ADVERTISEMENT

ಅಯ್ಯೋ ಎಂಥಾ ಚಳಿಯಪ್ಪಾ...

ಚಳಿಗಾಲ

ರೋಹಿಣಿ ಮುಂಡಾಜೆ
Published 28 ನವೆಂಬರ್ 2016, 19:30 IST
Last Updated 28 ನವೆಂಬರ್ 2016, 19:30 IST
ಚಿತ್ರ: ಚಂದ್ರಹಾಸ ಕೋಟೆಕಾರ್
ಚಿತ್ರ: ಚಂದ್ರಹಾಸ ಕೋಟೆಕಾರ್   
‘ಹಲೋ... ಯಾಕಪ್ಪಾ ಆರೋಗ್ಯ ಚೆನ್ನಾಗಿಲ್ವೇ? ವಾಕಿಂಗ್ ಬಂದಿಲ್ವಲ್ಲ ಅದಕ್ಕೆ ವಿಚಾರಿಸಿದೆ’
‘ಅಯ್ಯೋ ಚಳಿ ಶುರುವಾಗಿದೆ ಮಾರಾಯ. ಎದ್ದೇಳಕ್ಕೇ ಮನಸ್ಸಾಗ್ಲಿಲ್ಲ. ಹೊದ್ಕೊಂಡು ಮಲ್ಕೊಂಬಿಟ್ಟೆ’
‘ನಾಳೆ?’
‘ನಾ...ಳೆ... ಚಳಿ ಮುಗಿಯೋವರೆಗೂ ನನ್ನ ಹಾಜರಿ ಖಾತರಿ ಇಲ್ಲ ಬಿಡಪ್ಪಾ’.
 
***
‘ಎದ್ದೇಳೇ ಮಾರಾಯ್ತಿ.. ಚಳಿ ಚಳಿ ಅಂತ ಮಲ್ಕೊಂಡ್ರೆ ಕೊಬ್ಬು ಕರಗೊಲ್ಲ. ಎದ್ದು ವಾಕಿಂಗ್‌ ಹೋಗು’
‘ಅಮ್ಮಾ ಪ್ಲೀಸ್‌.. ಒಮ್ಮೆ ಹೊರಗೆ ಹೋಗಿ ಬಾ. ಚಳಿ ಹೇಗಿದೆ ಅಂತ ಗೊತ್ತಾಗುತ್ತೆ ವಾಕಿಂಗ್ ಅಂತೆ ವಾಕಿಂಗ್‌. ಏಳು ಗಂಟೆವರೆಗೂ ತೊಂದ್ರೆ ಕೊಡ್ಬೇಡ’.
 
***
ಚಳಿ ಎಂಬ ಮಾಯೆ ಸ್ವಲ್ಪ ಸ್ವಲ್ಪವೇ ಬೆಂಗಳೂರನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಆಟವಾಡಿಸುತ್ತಿದೆ.  ಬೆಳಗ್ಗೆ ಐದು ಗಂಟೆಗೆ ಇಟ್ಟ ಮೊಬೈಲ್‌ ಅಲಾರಂನ್ನು 10 ನಿಮಿಷ, 15 ನಿಮಿಷ ಎಂದು ಮುಂದಕ್ಕೋಡಿಸುತ್ತಲೇ ಮತ್ತೆ ಮತ್ತೆ ಹೊದ್ದುಕೊಳ್ಳುವ ಚಪಲ. 
 
ಹೇಗೋ ಹೊಯ್ದಾಡಿಕೊಂಡು ಎದ್ದ ಗೃಹಿಣಿಗೆ ಬಚ್ಚಲಲ್ಲಿ ನಲ್ಲಿ ಮುಟ್ಟಿದರೂ ನೀರು ತಾಗಿದರೂ ಚುರುಕ್‌... ಅಡುಗೆ ಮನೆಗೆ ಬಂದರೆ ರಾತ್ರಿ ತೊಳೆದಿಟ್ಟ ಪಾತ್ರೆಗಳಲ್ಲೂ ಶಾಕ್‌... ಫ್ರಿಜ್‌ ಬಾಗಿಲು ತೆಗೆದರೂ ಮೈಯೆಲ್ಲಾ ಗಡಗಡ..
 
ಥೂ ಎಂಥಾ ಚಳಿಯಪ್ಪಾ...
 
ಮನೆ ಒಳಗೆ ಹೇಗೋ ಇರಬಹುದಪ್ಪಾ, ಆಚೆ ಬಂದು ಓಡಾಡೋದು ಕಡುಕಷ್ಟ... ಅಬ್ಬಾ ಚಳಿಯೇ...
ಚಳಿ ಶುರುವಾಗುತ್ತಿದ್ದಂತೆ ಮನೆ ಮನೆಯಲ್ಲೂ ಕೇಳಿಬರುವ ಗೊಣಗಾಟಗಳೆಷ್ಟೋ.
 
***
ಚಳಿರಾಯನ ಆಟಾಟೋಪ ಹೀಗಿರುವಾಗ ಬೆಳಗ್ಗಿನ ವಾಯುವಿಹಾರವೂ ಒಂದು ದಂಡನೆಯಂತೆ ಭಾಸವಾಗುವುದು ಸಹಜವೇ. ಆದರೆ ಬೇಸಿಗೆಯಲ್ಲಿ ವಾಕಿಂಗ್‌ಗೆ ಧರಿಸಿದ್ದಕ್ಕಿಂತ ವಿಭಿನ್ನವಾದ ಉಡುಪು ಧರಿಸಿದರೆ ಮನೆಯಾಚೆಗಿನ  ಗಾಳಿ, ತಂಪಾದ ವಾತಾವರಣವೂ ಆಪ್ಯಾಯಮಾನವೆನಿಸುವುದು ಖಚಿತ.
 
