ADVERTISEMENT

ಮಾದರಿ ಹೆದ್ದಾರಿ

ಚಂದ್ರಕಾಂತ ಮಸಾನಿ
Published 27 ಅಕ್ಟೋಬರ್ 2014, 19:30 IST
Last Updated 27 ಅಕ್ಟೋಬರ್ 2014, 19:30 IST
ಮಾದರಿ ಹೆದ್ದಾರಿ
ಮಾದರಿ ಹೆದ್ದಾರಿ   

ಪ್ರತಿ ಗಂಟೆಗೆ ನೂರು ಕಿ.ಮೀ ವೇಗದಲ್ಲಿ ಸಾಗುವ ವಾಹನದಲ್ಲಿ ಕುಳಿತರೂ ಆತಂಕವಾಗುವುದಿಲ್ಲ. ವಾಹನ ಒಂದಿಷ್ಟೂ ಕುಪ್ಪಳಿಸದೆ ಚಲಿಸುವುದರಿಂದ ಅದು ಎಷ್ಟು ವೇಗದಲ್ಲಿ ಸಾಗುತ್ತಿದೆ ಎನ್ನುವುದೂ ತಿಳಿಯುವುದಿಲ್ಲ. ಮುಂದಿನ 40 ಕಿ.ಮೀ ಅಂತರದಲ್ಲಿ ಸುಡು ಬಿಸಿಲಿದೆಯೋ, ಭಾರಿ ಮಳೆ ಅಪ್ಪಳಿಸುತ್ತಿದೆಯೋ ಎನ್ನುವು ದನ್ನು ಸಹ ಮಾರ್ಗ ಮಧ್ಯೆಯೇ ತಿಳಿಯುವ ಅವಕಾಶ. ಮಾರ್ಗ ಮಧ್ಯೆ ಅನಾರೋಗ್ಯವಾದರೆ, ಹೆದ್ದಾರಿ ಬದಿಯಲ್ಲಿಯೇ ಇರುವ ದೂರವಾಣಿ ಮೂಲಕ ಕರೆ ಮಾಡಿದರೆ, ತಕ್ಷಣದಲ್ಲಿ ಸೇವೆ ನಿಮ್ಮ ಬಳಿಗೆ!

ಇಂಥದ್ದೊಂದು ಅಂತರರಾಷ್ಟ್ರೀಯ ಗುಣಮಟ್ಟದ ಹೆದ್ದಾರಿ ನಮ್ಮ ರಾಜ್ಯದಲ್ಲಿಯೇ ಇದೆ ಅಂದರೆ ಒಂದೊಮ್ಮೆ ನಂಬಲು ಸಾಧ್ಯವಾಗುವುದೇ ಇಲ್ಲ. ಈ ರೀತಿಯ ಸುಸಜ್ಜಿತ ಹೆದ್ದಾರಿ ಇರುವುದು ಹುಬ್ಬಳ್ಳಿ–ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ . ಧಾರವಾಡ ಹೊರವಲಯದಿಂದ ಬೆಳಗಾವಿ ಜಿಲ್ಲೆಯ ಹೊನಗಾವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದವರಿಗೆ ಮಾತ್ರ ಇದು ಅನುಭವಕ್ಕೆ ಬರುತ್ತದೆ.

