ADVERTISEMENT

ಕಥೆಗಳ ಆಗರ ಆವನಿಯ ವಾಲ್ಮೀಕಿ ಪರ್ವತ

ಸುತ್ತಾಣ

ದೀಪಕ್ ಎನ್.
Published 6 ಜನವರಿ 2017, 19:30 IST
Last Updated 6 ಜನವರಿ 2017, 19:30 IST
ಕಥೆಗಳ ಆಗರ ಆವನಿಯ ವಾಲ್ಮೀಕಿ ಪರ್ವತ
ಕಥೆಗಳ ಆಗರ ಆವನಿಯ ವಾಲ್ಮೀಕಿ ಪರ್ವತ   

‘ಕರ್ನಾಟಕದ ಮೂಡಣಬಾಗಿಲು’ ಎಂದೇ ಪ್ರಸಿದ್ಧಿ ಪಡೆದಿರುವ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಆವನಿ ಗ್ರಾಮಕ್ಕೆ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವವಿದೆ. ಅವಂತಿಕಾ  ಎಂದು ಕರೆಸಿಕೊಳ್ಳುವ ಈ ಗ್ರಾಮ ‘ದಕ್ಷಿಣ ಭಾರತದ ಗಯಾ’ ಎಂದೇ ಜನಪ್ರಿಯವಾಗಿದೆ.

ಶ್ರೀರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಒಂದರ ಪಕ್ಕ ಒಂದರಂತೆ ಸುಮಾರು 12 ದೇವಾಲಯಗಳನ್ನು ನಿರ್ಮಿಸಲಾಗಿದೆ. ಮುಖ್ಯವಾಗಿ ಮಹಾಗಣಪತಿ, ಸುಬ್ರಮಣ್ಯ, ಶ್ರೀ ಲಕ್ಷ್ಮಣೇಶ್ವರ, ಹನುಮಂತೇಶ್ವರ, ಸುಗ್ರಿವೇಶ್ವರ, ಅಂಗದೇಶ್ವರ, ಶತ್ರುಘ್ನೇಶ್ವರ, ಕಾಮಾಕ್ಷಿ ದೇವಸ್ಥಾನಗಳಿಂದ ಕೂಡಿದ ದೇಗುಲಗಳ ಸಮುಚ್ಚಯವೇ ಇದಾಗಿದೆ.

ವಾಲ್ಮೀಕಿ ಪರ್ವತ
ಇಲ್ಲಿನ ಎತ್ತರದ ಬೆಟ್ಟ ಆವನಿ ಗ್ರಾಮದ ಸೌಂದರ್ಯವನ್ನು ಹೆಚ್ಚಿಸಿದೆ. ಈ ಬೆಟ್ಟವನ್ನು ವಾಲ್ಮೀಕಿ ಪರ್ವತ ಎಂದು ಕರೆಯಲಾಗುತ್ತದೆ. ಕಲ್ಲುಬಂಡೆಗಳಿಂದ ಕೂಡಿರುವ ವಾಲ್ಮೀಕಿ ಪರ್ವತ ಹಲವು ಕಾರಣಗಳಿಗೆ ಮಹತ್ವ ಪಡೆದಿದೆ.

ರಾಮಾಯಣವನ್ನು ಬರೆದ ವಾಲ್ಮೀಕಿ ಮಹರ್ಷಿಗಳು ಇದೇ ಬೆಟ್ಟದಲ್ಲಿ ಹಲವು ವರ್ಷ ತಪಸ್ಸು ಮಾಡಿದ್ದರೆನ್ನಲಾಗುತ್ತದೆ. ಇದೇ ಕಾರಣಕ್ಕೆ ವಾಲ್ಮೀಕಿ ಪರ್ವತವೆಂಬ ಹೆಸರು ಬಂತು ಎನ್ನಲಾಗುತ್ತದೆ.

ವನವಾಸ ಸಂದರ್ಭದಲ್ಲಿ ಶ್ರೀರಾಮನ ಪತ್ನಿ ಸೀತಾದೇವಿ ಕೆಲ ಕಾಲ ವಾಲ್ಮೀಕಿ ಪರ್ವತದಲ್ಲಿ ಉಳಿದುಕೊಂಡಿದ್ದರು.  ವಿಶೇಷವೆಂದರೆ ಇದೇ ಬೆಟ್ಟದಲ್ಲಿ ಸೀತಾದೇವಿ ಲವ-ಕುಶರಿಗೆ ಜನ್ಮ ನೀಡಿದ್ದು, ಲವ-ಕುಶರು ಆಟವಾಡಿದ ಸ್ಥಳ, ಉಳಿದುಕೊಂಡಿದ್ದ ಗುಹೆ ಬೆಟ್ಟದ ಮಧ್ಯಭಾಗದಲ್ಲಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇನ್ನು ಬೆಟ್ಟದ ಮೇಲೆ ಏಕಾಂತರಾಮಸ್ವಾಮಿ ದೇವಾಲಯ, ತೊಟ್ಟಿಲಗುಂಡು, ಧನುಷ್ಕೋಟಿ ಗಮನ ಸೆಳೆಯುತ್ತವೆ. ಬೇಸಿಗೆಯಿರಲಿ, ಮಳೆಗಾಲವಿರಲಿ ಧನುಷ್ಕೋಟಿಯಲ್ಲಿ ನೀರು ಬತ್ತಿದ್ದೇ ಇಲ್ಲ. ಬೆಟ್ಟದ ತುದಿಯಲ್ಲಿ ಸೀತಾಮಾತೆ, ಪಾರ್ವತಿ ದೇವಾಲಯಗಳಿವೆ.

