ADVERTISEMENT

ಮಯೂರ ನರ್ತಿಸಿದಾಗ...

ರಾಮಕೃಷ್ಣ ಗುಂಜೂರ್
Published 31 ಅಕ್ಟೋಬರ್ 2016, 19:30 IST
Last Updated 31 ಅಕ್ಟೋಬರ್ 2016, 19:30 IST
ಮಯೂರ ನರ್ತಿಸಿದಾಗ...
ಮಯೂರ ನರ್ತಿಸಿದಾಗ...   

ಈ ವರ್ಷದ ಏಪ್ರಿಲ್‌ ತಿಂಗಳ ಅವಧಿ. ‘ಬೈಫ್’ ಗ್ರಾಮೀಣ ಅಭಿವೃಧ್ಧಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಾನು ಪಾವಗಡದಿಂದ ತಿಪಟೂರಿನ ಲಕ್ಕಿಹಳ್ಳಿ ಫಾರಂಗೆ ವರ್ಗಾವಣೆಯಾಗಿ ಬಂದು ತಿಂಗಳು ಕಳೆದಿತ್ತು. ಈ ಫಾರ್ಮಿನ ವ್ಯವಸ್ಥಾಪಕ ಹುದ್ದೆ ನನ್ನ ಹೆಗಲ ಸೇರಿತ್ತು. ಸುಮಾರು 500 ಎಕರೆ ಫಾರ್ಮಿನಲ್ಲಿ ಇರುವ ಸಂಪತ್ತನ್ನು ನಿಭಾಯಿಸುವುದು ಹೇಗೆ ಎಂಬ ಚಿಂತೆ ಶುರುವಾಗಿತ್ತು.

ಮೊದಲು ಫಾರ್ಮಿನ ಸುತ್ತಲೂ ಏನೇನಿದೆ ಎಂಬುದನ್ನು ನೋಡುವ ಮೂಲಕ ನನ್ನ ಇಲ್ಲಿಯ ಪಯಣ ಶುರು ಮಾಡುವ ಎಂದುಕೊಂಡೆ. ಇಡೀ ಫಾರ್ಮ್‌ ಸುತ್ತಾಡಿ ಅದರ ಬಗ್ಗೆ ತಿಳಿಯಲು ನನಗೆ ಒಂದು ವಾರ ಬೇಕಾಯಿತು. ಏಕೆಂದರೆ ಇದರ ಇಂಚಿಂಚಿನ ಸಂಗತಿಯೂ ತಿಳಿದುಕೊಳ್ಳುವ ಅನಿವಾರ್ಯತೆ ನನಗಿತ್ತು. ಸತ್ತೆಲಕ್ಕನ ಕಟ್ಟೆ ಎಂಬ ಜಾಗದಲ್ಲಿ ಒಬ್ಬನೇ ಹೊರಟಾಗ ದಟ್ಟವಾದ ಪೊದೆಗಳು, ನಿರ್ಜನ ಪ್ರದೇಶ ನಾಗರಹೊಳೆಯಂತಹ ದಟ್ಟಕಾಡಿಗೆ ಹೋಗಿ ಬಂದ ಅನುಭವ. ಇಲ್ಲೇ ಚಿರತೆಗಳ ಆವಾಸಸ್ಥಾನ ಎಂದು ತಿಳಿದ ಬಳಿಕ ಎದೆ ಝಲ್‌ ಎಂದು ಆ ಕಡೆ ತಿರುಗಿ ನೋಡದೆ ಓಡಿ ಬಂದೆ.

‘ಆಗ್ರೋ ಫಾರೆಸ್ಟ್ರೀ ಪ್ಲಾಟ್’ ಪಕ್ಕ ಜೀವಂತ ಬೇಲಿಯಲ್ಲಿ, ಅವಿತು ಕುಳಿತ ಕಾಡು ಹಂದಿ ರಾಕೆಟ್‌ನಂತೆ ನುಗ್ಗಿ ಹೊರ ಹೋದಾಗ ಕಿರುಚಲು ಸಾಧ್ಯವಾಗದೆ ಬಾಯಿ ಒಣಗಿಹೋಗಿತ್ತು. ಸದ್ಯ ಚಿರತೆಯಲ್ಲ! ದೇವರು ದೊಡ್ಡವನು ಎಂದುಕೊಂಡೆ. ನನ್ನ ಎದೆ ಬಡಿತ ಹೆಜ್ಜೆಹೆಜ್ಜೆಗೂ ಹೆಚ್ಚಾಗುತ್ತಿದ್ದಂತೆಯೇ ದೂರದ ಊರಿನಲ್ಲಿದ್ದ ನನ್ನ ಹೆಂಡತಿ ಮಕ್ಕಳನ್ನು ನೆನೆಸಿಕೊಳ್ಳುವಂತೆ ಮಾಡಿದವು.