ಷಟ್ಪಥ ಹೆದ್ದಾರಿ
ಧಾರವಾಡದಿಂದ ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮದವರೆಗೆ ಈ ಮೊದಲು ನಿರ್ಮಿಸಿದ್ದ ಚತುಷ್ಪಥ ಹೆದ್ದಾರಿಯ ಗುಣಮಟ್ಟ ಅಷ್ಟಕ್ಕಷ್ಟೇ ಇತ್ತು. ಎರಡನೆಯ ಹಂತದಲ್ಲಿ ಅದನ್ನು ಷಟ್ಪಥವನ್ನಾಗಿ ಪರಿವರ್ತಿಸ­ಲಾಯಿತು. ಇದರ ನಿರ್ಮಾಣ ಹಾಗೂ ನಿರ್ವಹಣೆಯ ಹೊಣೆ ಹೊತ್ತುಕೊಂಡಿ­ರುವುದು ಅಶೋಕ ಬಿಲ್ಡ್‌ಕಾನ್ ಕಂಪೆನಿ ಲಿಮಿಟೆಡ್‌. ಈ ಕಂಪೆನಿಯು ಗುಣಮಟ್ಟದ ರಸ್ತೆಯನ್ನಷ್ಟೇ ನಿರ್ಮಾಣ ಮಾಡಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಹಲವು ರಕ್ಷಣಾ ಕಾರ್ಯಗಳನ್ನು ಕೈಗೊಂಡಿದೆ. ಈ ಮೂಲಕ ಪ್ರವಾಸಿಗರ ಮೆಚ್ಚುಗೆಗೂ ಪಾತ್ರವಾಗಿದೆ.

ಹೈವೇಯಲ್ಲಿ ಅರಳಿದ ಹೂವು
ಧಾರವಾಡ–ಬೆಳಗಾವಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ವಿಭಜಕವು 10 ಅಡಿ ಅಗಲ ಹಾಗೂ ಸುಮಾರು 80 ಕಿ.ಮೀ ಉದ್ದವಿದೆ. ರಸ್ತೆ ನಡುವಿನ ಜಾಗದಲ್ಲಿ ಬಗೆಬಗೆಯ ಹೂವಿನ ಗಿಡಗಳನ್ನು ಬೆಳೆಸಲಾಗಿದೆ. ಹುಲ್ಲಿನ ಹಾಸು ನಿರ್ಮಿಸಲಾಗಿದೆ. ಇಲ್ಲಿ ಹಳದಿ, ಬಿಳಿ, ಗುಲಾಬಿ ಬಣ್ಣದ ಕನೇರ್, ಕೆಂಪು, ಬಿಳಿ, ಕಿತ್ತಳೆ ಬಣ್ಣದ ದಾಸವಾಳ, ಕೆಂಪು, ಗುಲಾಬಿ ಹಾಗೂ ಬಿಳಿ ಬಣ್ಣದ ಬೂಗನ್‌ವಿಲ್ಲೆ ಗಿಡಗಳಿವೆ. ಆಲಂಕಾರಿಕ ಸಸ್ಯಗಳಂತೂ ಅಸಂಖ್ಯ.

‘ರಾಷ್ಟ್ರೀಯ ಹೆದ್ದಾರಿ ಮಧ್ಯದ ಹೂವಿನ ಸಸಿಗಳ ಪೋಷಣೆ ಹಾಗೂ 80 ಕಿ.ಮೀ ಹೆದ್ದಾರಿ ನಿರ್ವಹಣೆಗೆ 75 ಜನ ಕಾರ್ಮಿಕರಿದ್ದಾರೆ. ಕಳೆ ತೆಗೆಯುವುದು, ನಿಗದಿ ಪಡಿಸಿದ(1.5 ಮೀಟರ್‌) ಎತ್ತರದಷ್ಟೇ ಗಿಡಗಳು ಬೆಳೆಯುವಂತೆ ನೋಡಿಕೊಳ್ಳುವುದು, ಸಸಿಗಳಿಗೆ ನೀರುಣಿಸುವುದು ಹಾಗೂ ಹೊಸ ಸಸಿಗಳನ್ನು ನೆಡುವ ಹೊಣೆಯನ್ನು ಕಾರ್ಮಿಕರಿಗೆ ವಹಿಸಲಾಗಿದೆ’ ಎನ್ನುತ್ತಾರೆ ಕಂಪೆನಿಯ ಪ್ರಾಜೆಕ್ಟ್‌ ಎಂಜಿನಿಯರ್ ರಾಹುಲ್ ಕುರಾಳಿ.

