ADVERTISEMENT

ಹೊಯ್ಸಳ ಶಿಲಾವೈಭವದ ಹೊಸಹೊಳಲು

ಸುತ್ತಾಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2016, 19:30 IST
Last Updated 2 ಸೆಪ್ಟೆಂಬರ್ 2016, 19:30 IST
ಹೊಯ್ಸಳ ಶಿಲಾವೈಭವದ ಹೊಸಹೊಳಲು
ಹೊಯ್ಸಳ ಶಿಲಾವೈಭವದ ಹೊಸಹೊಳಲು   

ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಿರುವ ದೇಗುಲಗಳ ಶಿಲ್ಪಕಲಾ ವೈಭವವನ್ನು ನೋಡುವುದೇ ಚೆಂದ. ಅಂಥ ದೇವಾಲಯಗಳ ಸಾಲಿನಲ್ಲಿ   ಹೊಸಹೊಳಲಿನ ಲಕ್ಷ್ಮಿನಾರಾಯಣ ದೇವಸ್ಥಾನವೂ ಒಂದು.

ಶಿಲ್ಪಕಲಾ ಶ್ರೀಮಂತಿಕೆಯನ್ನು ಸಾರುವ ಈ ದೇವಸ್ಥಾನವನ್ನು ಹೊಯ್ಸಳರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಗಿದೆ.  ಈ ದೇವಾಲಯಕ್ಕೆ ಗರುಡಕಂಬವನ್ನು ಸ್ಥಾಪಿಸಲು ಭೂಮಿಯನ್ನು ಅಗೆಯುವಾಗ ಹೊಳೆಯುವ ಕೆಲವು ಹರಳುಗಳು ದೊರೆತವಂತೆ. ಹೀಗಾಗಿ ಈ ಗ್ರಾಮಕ್ಕೆ ಪ್ರಾರಂಭದಲ್ಲಿ ‘ಹೊಸಹರಳು’ ಎಂದು ಕರೆಯಲಾಗುತ್ತಿತ್ತು. ಕಾಲಕ್ರಮೇಣ ಇದು ‘ಹೊಸಹೊಳಲು’ ಆಗಿ ಮಾರ್ಪಾಡಾಯಿತಂತೆ.

ಇಲ್ಲಿಯ ಲಕ್ಷ್ಮಿನಾರಾಯಣ ದೇವಸ್ಥಾನವು ಹೊಯ್ಸಳ ವಾಸ್ತುಶಿಲ್ಪಿಯ ಅಮೋಘ ಶಿಲಾವೈಭವವನ್ನು ಹೊಂದಿದೆ. ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣದ ಸೂಕ್ಷ್ಮ ಕೆತ್ತನೆ ಎಂಥವರನ್ನೂ ನಿಬ್ಬೆರಗುಗೊಳಿಸುತ್ತದೆ.

ADVERTISEMENT

ಇಲ್ಲಿಯ ಕೆತ್ತನೆಯ ಕಾರ್ಯದ ಸೊಬಗು ನೋಡುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ದೇವಸ್ಥಾನದ ಹೊರಾಂಗಣದಲ್ಲಿ ವಿಷ್ಣುವಿನ ಹಲವಾರು ಅವತಾರಗಳೊಂದಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆಯ ಕತೆಗಳನ್ನೂ ಕೆತ್ತಲಾಗಿದೆ.

ಸುಮಾರು 6 ಅಡಿ ಎತ್ತರದ ವೇದಿಕೆಯ ಮೇಲೆ ದೇವಸ್ಥಾನ ನಿಂತಿದೆ. ವೇದಿಕೆಯು ಹಂಸ, ಆನೆ, ಕುದುರೆ, ಬಳ್ಳಿಗಳ ಕೆತ್ತನೆಯ ಸಾಲುಗಳಿಂದ ಅಲಂಕೃತಗೊಂಡಿದೆ. ಈ ದೇಗುಲದ ಶಿಲ್ಪಕಲೆ ಹೊಯ್ಸಳರ ಆಳ್ವಿಕೆಯಲ್ಲಿ ಕಟ್ಟಿದ ಬೇಲೂರು, ಹಳೇಬೀಡು ದೇಗುಲಗಳ ಶಿಲಾವೈಭವವನ್ನೇ ನೆನಪಿಸುತ್ತದೆ.

