ADVERTISEMENT

ಮೊಲಕ್ಕೆ ಕಿವಿ ಚುಚ್ಚುವರು ಇಲ್ಲಿ!

ರಮೇಶ ಕೆ
Published 23 ಮೇ 2016, 19:30 IST
Last Updated 23 ಮೇ 2016, 19:30 IST
ಮೊಲಕ್ಕೆ ಕಿವಿ ಚುಚ್ಚುವರು ಇಲ್ಲಿ!
ಮೊಲಕ್ಕೆ ಕಿವಿ ಚುಚ್ಚುವರು ಇಲ್ಲಿ!   

ಆಹಾರಕ್ಕಾಗಿ ಮೊಲವನ್ನು ಬೇಟೆಯಾಡಿ ಕೊಲ್ಲುವುದನ್ನು ನೋಡಿದ್ದೇವೆ, ಆದರೆ ಮೊಲವನ್ನು ಜೀವಂತ ಬೇಟೆಯಾಡಿ, ಅದರ ಕಿವಿಗೆ ಬಂಗಾರದ ಓಲೆಯನ್ನು ಹಾಕಿ ಮರಳಿ ಕಾಡಿಗೆ ಬಿಡುವ ವಿಶಿಷ್ಟ ಆಚರಣೆ ಕೇಳಿದ್ದೀರಾ? ಹೌದು, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಂಚೀಪುರ ಗ್ರಾಮದಲ್ಲಿ ಇಂಥ ಆಚರಣೆ ಪ್ರತಿ ವರ್ಷ ನಡೆಯುತ್ತದೆ.

ಮಕರ ಸಂಕ್ರಾಂತಿ ದಿನ ಈ ಧಾರ್ಮಿಕ ಆಚರಣೆ ನಡೆಯುತ್ತದೆ. ಸಂಕ್ರಾಂತಿಯಂದು ಮೊಲ ಸಿಗದಿದ್ದರೆ ಮರುದಿನ ಬೇಟೆ ಮುಂದುವರೆಯುತ್ತದೆ. ಶ್ರೀ ಕಂಚೀವರದರಾಜಸ್ವಾಮಿಗೆ ವರ್ಷದಲ್ಲಿ ನಾಲ್ಕು ಬಾರಿ ವಿಶೇಷ ಪೂಜೆ ನಡೆಯುತ್ತದೆ. ಸಂಕ್ರಾಂತಿ, ಯುಗಾದಿ, ಉತ್ತರೆ ಮಳೆಯ ಸಂದರ್ಭ ಹಾಗೂ ಕಾರ್ತಿಕ ಮಾಸದಲ್ಲಿ.

ವಿಷ್ಣುವಿಗೆ ಪ್ರಿಯವಾದದ್ದು
‘ಸಂಕ್ರಾಂತಿ ಹಬ್ಬದಲ್ಲಿ ಧನುರ್ಮಾಸ ಪೂಜೆ ಇರುತ್ತದೆ. ಆ ತಿಂಗಳು ದೇವರಿಗೆ ಬೆಳಗಿನ ಜಾವವೇ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಪೂಜೆ ನಂತರ ಎಡೆ ಅನ್ನವನ್ನು ವಿತರಿಸಲಾಗುತ್ತದೆ. ಸಂಕ್ರಾಂತಿ ದಿನದಂದು ನಡೆಯುವ ಪೂಜೆ ತಿಂಗಳ ಪೂಜೆಯಲ್ಲಿ ಕೊನೆಯದ್ದು. ಕಂಚೀದೇವರಿಗೆ ಬೇಟೆಗಾರ ದೇವರು ಎಂಬುದು ಜನರ ನಂಬಿಕೆ.

ಅಲ್ಲದೇ ವಿಷ್ಣುವಿಗೆ ಮೊಲದ ಜೀವಂತ ಬೇಟೆ ಪ್ರಿಯವಾದದ್ದು ಎಂಬ ಪ್ರತೀತಿ ಇದೆ. ಆದ್ದರಿಂದ ಮೊಲವನ್ನು ಅಂದು ಬೇಟೆಯಾಡಲಾಗುತ್ತದೆ. ಈ ಪದ್ಧತಿಯನ್ನು ಅನಾದಿ ಕಾಲದಿಂದಲೂ ಸಂಕ್ರಾಂತಿಯ ದಿನದಂದೇ ನಡೆಸಿಕೊಂಡು ಬರಲಾಗುತ್ತಿದೆ’ ಎಂದು ಮಾಹಿತಿ ನೀಡುತ್ತಾರೆ ಪೂಜಾರಿ ದೊಡ್ಡಯ್ಯ.

ಕಂಚೀಪುರ ಹಾಗೂ ಸುತ್ತಮುತ್ತಲ ಗ್ರಾಮದವರು ನಾಲ್ಕೈದು ತಂಡಗಳನ್ನು ಮಾಡಿಕೊಂಡು ಊರಿನ ಪಕ್ಕದ ಕಾಡಿಗೆ ಹೋಗುತ್ತಾರೆ, ಕುರುಚಲು ಕಾಡಿನಲ್ಲಿ ಮೊಲವನ್ನು ಹಿಡಿಯಲಾಗುತ್ತದೆ. ಒಂದೊಂದು ತಂಡದ ಕೈಯಲ್ಲೂ ಒಂದೊಂದು ಬಲೆ ಇರುತ್ತದೆ. ಮೊಲವನ್ನು ಯಾರಾದರೂ ಕಂಡೊಡನೆ ಅಥವಾ ಮೊಲ ಇರುವ ಸುಳಿವು ಸಿಕ್ಕೊಡನೆ, ತಂಡದ ಸದಸ್ಯರಿಗೆಲ್ಲರಿಗೂ ತಿಳಿಸುತ್ತಾರೆ.

ತಕ್ಷಣ ಕಾರ್ಯೋನ್ಮುಖರಾಗುವ ಸದಸ್ಯರು ಸ್ವಲ್ಪವೂ ಶಬ್ದಮಾಡದೇ ಮೊಲವಿರುವ ಜಾಗದ ಸ್ವಲ್ಪ ದೂರದಲ್ಲಿ ಬಲೆಯನ್ನು ಕಟ್ಟುತ್ತಾರೆ (ಒಂದು ಗಿಡದಿಂದ ಮತ್ತೊಂದು ಗಿಡಕ್ಕೆ ಅಡ್ಡಲಾಗಿ ಕಟ್ಟಲಾಗುತ್ತದೆ). ನಂತರ ಪೊದೆಯೊಳಗೆ ಅವಿತುಕುಳಿತ ಮೊಲವನ್ನು ಗಾಬರಿ ಪಡಿಸಿ ಬಲೆಯತ್ತ ಓಡಿಸಲಾಗುತ್ತದೆ, ಗಾಬರಿಗೊಂಡ ಮೊಲ ಜೀವಭಯದಿಂದ ಓಡುವಾಗ ಬಲೆಗ ಬೀಳುತ್ತದೆ. ಕೂಡಲೇ ಆ ಮೊಲವನ್ನು ಒಂದಿಷ್ಟೂ ಗಾಯಗೊಳಿಸದೆ ಸುರಕ್ಷಿತವಾಗಿ ಹಿಡಿದು ಒಂದು ದೊಡ್ಡ ಬಿದಿರಿನ ಬುಟ್ಟಿಯೊಳಗೆ ಹಾಕಿಕೊಂಡು ಬರಲಾಗುತ್ತದೆ.

ಕಾಡಿನಿಂದ ಮೊಲವನ್ನು ತರುವಾಗ ಗ್ರಾಮ ಪ್ರವೇಶಿಸುತ್ತಿದ್ದಂತೆ ದೇವಸ್ಥಾನದ ದಾಸಯ್ಯ ಕಹಳೆ ಊದುವ ಮೂಲಕ ಗ್ರಾಮದವರಿಗೆ ಮೊಲ ಸಿಕ್ಕ ಸಂದೇಶ ತಲುಪಿಸುತ್ತಾರೆ.

ನಂತರ ಆ ಮೊಲಕ್ಕೆ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಕಿವಿಗೆ ಬಂಗಾರದ ಓಲೆ ಹಾಕಲಾಗುತ್ತದೆ. ಅದೇ ದಿನ ಸಂಜೆ ಊರಿನ ಮುಖ್ಯದ್ವಾರದಲ್ಲಿ ದೇವರ ಉತ್ಸವ ಮೂರ್ತಿಯೊಂದಿಗೆ ಮೆರವಣಿಗೆ ಮೂಲಕ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ, ಬೇಟೆಯಾಡಿದ ಮೊಲವನ್ನು ಭಕ್ತರೆಲ್ಲರಿಗೂ  ತೋರಿಸಿ ಪುನಃ ಪೂರ್ವ ದಿಕ್ಕಿನ ಕಾಡಿಗೆ ಬಿಟ್ಟುಬರಲಾಗುತ್ತದೆ.

ಮೊಲವನ್ನು ಬಿಟ್ಟ ನಂತರ ಕಂಚೀವರದರಾಜ ಸ್ವಾಮಿಯ ರಥೋತ್ಸವ ನಡೆಯುತ್ತದೆ. ರಥದಿಂದ ಇಳಿದ ದೇವರನ್ನು ಮಡಿವಾಳರ ಮನೆಗೆ  ಕರೆದುಕೊಂಡು ಹೋಗಿ (ಮೊಲವನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದರಿಂದ) ಮೈಲಿಗೆಯನ್ನು ಕಳೆಯಲಾಗುತ್ತದೆ. ಹೀಗೆ ಸಂಕ್ರಾಂತಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

ಇಲ್ಲಿನ ಮತ್ತೊಂದು ವಿಶೇಷ, ಭಕ್ತರು ಹರಕೆ ಮಾಡಿಕೊಂಡ ಹಣವನ್ನು ಚಿಲ್ಲರೆ ರೂಪದಲ್ಲಿ ಉತ್ಸವ ಮೂರ್ತಿಗೆ ಎರಚುವುದು. ತಮ್ಮ ಶಕ್ತ್ಯಾನುಸಾರ ನೂರು, ಐದು ನೂರು, ಸಾವಿರ, ಹತ್ತು ಸಾವಿರ... ಹೀಗೆ ಹರಕೆ ಕಾಣಿಕೆಯನ್ನು ದೇವರಿಗೆ ಎರಚುತ್ತಾರೆ. ಆ ಹಣವನ್ನು ಯಾರಾದರೂ ತೆಗೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT