ADVERTISEMENT

ಇಲ್ಲೀಗ ದೊಡ್ಡ ದ್ಯಾವರ ಸಂಭ್ರಮ

ಆರ್.ಚೌಡರೆಡ್ಡಿ
Published 15 ಮೇ 2017, 19:30 IST
Last Updated 15 ಮೇ 2017, 19:30 IST
ದ್ಯಾವರ ಉತ್ಸವಕ್ಕೆ ಕರಗದ ಮೆರುಗು  ಚಿತ್ರಗಳು: ಆರ್. ಚೌಡರೆಡ್ಡಿ
ದ್ಯಾವರ ಉತ್ಸವಕ್ಕೆ ಕರಗದ ಮೆರುಗು ಚಿತ್ರಗಳು: ಆರ್. ಚೌಡರೆಡ್ಡಿ   

ಮೇ ಬಂತೆಂದರೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ದೊಡ್ಡ ದ್ಯಾವರ ಸಂಭ್ರಮ ಗರಿಗೆದರುತ್ತದೆ. ಹೂಬುಟ್ಟಿ ಹೊತ್ತು ದ್ಯಾವರದಲ್ಲಿ ಭಾಗವಹಿಸುವ ಮಕ್ಕಳ ಮುಖದಲ್ಲಿ ಸಹ ಹೂವಿನಂತಹ ನಗೆ ಮೂಡುತ್ತದೆ!

ಮಾವಿನ ಪಟ್ಟಣ ಎಂದೇ ಖ್ಯಾತವಾಗಿರುವ ಶ್ರೀನಿವಾಸಪುರ ಹೊರವಲಯದ ಪುಂಗನೂರು ಕ್ರಾಸ್‌ ಸಮೀಪ ಸೀತಿ ಭೈರವೇಶ್ವರ ದೇಗುಲದ ಆವರಣದಲ್ಲಿ ಪ್ರತಿ ಭಾನುವಾರ ಸಾವಿರಾರು ಒಕ್ಕಲಿಗ ದಂಪತಿಗಳು, ಮಕ್ಕಳೊಂದಿಗೆ ಬಂದು ದ್ಯಾವರ ಮಾಡಿಕೊಳ್ಳುತ್ತಾರೆ. ಕೋಲಾರ ತಾಲ್ಲೂಕಿನ ಸೀತಿ ಗ್ರಾಮದಲ್ಲೂ ಇಂಥದ್ದೇ ಆಚರಣೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ.

ದ್ಯಾವರ ಎನ್ನುವುದು ಮರಸು ಒಕ್ಕಲಿಗರಲ್ಲಿರುವ ಒಂದು ಕುಲಾಚಾರ. ಕುಲದೊಳಗೆ ಉಳಿದಿರುವ ದ್ಯೋತಕವಾಗಿ ಈ ಆಚರಣೆಯನ್ನು ಮಾಡಲೇಬೇಕು. ದೊಡ್ಡ ದ್ಯಾವರ ಆದ ದಂಪತಿಗಳಿಗೆ ಕುಟುಂಬ ವ್ಯವಸ್ಥೆಯಲ್ಲಿ ವಿಶೇಷ ಸ್ಥಾನಮಾನ. ಅಂಥವರಿಗೆ ಕೆಲವು ವಿಶೇಷ ಆಚರಣೆಗಳಲ್ಲಿ ಭಾಗವಹಿಸುವ ಹಕ್ಕು ಬೇರೆ. ಸಮುದಾಯದ ನಿಯಮದಂತೆ, ದೊಡ್ಡ ದ್ಯಾವರ ಆಗದ ದಂಪತಿಗಳು ಕನ್ಯಾದಾನ ಮಾಡುವಂತಿಲ್ಲ. ಯಾವುದೇ ಮದುವೆಯಲ್ಲಿ ವಧೂ–ವರನಿಗೆ ಅಕ್ಷತೆ ಹಾಕುವಂತಿಲ್ಲ. ಹೆಣ್ಣು ಮಕ್ಕಳಿಗೆ ದ್ಯಾವರ ಆಗದ ಹೊರತು ಕಿವಿ ಚುಚ್ಚುವಂತಿಲ್ಲ.