ನವರಂಗ ಮಂಟಪದ ಕಂಬಗಳ ಮೇಲೆ ಮದನಿಕೆಯರಲ್ಲದೆ ಇತರೆ ಹಲವಾರು ಕೆತ್ತನೆಗಳನ್ನು ಕಾಣಬಹುದು. ಚಾವಣಿಯಲ್ಲಿ ಅರಳಿದ ಕಮಲ, ಕಾಳಿಂಗ ಮರ್ದನದ ಸುಂದರ ಕೆತ್ತನೆಗಳೂ ಗಮನ ಸೆಳೆಯುವಂತಿವೆ. ನವರಂಗ ಮಂಟಪದ ಮುಂಭಾಗದಲ್ಲಿ ವಿಶಾಲವಾದ ಸಭಾಮಂಟಪ ಮತ್ತು ಮುಖಮಂಟಪಗಳು ಕಣ್ಸೆಳೆಯುವಂತಿವೆ.

ಪ್ರಾಂಗಣದಲ್ಲಿರುವ ಲಕ್ಷ್ಮಿ ಅಮ್ಮನವರ ದೇಗುಲವನ್ನು 1950ರಲ್ಲಿ ಕಟ್ಟಲಾಗಿದೆ ಎನ್ನಲಾಗುತ್ತಿದೆ. ಹೊಸಹೊಳಲು ಗ್ರಾಮವು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ (ಕೆ.ಆರ್.ಪೇಟೆ) ತಾಲ್ಲೂಕು ಕೇಂದ್ರದಿಂದ ಕೇವಲ 3 ಕಿ.ಮೀ. ದೂರದಲ್ಲಿದೆ. ಸಾರ್ವಜನಿಕ ಸಾರಿಗೆ ವಾಹನದಲ್ಲಿ ಕೃಷ್ಣರಾಜಪೇಟೆಗೆ ಪ್ರಯಾಣಿಸಬಹುದು.

ಅಲ್ಲಿಂದ ಲಭ್ಯವಿರುವ ಬಾಡಿಗೆ ವಾಹನಗಳಲ್ಲಿ ಹೊಸಹೊಳಲು ತಲುಪಬಹುದು. ಆದರೆ ಪ್ರಯಾಣಕ್ಕೆ ಸ್ವಂತ ವ್ಯವಸ್ಥೆ ಮಾಡಿಕೊಂಡಲ್ಲಿ ಸುತ್ತ ಮುತ್ತಲಿನಲ್ಲಿರುವ ನುಗ್ಗೇಹಳ್ಳಿಯ ಲಕ್ಷ್ಮಿನರಸಿಂಹಸ್ವಾಮಿ, ಕಲ್ಲಹಳ್ಳಿಯಲ್ಲಿರುವ ವರಾಹಾಸ್ವಾಮಿ ದೇವಸ್ಥಾನಗಳನ್ನು ಸಹ ನೋಡಲು ಅನುಕೂಲವಾಗುತ್ತದೆ. ಪ್ರವಾಸಕ್ಕೆ ಹೊರಡುವುವವರು  ಜೊತೆಯಲ್ಲಿ ತಿಂಡಿ ತಿನಿಸುಗಳನ್ನು  ತೆಗೆದುಕೊಂಡು ಹೋಗುವುದು ಸೂಕ್ತ.

ಬೆಂಗಳೂರಿನಿಂದ ಹೊಸಹೊಳಲು ಸುಮಾರು 162 ಕಿ.ಮೀ ದೂರದಲ್ಲಿದೆ. ಹೊಸಹೊಳಲು ತಲುಪಲು ಬೆಂಗಳೂರಿನಿಂದ ಎರಡು ಮಾರ್ಗಗಳಿವೆ. ಒಂದು ತುಮಕೂರು ಹೆದ್ದಾರಿಯಲ್ಲಿ (ಎಹೆಚ್47) ಹೊರಟು ನೆಲಮಂಗಲ ಬೈಪಾಸ್‌ನಲ್ಲಿ ಎಡಕ್ಕೆ ತಿರುಗಿ ಹಾಸನಕ್ಕೆ ಹೊರಡುವ ರಾಷ್ಟ್ರೀಯ ಹೆದ್ದಾರಿಯಲ್ಲಿ (ಎನ್‌ಎಚ್‌75) ಕುಣಿಗಲ್, ಯಡಿಯೂರು, ನಾಗಮಂಗಲ ಮಾರ್ಗವಾಗಿ ಹೊಸಹೊಳಲು ತಲುಪಬಹುದು.

ಮತ್ತೊಂದು ಮಾರ್ಗವೆಂದರೆ ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ  ಮಾರ್ಗವಾಗಿ ಸಹ ಹೊಸಹೊಳಲು ತಲುಪಬಹುದು (ಸುಮಾರು 167 ಕಿ.ಮೀ.).
-ಕೆ.ಪ್ರಭಾಕರ / ವಿ.ಆನಂದ ರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.