ಇದರ ಜೊತೆಗೆ, ಇನ್ನೊಂದು ಸಂಗತಿ ನನ್ನನ್ನು ಮತ್ತಷ್ಟು ಚಿಂತೆಗೆ ಎಡೆಮಾಡಿ ಕೊಟ್ಟಿತು. ನಮ್ಮ ಕಚೇರಿಯ ಕೂಗಳತೆ ದೂರದಲ್ಲಿ ಚೆನ್ನಾಗಿ ಬಲಿತ ಗಂಧದ ಮರವನ್ನು ಕಳ್ಳರು ಕತ್ತರಿಸಿ ಕದ್ದು ಪರಾರಿಯಾಗಿದ್ದರು. ‘ಸಾರ್, ಇಪ್ಪತ್ತು ಜನ ತರಬೇತುದಾರರು, ಮೂವರು ರಾತ್ರಿ ಕಾವಲ್ನೋರು ಇಲ್ಲೇ ಇದ್ವಿ. ಅದ್ ಯಾವ್ ಮಾಯ್ದಲ್ಲಿ ಬಂದು ಗಂಧದ ಮರ ಕದ್ರೋ ಗೊತ್ತಿಲ್ಲ...’ ಎಂದು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ ಪ್ರಭಾಕರ್ ನಡೆದ ಘಟನೆ ವಿವರಿಸಿದ.

‘ಸಾರ್‌... ಮರ ದಬ್‌ ಅಂತ ಬಿತ್ತು. ಏನೋ ಬಿತ್ತು ಎಂದು ಎಲ್ಲರೂ ಓಡೋಗಿ ಬ್ಯಾಟ್ರಿ ಹಾಕಿ ನೋಡೊದ್ರೊಳ್ಗೆ ಗಂಧದ ಮರದ ದಿಮ್ಮಿ ಹೊತ್ಕೊಂಡು ಹೋಗ್ತಾಯಿದ್ರು! ಕೂಗಾಡಿದ್ದಕ್ಕೆ ಕಲ್ಲು ತಕ್ಕೊಂಡು ಬಿಟ್ರು ನೋಡಿ! ಬಂದು ಕಾಲಿಗೆ ಬಿತ್ತು, ನಾನು ‘ಅಯ್ಯೋ... ಅಮ್ಮ...’ ಎಂದು ನೆಲಕ್ಕೆ ಬಿದ್ದೆ, ನಮ್ಮೋರು ಎಲ್ಲರೂ ಹಿಂದಕ್ಕೆ ಓಟ ಕಿತ್ರು ಸಾರ್...’ ಎಂದು ಅವನು ಹೇಳಿದಾಗ ರಾತ್ರಿ ಹೊರ ಬರುವುದಕ್ಕೂ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನನ್ನದಾಯಿತು! 

ಇದೇ ಘಟನೆಯನ್ನು ನೆನೆಯುತ್ತಾ ಇದ್ದಾಗ ಅದನ್ನೆಲ್ಲಾ ಮರೆಸುವಂತೆ  ಮಾಡಿದ್ದು ಅಲ್ಲೇ ಇದ್ದ ನವಿಲು. ಮುಂಗಾರು ಮಳೆಯ ನಡುವೆ ಬಿಸಿಲು ತೂರಿಬಂದಾಗ ಈ ನವಿಲು ತನ್ನ ಗರಿಗಳನ್ನು ಕಾಮನಬಿಲ್ಲಿನಂತೆ ಮೇಲಕ್ಕೆ ಎತ್ತಿ, ನಾಟ್ಯವಾಡತೊಡಗಿತ್ತು. ಇದನ್ನು ನೋಡುತ್ತಿದ್ದ ನಾನು ಮೂಕ ಪ್ರೇಕ್ಷಕನಾದೆ. ಹಾಗೆಯೇ ಸದ್ದು ಮಾಡದೆ, ಅದಕ್ಕೆ ತೊಂದರೆ ನೀಡದಂತೆ ಮರೆಯಲ್ಲಿ ಕುಳಿತು ನರ್ತನ ಸವಿದೆ.

