭಾಗ್ಯದಿಂದ ವಂಚಿತಗೊಂಡಿರುವುದು ಜಿಲ್ಲೆಯ ಸಾಕ್ಷರತೆಯ ಪ್ರಮಾಣ ಇಳಿಕೆಗೆ ಪ್ರಮುಖ ಕಾರಣವಾಗಿದೆ. ನದಿ ದಂಡೆಯಲ್ಲಿ ಮೀನು ಹಿಡಿದು ಬದುಕಿನ ಪಯಣ ಸಾಗಿಸುವ ಮೀನುಗಾರರಿಗೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆ ಇದೆಯಾದರೂ, ಬಡತನದಿಂದಾಗಿ ಸಾಧ್ಯವಾಗಿಲ್ಲ ಎಂಬುದು ಒಂದು ಕಾರಣ. ಆದರೆ, ಪೋಷಕರೇ ಮಕ್ಕಳನ್ನು ಶಾಲೆಗೆ ಕಳುಹಿಸದೇ ಮೀನುಶಿಕಾರಿಗೆ ಅಟ್ಟುತ್ತಾರೆ ಎನ್ನುತ್ತಾರೆ ಶಹಾಪುರ ತಾಲ್ಲೂಕು ಬೀರನಾಳ ಗ್ರಾಮದ ಪೋರ ಮರಲಿಂಗಪ್ಪ.
 
ಮೀನುಗಾರರ ಕುಟುಂಬಗಳು ಬೇರೆ ಉದ್ಯೋಗವನ್ನು ಮಾಡದೇ ಮೀನು ಶಿಕಾರಿಯನ್ನೇ ನೆಚ್ಚಿಕೊಂಡಿವೆ. ಇದರಿಂದಾಗಿ ಮನೆ ಮಾಲೀಕನ ಅನಾರೋಗ್ಯದ ಸಂದರ್ಭದಲ್ಲಿ ಮಕ್ಕಳ ಕೈಗೆ ಬೆಲೆ ಬರುತ್ತದೆ. ಹರಿಗೋಲು ಹುಟ್ಟು ಹಾಕುತ್ತಾ ಇಡೀ ದಿನ ಬಿಸಿಲಲ್ಲಿ ಮೀನುಶಿಕಾರಿಗಾಗಿ ಪಡಿಪಾಟಲು ಬೀಳುತ್ತವೆ. ಮಕ್ಕಳ ಇಂಥ ಸ್ಥಿತಿ ಶಹಾಪುರ ತಾಲ್ಲೂಕಿನ ಗೋಡಿಹಾಳ, ಕುಮ್ಮನೂರು, ಅಜ್ಣಗಿ, ಕಂದಳ್ಳಿ, ಮಾಚನೂರು, ಬೆನಕನಹಳ್ಳಿ, ಶಿವನೂರು, ಜೋಳದೆಡಗಿ, ಸೂಗೂರು, ಅಡ್ನಾಳ್, ಗುಂಡ್ಲೂರು ಗ್ರಾಮಗಳಲ್ಲಿ ಕಂಡುಬರುತ್ತವೆ. ಈ ಎಲ್ಲಾ ಗ್ರಾಮಗಳಲ್ಲಿ 70ಕ್ಕೂ ಹೆಚ್ಚು ಮಕ್ಕಳು ಮೀನು ಶಿಕಾರಿ ಮಾಡುತ್ತಾರೆ.
 
‘ನಮ್ ತಾತನ್ ಕಾಲ್ದಿಂದ್ಲೂ ಮೀನು ಹಿಡ್ಕೊಂತ ಬದುಕು ಸಾಗಸ್ತಿದ್ದೀವ್ರೀ... ನಮ್ಗ ಬಂದ ಕಷ್ಟ ನಮ್ ಮಕ್ಳಿಗೆ ಬರೋದು ಬ್ಯಾಡ ಅಂತ ಮನಸ್ಸಿನ್ಯಾಗ ಭಾಳ್ ಆದ... ಆದ್ರ ಏನ್‌ ಮಾಡೋದ್, ನದಿ ದಂಡ್ಯಾಗಿದ್ದು ಯಾವ ಸಾಲಿಗೀ ಕಳ್ಸಾಕ್ಕಾಗ್ತದ ಹೇಳ್ರಿ...’ ಎಂದು ಗೂಡೂರು ನದಿ ದಂಡೆಯಲ್ಲಿನ ಮೀನುಗಾರ ಹಣಮಂತನ ಅಸಹಾಯಕತೆ ವ್ಯಕ್ತಪಡಿಸುತ್ತಾನೆ.
 
