ADVERTISEMENT

ಮೀನಿಗೊಂದು ಮಿನಿ ಜಾತ್ರೆ !

ಎಂ.ಜಿ.ನಾಯ್ಕ
Published 14 ಏಪ್ರಿಲ್ 2014, 19:30 IST
Last Updated 14 ಏಪ್ರಿಲ್ 2014, 19:30 IST

ಇನ್ನೇನು ತಿಂಗಳಲ್ಲಿ ಮಳೆಗಾಲ ಆರಂಭ. ಮಳೆ ಆರಂಭವಾಗುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿರುವ ಪ್ರಸಿದ್ಧ ಅಘನಾಶಿನ ನದಿ ಹಿನ್ನೀರಿನಲ್ಲಿ ಮೀನುಗಾರರ ಸಂಭ್ರಮ. ಎಲ್ಲೆಲ್ಲೂ ಹಬ್ಬದ ವಾತಾವರಣ. ಅದುವೇ ಮೀನಿನ ಹಬ್ಬ, ಇದೊಂದು ಮಿನಿ (ಸಣ್ಣ) ಜಾತ್ರೆಯಂತೆ ಗೋಚರಿಸುತ್ತದೆ.

ರೈತರಿಗೆ ಗಜನಿ (ನದಿಯಂಚಿನ ಹೆಚ್ಚುವರಿ ಭೂಮಿ) ಬಿಟ್ಟುಕೊಡುವಾಗ ಮೀನು ಗುತ್ತಿಗೆದಾರರು ವರ್ಷಕ್ಕೊಮ್ಮೆ ನಡೆಸುವ ಸಾಮೂಹಿಕ ದಿನವಿದು. ಗೋವಾ ಮುಂತಾದ ರಾಜ್ಯಗಳಿಗೆ ವರ್ಷ ಪೂರ್ತಿ ರಫ್ತಾಗುವ ಅಘನಾಶಿನಿ ಹಿನ್ನೀರು ಪ್ರದೇಶದ ರುಚಿಕರ ಗಜನಿ ಮೀನು, ಸಿಗಡಿ, ಏಡಿಗಳ ಬೃಹತ್ ಪ್ರಮಾಣದ ಉತ್ಪಾದನೆಯ ಹಿಂದೆ ಸ್ವಾರಸ್ಯಕರ ಕತೆಯೇ ಇದೆ.

ಶಿರಸಿ, ಸಿದ್ದಾಪುರ ಹಾಗೂ ಕುಮಟಾ ತಾಲ್ಲೂಕು ಸೇರಿ ಸುಮಾರು 60–70 ಕಿಲೋ ಮೀಟರ್‌ಗಳಷ್ಟು ದೂರ ಹರಿದು ಬಂದು ಅಘನಾಶಿನಿ ಎಂಬ ಊರಿನಲ್ಲಿ ಸಮುದ್ರ ಸೇರುವ ಅಘನಾಶಿನಿ ನದಿ ಹಿನ್ನೀರು ಪ್ರದೇಶ ಸೃಷ್ಟಿಸುತ್ತದೆ. ಅಘನಾಶಿನಿ ಹರಿದು ಬರುವ ಮಾರ್ಗ ದಟ್ಟ ಅರಣ್ಯ, ಕಣಿವೆ, ಜಲಪಾತ ಆಗಿರುವ ಕಾರಣ ಅದು ತನ್ನ ಜೊತೆ ತರುವ ತರಗೆಲೆ, ಕಸ, ಕಡ್ಡಿ ಮುಂತಾದವು 4 ಸಾವಿರ ಹೆಕ್ಟೇರ್‌ನಷ್ಟು ಹಿನ್ನೀರು ಪ್ರದೇಶದಲ್ಲಿ ಬೆಳೆಯುವ ಮತ್ಸ ಸಂಕುಲಕ್ಕೆ ಆಹಾರವಾಗುತ್ತದೆ.

ಇಲ್ಲಿ ಬೆಳೆಯುವ ಕಗ್ಗ ಭತ್ತದ ಕೊಯಿಲು ಮುಗಿದ ನಂತರ ಹುಲ್ಲಿನ ಭಾಗ ಗಜನಿಯಲ್ಲಿಯೇ ಉಳಿಯುವುದರಿಂದ ಅವು ವಿಶೇಷವಾಗಿ ಸಿಗಡಿಗೆ ಆಹಾರವೂ ಹೌದು. ಮಳೆಗಾಲ ಆರಂಭವಾದ ನಂತರ ರೈತರು ತಮ್ಮ ಗಜನಿಯಲ್ಲಿ ಬೆಳೆಯುವ ಮೀನನ್ನು ಹಿಡಿದು ಮಾರಾಟ ಮಾಡುವ ಕೆಲಸವನ್ನು ಬೇರೆಯವರಿಗೆ ಗುತ್ತಿಗೆ ನೀಡುತ್ತಾರೆ. ಅಘನಾಶಿನಿ ನದಿಯ ಉಬ್ಬರ ಸಮಯದಲ್ಲಿ ನೀರನ್ನು ಗಜನಿ ಕಟ್ಟೆಯ (ಕಾರ್ಲ್ಯಾಂಡ್) ಜಂತ್ರಡಿ (ಗೇಟು) ಮೂಲಕ ಗಜನಿಯೊಳಗೆ ತೆಗೆದುಕೊಳ್ಳುತ್ತಾರೆ.

ಬಗೆ ಬಗೆಯ ಮೀನು
ನದಿಯ ಇಳಿತದ ಸಂದರ್ಭದಲ್ಲಿ ರಭಸದಿಂದ ನೀರನ್ನು ಹೊರಗೆ ಬಿಡುವಾಗ ಗೇಟಿನ ಕಿಂಡಿಗೆ ಬಲೆ ಕಟ್ಟುತ್ತಾರೆ. ಆ ಬಲೆಯಲ್ಲಿ ಮಡ್ಲೆ, ನೋಗಲಾ, ಬೈಗೆ, ಕೆಂಸ, ಕುರಡಿ, ಯೇರಿ, ಕಾಗಳಸಿ, ಮಂಡ್ಲಿ, ನೆಪ್ಪೆ, ಪೇಡಿ, ಕೊಕ್ಕರ, ಗುರ್ಕ, ಹುಲಕಾ, ಚಂದಕಾ   ಮುಂತಾದ ಬಗೆ ಬಗೆಯ ರುಚಿಕರ ಮೀನುಗಳು ಸಿಗುತ್ತವೆ. ಒಮ್ಮೆ ರೈತರಿಂದ ಗಜನಿ ಗುತ್ತಿಗೆ ಪಡೆಯುವ ಗುತ್ತಿಗೆದಾರರು ವರ್ಷವಿಡೀ ಮೀನು, ಏಡಿ, ಸಿಗಡಿಗಳನ್ನು ಹಿಡಿದು ಅವುಗಳನ್ನು ಹೆಚ್ಚಿನ ಬೆಲೆಗೆ ಗೋವಾಗೆ ರಫ್ತು ಮಾಡುತ್ತಾರೆ.

ಮೀನನ್ನು ಸಂರಕ್ಷಿಸಿಡಲು ಗಜನಿ ಶೆಡ್‌ನಲ್ಲಿಯೇ ರೆಫ್ರಿಜಿರೇಟರ್ ವ್ಯವಸ್ಥೆ ಇರುತ್ತದೆ. ವಾಹನಗಳು ಗಜನಿಗೇ ಬಂದು ಮೀನನ್ನು ಗೋವಾಕ್ಕೆ ಒಯ್ಯುತ್ತವೆ. ಅಮವಾಸ್ಯೆ‌ಮತ್ತು ಹುಣ್ಣಿಮೆ ಸಮಯ ನೋಡಿ ಬಲೆ ಕಟ್ಟುವ ಸಂದರ್ಭದಲ್ಲಿ ಜನರು ಗಜನಿಗೆ ಹೋಗಿ ತಾಜಾ ಮೀನು ತಂದು ಸವಿಯುತ್ತಾರೆ. ಸಮುದ್ರ ಮೀನು ಮಾರುಕಟ್ಟೆಯಲ್ಲಿ ದಿನವೂ ಸಿಕ್ಕರೂ ಗಜನಿ ಮೀನಿನ ರುಚಿಯೇ ವಿಶಿಷ್ಟ. ಗಜನಿಯಲ್ಲಿ ಕರಗತ್ತಲಿನಲ್ಲಿ ಸಿಗುವ ಏಡಿಯ ತುಂಬಾ ಮಾಂಸ ಇರುತ್ತದೆ. ‘ವೈಟ್’ ಎಂದೇ ಪ್ರಸಿದ್ಧವಾಗಿರುವ 40-50 ಕೌಂಟ್‌ನ (ಒಂದು ಕಿಲೋಗೆ 40-50 ತೂಗುವ) ಬಿಳಿ ಶೆಟ್ಲಿ (ಸಿಗಡಿ) ರುಚಿ ಎಲ್ಲಕ್ಕಿಂತ ವಿಶಿಷ್ಟ. ಕುಮಟಾದವರು ಬೆಂಗಳೂರು, ಮುಂಬೈ ಸೇರಿದಂತೆ ದೂರದ ತಮ್ಮ ಸ್ನೇಹಿತರು, ಬಂಧುಗಳಿಗೆ ಬಿಳಿ ಶೆಟ್ಲಿಯನ್ನು ಮಂಜುಗಡ್ಡೆ ಪೆಟ್ಟಿಗೆಯಲ್ಲಿ ಹಾಕಿ ಕಳಿಸುವುದು ಸಾಮಾನ್ಯ. 

ಜೂನ್ ತಿಂಗಳ ಮಳೆಯಲ್ಲಿ ಮೀನಿನ ಗುತ್ತಿಗೆ ಅವಧಿ ಮುಗಿಯುವ ಕೊನೆಯ ಮೂರು ದಿನ ಸುತ್ತಲಿನ ನೂರಾರು ಮೀನುಗಾರರು ಗಜನಿಯಲ್ಲಿ ಮೀನು ಹಿಡಿಯುತ್ತಾರೆ. ವಿಶಾಲ ಗಜನಿಯಲ್ಲಿ ಎಲ್ಲಿ ನೋಡಿದರೂ ಬಲೆ ಹಾಕಿ ಮೀನು ಹಿಡಿಯುವ ದೃಶ್ಯ.

ಅಷ್ಟೇ ಸಂಖ್ಯೆಯಲ್ಲಿ ತಾಜಾ ಮೀನು ಕೊಳ್ಳಲು ಕೈ ಚೀಲ ಹಿಡಿದ ಗ್ರಾಹಕರು ದಡದಲ್ಲಿ ನಿಂತಿರುತ್ತಾರೆ. ಹಿಡಿದ ಮೀನುಗಳಲ್ಲಿ ಮೂರನೇ ಒಂದು ಭಾಗ ಮೀನುಗಾರರಿಗೆ, ಮೂರನೇ ಎರಡಷ್ಟು ಭಾಗ ಗುತ್ತಿಗೆದಾರರಿಗೆ ಸೇರುತ್ತದೆ. ಮೀನುಗಳನ್ನು ಜಾತಿವಾರು ಹಾಗೂ ಗಾತ್ರವಾರು ವಿಂಗಡಿಸುತ್ತಾರೆ. ತಾವು ಹಿಡಿದ ಮೀನು ತೂಕ ಮಾಡಿ ವಿಂಗಡಿಸಿ ದರ ನಿಗದಿಯಾಗುವವರೆಗೂ ಮೀನುಗಾರರು ಸಾಲಿನಲ್ಲಿ ಕಾಯುತ್ತಾರೆ. ನೋಗಲಾ, ಬೈಗೆ, ಕುರಡಿ, ಕೆಂಸ, ಯೇರಿ, ಕಾಗಳಸಿ ಮುಂತಾದ ವಿಶೇಷ ರುಚಿಯ ಮೀನುಗಳು ಹೆಚ್ಚಿನ ದರಕ್ಕೆ ಮಾರಾಟವಾದರೆ, ಉಳಿದವು ಕೊಂಚ ಕಡಿಮೆ ದರಕ್ಕೆ ಬಿಕರಿಯಾಗುತ್ತವೆ. ಸಮುದ್ರ ಮೀನಿನ ಕೊರತೆ ಉಂಟಾಗುವ ಸಂದರ್ಭದಲ್ಲಿಯೇ ಮೀನಿನ ಹಬ್ಬ ಬರುವುದರಿಂದ ಮೀನಿಗಾಗಿ ಎಲ್ಲರೂ ಗಜನಿಗೆ ಮುಗಿ ಬೀಳುತ್ತಾರೆ. ಸುರಿವ ಮಳೆ ಲೆಕ್ಕಿಸದೆ ಮೀನು ಹಿಡಿಯುವವರು, ಕೊಳ್ಳುವವರು, ಗುತ್ತಿಗೆದಾರರು ಸೇರಿ ಗಜನಿಯಲ್ಲಿ ಮೂರು ದಿನ ಮೀನನ ಜಾತ್ರೆ.

ಕುಸಿಯುತ್ತಿರುವ ಕಾರ್ಲ್ಯಾಂಡ್
ರಾಜ್ಯ ಕರಾವಳಿಯ ಅಪರೂಪದ ಮತ್ಸ್ಯ ತಾಣ ಎನಿಸಿರುವ ಅಘನಾಶಿನಿ ಹಿನ್ನೀರು ಗಜನಿ ಪ್ರದೇಶದಲ್ಲಿ ಭತ್ತದ ಕೃಷಿಕರಿಗೆ ಅನುಕೂಲಕರವಾಗಲೆಂದು ಸುಮಾರು 40 ವರ್ಷಗಳ ಹಿಂದೆ ಸರ್ಕಾರ ಮಣ್ಣು ಹಾಕಿ ನಿರ್ಮಿಸಿದ ಸುಮಾರು 30 ಕಿ.ಮೀ. ಉದ್ದದ ಕಾರ್ಲ್ಯಾಂಡ್ ಕಟ್ಟೆಯಿಂದಲೇ ಇಂದು ಇಂಥ ನೈಸರ್ಗಿಕ ಮೀನು ಕೃಷಿ ಸಾಧ್ಯವಾಗಿದೆ. ಆದರೆ ಇದುವರೆಗೂ ಬಂದ ಯಾವ ಸರ್ಕಾರವೂ ಕಾರ್ಲಾಂಡ್ ಅನ್ನು ದುರಸ್ತಿ ಕಾರ್ಯ ಕೈಕೊಳ್ಳದಿರುವುದರಿಂದ ಕಾರ್ಲ್ಯಾಂಡ್ ಅಲ್ಲಲ್ಲಿ ಕುಸಿದು ಕಗ್ಗ ಭತ್ತ ಹಾಗೂ ಮೀನು ಕೃಷಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.

ಈ ಕಾರ್ಲ್ಯಾಂಡ್ ಕಟ್ಟೆಯ ದುರಸ್ತಿಗೆ, ಅಲ್ಲಲ್ಲಿ ಅಗತ್ಯವಿರುವ ಜಂತ್ರಡಿ, ಗೇಟು ನಿರ್ಮಾಣಕ್ಕೆ, ಹಿನ್ನೀರು ಪ್ರದೇಶದ ಹೂಳೆತ್ತುವ ಕಾರ್ಯಕ್ಕೆ ಕನಿಷ್ಠ 75 ಕೋಟಿ ರೂಪಾಯಿಗಳಾದರೂ ಬೇಕು. ದುರಸ್ತಿ ಯೋಜನೆ ಜಾರಿಯಾದರೆ ರಾಜ್ಯದ ಅತ್ಯಂತ ವಿಶಾಲ ಗಜನಿ ಪ್ರದೇಶದಲ್ಲಿ ಅಪರೂಪದ, ರುಚಿಕರ ನೈಸರ್ಗಿಕ ಮೀನು, ಸಿಗಡಿ, ಏಡಿ ಹಾಗೂ ಕಗ್ಗ ಭತ್ತ ಕೃಷಿಗೆ ಪುನಶ್ಚೇತನ ದೊರೆಯುವುದರೊಂದಿಗೆ ರಾಜ್ಯದ ಅತಿ ದೊಡ್ಡ ಜೈವಿಕ ತಾಣವೊಂದನ್ನು ಅಭಿವೃದ್ಧಿ ಕಾರ್ಯವೂ ಒಟ್ಟಿಗೇ ಆಗುತ್ತದೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.