ADVERTISEMENT

ಭೈರವೇಶ್ವರಸ್ವಾಮಿಗೆ ದೀಪ ಹೊರುವುದರೊಂದಿಗೆ ದ್ಯಾವರ ಆರಂಭಗೊಳ್ಳುತ್ತದೆ. ಅನಂತರ ದಂಪತಿ ಹಾಗೂ ಮಕ್ಕಳು ಕ್ರಮವಾಗಿ ಕರಗ ಹಾಗೂ ಹೂಬುಟ್ಟಿ ಹೊತ್ತು ಒಟ್ಟಾಗಿ ಸಾಲಿನಲ್ಲಿ ದೇವಾಲಯ ಅಥವಾ ಕೃತಕವಾಗಿ ಲಕ್ಕೀ ಸೊಪ್ಪಿನಿಂದ ನಿರ್ಮಿಸಿದ ಗುಡಿಗೆ ಹೊರಟು ಪೂಜೆ ಸಲ್ಲಿಸುತ್ತಾರೆ. ಈ ಆಚರಣೆಯೇ ದ್ಯಾವರ.

ಹೆಬ್ಬೆರಳು ಕೊಡುವ ಒಕ್ಕಲಿಗರು: ದೊಡ್ಡ ದ್ಯಾವರ, ಬಂಡಿ ದ್ಯಾವರ, ಹೂ ಮುಡಿಸುವ ಕಾರ್ಯಕ್ರಮ, ಕರಗೋತ್ಸವ ಎಂದೆಲ್ಲಾ ಈ ಆಚರಣೆಗೆ ಹೆಸರು. ಮರಸು ಒಕ್ಕಲಿಗರು ಹಿಂದೆ ಸೀತಿ ಬೆಟ್ಟದಲ್ಲಿ, ಸೀತಿ ಭೈರವೇಶ್ವರನಿಗೆ ಹೆಬ್ಬೆರಳು ಸಮರ್ಪಿಸುವ ಪದ್ಧತಿ ಇತ್ತು. ಸಾಮಾನ್ಯವಾಗಿ ಮಹಿಳೆಯರು ತಮ್ಮ ಸಮುದಾಯದ ಗುರುತಿಗಾಗಿ ಬಲಗೈ ಹೆಬ್ಬೆರಳನ್ನು ಬಲಿಗೊಡುತ್ತಿದ್ದರು. ದೇವಾಲಯದ ಸಮೀಪ ಅಕ್ಕಸಾಲಿಗರು ಈ ಬೆರಳು ಕತ್ತರಿಸುವ ಕಾರ್ಯ ಮಾಡುತ್ತಿದ್ದರು. ಆಯುರ್ವೇದ ವೈದ್ಯರು ಗಾಯಕ್ಕೆ ನಾಟಿ ಔಷಧ ಹಾಕಿ ಕಟ್ಟುತ್ತಿದ್ದರು. ಇದೊಂದು ಕ್ರೂರ ಪದ್ಧತಿಯೆಂದು ತಿಳಿದ ಬ್ರಿಟಿಷ್ ಸರ್ಕಾರ, ಬೆರಳು ಕೊಡುವ ಆಚರಣೆಯನ್ನು ನಿಷೇಧಿಸಿಸಿತು. ಒಕ್ಕಲಿಗರು ಕೃಷಿಕರಾಗಿದ್ದು, ವ್ಯವಸಾಯ ಮಾಡುತ್ತಿದ್ದರು. ಹೆಬ್ಬೆರಳು ಕಳೆದುಕೊಂಡ ಮಹಿಳೆಯರು ತಮ್ಮ  ಕೆಲಸವನ್ನು ಸಲೀಸಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೂ ಸಹ ನಿಷೇಧಕ್ಕೆ ಕಾರಣವಾಗಿತ್ತು. ಬ್ರಿಟಿಷ್‌ ಸರ್ಕಾರದ ಮಧ್ಯಪ್ರವೇಶದಿಂದ ಬೆರಳು ಕತ್ತರಿಸುವ ಪದ್ಧತಿ ಹೋಯಿತಾದರೂ, ಅದರ ನೆರಳು ಇನ್ನೂ ಉಳಿದಿದೆ. ಈಗ ಸಂಪ್ರದಾಯ ಬಿಡದಂತೆ ದ್ಯಾವರ ಮಾಡಿಕೊಳ್ಳುವ ಮಕ್ಕಳ ಬೆರಳಿಗೆ ಹೂವನ್ನು ಕಟ್ಟಿ, ಹೂವನ್ನು ಮಾತ್ರ ಕತ್ತರಿಸಲಾಗುತ್ತದೆ. ಇದನ್ನು ಹೂ ಮುಡಿಸುವ ಶಾಸ್ತ್ರ ಎಂದು ಕರೆಯುತ್ತಾರೆ.