(ಭೀಮಾನದಿಯ ತಟದಲ್ಲಿ ಮಕ್ಕಳ ಮೀನು ಶಿಕಾರಿ)
 
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ‘ಮರಮಕಲ್’ ಈ ಮೀನುಗಾರರ ಮೂಲಸ್ಥಾನ. ಕಳೆದ ಹತ್ತು ವರ್ಷಗಳಿಂದ ಗೂಡೂರ ಗ್ರಾಮದ ಭೀಮಾ ನದಿಯ ದಂಡೆಯಲ್ಲಿ ವಾಸವಾಗಿದ್ದಾರೆ. ಅವರಿಗೆ ಸಂಬಂಧಿಸಿದ ಚುನಾವಣಾ ಗುರುತಿನ ಚೀಟಿ ಹಾಗೂ ಪಡಿತರ ಕಾರ್ಡುಗಳು ಕೆಲವು ಜನರಷ್ಟೇ ಹೊಂದಿದ್ದಾರೆ. ನದಿಯಲ್ಲಿ ಮೀನು ಹಿಡಿದು ಬದುಕಿನ ಪಯಣ ಸಾಗಿಸುವ ಅಂಬಿಗರ ಬದುಕು ನದಿ ಪಾಲಾಗಿದೆ. 
 
ಚುಮುಚುಮು ಚಳಿಯಲ್ಲಿ ಭೀಮಾ ಒಡಲಿಗೆ ಇಳಿಯುವ ಮೀನುಗಾರರಿಗೆ ಭರಪೂರ ಮೀನು ಶಿಕಾರಿಯಾದರೆ ತೊಂದರೆ ಇಲ್ಲ. ಆದರೆ, ಹಲವು ಬಾರಿ ಮೀನುಗಳೇ ಸಿಗದಿದ್ದಾಗ ಒಪ್ಪೊತ್ತಿನ ಗಂಜಿಗೂ ಪರದಾಟ ತಪ್ಪಿದ್ದಲ್ಲ. ಬೇಸಿಗೆಯಲ್ಲಿ ಮೀನುಗಾರರ ಸಂಕಷ್ಟ ಹೆಚ್ಚು. ನದಿಯಲ್ಲಿ ನೀರಿನ ಹರವು ಕುಸಿದಂತೆಲ್ಲಾ ಮೀನುಗಾರರ ಮುಖ ಕೂಡ ಕಳೆಗುಂದುತ್ತದೆ. ಮಾರ್ಚ್, ಏಪ್ರಿಲ್‌, ಮೇ ನಲ್ಲಿ ಭಾರಿ ಬಿಸಿಲಿಗೆ ನದಿಯಲ್ಲಿ ಮೀನು ಸಿಗುವುದು ವಿರಳ. ಬೇಡಿಕೆಯೂ ಕುಸಿದಿರುತ್ತದೆ. ಇಂಥ ಸಂದರ್ಭದಲ್ಲಿ ಮೀನುಗಾರರ ನಿತ್ಯದ ಬದುಕು ಪ್ರವಾಹಕ್ಕೆ ಸಿಕ್ಕ ತರಗೆಲೆಯಂತಾಗಿರುತ್ತದೆ.
 
ಇನ್ನೊಂದೆಡೆ, ಮಕ್ಕಳಿಗೆ ಶಾಲೆಗೆ ಕಳುಹಿಸಬೇಕು ಎಂಬ ಇಚ್ಛೆ ಇದ್ದರೂ ಸಮೀಪದಲ್ಲಿ ಶಾಲೆ ಇಲ್ಲ ಎಂಬ ಕೊರಗು ಅಂಬಿಗರದ್ದು. ‘ನಮ್ ಜೀವನ ನಡಿಬೇಕಂದ್ರ ಮುಂಜಾನೆಯಿಂದ ಸಂಜಿ ತನಕ ಬಲೆಬಿಟ್ಟು ಮೀನು ಹಿಡಿಬೇಕು. ಇಲ್ಲಿ ಸಮೀಪದಾಗ ಯಾವ ಶಾಲೆಗಳು ಇಲ್ಲ.  ದೂರ ದೂರ ಕಳಿಸಲು ತೊಂದ್ರೆ ಅಗ್ತೈತಿ. ಅದ್ಕೇ ಶಾಲೆಗೆ ಕಳಿಸಾಂಗಿಲ್ರಿ’ ಎನ್ನುತ್ತಾರೆ ಅಂಬಿಗ ಅಂಬರೀಷ.
 
