ADVERTISEMENT

ಆಗ್ಲೂ ಸೈ ಈಗ್ಲೂ ಸೈ ‘ಡಂಗ್ರಿ’ಗೆ ಜೈ

ವಿದ್ಯಾಶ್ರೀ ಎಸ್.
Published 14 ಫೆಬ್ರುವರಿ 2017, 19:30 IST
Last Updated 14 ಫೆಬ್ರುವರಿ 2017, 19:30 IST
ಆಲಿಯಾ ಭಟ್‌
ಆಲಿಯಾ ಭಟ್‌   

ಮೊದಲೆಲ್ಲ ಪಾಶ್ಚಾತ್ಯ ದೇಶಗಳಲ್ಲಿ ಕಾರ್ಮಿಕರು ಧರಿಸುತ್ತಿದ್ದ ಡಂಗ್ರಿ ಪ್ಯಾಂಟ್‌ಗಳು ಇಂದು ಫ್ಯಾಷನ್‌ ಟ್ರೆಂಡ್‌ ಆಗಿವೆ. ಧರಿಸಲು ಆರಾಮದಾಯಕವಾಗಿರುತ್ತದೆ ಎಂಬುದು ಈ ಉಡುಗೆಯ ಜನಪ್ರಿಯತೆಯ ಗುಟ್ಟು.

ಈಗಂತೂ ಅಪ್ಪ, ಅಮ್ಮ, ಮಕ್ಕಳು ಎಲ್ಲರೂ ಒಂದೇ ರೀತಿಯ ಉಡುಪು ತೊಟ್ಟು ‘ಸೇಮ್‌ ಪಿಂಚ್‌’ ಎನ್ನುವ ಕಾಲ. ಅಂಥವರಿಗೆ ಇದು ಉತ್ತಮ ಆಯ್ಕೆಯಾಗಬಲ್ಲದು.

ಡಂಗ್ರಿ ಪ್ಯಾಂಟ್‌ ಎಲ್ಲಾ ಕಾಲಕ್ಕೂ ಸಲ್ಲುವ ಫ್ಯಾಷನ್‌. ಹುಡುಗ, ಹುಡುಗಿ, ಮಕ್ಕಳು ಎಂಬ ಬೇಧವಿಲ್ಲದೆ ಎಲ್ಲರಿಗೂ ಹೊಂದಿಕೆಯಾಗುವ ವಿನ್ಯಾಸಗಳು ಇರುವ ಕಾರಣಕ್ಕೆ ಇದು ಮಾರಾಟ ಮಳಿಗೆಗಳಲ್ಲಿ ಫಾಸ್ಟ್‌ ಮೂವಿಂಗ್ ಉಡುಗೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಇದನ್ನು ಧರಿಸಿ ಕೆಲಸ ಮಾಡುವುದು ಸುಲಭ ಎಂಬ ಕಾರಣಕ್ಕೆ ಪಾಶ್ಚಾತ್ಯ ದೇಶಗಳಲ್ಲಿ ರೈತರು ಕೂಡ ಇದೇ ರೀತಿಯ ಬಟ್ಟೆಯನ್ನು ತೊಡುತ್ತಿದ್ದರು. ಕಾಲಕ್ಕೆ ತಕ್ಕಂತೆ ಇದು ಸ್ವರೂಪದಲ್ಲಿ ಬದಲಾವಣೆ ಕಂಡು ಕೊಂಡಿದೆ. ಹಾಲಿವುಡ್‌ ನಟಿಯರಾದ ಜೆನಿಫರ್‌ ಅನಿಸ್ಟನ್‌ ಮತ್ತು ಕ್ಲಿ ಮಿನೊಗೊ ಇದನ್ನು ಧರಿಸಿ ಸರಳ ಸುಂದರಿಯಾಗಿ ಮಿಂಚಿದ ನಂತರ ಡಂಗ್ರಿ ಟ್ರೆಂಡ್‌ನ ಜನಪ್ರಿಯತೆ ಮತ್ತಷ್ಟು ಹೆಚ್ಚಿತು.

ಬಾಲಿವುಡ್‌ ನಟಿಯರಾದ ಕೃತಿ ಸೆನನ್‌ ಮತ್ತು ಅನುಷ್ಕಾ ‘ಡಂಗ್ರಿಯ ಮೇಲೆ ನಮಗೆ ವಿಶೇಷ ಪ್ರೀತಿ’ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ದೀಪಿಕಾ ಪಡುಕೋಣೆ, ಕಂಗನಾ ರನೋಟ್‌ ಸೇರಿದಂತೆ ಹಲವು ನಟಿಯರು ಡಂಗ್ರಿ ತೊಟ್ಟು ಪಾರ್ಟಿಗಳಲ್ಲಿ ಮೆರೆದದ್ದು ಟ್ರೆಂಡಿಂಗ್ ಆಗಿತ್ತು.