ಹಿಂದೆ ಈ ದ್ಯಾವರ ಆಯಾ ಕುಟುಂಬಕ್ಕೆ ಮಾತ್ರ ಸೀಮಿತವಾಗಿತ್ತು. ಸದ್ದು ಗದ್ದಲವಿಲ್ಲದೆ ಸರಳವಾಗಿ ನಡೆದುಹೋಗುತ್ತಿತ್ತು. ಆದರೆ ಈಗ ದೊಡ್ಡ ದ್ಯಾವರ ದೊಡ್ಡದಾಗಿ ಸದ್ದುಮಾಡುತ್ತಿದೆ. ಆಚರಣೆಗಾಗಿ ಮದುವೆಗಿಂತ ಹೆಚ್ಚು ಖರ್ಚು ಮಾಡುವವರೂ ಇದ್ದಾರೆ.

(ದ್ಯಾವರ ಸಂಭ್ರಮದಲ್ಲಿರುವ ದಂಪತಿ)

ಈ ದ್ಯಾವರದ ಬಹುತೇಕ ಖರ್ಚು ಹೆಣ್ಣು ಹೆತ್ತವರ ಹೆಗಲಿಗೆ ಬೀಳುತ್ತದೆ. ಹೆಣ್ಣಿನ ಪೋಷಕರು ಮಗಳು, ಅಳಿಯ ಹಾಗೂ ಮಕ್ಕಳಿಗೆ ಹೊಸ ಬಟ್ಟೆ ತರಬೇಕು. ದ್ಯಾವರ ಆಚರಣೆಗೆ ಅಗತ್ಯವಾದ ವಸ್ತುಗಳನ್ನು ಒದಗಿಸಬೇಕು. ಕೆಲವರಲ್ಲಿ ದ್ಯಾವರದ ಸಂದರ್ಭದಲ್ಲಿ ಕುರಿ ಕಡಿಯುವ ಪದ್ಧತಿ ಇದೆ. ಕುರಿಯನ್ನೂ ಹೆಣ್ಣಿನ ತವರು ಮನೆಯವರು ಕೊಡಬೇಕು.

ಸರಳ ಆಚರಣೆ ಎಂಬುದು ಮುಗಿದ ಅಧ್ಯಾಯ. ಈಗ ದ್ಯಾವರದ ಸಂದರ್ಭದಲ್ಲಿ ಚಿನ್ನದ ಆಭರಣ, ರೇಷ್ಮೆ ಸೀರೆ, ಬೆಲೆಬಾಳುವ ವಸ್ತುಗಳ ಉಡುಗೊರೆ ಪ್ರಧಾನವಾಗಿದೆ. ದ್ಯಾವರ ಆಚರಣೆ ಕೆಲವರಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದೆ. ಆಕರ್ಷಕ ಕರೆಯೋಲೆಗಳ ಮೂಲಕ  ನೆಂಟರಿಷ್ಟರನ್ನು ಆಹ್ವಾನಿಸಲಾಗುತ್ತಿದೆ. ವಿಶೇಷ ಅಡುಗೆ, ಅಲಂಕಾರ ಮಿತಿ ಮೀರಿದೆ. ಉಳ್ಳವರು ಮಾಡುವ ದುಂದು ವೆಚ್ಚ ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

