ADVERTISEMENT

ಇದು ಅಡಿಗರ ಅಂಗಳ

ಮಂಜುಶ್ರೀ ಎಂ.ಕಡಕೋಳ
Published 22 ಮೇ 2017, 19:30 IST
Last Updated 22 ಮೇ 2017, 19:30 IST
ಇದು ಅಡಿಗರ ಅಂಗಳ
ಇದು ಅಡಿಗರ ಅಂಗಳ   

ಕನ್ನಡ ಕಾವ್ಯ ಕ್ಷೇತ್ರದಲ್ಲಿ ನವ್ಯ ಪ್ರಕಾರಕ್ಕೆ ನಾಂದಿ ಹಾಡಿದವರು ಕವಿ ಎಂ. ಗೋಪಾಲಕೃಷ್ಣ ಅಡಿಗ.

ಅಡಿಗರ ಕಾವ್ಯವನ್ನು ಓದದವರು ಅಪರೂಪ. ಕನ್ನಡ ಸಾಹಿತ್ಯ ಲೋಕಕ್ಕೆ ಹೊಸತನ ನೀಡಿದ ಅಡಿಗರ ಕುರಿತು ಫೇಸ್‌ಬುಕ್‌ನಲ್ಲಿ ‘ಅಡಿಗರ ಅಂಗಳ’ ಎನ್ನುವ ವಿಶಿಷ್ಟ ಪುಟವೊಂದನ್ನು ರೂಪಿಸಲಾಗಿದೆ.

ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಕುಂಟಾಡಿ ನಿತೇಶ್ ರೂಪಿಸಿರುವ ಈ ಪುಟದಲ್ಲಿ ಅಡಿಗರ ಸಾಹಿತ್ಯ, ಅಪರೂಪದ ಛಾಯಾಚಿತ್ರಗಳು ಮತ್ತು ಖ್ಯಾತನಾಮರು ಅಡಿಗರನ್ನು ಕುರಿತು ಆಡಿರುವ ಮಾತುಗಳ ವಿಡಿಯೊಗಳಿವೆ.

ADVERTISEMENT

(ಪತ್ನಿಯೊಂದಿಗಿನ ಗೋಪಾಲಕೃಷ್ಣ ಅಡಿಗರ ಅಪರೂಪದ ಚಿತ್ರ)

ಅಡಿಗರ ಅಂಗಳ ಪ್ರವೇಶಿಸುತ್ತಿದ್ದಂತೆ ಅಡಿಗರ ಕಾವ್ಯದ ಸಾಲುಗಳು ಸ್ವಾಗತಿಸುತ್ತವೆ. ಪುಟದಲ್ಲಿನ ಪೋಸ್ಟ್‌ಗಳ ಮೇಲೆ ಕ್ಲಿಕ್ ಮಾಡಿದರೆ ಅಡಿಗರ ಅಂಗಳ ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ. ವೆಬ್‌ಸೈಟ್‌ನಲ್ಲಿ ವಿಸ್ತಾರವಾಗಿರುವ ವಿವರಗಳು ಫೇಸ್‌ಬುಕ್ ಪುಟದಲ್ಲಿ ಸಂಕ್ಷಿಪ್ತವಾಗಿ ದಾಖಲಾಗಿವೆ. ಅಡಿಗರು ಸಂಪಾದಿಸುತ್ತಿದ್ದ ‘ಸಾಕ್ಷಿ’ ಮಾಸಪತ್ರಿಕೆಯ ಹನ್ನೊಂದು ಸಂಚಿಕೆಗಳು ಇಲ್ಲಿ ಓದಲು ಲಭ್ಯ. ಚಿತ್ರಗುಚ್ಛದಲ್ಲಿ ಅಡಿಗರು ಹುಟ್ಟಿ ಬೆಳೆದ ಮನೆ, ಪತ್ನಿಯೊಂದಿಗಿನ ಅಪರೂಪದ ಚಿತ್ರ, ಕುಟುಂಬದ ಸದಸ್ಯರು, ಬಾಲ್ಯ–ಸಂಸಾರ, ಸಭೆ–ಸಮಾರಂಭಗಳು, ಸಾಹಿತಿಗಳ ಸಂಗದಲ್ಲಿ, ಐವತ್ತೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಡಿಗರು ಪಾಲ್ಗೊಂಡಿರುವ ಅಪರೂಪದ ಛಾಯಾಚಿತ್ರಗಳಿವೆ.

‘ಕರಾವಳಿಯಲ್ಲಿ ಕಾರಂತರು, ಅಡಿಗರ ಬಗ್ಗೆ ಜಾಸ್ತಿ ಪ್ರಭಾವವಿತ್ತು. ಅದು ನನ್ನ ಮೇಲೂ ಪ್ರಭಾವ ಬೀರಿದ ಪರಿಣಾಮವೇ ಅಡಿಗರ ಅಂಗಳ ರೂಪಿಸಲು ಪ್ರೇರಣೆಯಾಯಿತು’ ಎನ್ನುತ್ತಾರೆ ಅಡಿಗ ಅಂಗಳದ ರೂವಾರಿ ನಿತೇಶ್‌. 

ಅಡಿಗರ ಕುಟುಂಬದ ಅನುಮತಿ  ಮೇರೆಗೆ ಅವರ ಬರಹ ಮತ್ತು ಚಿತ್ರಗಳನ್ನು ಈ ಪುಟ  ಮತ್ತು  ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ಮಾಹಿತಿ ನೀಡುತ್ತಾರೆ ಅವರು.

‘ನುಡಿಹಾರ’ದಲ್ಲಿ ಖ್ಯಾತ ಲೇಖಕಿ ವೈದೇಹಿ, ಜಿ.ಎಚ್‌.ನಾಯಕ, ಜಯಂತ ಕಾಯ್ಕಿಣಿ, ಟಿ.ಜಿ.ರಾಘವ, ಜಿ. ರಾಜಶೇಖರ,  ಪಟ್ಟಾಭಿರಾಮ ಸೋಮಯಾಜಿ, ಚಂದ್ರಶೇಖರ ಕಂಬಾರ ಮೊದಲಾದವರು ಅಡಿಗರ ಕುರಿತು ಆಪ್ತವಾಗಿ ಆಡಿರುವ ಮಾತುಗಳಿವೆ. ಖ್ಯಾತನಾಮರಿಂದ ಅಡಿಗರ ಪದ್ಯಗಳನ್ನು ಓದಿಸಿ ಅದನ್ನು ವಿಡಿಯೊ ಮಾಡಿ ಫೇಸ್‌ಬುಕ್ ಪುಟದಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಅಡಿಗರ ಬಗ್ಗೆ ಅರಿಯಲು, ಅವರ ಸಮಗ್ರ ಸಾಹಿತ್ಯವನ್ನು ಒಂದೇ ಕಡೆ ಓದಲು ಈ ಪುಟ ಸಹಕಾರಿ.

*

ಫೇಸ್‌ಬುಕ್ ಕೊಂಡಿ: https://www.facebook.com/adigaangala/?hc_ref=NEWSFEED

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.