ರಾಷ್ಟ್ರೀಯ ಹೆದ್ದಾರಿ ನಡುವೆ ಹಾಗೂ ಬದಿಗೆ 700 ಉತ್ತರ ಆಫ್ರಿಕಾದ ಟ್ಯುಲಿಪ್, 1000 ಗುಲ್‌ಮೊಹರ್‌, 700 ಬಾಟಲ್‌ ಟ್ರಗ್‌, 600 ಅಶೋಕ ಗಿಡಗಳು, 300 ಸಿಲ್ವರ್‌ಓಕ್ ಸಸಿಗಳು ಅರಳಿ ನಿಂತಿವೆ. ಮಳೆಗಾಲದಲ್ಲಿ ಸಸಿಗಳು ಸಮೃದ್ಧವಾಗಿ ಬೆಳೆಯುತ್ತವೆ. ಬೇಸಿಗೆಯಲ್ಲಿ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಅದಕ್ಕೆ ಪ್ರತಿ 15 ಕಿ.ಮೀ.ಗೆ ಒಂದು ಸೆಕ್ಷನ್‌ ಮಾಡಿ, ಆಯಾ ಸೆಕ್ಷನ್‌ಗೆ  ಕಾರ್ಮಿಕರನ್ನು ನಿಯೋಜಿಸಲಾಗಿದೆ. ಸಸಿಗಳಿಗೆ ನೀರು ಹಾಕುವುದಕ್ಕಾಗಿಯೇ ನಾಲ್ಕು ಟ್ಯಾಂಕರ್‌ಗಳಿವೆ. ಬೇಸಿಗೆಯಲ್ಲಿ ವಾರಕ್ಕೆರಡು ಬಾರಿ ನೀರುಣಿಸಲಾಗುತ್ತದೆ.

ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ ಹೆದ್ದಾರಿ ಬದಿಯಲ್ಲಿ ಹಣ್ಣಿನ ಮರಗಳನ್ನು ನೆಡುವ ಹಾಗಿಲ್ಲ. ಹಣ್ಣಿನ ಗಿಡಗಳಿದ್ದರೆ ಜನ, ಜಾನುವಾರು ಉಪಟಳ ಶುರುವಾಗುತ್ತವೆ. ಇದರಿಂದ ಅಪಘಾತ ಸಂಭವಿಸುವ ಅಪಾಯವೂ ಹೆಚ್ಚು. ಅಂತೆಯೇ ಸ್ಥಾನಿಕ ಪರಿಸರಕ್ಕೆ ಒಗ್ಗಿಕೊಳ್ಳುವಂಥ ಒಟ್ಟು 350 ದೊಡ್ಡ ಮರಗಳ ಸಸಿಗಳನ್ನು ನೆಡಲಾಗಿದೆ. ಕೆಲವು ಆಗಲೇ ಬೃಹದಾಕಾರದಲ್ಲಿ ಬೆಳೆದು ನೆರಳನ್ನು ನೀಡುತ್ತಿವೆ.

‘ಉಳಿಸಿ ನಮ್ಮ ಜೀವ’
ಸಣ್ಣಪುಟ್ಟ ರಸ್ತೆಗಳಲ್ಲಿ ಅಪಘಾತ ಸಂಭವಿಸಿದರೆ ದಾರಿಹೋಕರು, ಹಳ್ಳಿಗರು ತಕ್ಷಣ ನೆರವಿಗೆ ಧಾವಿಸುತ್ತಾರೆ. ಆದರೆ ಹೆದ್ದಾರಿಯಲ್ಲಿ ಹಾಗಲ್ಲ. ಶರವೇಗದಲ್ಲಿ ಕಣ್ಮುಂದೆ ಹಾದು ಹೋಗುವ ವಾಹನಗಳನ್ನು ಬಿಟ್ಟರೆ ಬೇರೆ ಯಾರೂ ಕಾಣುವುದಿಲ್ಲ. ಹಾಗಂತ ‘ಹೆದ್ದಾರಿಯಲ್ಲಿ ಏನಾದರೂ ಅನಾಹುತ ನಡೆದರೆ ಏನು ಗತಿ?’ ಎಂದು ಯೋಚಿಸಬೇಕಿಲ್ಲ. ಅದಕ್ಕೂ ಇಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ.

ಧಾರವಾಡ ಹೊರ ವಲಯದಿಂದ ಹೊನಗಾವರೆಗಿನ ಹೆದ್ದಾರಿಯ ಎರಡೂ ಬದಿಯಲ್ಲಿ ಪ್ರತಿ 20 ಕಿ.ಮೀ. ಅಂತರದಲ್ಲಿ ಕಂಬ ನೆಟ್ಟು ಅದರ ಮೇಲೆ ಸೋಲಾರ್ ಫಲಕ ಹಾಕಿ ಸ್ವಯಂ ಚಾಲಿತವಾಗಿ ಚಾರ್ಜ್ ಆಗುವ  ದೂರವಾಣಿ ಅಳವಡಿಸಲಾಗಿದೆ. ಕಂಬಕ್ಕೆ ಜೋಡಿಸಿದ ಹಳದಿ ಬಣ್ಣದ ಪೆಟ್ಟಿಗೆಯಲ್ಲಿ ಆಧುನಿಕ ಸ್ವರೂಪದ ದೂರವಾಣಿ ಇಡಲಾಗಿದ್ದು, ಪೆಟ್ಟಿಗೆಯ ಬಾಗಿಲು ತೆರೆದರೆ ಮೂರು ಬಣ್ಣದ ಗುಂಡಿಗಳು ಕಾಣಿಸುತ್ತವೆ. ಅದರಲ್ಲಿ  ಕಂಟ್ರೋಲ್‌ ರೂಮ್‌, ಆಂಬುಲೆನ್ಸ್‌ ಹಾಗೂ ಪೆಟ್ರೋಲಿಂಗ್‌ ವೆಹಿಕಲ್‌ ಎನ್ನುವ ಬರಹದ ಮುಂದೆ ಹಸಿರು, ಕೆಂಪು, ಕಪ್ಪು ಬಣ್ಣದ ಗುಂಡಿಗಳಿವೆ. ಒಂದು ಗುಂಡಿ ಒತ್ತಿದರೂ ಇನ್ನಿಬ್ಬರಿಗೆ ಸಂದೇಶ ರವಾನೆಯಾಗುತ್ತದೆ.

ದೂರವಾಣಿ ಕರೆ ಮಾಡಲು ನಾಣ್ಯ ಹಾಕಬೇಕಿಲ್ಲ. ತುರ್ತು ಸಂದರ್ಭದಲ್ಲಿ ದೂರವಾಣಿ ಪೆಟ್ಟಿಗೆ ತೆರೆದು ಗುಂಡಿ ಒತ್ತಿ ನೇರ ಕರೆ ಮಾಡಿ ‘ನಾವು  ಇಂಥ ಸಂಕಷ್ಟದಲ್ಲಿದ್ದೇವೆ’ ಎಂದು ಹೇಳಿದರೆ ಸಾಕು. ದೂರವಾಣಿ ಮಾಡಿದ ಸ್ಥಳವನ್ನು ಖಾತ್ರಿ ಪಡಿಸಿಕೊಂಡು 10ರಿಂದ 20 ನಿಮಿಷದಲ್ಲಿ ನೆರವಿಗೆ ಧಾವಿಸಿ, ಅಪಘಾತ ಸಂಭವಿಸಿದ್ದರೆ ಪ್ರಥಮ ಚಿಕಿತ್ಸೆ ನೀಡಿ ಸಮೀಪದ ಆಸ್ಪತ್ರೆಗೆ ದಾಖಲು ಮಾಡುತ್ತಾರೆ.
ಇಲ್ಲಿಂದ ಮಾಡಲಾದ ಕರೆಗಳು ನೇರವಾಗಿ ಬೆಳಗಾವಿ ತಾಲ್ಲೂಕಿನ ಹಿರೆಬಾಗೇವಾಡಿ ಸಮೀಪದ ಹೆದ್ದಾರಿ ಬದಿಯಲ್ಲಿ ಸ್ಥಾಪಿಸಲಾಗಿರುವ ಕಂಟ್ರೋಲ್‌ ರೂಮ್‌ಗೆ ತಲುಪುತ್ತದೆ. ಅದೇ ಕಾಲಕ್ಕೆ ಕಂಟ್ರೋಲ್‌ ರೂಮ್‌ನಿಂದ ಆಂಬುಲೆನ್ಸ್‌ ಹಾಗೂ ಪೆಟ್ರೋಲಿಂಗ್‌ ಸಿಬ್ಬಂದಿಗೂ ಸಂದೇಶ ರವಾನೆಯಾಗುವುದರಿಂದ ಘಟನೆ ಎಂತಹದ್ದು ಎನ್ನುವುದನ್ನು ಅರಿತು ಸಂಬಂಧಪಟ್ಟ ಸಿಬ್ಬಂದಿ ತಕ್ಷಣ  ಸ್ಥಳಕ್ಕೆ ಹಾಜರಾಗುತ್ತಾರೆ. ಅವರು ಒದಗಿಸುವ ಈ ಸೇವೆ ಸಂಪೂರ್ಣ ಉಚಿತ.

‘ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಒದಗಿಸಿ ಅವರ ಜೀವ ಉಳಿಸುವುದೇ ಇದರ ಮೂಲ ಉದ್ದೇಶ. ಕಂಟ್ರೋಲ್‌ ರೂಮ್‌ಗೆ ಯಾವ ಸ್ಥಳದಿಂದ ದೂರವಾಣಿ ಬಂದಿದೆ ಎನ್ನುವುದು ಗೊತ್ತಾದ ತಕ್ಷಣ ಆಂಬುಲೆನ್ಸ್‌ ಸ್ಥಳಕ್ಕೆ ಧಾವಿಸುತ್ತದೆ. ದರೋಡೆ ನಡೆದರೆ ಈ ದೂರವಾಣಿ ಕರೆಯನ್ನು ಆಧರಿಸಿ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗುತ್ತದೆ. ಇದರಿಂದ ದರೋಡೆ ಪ್ರಕರಣದ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ರಾಹುಲ್  ಕುರಾಳಿ.

‘ಈ ಮಾರ್ಗದಲ್ಲಿ ಒಟ್ಟು ಈ ರೀತಿಯ 40 ದೂರವಾಣಿಗಳಿವೆ.  ದರೋಡೆ, ಅಪಘಾತ, ಹೆದ್ದಾರಿಯಲ್ಲಿ ಮರಗಳು ಬಿದ್ದರೆ ಇನ್ನಿತರ ತುರ್ತು ಸಂದರ್ಭದಲ್ಲೂ ಪ್ರಯಾಣಿಕರಿಗೆ ಅನುಕೂಲವಾಗಿದೆ. ಇಂಥ ವ್ಯವಸ್ಥೆಯನ್ನು ರಾಜ್ಯದ ಇನ್ನೆರಡು ಪ್ರಮುಖ ಹೆದ್ದಾರಿಯಲ್ಲಿ ಅಳವಡಿಸಲಾಗುತ್ತಿದೆ. ಹೊಸ ಯೋಜನೆಗಳಲ್ಲಿ ಸರ್ಕಾರ ಇದೆಲ್ಲವನ್ನೂ ಕಡ್ಡಾಯಗೊಳಿಸುತ್ತಿದೆ’ ಎನ್ನುತ್ತಾರೆ ಅವರು.

ADVERTISEMENT

ಹೆದ್ದಾರಿ ಗಸ್ತು
ಇದು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ. ಇಲ್ಲಿ ವಾಹನಗಳ ಸಂಚಾರ ಅಧಿಕ. ಹೆದ್ದಾರಿಯ ನಿರ್ವಹಣೆ ಹಾಗೂ ಪ್ರಯಾಣಿಕರ ರಕ್ಷಣೆ ದೃಷ್ಟಿಯಿಂದ ಧಾರವಾಡ–ಬೆಳಗಾವಿ ಮಧ್ಯೆ ಪ್ರತಿ 40 ಕಿ.ಮೀ ಅಂತರದಲ್ಲಿ ಒಂದು ಗಸ್ತು ವಾಹನ ನಿಂತಿದೆ. ಈ ವಾಹನದಲ್ಲಿ ಚಾಲಕ ಸೇರಿ ನಾಲ್ವರು ಸಿಬ್ಬಂದಿ ಇದ್ದಾರೆ.