ಪುಂಗನೂರ ಕ್ರಾಸ್ ಅಥವಾ ಸೀತಿ ಬೆಟ್ಟದಲ್ಲಿ ಪ್ರಾಣಿ ವಧೆ ಮಾಡುವುದಿಲ್ಲ. ಕುರಿ ಕಡಿಯುವ ಪದ್ಧತಿಯನ್ನು ಎಲ್ಲ ಒಕ್ಕಲಿಗರೂ ಅನುಸರಿಸುವುದಿಲ್ಲ. ಕುರಿ ಕಡಿಯುವ ಪದ್ಧತಿ ಹೊಂದಿರುವ ನೂರಾರು ಕುಟುಂಬಗಳು ಒಂದು ನಿರ್ದಿಷ್ಟ ಹಳ್ಳಿಯಲ್ಲಿ ಸೇರಿ, ದ್ಯಾವರ ಮುಗಿದ ಮೇಲೆ ಬಾಡೂಟ ಏರ್ಪಡಿಸುತ್ತಾರೆ. ಈ ಸಂದರ್ಭದಲ್ಲಿ  ಕ್ವಿಂಟಲ್‌ಗಟ್ಟಲೆ ಮಾಂಸ ಬೇಯುತ್ತದೆ. ಬಾಡೂಟವೆಂದರೆ ಬರುವವರ ಸಂಖ್ಯೆ ಹೆಚ್ಚು. ಹಾಗಾಗಿ ಹಳ್ಳಿಯಲ್ಲಿ ಜನ ಜಂಗುಳಿ ಹೆಚ್ಚುತ್ತದೆ. ಹಳ್ಳಿ ಹೊರಗಿನ ರಸ್ತೆಗಳಲ್ಲಿ ದಟ್ಟಣೆಯೋ ದಟ್ಟಣೆ. ಖರ್ಚು ಎಷ್ಟೇ ಆದರೂ, ಕುಲಾಚಾರ ಬಿಡುವಂತಿಲ್ಲ. ಬಿಟ್ಟರೆ ಕುಲಗೌರವ ಉಳಿಯುವುದಿಲ್ಲ ಎಂಬ ಭಾವನೆ ಮನೆಮಾಡಿದೆ. ಆದ್ದರಿಂದಲೇ ಆಚಾರದಂತೆ ಅಪ್ಪ, ಅಮ್ಮ ಪುಟ್ಟ ಮಣ್ಣಿನ ಗಡಿಗೆ ಬಳಸಿ ಕರಗ ಹೊರುತ್ತಾರೆ. ಮಕ್ಕಳು ಹೂ ತುಂಬಿದ ಬಿದಿರು ಬುಟ್ಟಿಯನ್ನು ಹೊತ್ತು ಅವರ ಹಿಂದೆ ಹೆಜ್ಜೆ ಹಾಕುತ್ತಾರೆ. ದ್ಯಾವರದ ಸಂಭ್ರಮಕ್ಕೆ ಮಿತಿಯೇ ಇಲ್ಲ. ವರ್ಷದುದ್ದಕ್ಕೂ ನಡೆಯುವ ಮುನಿ ದ್ಯಾವರ, ಹೊಸ ದ್ಯಾವರ, ಬಟ್ಟೆ ದ್ಯಾವರ... ಇಂತಹ ಆಚರಣೆಗಳಿಗೆ ಲೆಕ್ಕವೇ ಇಲ್ಲ.
ಈ ಸಂದರ್ಭದಲ್ಲಿ ಉಡುಗೊರೆಗಳ ಮಹಾಪೂರವೇ ಹರಿದು ಬರುತ್ತದೆ. ಸವಿಯಾದ ಊಟ ಸವಿದ ಬಳಿಕ ದೊಡ್ಡ ದ್ಯಾವರ ಮುಗಿಯುತ್ತದೆ. ಕುಲಾಚಾರ ಅನುಸರಿಸಿದ, ಕುಲದಲ್ಲಿ ಉಳಿದ ತೃಪ್ತಿ ಕರಗ ಹೊತ್ತವರಲ್ಲಿ ಉಳಿಯುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.