ಮಹಾಭಾರತದಲ್ಲೂ...
ಮಹಾಭಾರತದ ಸಂದರ್ಭಕ್ಕೆ ಬಂದರೆ, ಪಂಚ ಪಾಂಡವರು ವನವಾಸದಲ್ಲಿದ್ದಾಗ ಆವನಿಯ ವಾಲ್ಮೀಕಿ ಪರ್ವತಕ್ಕೆ ಬಂದಿದ್ದರೆಂದು ಹೇಳಲಾಗುತ್ತದೆ. ಅವರು ಇಲ್ಲಿಗೆ ಭೇಟಿ ಕೊಟ್ಟ ನೆನಪಿಗಾಗಿ ಬೆಟ್ಟದ ಮೇಲೆ ಪಂಚಪಾಂಡವರ ಗುಡಿಯನ್ನು ಸ್ಥಾಪಿಸಿದರು ಎನ್ನಲಾಗಿದ್ದು, ಈ ಗುಡಿಯಲ್ಲಿ ಐದು ಶಿವಲಿಂಗಗಳಿವೆ.

ಪ್ರತಿವರ್ಷ ಶಿವರಾತ್ರಿಯಂದು ಶ್ರೀರಾಮಲಿಂಗೇಶ್ವರ ಸ್ವಾಮಿ ಜಾತ್ರೆ ಮತ್ತು ರಥೋತ್ಸವ ಜರುಗುತ್ತದೆ.  ಈ ಅಪರೂಪದ ಜಾತ್ರೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರ, ತೆಲಂಗಾಣ, ತಮಿಳುನಾಡಿನ ಜನರು ಸಾಕ್ಷಿಯಾಗುತ್ತಾರೆ.

ಈ ಜಾತ್ರೆಯಂದು ವಿಶಿಷ್ಟವಾದ ದೊಡ್ಡ ಮಟ್ಟದಲ್ಲಿ ದನಗಳ ಜಾತ್ರೆಯೂ ನಡೆಯುತ್ತದೆ. ದೂರದ ಊರುಗಳಿಂದಲೂ ರೈತರು ಬಂದು ದನಗಳನ್ನು ಇಲ್ಲಿ ಖರೀದಿಸುತ್ತಾರೆ.

ಮೆಟ್ಟಿಲೇರಿ ಬೆಟ್ಟವ ಹತ್ತಿ...
ಬೆಟ್ಟ ಹತ್ತಲು ವ್ಯವಸ್ಥಿತವಾಗಿ ಮೆಟ್ಟಿಲು ನಿರ್ಮಿಸಲಾಗಿದೆ. ಹತ್ತುವಾಗ ಒಂದಷ್ಟು ಆಯಾಸ ಎನಿಸುವುದು ಸಹಜ. ಸುರಕ್ಷತೆಯ ದೃಷ್ಟಿಯಿಂದ ತಂಡವಾಗಿ ಹೋಗುವುದು ಒಳ್ಳೆಯದು. ಬೆಟ್ಟದ ಮಧ್ಯ ಕಡಿದಾದ ದಾರಿಯಿದ್ದು, ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಕುಡಿಯುವ ನೀರು ಜತೆಗಿರಲೇಬೇಕು.

ಹೋಗುವುದು  ಹೀಗೆ
ಬೆಂಗಳೂರಿನಿಂದ ಮುಳಬಾಗಿಲು 95 ಕಿ.ಮೀ, ಮುಳಬಾಗಿಲಿನಿಂದ ಆವನಿಗೆ 10 ಕಿ.ಮೀ. ದೂರ. ಮುಳಬಾಗಿಲಿನಿಂದ ವಿರೂಪಾಕ್ಷಿ ಗ್ರಾಮದ ಮೂಲಕ ಹಾದು ಆವನಿ ತಲುಪಬೇಕು.

ಮುಳಬಾಗಿಲಿನಿಂದ ಆವನಿಗೆ ಹೋಗಲು ಸರ್ಕಾರಿ ಬಸ್‌ಗಳ ಸೌಕರ್ಯವಿದೆ. ಹಿಂದಿರುಗುವಾಗ ವಿರೂಪಾಕ್ಷಿ ಗ್ರಾಮದಲ್ಲಿನ ಅಪರೂಪದ ವಾಸ್ತು ಶೈಲಿಯ ದೇಗುಲಗಳನ್ನೂ ನೋಡಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.