ಮಹಿಳೆಯರ ಸ್ಥಿತಿಗತಿ ಚಿಂತಾಜನಕ: ಮೀನುಗಾರರ ಕುಟುಂಬದಲ್ಲಿ ಮಹಿಳೆಯರ ಸ್ಥಿತಿಗತಿ ಚಿಂತಾಜನಕವಾಗಿದೆ. ಶಾಲೆಗಳ ಮುಖವನ್ನೇ ನೋಡದವರ ಸಂಖ್ಯೆ ಹೆಚ್ಚಿದೆ. ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡುತ್ತಾರೆ. ಮೇಲ್ನೋಟಕ್ಕೆ ಬಾಲ್ಯ ವಿವಾಹ ಆಗಿದೆ ಎಂದು ಗೊತ್ತಾಗುವುದಿಲ್ಲ. ಆದರೆ, ಮೀನುಗಾರರ ಕುಟುಂಬ ಮತ್ತು ಸಂಬಂಧಿಕರಿಗೆ ಮಾತ್ರ ಈ ವಿಚಾರ ಗೊತ್ತಿರುತ್ತದೆ. ಅವರೂ ಈ ವಿಚಾರವನ್ನು ಬಾಯಿಬಿಡುವುದಿಲ್ಲ. ಸಂಪೂರ್ಣ ಅನಕ್ಷರತೆಯ ಕೂಪದಲ್ಲಿ ಮೀನುಗಾರ ಹೆಣ್ಣುಮಕ್ಕಳನ್ನು ತಳ್ಳಿದ್ದಾರೆ. ಹೆಣ್ಣಿಗೆ ಓದು ಏಕೆ? ಎಂದು ಮೀನುಗಾರರ ಮುಖಂಡರು ಪ್ರಶ್ನಿಸುತ್ತಾರೆ. ಮೀನುಗಾರ ಪತಿಯ ಬೆಂಗಾವಲಿಗೆ ಹೆಣ್ಣು ಇರಬೇಕು ಎಂಬುದಾಗಿ ಅವರು ಸಮರ್ಥಿಸುತ್ತಾರೆ.
 
ಕನಿಷ್ಠ ಶಿಕ್ಷಣ ಇಲ್ಲದ ಮೀನುಗಾರರ ಕುಟುಂಬಗಳಿಗೆ ಕೇವಲ ರಾಜಕಾರಣಿಗಳಿಂದಷ್ಟೇ ಅಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳಿಂದಲೂ ದೊಡ್ಡ ಅನ್ಯಾಯವಾಗಿದೆ. ಅನಕ್ಷರತೆ ಅಧಿಕಾರಿಗಳ ವಂಚನೆಗೆ ಕಾರಣವಾಗಿದೆ. ಸರ್ಕಾರ ಮತ್ತು ಇಲಾಖೆ ಮೀನುಗಾರರ ನೆರವಿಗೆ ಜಾರಿಗೊಳಿಸಿರುವ ಒಂದು ಯೋಜನೆಯೂ ಈ ಭಾಗದಲ್ಲಿ ಅನುಷ್ಠಾನಗೊಂಡಿಲ್ಲ. ಮೀನುಗಾರರಿಗೆ ಬಲೆ ಮತ್ತಿತರ ಪರಿಕರ ನೀಡುವಂತೆ ಸರ್ಕಾರ ಆದೇಶಿಸಿದ್ದರೂ, ಮೀನುಗಾರರ ಕೈಗೆ ಯಾವುದೇ ಸೌಲಭ್ಯ ಸಿಕ್ಕಿಲ್ಲ. ಇವರ ಮುಗ್ಧತೆ ಹಾಗೂ ಅನಕ್ಷರತೆಯನ್ನು ಅಧಿಕಾರಿಗಳು ಬಳಸಿಕೊಂಡಿದ್ದಾರೆ. 
 