ಹಲವು ವಿಧದ ಬಟ್ಟೆಗಳ ಡಂಗ್ರಿಗಳು ಇವೆ. ಆದರೂ ಜನಪ್ರಿಯತೆ ಹೆಚ್ಚಿರುವುದು ಜೀನ್ಸ್‌ ಡಂಗ್ರಿಗಳಿಗೆ. ಇದರ ಜೊತೆಗೆ ಕಾಟನ್‌ ಡಂಗ್ರಿಗಳು ಕೂಡ ತರುಣಿಯರ ಮೆಚ್ಚುಗೆ ಗಳಿಸಿವೆ.

ಫ್ಯಾಷನ್‌ ಪ್ರಿಯರ ಮೆಚ್ಚುಗೆ ಗಳಿಸುತ್ತಿರುವ ಡಂಗ್ರಿಯ ವೈವಿಧ್ಯವೂ ಗಮನ ಸೆಳೆಯುತ್ತದೆ. ವಿಭಿನ್ನತೆಯನ್ನು ಹೆಚ್ಚಿಸಿಕೊಂಡಿದೆ. ದೇಹದ ಆಕಾರ, ಎತ್ತರಕ್ಕೆ ಹೊಂದಿಕೆಯಾಗುವಂತೆ ಇದರ ವಿನ್ಯಾಸ ಮಾಡಲಾಗಿದೆ. ಪಾರ್ಟಿಗಳಿಗೆ ಮತ್ತು ಕಚೇರಿ, ಶಾಪಿಂಗ್‌ಗೆ ಧರಿಸಲು ಹೇಳಿ ಮಾಡಿಸಿದ ಉಡುಪು ಇದು.

ಕಾಲಕ್ಕೆ ತಕ್ಕಂತೆ ಅಗತ್ಯಕ್ಕೆ ಅನುಗುಣವಾಗಿ ಇದರ ಸ್ವರೂಪ ಬದಲಾಗಿದೆ. ಚಿಕ್ಕ ಶಾರ್ಟ್ಸ್, ಸ್ಕರ್ಟ್ಸ್ ಮತ್ತು ಥ್ರೀಫೋರ್ತ್‌ ರೂಪಗಳನ್ನು ಇದು ಪಡೆದುಕೊಂಡಿದೆ. ಪ್ಯಾಂಟ್‌ಗೆ ಹೊಂದಿಕೆಯಾಗುವಂತೆ ಟೀಶರ್ಟ್‌ಗಳನ್ನು ಬಳಸಬಹುದು. ಭಿನ್ನ ಬಣ್ಣಗಳ ಜೊತೆಗೆ ಬೇಕಾದ ಮಾದರಿಯಲ್ಲಿ ಡಂಗ್ರಿಗಳು ದೊರಕುತ್ತವೆ. ಗ್ಲ್ಯಾಮರಸ್‌ ಆಗಿ ಕಾಣ ಬಯಸುವವರು ಸೊಂಟ ಕಾಣುವ ಶರ್ಟ್‌ ಜೊತೆಗೆ ಡಂಗ್ರಿ ಹಾಕಿಕೊಳ್ಳಬಹುದು.

‘ಎಲ್ಲ ವಯಸ್ಸಿನವರಿಗೂ ಒಪ್ಪುವಂಥ ಡಂಗ್ರಿಗಳು ಇದೀಗ ಲಭ್ಯ. ಪ್ರಿಂಟೆಡ್ ಮಾದರಿಯ ವಿನ್ಯಾಸ ಟ್ರೆಂಡಿಂಗ್ ಎನಿಸಿಕೊಂಡಿದೆ. ದಪ್ಪಗಿರುವವರಿಗೂ ಹೊಂದಿಕೆಯಾಗುತ್ತದೆ’ ಎನ್ನುತ್ತಾರೆ ವಸ್ತ್ರ ವಿನ್ಯಾಸಕಿ ಸಂಗೀತಾ.

ಮಕ್ಕಳಿಗೂ ಬಗೆಬಗೆ ಡಂಗ್ರಿ ಲಭ್ಯ. ಗಂಡು ಮಕ್ಕಳ ಫ್ಯಾಷನ್‌ ಸೀಮಿತ ವಲಯಕ್ಕೆ ಮೀಸಲಾಗಿದೆ. ಎಷ್ಟೇ ಹುಡುಕಿದರೂ, ಮನಕ್ಕೊಪ್ಪುವ ಬಟ್ಟೆ ಸಿಗುವುದೇ ಕಡಿಮೆ. ಆದರೆ ಡಂಗ್ರಿಗಳು ಆ ಕೊರತೆಯನ್ನು ನೀಗಿಸುತ್ತವೆ. 

