ADVERTISEMENT

ಆಟೊ ಚಾಲಕ ತೋರಿದ ಒಳದಾರಿ

ಶಾರ್ಟ್‌ಕಟ್‌ 20

ಜಯಸಿಂಹ ಆರ್.
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಮುಖ್ಯರಸ್ತೆಗಳಲ್ಲಿ ಸಾಗುವಾಗ ಟ್ರಾಫಿಕ್, ಸಿಗ್ನಲ್ ಕಿರಿಕಿರಿ ಇದ್ದಿದ್ದೇ. ನಗರದ ಹೆಚ್ಚಿನ ಮುಖ್ಯರಸ್ತೆಗಳ ಅಂಚಿನಲ್ಲೇ ಪರ್ಯಾಯ, ಸಮಾನಾಂತರ ರಸ್ತೆಗಳು ಸಾಕಷ್ಟಿವೆ. ಸಿಗ್ನಲ್‌ಗಳಲ್ಲಿ ಸುಮ್ಮನೆ ಕಾಯುವ ಬದಲು ಅಕ್ಕಪಕ್ಕದಲ್ಲೇ ಅಡ್ಡರಸ್ತೆಗಳಿವೆಯೇ ಎಂದು ಹುಡುಕಿದರಾಯಿತು. ನಿಮಗೊಂದು ಶಾರ್ಟ್‌ಕಟ್ ಕಂಡೇಕಾಣುತ್ತದೆ. ಕೆಲವು ಮುಖ್ಯರಸ್ತೆಗಳು ಇದಕ್ಕೆ ಅಪವಾದ ಎಂಬುದೂ ಅಷ್ಟೇ ಸತ್ಯ.

ಇಂತಹ ಸಣ್ಣ ಒಳದಾರಿಗಳಿಂದ ಒಂದೆರಡು ನಿಮಿಷ ಮಾತ್ರ ಉಳಿಯಬಹುದಾದರೂ, ದಟ್ಟಣೆಯಿಂದ ತಪ್ಪಿಸಿಕೊಂಡ ಸಮಾಧಾನವೂ ಇರುತ್ತದೆ.

ಇಂದು ಅಂಥದ್ದೊಂದು ಸಣ್ಣ ಶಾರ್ಟ್‌ಕಟ್‌ನತ್ತ ಹೋಗೋಣ. ಇದೇನು ತೀರಾ ಅಪರಿಚಿತವಾದ ಒಳದಾರಿಯಲ್ಲ. ಒಮ್ಮೆ ಬಸವನಗುಡಿ ರಾಮಕೃಷ್ಣ ಆಶ್ರಮದ ಬಳಿಯಿಂದ ಚಾಮರಾಜಪೇಟೆ ರಾಮಮಂದಿರ ತಲುಪಬೇಕಿತ್ತು. ಸಮಯ ಸಿಕ್ಕಾಗಲೆಲ್ಲಾ ಕಹಳೆ ಬಂಡೆ ಉದ್ಯಾನದಲ್ಲಿ ಕಾಲ ಕಳೆದು, ಚಾಮರಾಜಪೇಟೆವರೆಗೂ ನಡೆದುಕೊಂಡು ಹೋಗುವುದು ರೂಢಿಯಾಗಿತ್ತು. ರಾಮಕೃಷ್ಣ ಆಶ್ರಮದ ಎದುರು ತಳ್ಳುಗಾಡಿಯಲ್ಲಿ ಮಾರುವ ಚುರುಮುರಿಯ ಪೊಟ್ಟಣ ಹಿಡಿದು, ಹೆಜ್ಜೆ ಹಾಕುತ್ತಿದ್ದರೆ ರಾಮಮಂದಿರ ಬಂದದ್ದೇ ತಿಳಿಯುತ್ತಿರಲಿಲ್ಲ.

ಅಂದೂ ಹಾಗೆಯೇ ರಾಮಕೃಷ್ಣ ಆಶ್ರಮ ತಲುಪಿದೆವು. ಚುರುಮುರಿ ಗಾಡಿಯೇ ಮಾಯ. ಹೊಟ್ಟೆ ತಾಳ ಹಾಕುತ್ತಿತ್ತು. ನಡೆಯಲಂತೂ ಸಾಧ್ಯವೇ ಇರಲಿಲ್ಲ. ರಾಮಮಂದಿರದತ್ತ ಹೋಗುವ ಎಲ್ಲಾ ಬಸ್ಸುಗಳು ರಶ್ಶೋ ರಶ್ಶು. ಮೂವರೂ ಕೈಬೀಸಿ ಒಂದು ನಿಲ್ಲಿಸಿ, ಅದನ್ನೇರಿದೆವು. ಆಗಿನ್ನು ಮಿನಿಮಮ್ ಆಟೊ ಫೇರ್ ರೂ20 ಅಷ್ಟೇ ಇತ್ತು. ಹೀಗಾಗಿ ಆಟೊ ಏರಲು ಅಡ್ಡಿಯಿರಲಿಲ್ಲ.