ಅಂದು, ನನ್ನ ಅದೃಷ್ಟಕ್ಕೆ ಕೈಯಲ್ಲಿ ಕ್ಯಾಮೆರಾ ಇತ್ತು. ಪಟಪಟನೆ ಫೋಟೊ ಕ್ಲಿಕ್ಕಿಸಿದೆ. ನವಿಲಿನ ಮುಂಭಾಗವನ್ನು, ಕ್ಲೋಸಪ್‌ನಲ್ಲಿ ತೆಗೆಯಲು ಹವಣಿಸಿದೆ, ಎಲ್ಲಿ ನನ್ನನ್ನು ನೋಡಿ, ನವಿಲು ತನ್ನ ಚಿತ್ತಾರದ ಗರಿಗಳನ್ನು ಕೆಳಗೆ ಇಳಿಸಿ ಬಿಡುವುದೋ ಎಂಬ ಆತಂಕದಲ್ಲಿ ಅದರ ಮುಂಭಾಗದ ಫೋಟೊ ತೆಗೆಯಲು ಸರ್ಕಸ್‌ ಮಾಡಬೇಕಾಯಿತು. ಆದರೆ ಹೆಣ್ಣು ನವಿಲನ್ನು ಆಕರ್ಷಿಸಲು ಪಣತೊಟ್ಟಂತೆ ಕಂಡುಬಂದ ಈ ಗಂಡು ನವಿಲಿನ ನರ್ತನ ಮುಂದುವರೆದಿತ್ತು.

ನಾನು ತೃಪ್ತಿಯಾಗುವವರೆಗೆ ನವಿಲಿನ ಕುಣಿತ ನೋಡಿದೆ. ಅದರ ಹಿಂಭಾಗದ ಉದ್ದನೆಯ ಗರಿಗಳನ್ನು ನೆಟ್ಟಗೆ ನೇರವಾಗಿ ನಿಲ್ಲಿಸಿ, ಅವುಗಳು ಸ್ಥಿರವಾಗಿ ನಿಲ್ಲುವಂತೆ ತಳಭಾಗದಲ್ಲಿ ಮತ್ತೊಂದು ವಿಭಾಗದ ಗರಿಗಳನ್ನು ಎತ್ತಿ ನಿಲ್ಲಿಸುವ ಹಾಗೂ ಆ ಗರಿಗಳಿಗೆ ಅಡ್ದಲಾಗಿ ಮತ್ತೊಂದು ಗರಿಗಳ ಕುಚ್ಚನ್ನು ನಿಲ್ಲಿಸುವ ದೃಶ್ಯವನ್ನು ಅದೇ ಮೊದಲ ಬಾರಿಗೆ ನಾನು ಕಂಡೆ. ಈ ಸಂತಸದ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವ ನಡುವೆಯೇ ಇವುಗಳ ರಕ್ಷಣೆ ಜೊತೆಗೆ ಇಲ್ಲಿರುವ ಜೀವವೈವಿಧ್ಯದ ಕುರಿತು ಚಿಂತಿಸಬೇಕಾಗಿ ಬಂತು.

ಹೌದು. ಲಕ್ಕೀಹಳ್ಳಿ ಫಾರಂ, ಹಲವಾರು ಜೀವವೈವಿಧ್ಯಗಳಿಂದ ಕೂಡಿರುವ ಪುಟ್ಟ ಅರಣ್ಯ. ಮೈಸೂರು ಮಹಾರಾಜರ ಕಾಲದಲ್ಲಿ ‘ಅಮೃತಮಹಲ್’ ತಳಿಯ ಹಸುಗಳನ್ನು ಸಾಕಲು ಮೀಸಲಿದ್ದ ಜಾಗ. ಕರ್ನಾಟಕ ಸರ್ಕಾರದ ಒಡೆತನಕ್ಕೆ ಬಂದಾಗ, ಸಾವಿರಾರು ಎಕರೆ ಜಾಗವನ್ನು ಸುತ್ತಮುತ್ತಲ ಜನ ಒತ್ತುವರಿ ಮಾಡಿಕೊಂಡು ಕೈವಶಮಾಡಿಕೊಂಡಿದ್ದರು.

ಉಳಿದ ಈ ಜಾಗವನ್ನು ಸಮಾಜ ಸೇವೆಗೆ ಮೀಸಲಿದ್ದ ‘ಬೈಫ್’ ಸಂಸ್ಥೆಗೆ ದೇವರಾಜು ಅರಸು ಕೊಡುಗೆಯಾಗಿ ನೀಡಿದರು. ಈ ಜಾಗವನ್ನು, ‘ಬೈಫ್’ ಸಂಸ್ಥೆಯವರು, ರೈತರಿಗೆ ಬೇಕಾದ ಮಾಹಿತಿಯನ್ನು ನೀಡುವ ತರಬೇತಿ ಕೇಂದ್ರವಾಗಿ ನಿರ್ಮಾಣ ಮಾಡಿದ್ದಾರೆ. ಇದರ ಜೊತೆಗೆ ಅನೇಕ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ವಿಭಾಗಗಳಲ್ಲಿ ಜೀವಂತ ಮಾದರಿಗಳನ್ನು ಸೃಷ್ಟಿಮಾಡಿದ್ದಾರೆ. ಇದು ರೈತರ ನಿಜವಾದ ಕ್ಷೇತ್ರ ಪಾಠ ಶಾಲೆ.