ಗಂಡು ಮತ್ತು ಹೆಣ್ಣು ಮಕ್ಕಳನ್ನು ಮತ್ತಷ್ಟು ಚೆಂದ ಗೊಳಿಸುವಲ್ಲಿ ಇದರ ಪಾಲು ದೊಡ್ಡದು.  ಜೀನ್ಸ್‌ ಡಂಗ್ರಿಯ ಮೇಲೆ ಪುಟ್ಟ ಗೊಂಬೆಯಿರುವ ವಿನ್ಯಾಸ ಮಕ್ಕಳ ಉಡುಪಿಗೆ ಮತ್ತಷ್ಟು ಮೆರುಗು ನೀಡುತ್ತದೆ.

ಹೂವಿನ ವಿನ್ಯಾಸವಿರುವ ಡಂಗ್ರಿಗಳು ಹೆಣ್ಣು ಮಕ್ಕಳನ್ನು ಮತ್ತಷ್ಟು ಮುದ್ದಾಗಿ ಕಾಣಿಸುತ್ತವೆ. ಒಟ್ಟಿನಲ್ಲಿ ಇದು ಎಲ್ಲಾ ಕಾಲಕ್ಕೂ ಎಲ್ಲಾ ವರ್ಗಗಳಿಗೂ ಸಲ್ಲಬಹುದಾದ ಫ್ಯಾಷನ್‌ ಟ್ರೆಂಡ್‌.

ಡಂಗ್ರಿ ಧರಿಸುವಾಗ...
*ಕೂದಲನ್ನು ಕಟ್ಟುವ ಬದಲು ಬಿಡುವುದು ಒಳಿತು. ಇಲ್ಲದಿದ್ದರೆ ಬಫ್‌ ಹೇರ್‌ ವಿನ್ಯಾಸವೂ ಚೆಂದ ಕಾಣುತ್ತದೆ.
*ಕಡಿಮೆ ಮೇಕಪ್‌ ಮಾಡಿಕೊಳ್ಳುವುದು ಸೂಕ್ತ. ಢಾಳಾದ ಕಾಡಿಗೆ ಹಚ್ಚಿದರೆ ಇನ್ನಷ್ಟು ಸುಂದರವಾಗಿ ಕಾಣುತ್ತೀರಿ.
*ಕೈಗೆ ಬಳೆ ಬೇಕಾಗಿಲ್ಲ. ಕೊರಳು ಖಾಲಿ ಇದ್ದರೆ ಚೆನ್ನ. ಬೇಕಿದ್ದರೆ ಜರ್ಮನ್‌ ಸಿಲ್ವರ್‌ ಅಥವಾ ಬೆಳ್ಳಿಯ ಉದ್ದದ ಪದಕವಿರುವ ಸರವನ್ನು ಹಾಕಿಕೊಳ್ಳಬಹುದು.
*ಬಿಳಿ ಮತ್ತು ಕಪ್ಪು ಬಣ್ಣದ ಟೀಶರ್ಟ್‌ಗಳಿಗೆ ನೀಲಿ ಬಣ್ಣದ ಡಂಗ್ರಿ ಚೆನ್ನಾಗಿ ಹೊಂದಿಕೆಯಾಗುತ್ತದೆ.
*ಡಂಗ್ರಿಗೆ ಚಪ್ಪಲಿಗಿಂತ ಶೂ ಹೆಚ್ಚು ಹೊಂದುತ್ತದೆ.

*
ಡಂಗ್ರಿ ಉಡುಪನ್ನು ಉದ್ಯಮಗಳಲ್ಲಿ ಯೂನಿಫಾರಂ ಆಗಿ ಹೆಚ್ಚಾಗಿ ಬಳಸುತ್ತಾರೆ. ಯುವಸಮುದಾಯದವರು ಇಷ್ಟ ಪಡುವ ಉಡುಪು ಇದು. ಪಾಶ್ಚಾತ್ಯರಿಗೆ ಹೋಲಿಸಿದರೆ ಸ್ಥಳೀಯರು ಇದನ್ನು ಬಳಸುವುದು ಕಡಿಮೆಯೇ. ಇತ್ತೀಚೆಗೆ ಡಂಗ್ರಿಗಳು ಹಲವು ವಿನ್ಯಾಸ ಮತ್ತು ಬಟ್ಟೆಗಳಲ್ಲಿ ದೊರಕುತ್ತವೆ.
–ರಫಿಕ್ ಜಿ.ಶಿರಹಟ್ಟಿ,
ವಸ್ತ್ರವಿನ್ಯಾಸಕ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.