ADVERTISEMENT

ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ

ಸಂಧ್ಯಾ ಹೆಗಡೆ
Published 7 ಆಗಸ್ಟ್ 2017, 19:30 IST
Last Updated 7 ಆಗಸ್ಟ್ 2017, 19:30 IST
ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ
ಎಲ್ಲೆಲ್ಲೂ ಸೊಬಗಿದೆ ಎಲ್ಲೆಲ್ಲೂ ಸೊಗಸಿದೆ   

ಜೊರ್‍ರೆಂದು ಸುರಿವ ಮಳೆ, ಜಗಲಿ ಕಟ್ಟೆಯ ಮೇಲೆ ಕುಳಿತು ಪಡಿಮಾಡಿನಿಂದ ಇಳಿದಿಳಿದು ಬರುವ ವರ್ಷಧಾರೆಯನ್ನು ನೋಡುತ್ತ ಕುಳಿತರೆ ಕಣ್ತುಂಬ ಕನಸುಗಳ ಪ್ರವಾಹ.

ಅಂಗಳದಲ್ಲಿ ಅರಳಿದ ಕೇತಕಿಗೆ ಮುತ್ತಿಕ್ಕಿ ಸರ್‍ರನೆ ಹಾರುವ ಚಿಟ್ಟೆಯ ಹಿಂದೆ ಓಡುವ ಒದ್ದೆ ಮನಸ್ಸು. ಹುರಿದ ಹಲಸಿನ ಬೇಳೆ, ಕುರುಕಲು ತಿಂಡಿ ಮೆಲ್ಲುವ ಆಸೆ. ದೂರದ ಗದ್ದೆಯ ಬಯಲಿನಲ್ಲಿ ಗಂಟಲು ಸೋತರೂ ಕೂಗು ನಿಲ್ಲಿಸದ ಜೀರುಂಡೆ ರೋದನ. ಮಳೆನಾಡಿನ ಮಲೆನಾಡ ಸೊಬಗು ಅಕ್ಷರಕ್ಕೆ ನಿಲುಕದ ದೃಶ್ಯಕಾವ್ಯ.

ಮೂರ್ನಾಲ್ಕು ವರ್ಷಗಳಿಂದ ಮಲೆನಾಡಿ ನಲ್ಲಿ ಮಳೆಯ ಸಂಭ್ರಮವಿರಲಿಲ್ಲ. ಬೆಟ್ಟಗುಡ್ಡಗಳ ಕೊರಕಲಿನಲ್ಲಿ ಮಿಂಚಿ ಮಾಯವಾಗುವ ಬಿಳಿನೊರೆಯ ಸುಂದರಿಯರು ಕಾಣುತ್ತಿರಲಿಲ್ಲ. ಸೊಕ್ಕಿ ಹರಿಯುವ ಹಳ್ಳಕೊಳ್ಳಗಳು, ಹಸಿರು ಕಾರ್ಪೆಟ್ ಹೊದ್ದ ಬೆಟ್ಟಗಳು ಮಕ್ಕಳಿಗೆ ಹೇಳುವ ಕತೆಯ ಸಾಲಿಗೆ ಸೇರಿದ್ದವು. ಈ ವರ್ಷ ಮತ್ತೆ ವರುಣನ ನರ್ತನಕ್ಕೆ ಶೃಂಗಾರಗೊಂಡ ಮಲೆನಾಡು

ADVERTISEMENT

‘ಎಲ್ಲೆಲ್ಲೂ ಸೊಬಗಿದೆ

ಎಲ್ಲೆಲ್ಲೂ ಸೊಗಸಿದೆ

ಮಾಮರವು ಹೂತಿದೆ

ಸೊಬಗೇರಿ ನಿಂತಿದೆ’ ಎಂಬ ಯಕ್ಷಗಾನ ಪದ್ಯವನ್ನು ಗುನಗುನಿಸುವಂತೆ ಭಾಸವಾಗುತ್ತಿದೆ.

ದಶಕದ ಹಿಂದಿನ ಮಲೆನಾಡಿನ ಮಳೆಯ ಅಬ್ಬರವಿಲ್ಲದಿದ್ದರೂ ಭರವಸೆಯ ಬಿಂಬ ಮೂಡಿದೆ. ಜುಲೈ ತಿಂಗಳ ಎರಡನೇ ವಾರದಿಂದ ಮುಂಗಾರು ಚುರುಕಾಗಿದೆ. ಜೀವಜಲಕ್ಕಾಗಿ ಪರಿತಪಿಸುತ್ತಿದ್ದ ಭತ್ತದ ಸಸಿಗಳು ಗದ್ದೆಯಲ್ಲಿ ಟಬ್‌ಬಾತ್ ಮಾಡುತ್ತಿವೆ. ಹೊಳೆಯ ನಡುವೆ ಮೂತಿ ಹೊರಚಾಚಿದ್ದ ಕಪ್ಪುಬಂಡೆಗಳು ತೆಪ್ಪಗೆ ನೀರಿನಡಿ ಮಲಗಿವೆ. ಬೋಳಾಗಿದ್ದ ಮರ ಗಳಲ್ಲಿ ಎಲೆಗಳು ಚಿಗುರೊಡೆದಿವೆ.

ನನ್ನ ಕಣ್ಣೇ ಹಸುರಾಗಿದೆಯೇನೋ ಎಂದು ಭ್ರಮೆ ಹುಟ್ಟಿಸಿದ ಬೆಟ್ಟದೆಡೆಗೆ ಕ್ಯಾಮೆರಾ ಹಿಡಿದು ಹೆಜ್ಜೆ ಹಾಕಿದೆ. ಒಂದರ್ಧ ಗಂಟೆಯಲ್ಲಿ ಬಗೆಬಗೆಯ ಕೀಟಗಳು, ಧ್ಯಾನಸ್ಥ ಬಿಂಬಿ, ಪತಂಗ, ಮಧು ಹೀರುವ ಜೇನುನೊಣ, ಮನುಷ್ಯನ ಮುಖವಾಡ ತೊಟ್ಟಿದ್ದ ಜೇಡ, ಕಂಬಳಿಹುಳ, ಫ್ಲ್ಯಾಷ್‌ನಂತೆ ಬಂದು ಹೋದ ಬಿಸಿಲಿನಲ್ಲಿ ರಸ್ತೆ ದಾಡುತ್ತಿದ್ದ ಊಸರವಳ್ಳಿ ಫೋಟೊಕ್ಕೆ ಪೋಸು ಕೊಟ್ಟವು. ಮಲೆನಾಡಿನ ವಿಶೇಷವೇ ಅದು. ಎತ್ತ ಕಣ್ಣು ಹಾಯಿಸಿದರೂ ಕ್ಯಾಮೆರಾ ಕಣ್ಣಿಗೆ ಸಿಗುವ ಪಟಗಳೇ ಕಾಣುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.