ಬೇಸಿಗೆ ಕಾಲದಲ್ಲಿ, ದನ ಕಾಯುವ ಜನರು ಬೆಳೆದು ನಿಂತ ಒಣಗಿದ ಹುಲ್ಲಿಗೆ ಬೆಂಕಿ ಇಡುತ್ತಾರೆ. ಹೀಗೆ ಸುಟ್ಟರೆ ಮಳೆಗಾಲಕ್ಕೆ ಒಳ್ಳೆ ಮೇವು ಬೆಳೆಯುತ್ತದೆ ಎಂಬ ನಂಬಿಕೆ ಅವರದ್ದು. ‘ಬೈಫ್’ ಸಂಸ್ಥೆಯವರು ಇದನ್ನು ವಿರೋಧಿಸಿದ ಕಾರಣ, 500 ಎಕರೆಗೆ ಹಾಕಿದ್ದ ಜೀವಂತ ಬೇಲಿಯನ್ನು ಬೆಂಕಿಯಿಟ್ಟು ಸುಡುತ್ತಿದ್ದಾರೆ. ಇದು ಪೊದೆಯೊಳಗೆ ನವಿಲುಗಳು ಇಟ್ಟ ನೂರಾರು ಮೊಟ್ಟೆಗಳನ್ನು, ಮರಿಗಳನ್ನು, ಬೆಳೆದಿರುವ ಅಪಾರ ಸಸ್ಯಸಂಪತ್ತನ್ನು ಸುಟ್ಟು ಕರಕಲಾಗುವಂತೆ ಮಾಡುತ್ತಿದೆ.

ADVERTISEMENT

ಇಂಥವರಿಂದ ಈ ನವಿಲುಗಳನ್ನು ಮತ್ತು ಅಪಾರ ಜೀವವೈವಿಧ್ಯವನ್ನು ರಕ್ಷಣೆ ಮಾಡುವುದು ಅನಿವಾರ್ಯವಾಗಿದೆ. ಜೀವಂತ ಬೇಲಿ ಬೇಸಿಗೆಯಲ್ಲಿ ಒಣಗುವುದರಿಂದ ಬಹಳ ಸುಲಭವಾಗಿ ಬೆಂಕಿಗೆ ಆಹುತಿಯಾಗುತ್ತಿದೆ. ಇದನ್ನು ಸುಭದ್ರವಾದ ತಂತಿ ಬೇಲಿಯನ್ನಾಗಿ, ಪರಿವರ್ತನೆ ಮಾಡುವುದರಿಂದ ಇಲ್ಲಿರುವ ಅಪಾರ ಜೀವ ಸಂಪತ್ತನ್ನು ರಕ್ಷಿಸಬಹುದು.

ಸರ್ಕಾರ ಸಹಾಯ ಮಾಡಿದರೆ ಇದೊಂದು ನಿಸರ್ಗ ಪ್ರವಾಸ ಧಾಮವಾಗಿ ಪರಿವರ್ತಿಸಬಹುದು. ಪರಿಸರಸ್ನೇಹಿ ಪ್ರವಾಸೋದ್ಯಮ (ಇಕೊ ಟೂರಿಸಂ) ಈಗ ಪ್ರಚಲಿತ. ಅದೇ ರೀತಿ ಲಕ್ಕಿಹಳ್ಳಿ ಫಾರಂ ಅನ್ನು ಕೂಡ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಮಾಡಬಹುದಾಗಿದೆ. ಈ ಮೂಲಕ ಅಪಾರವಾದ ಪಕ್ಷಿ ಸಂಪತ್ತು, ಸಸ್ಯ ಸಂಪತ್ತು, ಮತ್ತು ಪ್ರಾಣಿ ಸಂಕುಲವನ್ನು ರಕ್ಷಿಸಬಹುದು. ತಿಪಟೂರಿನ ಕೊಪರಿ ಉತ್ಪನ್ನಗಳಿಗೆ ಹೊಸ ಹೊಸ ಬೇಡಿಕೆಯನ್ನು ಸೃಷ್ಟಿಸಬಹುದು, ಸುಮಾರು 10 ಹಳ್ಳಿಯ ಯುವಕ ಯುವತಿಯರಿಗೆ, ಮಹಿಳೆಯರಿಗೆ, ರೈತರಿಗೆ ಹೊಸ ಉದ್ಯೋಗವನ್ನು ಕಲ್ಪಿಸಿಕೊಡಬಹುದು. ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.