ಹೇಗಿರಬೇಕು ಉಡುಪು?
ವಾಕಿಂಗ್‌, ವ್ಯಾಯಾಮದ ವೇಳೆ ಬೆವರು ಸುರಿದು ಕಿರಿಕಿರಿ ಅನಿಸುವ  ಕಾರಣ ಹೆಚ್ಚು ಹೆಚ್ಚು ಸಡಿಲವಾದ, ಗಾಳಿಯಾಡುವ ಉಡುಪುಗಳನ್ನೇ ಧರಿಸಿರುತ್ತೀರಿ. 
 
ಚಳಿಗಾಲದ ವಾಕಿಂಗ್‌ ವೇಳೆ ಅಂತಹ ಉಡುಪು ಧರಿಸಿದರೆ ದೇಹ ಬೆಚ್ಚಗಾಗದು. ಆರೋಗ್ಯವೂ ಕೆಡಬಹುದು.
 
* ಆರಾಮ ಎನಿಸುವಂತಹ ಉಡುಪು ಧರಿಸಿ
 
* ಸಮರ್ಪಕವಾದ ಉಡುಪು ವಾಕಿಂಗ್‌/ವ್ಯಾಯಾಮವನ್ನು ಆಹ್ಲಾದದಾಯಕವಾಗಿಸುತ್ತದೆ.
 
* ತಲೆ, ಕಿವಿ ಮತ್ತು ಕತ್ತನ್ನು ಬೆಚ್ಚನೆಯ ಬಟ್ಟೆಯಿಂದ ಮುಚ್ಚಿಕೊಳ್ಳಿ. ಇದರಿಂದ ದೇಹದ ಶಾಖ ವ್ಯರ್ಥವಾಗದು.
 
* ಸ್ವೆಟರ್/ಹತ್ತಿ ಅಥವಾ ಲಿನನ್‌ನ ತುಂಬು ತೋಳಿನ ಶರ್ಟು ಧರಿಸಿ
 
* ಶೀತ ಪ್ರಕೃತಿಯವರು ಕೈಗವಸು ಧರಿಸಿದರೆ ಬೆರಳು ಮರಗಟ್ಟದು
 
* ಮಾಮೂಲಿ ಉಡುಪಿನ ಮೇಲೆ ಇನ್ನೊಂದು ಬಟ್ಟೆಯನ್ನೂ ಧರಿಸುವುದರಿಂದ ದೇಹದ ಶಾಖ ಕಾಪಾಡಿಕೊಳ್ಳಬಹುದು.
 
* ಸ್ಲಿಪ್ಪರ್‌, ಸ್ಯಾಂಡಲ್ಸ್‌, ಲೋಫರ್ಸ್‌, ಓಪನ್‌ ಶೂ, ಕ್ಯಾನ್ವಾಸ್‌ ಶೂ,ಸ್ಪೋರ್ಟ್ಸ್‌ ಶೂ ಹೀಗೆ ಯಾವುದೇ ಧರಿಸುವುದಾದರೂ ಮೆತ್ತನೆಯ ಸಾಕ್ಸ್‌ ಮರೆಯಬೇಡಿ.
 
* ವಾಯುವಿಹಾರಕ್ಕೂ ಮೊದಲು ಕಾಫಿ/ಚಹಾ ಸೇವನೆ ಸೂಕ್ತವಲ್ಲ. ಆದರೆ ಒಂದು ಲೋಟ ಬಿಸಿ ನೀರು ಅಥವಾ ತೀವ್ರ ಕಫ/ಕೆಮ್ಮು ಇದ್ದರೆ ಒಂದು ಲೋಟ ಬಿಸಿ ಕಷಾಯ ಕುಡಿದು ನಡಿಗೆ ಶುರು ಮಾಡಿದರೆ ಮೈ ಮನಸ್ಸು ಎರಡೂ ಚೈತನ್ಯಗೊಳ್ಳುತ್ತದೆ.
 
**
ಸ್ವಲ್ಪ ತಾಳಿ...
ವಾಕಿಂಗ್‌ನಿಂದ ಬರುವಾಗ ಕೈಬೆರಳು, ಮೂಗು, ಗದ್ದ, ಕೆನ್ನೆ  ಮಂಜುಗಡ್ಡೆಯಂತಾಗಿರುತ್ತದೆ. ಹಾಗಂತ ಬಿಸಿನೀರಲ್ಲಿ ತೊಳೆಯಬೇಡಿ. ಹತ್ತು ನಿಮಿಷ ವಿರಮಿಸಿದರೆ ನಿಮ್ಮ ದೇಹದ ಶಾಖ ಮನೆಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಆ ಬಳಿಕ ಹದವಾದ ಬಿಸಿನೀರಿನಿಂದ ಇಲ್ಲವೇ ತಣ್ಣಗಿನ ನೀರಿನಿಂದ ಮುಖ, ಕೈಕಾಲು ತೊಳೆದು ಮುಂದಿನ ದಿನಚರಿಯಲ್ಲಿ ತೊಡಗಿಸಿಕೊಳ್ಳಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.