ADVERTISEMENT

ಸಾಧಕಿಯರ ಸ್ಮರಣೆಯಲ್ಲಿ

ಬಳಕೂರು ವಿ.ಎಸ್.ನಾಯಕ
Published 19 ಜೂನ್ 2017, 19:30 IST
Last Updated 19 ಜೂನ್ 2017, 19:30 IST
ಕಿತ್ತೂರುರಾಣಿ ಚೆನ್ನಮ್ಮ
ಕಿತ್ತೂರುರಾಣಿ ಚೆನ್ನಮ್ಮ   

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣಕ್ಕೆ ಇತ್ತೀಚೆಗೆ ಹೋದಾಗ ಸೋಜಿಗ ಕಾದಿತ್ತು. ಏಕೆಂದರೆ, ಎಂದಿಗೂ ಕಂಡರಿಯದ ವಿಭಿನ್ನ ಶಿಲ್ಪಗಳು ಅಲ್ಲಿ ಸ್ವಾಗತ ಕೋರುತ್ತಿದ್ದವು.

ಶಿಲ್ಪಕಲಾ ಅಕಾಡೆಮಿ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಶಿಲ್ಪಿ ಕೆ.ನಾರಾಯಣಾಚಾರ್‌ ಅವರ ನಿರ್ದೇಶನದಲ್ಲಿ ಹದಿನೈದು ದಿನದ ಕಲಾ ಶಿಬಿರ ನಡೆಯಿತು. ಇದರಲ್ಲಿ ಹಿರಿಯ ಮತ್ತು ಕಿರಿಯ ಶಿಲ್ಪಿಗಳು ಭಾಗವಹಿಸಿ 20 ಸಾಧಕಿಯರ ಸಿಮೆಂಟ್ ಶಿಲ್ಪಗಳನ್ನು ರಚಿಸಿದರು.

ಕಿತ್ತೂರುರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ಗಂಗೂಬಾಯಿ ಹಾನಗಲ್, ಸಾಲುಮರದ ತಿಮ್ಮಕ್ಕ, ಆಫ್ರಿಕಾದ ಪರಿಸರವಾದಿ ವಂಗಾರಿ ಮಾತಾ, ಕೋಲಾಟದಲ್ಲಿ ತೊಡಗಿದ ಹಕ್ಕಿಪಿಕ್ಕಿಗಳು  (ಬಾಂಧವ್ಯ ಸೂಚಕ) ಇಲ್ಲಿನ ಶಿಲ್ಪಗಳಲ್ಲಿ ಅರಳಿ ನಿಂತರು. ಮಹಿಳಾ ವಿಶ್ವವಿದ್ಯಾಲಯ ಸಾಧಕಿಯರನ್ನು ಶಿಲ್ಪಗಳಲ್ಲಿ ಪ್ರತಿಬಿಂಬಿಸುವುದರ ಮೂಲಕ ಒಂದು ವಿಭಿನ್ನ ಪ್ರಯತ್ನ ಮಾಡಿದೆ. 

ADVERTISEMENT

ಈ ವಿಶ್ವವಿದ್ಯಾಲಯಕ್ಕೆ ಅಡಿಯಿಟ್ಟ ಎಲ್ಲರಿಗೂ ಈ ಮಹಿಳಾ ಮಣಿಗಳ ಸಾಧನೆಯನ್ನು ಪರಿಚಯಿಸುವ, ಅವರ ಯಶೋಗಾಥೆ ಮೂಲಕ ನವಪೀಳಿಗೆಯನ್ನು ಹುರಿದುಂಬಿಸುವ ಉದ್ದೇಶದಿಂದ ವಿಶ್ವವಿದ್ಯಾಲಯ ಈ ಯೋಜನೆ ರೂಪಿಸಿದೆ.

ಈ ಶಿಲ್ಪಗಳನ್ನು ಇಟ್ಟಿಗೆ, ಮರಳು, ಕಬ್ಬಿಣ, ಸಿಮೆಂಟ್ ಬಳಸಿ ಅತ್ಯಾಕರ್ಷಕವಾಗಿ ರಚಿಸಲಾಗಿದೆ. ಒಂದೊಂದು ಶಿಲ್ಪ ಸುಮಾರು 6.5 ಅಡಿಯಷ್ಟು ಎತ್ತರವಾಗಿದ್ದು ಸುಮಾರು 450 ಕೆ.ಜಿ ಭಾರವಿದೆ. ಈ ಶಿಲ್ಪಗಳು ಸುಮಾರು 100 ರಿಂದ 150 ವರ್ಷಗಳವರೆಗೆ ಬಾಳಿಕೆ ಬರುತ್ತವೆ.

ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕವಿಲ್ಲ. ಶಿಬಿರದ ನಿರ್ದೇಶಕ  ಕೆ.ನಾರಾಯಣಾಚಾರ್‌, ‘ನಮ್ಮ ನಾಡಿಗಾಗಿ ಹೋರಾಡಿದ ಧೀರ, ದಿಟ್ಟ ಮಹಿಳೆಯರ ಶಿಲ್ಪಗಳನ್ನು ರಚಿಸಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಾಪಿಸುವ ಮೂಲಕ ಅವರ ನೆನಪು ಎಂದಿಗೂ ಮಾಸದಂತೆ ನೋಡಿಕೊಂಡಿದ್ದೇವೆ’ ಎಂದು ಅಭಿಮಾನದಿಂದ ಹೇಳುತ್ತಾರೆ. ಈ ಕಲಾವಿದರ ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಲು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯಕ್ಕೆ ನೀವು ಭೇಟಿ ನೀಡಲೇಬೇಕು.                          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.