ADVERTISEMENT

ಖಾಲಿ ಬೆಟ್ಟ ಕರಗುವ ಮನ

ಸುತ್ತಾಣ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 19:30 IST
Last Updated 28 ನವೆಂಬರ್ 2014, 19:30 IST
ಖಾಲಿ ಬೆಟ್ಟ ಕರಗುವ ಮನ
ಖಾಲಿ ಬೆಟ್ಟ ಕರಗುವ ಮನ   

ಪ್ರಕೃತಿ ಸೌಂದರ್ಯವನ್ನು  ಸವಿಯಲು ಲಕ್ಷಗಟ್ಟಲೆ ಹಣ, ಸಮಯ ಎರಡನ್ನೂ ಖರ್ಚು ಮಾಡಿಕೊಂಡು ವಿದೇಶಗಳನ್ನು ಸುತ್ತಿ ಬರುವ ಅಗತ್ಯವಿಲ್ಲ. ನಮ್ಮ ನಾಡಿನಲ್ಲೇ ಅಂತಹ ನೈಸರ್ಗಿಕ ಸ್ಥಳಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮಾಹಿತಿ ಕೊರತೆಯಿಂದ ಅಂತಹ ಅನೇಕ ಸ್ಥಳಗಳು ಇನ್ನೂ ಜನರ ದೃಷ್ಟಿಗೆ ಬಿದ್ದಿಲ್ಲ. ವಿದೇಶಗಳಲ್ಲಿರುವಂತಹ   ಸುಂದರ ಸ್ಥಳಗಳು ನಮ್ಮಲ್ಲೂ ಸಾಕಷ್ಟಿವೆ.

ನಮ್ಮ ಧಾವಂತದ ಬದುಕಿಗೆ ಒಂದು ದಿನದ ವಿರಾಮ ಕೊಟ್ಟು, ಪ್ರಕೃತಿ ಮಡಿಲಲ್ಲಿ ಅಡಗಿರುವ ಸೌಂದರ್ಯವನ್ನು ಸವಿದು ಬಂದರೆ, ದಣಿದ ಮನಸ್ಸು ಚೇತನಗೊಂಡು, ಹೊಸ ಹುಮ್ಮಸ್ಸು, ಉತ್ಸಾಹ ಪಡೆಯುತ್ತದೆ. ಐತಿಹಾಸಿಕ ಮೈಸೂರು ನಗರದಿಂದ ಕೇವಲ 65 ಕಿ.ಮೀ. ದೂರದಲ್ಲಿ ಸಂಪದ್ಭರಿತ ಪ್ರಕೃತಿ ಸ್ಥಳವೊಂದಿದೆ. ಸರಗೂರನ್ನು ದಾಟಿದರೆ ಸಿಗುವುದೇ ಚಿಕ್ಕದೇವಮ್ಮನ ಬೆಟ್ಟ. ಇದು ಬೆಂಗಳೂರಿನಿಂದ 205 ಕಿ.ಮೀ. ದೂರದಲ್ಲಿದೆ.

ಇದು ಹೆಚ್ಚು ಜನರಿಗೆ ಅಷ್ಟಾಗಿ ತಿಳಿಯದ ಒಂದು ಅಪರಿಚಿತ ಸ್ಥಳ. ಬೆಟ್ಟದ ಮೇಲೆ ನೋಡುವಂತಹ ಯಾವುದೇ ವಿಶೇಷ ಸ್ಥಳವಿಲ್ಲದಿದ್ದರೂ ಅದರ ಮೇಲೆ ನಿಂತು ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯ ಆಸ್ವಾದಿಸುವುದೇ ಈ ಬೆಟ್ಟದ ವೈಶಿಷ್ಟ್ಯ. ಈ ಖಾಲಿ ಬೆಟ್ಟದಲ್ಲಿ ಮನಸ್ಸನ್ನು ಕರಗಿಸುವ ಅದಮ್ಯ ಶಕ್ತಿ ಅಡಗಿದೆ. ಈ ಸ್ಥಳವು ಚಿಕ್ಕದೇವಮ್ಮ ಎಂಬ ದೇವತೆಯ ಹೆಸರಿನಿಂದ ಪ್ರವರ್ಧಮಾನಕ್ಕೆ ಬಂದಿದ್ದು, ಬೆಟ್ಟದ ಮೇಲೆ ನೆಲೆಗೊಂಡಿರುವ ಈ ದೇವಿಯ ದೇವಸ್ಥಾನವನ್ನು ‘ಚಿಕ್ಕದೇವಮ್ಮನ ಬೆಟ್ಟ’ ಎಂದು ಕರೆಯುತ್ತಾರೆ.

ಮೈಸೂರು -ಎಚ್.ಡಿ.ಕೋಟೆ ರಸ್ತೆಯಲ್ಲಿ ಸಾಗಿದರೆ, ಹ್ಯಾಂಡ್ ಪೋಸ್ಟ್ ಎಂಬ ಸ್ಥಳ ಸಿಗುತ್ತದೆ. ಇದು ಕೇರಳದ ಮಾನಂದವಾಡಿ, ಬೀಚನಹಳ್ಳಿ ಡ್ಯಾಂ, ತಾರಕ ಡ್ಯಾಂ, ಹೆಚ್.ಡಿ.ಕೋಟೆ, ಸರಗೂರು ಮುಂತಾದ ಸ್ಥಳಗಳಿಗೆ ಹೋಗಲು ಸಂಧಿಸುವ ಕೇಂದ್ರವಾಗಿದೆ. ಹ್ಯಾಂಡ್ ಪೋಸ್ಟ್‌ನಿಂದ ಎಡ ತಿರುವು ಪಡೆದು ಹೊರಟರೆ, ಮುಂದೆ ಸಿಗುವುದೇ ಸರಗೂರು. ಆನಂತರ ಸಿಗುವುದು ಚಿಕ್ಕದೇವಮ್ಮನ ಬೆಟ್ಟ. ಬೆಟ್ಟವು ದೂರದಿಂದಲೇ ಆಕರ್ಷಕವಾಗಿ ಗೋಚರಿಸುತ್ತದೆ. ಬೆಟ್ಟದ ಬುಡದಿಂದ ಮೇಲಕ್ಕೆ ಹೋಗಲು ರಸ್ತೆಯ ಮೂಲಕ 5 ಕಿ.ಮೀ. ದೂರವನ್ನು ಕ್ರಮಿಸಬೇಕು.

ಈ ಹಿಂದೆ ರಸ್ತೆಯು ದುರ್ಗಮ ಸ್ಥಿತಿಯಲ್ಲಿದ್ದು, ಇತ್ತೀಚೆಗೆ ಸುಸಜ್ಜಿತ ಡಾಂಬರು ರಸ್ತೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಆಯಕಟ್ಟು ಪ್ರದೇಶವು ಅತ್ಯಂತ ಕಿರಿದಾಗಿದ್ದು, ಬೆಟ್ಟದ ನಾಲ್ಕು ಮೂಲೆಗಳಲ್ಲಿ ನಿಂತು ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಿ ಆನಂದಿಸಬಹುದಾಗಿದೆ. ದೂರದ ಮತ್ತು ಹತ್ತಿರದ ಪ್ರಕೃತಿ ಸೊಬಗನ್ನು ಮನತಣಿಯುವಷ್ಟು  ಆಹ್ಲಾದಿಸಬಹುದು. ಬೆಟ್ಟದ ಮೇಲೆ ಹಳೆಯ ದೇವಸ್ಥಾನವೊಂದಿದ್ದು, ಅದರ ಪಕ್ಕದಲ್ಲೇ ಈಗ ಹೊಸದಾಗಿ ದೇವಸ್ಥಾನ ನಿರ್ಮಾಣವಾಗುತ್ತಿದೆ. ತಮಿಳು ನಾಡಿನ ಶಿಲ್ಪಿಗಳು ದೇವಸ್ಥಾನಕ್ಕೊಂದು ಅಂತಿಮ ರೂಪ ಕೊಟ್ಟಿದ್ದು, ಅದೀಗ ಮುಗಿಯುವ ಹಂತದಲ್ಲಿದೆ.

ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ಅಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿರುತ್ತವೆ. ಬೆಟ್ಟದ ವೀಕ್ಷಣೆಗೆ ಹೋಗುವವರು ತಮ್ಮ ಆಹಾರ ಪದಾರ್ಥಗಳನ್ನು ತಾವೇ ಕೊಂಡೊಯ್ಯಬೇಕು. ಅಲ್ಲಿ ಪೂಜಾ ಸಾಮಗ್ರಿಗಳು ಮಾತ್ರ ಲಭ್ಯ. ವಾಹನಗಳನ್ನು ನಿಲ್ಲಿಸಲು ಸಾಕಷ್ಟು ಸ್ಥಳಾವಕಾಶವಿದೆ. ಈ ಪ್ರದೇಶವು ಎತ್ತರದಲ್ಲಿ ನೆಲೆಗೊಂಡಿರುವುದರಿಂದ  ತಂಪಿನ ಹವಾಗುಣ ಹೊಂದಿದೆ. ಬೆಟ್ಟದ ಪಶ್ಚಿಮ ದಿಕ್ಕಿನಲ್ಲಿ   ಜಲಾವೃತಗೊಂಡಿರುವ ನುಗು ಡ್ಯಾಂ ಮೇಲಿನಿಂದ ಅತ್ಯಂತ ರಮ್ಯ ನೋಟ ಒದಗಿಸುತ್ತದೆ. ಬೆಟ್ಟದ ಮೇಲಕ್ಕೆ ಹೋಗಲು ಬಸ್ ಸೌಕರ್ಯ ಅಷ್ಟಾಗಿ ಇಲ್ಲ. ಸ್ವಂತ ವಾಹನದಲ್ಲಿ ತೆರಳುವುದು ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.