ಪ್ರತಿದಿನ ನಡೆದುಕೊಂಡು ಹೋಗುವಾಗ, ಉಮಾ ಥಿಯೇಟರ್ ದಾಟಿದರೆ ಸಾಕು, ಫುಟ್‌ಪಾತ್‌ನಲ್ಲೇ ಪಾದಾಚಾರಿಗಳ ದಟ್ಟಣೆ. ಇನ್ನು ರಸ್ತೆಯಲ್ಲಿ ಕೇಳಬೇಕೆ, ರಸ್ತೆ ವಿಭಜಕಗಳಿಲ್ಲದ ಉಮಾ ಥಿಯೇಟರ್ ಬಳಿಯ ಜಂಕ್ಷನ್‌ನಲ್ಲಿ, ಎದುರಿನಿಂದ ಬರುವ ವಾಹನಗಳಿಗೆ ತಾಗದಂತೆ ನಿಲ್ಲುವುದೇ ಸವಾಲು. ಇನ್ನು ರಾಮಮಂದಿರದತ್ತ ತಿರುವು ಪಡೆಯಬೇಕೆಂದರೂ, ಮುಂದೆ ಒಂದು ಬಸ್ ಇದ್ದರೆ ಮುಗಿದೇ ಹೋಯಿತು. ಇಕ್ಕಟ್ಟಿನ ರಸ್ತೆಯಲ್ಲಿ ತಿರುವು ಪಡೆಯಲಾರದೆ, ಎದುರು ನಿಂತ ವಾಹನ ಸರಿಯುವವರೆಗೂ ಬಸ್‍ ಸ್ಥಾವರವೇ ಸರಿ.

ಅಂತೂ ಆಟೊ ಹತ್ತಿಯಾಗಿತ್ತು. ರೂ20ರ ಸಂಪೂರ್ಣ ಪ್ರಯೋಜನ ಪಡೆಯುವುದು ನಮಗೆ ಅನಿವಾರ್ಯವಾಗಿತ್ತು. ಆಟೊ ಫೇರ್ ಮೀಟರ್ ರೂ21 ತೋರಿಸುತ್ತಿದ್ದಂತೆ ಇಳಿಯುವುದೆಂದು ತೀರ್ಮಾನಿಸಿದ್ದೆವು. ಆಟೊ ಹತ್ತಿ ಒಂದೆರಡು ನಿಮಿಷದಲ್ಲೇ ಉಮಾ ಥಿಯೇಟರ್ ಬಳಿ ಬಂದಿದ್ದೆವು. ಅದಾಗಲೇ ಸಿಗ್ನಲ್‍ ಬಿದ್ದಿದ್ದರಿಂದ, ಥಿಯೇಟರ್‌ವರೆಗೂ ವಾಹನಗಳು ಸಾಲುಗಟ್ಟಿದ್ದವು. ಸಿಗ್ನಲ್‌ನಲ್ಲಿ ಕಾಯಬೇಕಲ್ಲಪ್ಪಾ ಎಂದು ಗೊಣಗುವಷ್ಟರಲ್ಲೇ ಅನಿರೀಕ್ಷಿತವಾಗಿ ಆಟೊ ಚಾಲಕ ಉಮಾ ಥಿಯೇಟರ್ ಬಳಿ ಎಡಕ್ಕೆ ಹೊರಳಿದರು. ಅದೇ ರಸ್ತೆಯಲ್ಲಿ ನೇರವಾಗಿ ಸಾಗಿ, ರಸ್ತೆಯ ಅಂಚಿನಲ್ಲಿ ಬಲಕ್ಕೆ ಹೊರಳಿದರು.

ಮುಂದಿನ ಒಂದು ನಿಮಿಷದೊಳಗೆ ಚಾಮರಾಜಪೇಟೆ ರಾಮಮಂದಿರದ ಎದುರು ನಮ್ಮನ್ನು ಇಳಿಸಿದರು. ತಕ್ಷಣಕ್ಕೆ ಅದಕ್ಕಿಂತಲೂ ಮುಂದೆ ಹೋಗುವ ಅವಶ್ಯಕತೆ ನಮಗಿರಲಿಲ್ಲವಾದ್ದರಿಂದ ರೂ20ರ ಸಂಪೂರ್ಣ ಪ್ರಯೋಜನ ಪಡೆಯಲಾಗಲಿಲ್ಲ. ಆದರೆ ಕೇವಲ ಮೂರ್ನಾಲ್ಕು ನಿಮಿಷದಲ್ಲಿ ರಾಮಕೃಷ್ಣ ಆಶ್ರಮದಿಂದ ರಾಮಂದಿರ ತಲುಪಿದ್ದೆವು.
ಬುಲ್‌ಟೆಂಪಲ್ ರಸ್ತೆಯಿಂದ ಮಾಗಡಿ ರಸ್ತೆ, ಮೈಸೂರು ರೋಡ್ ಜಂಕ್ಷನ್, ಸಿರ್ಸಿ ವೃತ್ತ ತಲುಪುವವರು ಈ ಒಳದಾರಿ ಬಳಸಿದರೆ, ಸಮಯವೂ ಉಳಿಯುತ್ತದೆ, ದಟ್ಟಣೆಯೂ ತಗ್ಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT