ADVERTISEMENT

ಗಂಡು ನದಿಯ ಜಾಡು ಹಿಡಿದು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 19:30 IST
Last Updated 30 ಅಕ್ಟೋಬರ್ 2017, 19:30 IST
ಗಂಡು ನದಿಯ ಜಾಡು ಹಿಡಿದು
ಗಂಡು ನದಿಯ ಜಾಡು ಹಿಡಿದು   

* ತಾಜುದ್ದೀನ್‌ ಆಜಾದ್‌

ಭಾರತದ ಕೆಲವೇ ಕೆಲವು ನದಿಗಳಿಗೆ ಪುರುಷ ಹೆಸರುಗಳಿವೆ. ಅಂತಹ ನದಿಗಳಲ್ಲಿ ನಮ್ಮ ಬೆಳಗಾವಿ ಜಿಲ್ಲೆಯ ಮಾರ್ಕಂಡೇಯ ಸಹ ಒಂದು. ಈ ಗಂಡು ನದಿಯನ್ನೊಮ್ಮೆ ನೋಡಿಕೊಂಡು ಬರೋಣ ಎಂದುಕೊಂಡು ಮೊನ್ನೆ ಬೆಳ್ಳಂಬೆಳಿಗ್ಗೆ ಬೈಕ್‌ ಏರಿ ಹೊರಟಾಗ, ಚನ್ನಮ್ಮನ ಕಿತ್ತೂರು ದಾಟಿದ್ದೇ ತಡ ದಟ್ಟ ಮಂಜು. ಮಂಜು ಮುಸುಕಿದ ಹಾದಿಯಲ್ಲೇ ಸಾಗಿತು ನಮ್ಮ ಯಾನ.

ಖಾನಾಪುರ ತಾಲ್ಲೂಕು ಬೈಲೂರಿನಲ್ಲಿ ಜನಿಸುವ ಈ ನದಿಯನ್ನು ಗೊಡಚಿನಮಲ್ಕಿ ಬಳಿ ವೀಕ್ಷಿಸುವುದು ಅದೆಷ್ಟೊಂದು ಅಪ್ಯಾಯಮಾನ. ಜಲಪಾತದ ಆ ಸೊಬಗಿಗೆ ಸಾಟಿಯುಂಟೆ? ಕಾಡು ದಾರಿಯಲ್ಲಿ ಸಾಗಿಬಂದ ಆಯಾಸ ಅರೆಕ್ಷಣದಲ್ಲಿ ಮಂಗಮಾಯ. ತಿಳಿನೀಲಿ ನೀರಿನಿಂದ ತುಂಬಿದ್ದ ನದಿಯ ಮಧ್ಯದಲ್ಲಿ ಮೀನುಗಾರರ ದೋಣಿ. ದಂಡೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಅಮ್ಮನ ಕಾರ್ಯವೈಖರಿ ವೀಕ್ಷಿಸುತ್ತಿದ್ದ ಬಾಲಕಿ. ಹೆಬ್ಬಂಡೆ ಮೇಲೆ ಜೋಡಿ ಯೊಂದರ ಫೋಟೊ ತೆಗೆಯುವ ಸಂಭ್ರಮ. ಅಲ್ಲೇ ನದಿ ದಂಡೆಯ ಮೇಲೆ ಮೇಕೆಗಳ ಹಿಂಡು. ನೆತ್ತಿಗೆ ತಂಪೆರೆಯುತ್ತಿದ್ದ ಮರದತ್ತ ತಲೆ ಎತ್ತಿ ನೋಡಿದರೆ ಗೀಜಗನ ಅಂದದ ಗೂಡು. ಕಸ–ಕಡ್ಡಿಗಳಿಂದ ಅಷ್ಟು ಅಂದನೆಯ ಗೂಡು ಹೆಣೆದ ಆ ಬಾನಾಡಿ ಭಲೆ ದರ್ಜಿಯೇ ಬಿಡಿ.

ADVERTISEMENT

ನದಿ ದಂಡೆಗುಂಟವೇ ನಮ್ಮ ಪಯಣ. ಮೆಕ್ಕೆಜೋಳದ ರಾಶಿಯಲ್ಲಿ ತೊಡಗಿದ್ದ ರೈತರಿಗೆ ರಸ್ತೆಯೇ ಕೃಷಿ ಕಣಜ. ಹೊಲಗಳಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದ ಟ್ರ್ಯಾಕ್ಟರ್‌ಗಳಲ್ಲಿ ಉತ್ತರ ಕರ್ನಾಟಕದ ಜವಾರಿ ಹಾಡುಗಳು. ಅರೆರೆ ಗೊಡಚಿನಮಲ್ಕಿಯಲ್ಲಿ ಮೈದುಂಬಿಕೊಂಡಿದ್ದ ಮಾರ್ಕಂಡೇಯ ಗೋಕಾಕ್‌ ಹತ್ತಿರ ಆದಂತೆ ಸೊರಗುತ್ತಿದ್ದ. ಸಣ್ಣದಾಗಿ ಹರಿಯುತ್ತಿದ್ದ ನೀರಿನಲ್ಲಿ ಎಮ್ಮೆಗಳ ಮಜ್ಜನ.

ಜಾಡು ಹಿಡಿದು ಮುಂದೆ ಹೋದಾಗ ಗೋಕಾಕ್‌ ಬಳಿಯೇ ಮಾರ್ಕಂಡೇಯ, ಘಟಪ್ರಭೆ ಮಡಿಲಿನ ತಿಳಿನೀಲದಲ್ಲಿ ಲೀನವಾಗಬೇಕೇ? ಸಂಗಮದ ಸ್ಥಳ ನೋಡಿಕೊಂಡು ಗೋಕಾಕ್‌ ಜಲಪಾತಕ್ಕೆ ಬಂದರೆ ಎರಡೂ ನದಿಗಳು ಕೊಳ್ಳಕ್ಕೆ ಬೀಳುತ್ತಿದ್ದುದು ಒಂದು ಸಣ್ಣ ತೊರೆಯಾಗಿ! ತೂಗು ಸೇತುವೆ ದಾಟಿ, ಹತ್ತಿರದ ದೇವಸ್ಥಾನ ಏರಿ ನಿಂತಾಗ ಕಂಡ ನೋಟ ಎಂತಹ ಅಮೋಘ. ಜಲಸಾಗರದ ತಾಣವಾಗಬೇಕಿದ್ದ ಮೇಲಿನ ಬಂಡೆಯಲ್ಲಿ ಜನಸಾಗರ. ಅಲ್ಲೇ ನಮ್ಮ ಯಾನಕ್ಕೂ ಬ್ರೇಕ್‌.

ಕ್ಯಾಮೆರಾದ ಚಿಪ್ ತುಂಬಿತುಳುಕುವಷ್ಟು ಫೋಟೊಗಳೇ ಫೋಟೊಗಳು. ಹಸಿದ ಹೊಟ್ಟೆಗೆ ಕಾದಿತ್ತು ಗೋಕಾಕ್ ಕರದಂಟಿನ ರಸದೌತಣ.

⇒ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.