ಶಾಶ್ವತ ಸೂರಿಲ್ಲ...
ಮೀನುಗಾರರಿಗೆ ಶಾಶ್ವತ ನೆಲೆ ಎಂಬುದಿಲ್ಲ. ಜಿಲ್ಲೆಯಲ್ಲಿ 340ಕ್ಕೂ ಹೆಚ್ಚು ಮೀನುಗಾರರ ಕುಟುಂಬಗಳಿವೆ. ಅವರಿಗೆ ಜಿಲ್ಲಾಡಳಿತ ಶಾಶ್ವತ ಸೂರು ಕಲ್ಪಿಸಿಲ್ಲ. ಸರ್ಕಾರ ಜಾರಿಗಳಿಸಿರುವ ‘ಮೀನುಗಾರರ ಮನೆಗಳು’ ಯೋಜನೆಯಡಿ ಇಲ್ಲಿನ ಮೀನುಗಾರರಿಗೆ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ. ನಿವೇಶನ ಕೊರತೆ ಎಂಬುದಾಗಿ ಅಧಿಕಾರಿಗಳು ಸಬೂಬು ಹೇಳಿ ಅನುದಾನವನ್ನು ಸರ್ಕಾರದ ಬೊಕ್ಕಸಕ್ಕೆ ವಾಪಸ್‌ ಕಳುಹಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಬಲೆಯನ್ನು ಸಕಾಲಕ್ಕೆ ನೀಡುವುದಿಲ್ಲ. ತುಂಬಾ ಕಳಪೆ ಬಲೆಯಿಂದ ಮೀನು ಶಿಕಾರಿ ಕಷ್ಟ ಎಂದು ಮೀನುಗಾರ ಮರಮ್‌ಕಲ್‌ ಗ್ರಾಮದ ಮರಿಯಪ್ಪ ಹೇಳುತ್ತಾರೆ.
 
­ಚಿಣ್ಣರ ಅಂಗಳ, ಟೆಂಟ್‌ಶಾಲೆಯಂತಹ ಯೋಜನೆಗಳನ್ನು ಸರ್ಕಾರ ನಿಲ್ಲಿಸಿದೆ. ಎಸ್‌ಬಿಟಿ ಯೋಜನೆ ಜಾರಿಯಲ್ಲಿದೆ (ಸ್ಕೂಲ್‌ಬೇಸ್ ಟ್ರೇನಿಂಗ್). ತಾಲ್ಲೂಕಿನಲ್ಲಿ ಐದು ವಲಯಗಳನ್ನಾಗಿ ಮಾಡಲಾಗಿದ್ದು, ಐವರು ದಾಖಲಾತಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಾಗಾಗಿ, ಆನೂರ.ಕೆ, ಗುಡೂರ ಭಾಗದ ಮೀನುಗಾರರ ಮಕ್ಕಳ ದಾಖಲಾತಿಯೂ ಆಗಿದೆ. ಮಕ್ಕಳ ಗೈರು ಹಾಜರಾತಿ ಹೆಚ್ಚಿದೆ. ಅದನ್ನು ತಪ್ಪಿಸಲು ಪೋಷಕರು ಮುಂದಾಗಬೇಕು ಎನ್ನುವುದು ಯಾದಗಿರಿಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭು ಕಣ್ಣನ್ ಅವರ ಅಭಿಪ್ರಾಯ.
 
**
ಮಕ್ಕಳ ಕಲಿಕೆ ಕುಂಠಿತ
(ಉಮೇಶ್‌ ಮುದ್ನಾಳ)

‘ಸರ್ಕಾರದ ಉಚಿತ ಮತ್ತು ಕಡ್ಡಾಯ ಶಿಕ್ಷಣದ ನಡುವೆಯೂ ನದಿ ದಂಡೆಯಲ್ಲಿನ ಮೀನುಗಾರ ಮಕ್ಕಳು ಶಿಕ್ಷಣದಿಂದ ವಂಚಿತಗೊಂಡಿರುವುದು ತೀರಾ ದುರದೃಷ್ಟಕರ’ ಎನ್ನುತ್ತಾರೆ ಯಾದಗಿರಿ ಕೋಲಿ ಕಬ್ಬಲಿಗ ಸಮಾಜದ ಜಿಲ್ಲಾಧ್ಯಕ್ಷ ಉಮೇಶ್‌ ಮುದ್ನಾಳ.
 
‘ಅಕ್ಷರ ಕಲಿಯಬೇಕಾದ ಮಕ್ಕಳು ಜೀವದ ಹಂಗಿಲ್ಲದ ನದಿ ನೀರಲ್ಲಿ ಮೀನು ಹಿಡಿಯುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಮಕ್ಕಳ ಕಲಿಕೆಯ ಕುಂಠಿತಕ್ಕೆ ಕಾರಣವಾಗಿದೆ. ಇಂತಹ ಮಕ್ಕಳ ಅನುಕೂಲಕ್ಕಾಗಿಯೇ ಸರ್ಕಾರ ವಿಶೇಷ ಶೈಕ್ಷಣಿಕ ಯೋಜನೆಗಳನ್ನು ಜಾರಿಗೊಳಿಸಬೇಕಿದೆ’ ಎನ್ನುವುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.