ಈ ಮಾರ್ಗದ ಅಕ್ಕಪಕ್ಕ ಅನೇಕ ಹಳ್ಳಿಗಳಿವೆ. ಹೆದ್ದಾರಿಯಲ್ಲಿ ಬರುವ ಜಾನುವಾರುಗಳನ್ನು ತೆರವುಗೊಳಿಸುವುದು, ಮಾನಸಿಕ ಅಸ್ವಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವುದು, ಹೆದ್ದಾರಿಯಲ್ಲಿ ವಾಹನ ಕೆಟ್ಟು ನಿಂತರೆ ನೆರವಾಗುವುದು, ಅಪಘಾತ ಸಂಭವಿಸಿದರೆ ಕಂಟ್ರೋಲ್‌ ರೂಮ್‌ಗೆ ಮಾಹಿತಿ ನೀಡುವುದು, ಸಾಧ್ಯವಿದ್ದರೆ ಸಮೀಪದ ಆಸ್ಪತ್ರೆಗೆ ಸಾಗಿಸುವ ಕಾರ್ಯವನ್ನು ಗಸ್ತು ಸಿಬ್ಬಂದಿ ಮಾಡುತ್ತಿದ್ದಾರೆ.

ವೈದ್ಯಕೀಯ ಸೇವೆ

ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳಲ್ಲಿ ಗಾಯಗೊಂಡ ವರಿಗೆ ತುರ್ತು ಚಿಕಿತ್ಸೆ ಒದಗಿಸಲು ಹಾಗೂ ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲೆಂದೇ ಪ್ರತಿ 40 ಕಿ.ಮೀ ಅಂತರದಲ್ಲಿ ಎರಡು ಆಂಬುಲೆನ್ಸ್‌ ಗಳನ್ನು ನಿಯೋಜಿಸಲಾಗಿದೆ.

ಆಂಬುಲೆನ್ಸ್‌ನಲ್ಲಿ ನರ್ಸಿಂಗ್‌ ಸಿಬ್ಬಂದಿ, ಒಬ್ಬರು ಸಹಾಯಕರು, ಪ್ರಥಮ ಚಿಕಿತ್ಸೆಯ ಸಾಧನಗಳು, ಆಮ್ಲಜನಕ ಹಾಗೂ ಆಧುನಿಕ ವೈದ್ಯಕೀಯ ಸಲಕರಣೆಗಳಿವೆ. ಬೆಳಗಾವಿ ಸಮೀಪದ ಹಿರೆಬಾಗೇವಾಡಿಯ ಟೋಲ್‌ ಸಂಗ್ರಹ ಕೇಂದ್ರದ ಬಳಿಯೇ ಒಂದು ಕ್ಲಿನಿಕ್‌ ಸಹ ನಿರ್ಮಾಣ ಮಾಡಲಾಗಿದ್ದು, ಒಬ್ಬ ವೈದ್ಯರನ್ನು ನಿಯೋಜಿಸಲಾಗಿದೆ. ಇಲ್ಲಿ ಗ್ರಾಮಸ್ಥರಿಗೂ ಉಚಿತ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತದೆ ಎಂದು ಕಂಪೆನಿಯ ಸ್ಥಾನಿಕ ಅಧಿಕಾರಿ ಟಿ. ಜಾರ್ಜ್ ಹೇಳುತ್ತಾರೆ.

ಹಾಗೆಯೇ, ಬೆಳಗಾವಿ ಜಿಲ್ಲೆಯ ಡೊಂಬರಕೊಪ್ಪ, ಇಟಗಿ ಕ್ರಾಸ್ ಹಾಗೂ ಕಾಕತಿ ಬಳಿ ಸ್ಥಾನಿಕ ಸಮಸ್ಯೆಯಿಂದಾಗಿ ಸ್ವಲ್ಪ ಕಾಮಗಾರಿ  ಬಾಕಿ ಉಳಿದಿದೆ. ಹೆದ್ದಾರಿಗೆ ಮೇಲ್ಸೇತುವೆ ನಿರ್ಮಾಣ ಮಾಡಲು ಆಗಲೇ ಸರ್ಕಾರಕ್ಕೆ  ಪ್ರಸ್ತಾವ ಸಲ್ಲಿಸಲಾಗಿದೆ. ಸರ್ಕಾರ ಒಪ್ಪಿಗೆ ನೀಡಿದ ನಂತರ ಆ ಕಾಮಗಾರಿಯೂ ಆರಂಭವಾಗಲಿದೆ ಎನ್ನುವ ಭರವಸೆ ಅವರದ್ದು.

ಸಿ.ಸಿ. ಕ್ಯಾಮೆರಾ ಹಾಗೂ ಜಿಪಿಎಸ್
ಧಾರವಾಡ ಹೈಕೋರ್ಟ್‌ ಹಾಗೂ ಹಿರೇಬಾಗೇವಾಡಿಯ ಟೋಲ್‌ ಕೇಂದ್ರದಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಲಾಗಿದೆ. ಈ ಹೆದ್ದಾರಿಯಲ್ಲಿ ಯಾವುದೇ ವಾಹನ ಹೋದರೂ ಅದು ಎಷ್ಟು ವೇಗದಲ್ಲಿ ಚಲಿಸುತ್ತಿದೆ ಎಂಬುದು ಕಂಪ್ಯೂಟರ್‌ನಲ್ಲಿ ಮಾಹಿತಿ ದಾಖಲಾಗುತ್ತದೆ. ಅಪಘಾತ ಮಾಡಿ ಓಡಿ ಹೋದರೆ ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ.

‘ನಿಗದಿ ಪಡಿಸಿದ ಸ್ಥಳಗಳಲ್ಲಿ ಮಾತ್ರ ಹೆದ್ದಾರಿಯಿಂದ ಹೊರ ಬರಲು ರಸ್ತೆಗಳಿವೆ. ಆಯಕಟ್ಟಿನ ಪ್ರದೇಶದಲ್ಲಿರುವ ಸಿಬ್ಬಂದಿಗೂ ಸಂದೇಶ ಹೋಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು.  ದರೋಡೆ ಹಾಗೂ ಅಪಘಾತದಂತಹ ಘಟನೆಯಲ್ಲಿ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗಿದೆ. ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದರೆ ಪೊಲೀಸರು ಮೊದಲು ಸಂಪರ್ಕಿಸುವುದು ನಮ್ಮ  ನಿಯಂತ್ರಣ ಕೊಠಡಿಯನ್ನು’ ಎಂದು ಕಂಟ್ರೋಲ್‌ ರೂಮ್ ಸಿಬ್ಬಂದಿ ಹೆಮ್ಮೆಯಿಂದ ಹೇಳುತ್ತಾರೆ.

ಆಂಬುಲೆನ್ಸ್‌ ಸೇರಿದಂತೆ ಎಲ್ಲ ವಾಹನಗಳಿಗೂ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌) ತಂತ್ರಾಂಶ ಅಳವಡಿಸಲಾಗಿದೆ. ಹೀಗಾಗಿ ಅವು ಎಲ್ಲಿ ನಿಲುಗಡೆಯಾಗಿವೆ, ಯಾವ ವೇಗದಲ್ಲಿ ಚಲಿಸುತ್ತಿವೆ ಎನ್ನುವುದನ್ನು ಕಂಟ್ರೋಲ್‌ ರೂಮ್‌ನಲ್ಲಿ ಕುಳಿತೇ ತಿಳಿದುಕೊಳ್ಳಲು ಸಾಧ್ಯವಾಗಿದೆ. ಇದರಿಂದ ವಾಹನದ ದುರ್ಬಳಕೆ ಸಾಧ್ಯವಾಗುವುದಿಲ್ಲ. ಪಾರದರ್ಶಕತೆ ಇರುವುದರಿಂದ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಾಧ್ಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.