ADVERTISEMENT

ಕನ್ನಡ ಕಿರುತೆರೆಯ ಹೊಸ ಕಿರಣ

ಆರ್‌.ಜೆ.ಯೋಗಿತಾ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST
ಕನ್ನಡ ಕಿರುತೆರೆಯ ಹೊಸ ಕಿರಣ
ಕನ್ನಡ ಕಿರುತೆರೆಯ ಹೊಸ ಕಿರಣ   

ಹಿಂದಿ ಕಿರುತೆರೆಯಲ್ಲಿ ಸಾಕಷ್ಟು ಅವಕಾಶಗಳಿದ್ದರೂ ತಾಯಿನೆಲದ ಪ್ರೀತಿಯರಸಿ ಕನ್ನಡದ ಕಿರು­ತೆರೆಗೆ ಲಗ್ಗೆ ಇಟ್ಟಿರುವ ಮೈಸೂರಿನ ಹುಡುಗ ಕಿರಣ್‌ ರಾಜ್‌. ಇತ್ತೀಚೆಗೆ ಈ ಟೀವಿ ವಾಹಿನಿಯಲ್ಲಿ ಆರಂಭವಾಗಿರುವ  ‘ದೇವತೆ’ ಧಾರಾವಾಹಿ ಮೂಲಕ ಹೆಂಗ­ಳೆ­ಯರ ಮನಸ್ಸಿಗೆ ಕನ್ನ ಹಾಕಲು ಸಜ್ಜಾಗಿದ್ದಾರೆ.

ಕಿರಣ್‌ ಮೈಸೂರಿನವೇ ಆದರೂ  ಓದಿದ್ದು, ಬೆಳೆದಿದ್ದೆಲ್ಲ ಮಧ್ಯಪ್ರದೇಶದಲ್ಲಿ. ತಂದೆ ಸೇನೆಯಲ್ಲಿದ್ದುದರಿಂದ ಉತ್ತರ­ಭಾರತಕ್ಕೆ ಅವರ ವಾಸ ಬದಲಾಯಿತು.

ನಟನೆ ಬಗ್ಗೆ ಮೊದಲಿನಿಂದಲೂ ಆಸಕ್ತಿ ಇದ್ದರೂ ಓದಿದ್ದು ಬಿಸಿಎ­. ಆನಂತರ ತಮ್ಮ ನೆಚ್ಚಿನ ಅಭಿನಯ ಕ್ಷೇತ್ರದ ಸೆಳೆತ ಮುಂಬೈನ ಜಿ ಇನ್‌ಸ್ಟಿಟ್ಯೂಟ್‌ ಆಫ್‌ ಮೀಡಿಯಾ ಆರ್ಟ್ಸ್‌ ಸೇರುವಂತೆ ಮಾಡಿತು. ಅಲ್ಲಿ ಸಿನಿಮಾ­ಟೊಗ್ರಫಿ, ಟೀವಿ ಪ್ರೆಸೆಂಟೇ­ಷನ್‌, ಧ್ವನಿ ಸಮನ್ವಯತೆಗ­ಳ ತರಬೇತಿ.

ಮೊದಲ ವೃತ್ತಿ ಅನುಭವ
ಜಿ ಇನ್‌ಸ್ಟಿಟ್ಯೂಟ್‌ ಆಫ್‌ ಮೀಡಿಯಾ ಆರ್ಟ್ಸ್‌ನಿಂದ ತರಬೇತಿ ಪಡೆದು ಹೊರಬರುತ್ತಿದ್ದಂತೆಯೇ ಹಿಂದಿ ಧಾರವಾಹಿಗಳಲ್ಲಿ ನಟಿಸುವ ಅವಕಾಶ ಒದಗಿ ಬಂತು. ಸ್ಟಾರ್‌ಪ್ಲಸ್‌ನಲ್ಲಿನ ‘ಯಹ ರಿಶ್ತಾ ಕ್ಯಾ ಕಹಲಾತಾ ಹೈ’, ವಿ ಚಾನೆಲ್‌ನಲ್ಲಿ ‘ಕನ್ಫೆಷನ್ಸ್‌ ಆಫ್‌ ಆ್ಯನ್‌ ಇಂಡಿಯನ್‌ ಟೀನೆಜರ್ಸ್’, ‘ಹೀರೊಸ್‌’ ಮತ್ತು ಬಿಂದಾಸ್‌ ವಾಹಿನಿಯಲ್ಲಿ ಪ್ರಸಾರವಾ­ಗು­ತ್ತಿದ್ದ ‘ಲವ್‌ ಬೈ ಚಾನ್ಸ್‌’ ಧಾರ­ಾಹಿಗಳಲ್ಲಿ ನಟಿಸಿದ ಅನುಭವ ಇವರದು.

ಹೀಗೆ ಮುಂಬೈನಲ್ಲಿದ್ದುಕೊಂಡು ಹಿಂದಿ ಕಿರುತೆರೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದ ಕಿರಣ್‌ ಕರ್ನಾಟಕಕ್ಕೆ ಮರಳಿದ ಸಂಗತಿಯನ್ನು ವಿವರಿಸುವುದು ಹೀಗೆ:

‘ಸೇನಾವೃತ್ತಿಯಿಂದ ನಿವೃತ್ತರಾದ ಮೇಲೆ ಅಪ್ಪ, ಅಮ್ಮ ಮೈಸೂರಿನಲ್ಲಿ ನೆಲೆ­ಯೂರಿದ್ದರು. ನಾನು ನಟನೆಗೋಸ್ಕರ ಮುಂಬೈ­ನ­­ಲ್ಲಿದ್ದೆ.  ಮನೆಯವರೆಲ್ಲರಿಂದ ದೂರ ಇರುವುದು ಕಷ್ಟ ಅನಿಸುತ್ತಿತ್ತು. ಒಂಟಿತನ ಕಾಡುತ್ತಿತ್ತು. ನಾನು ಹುಟ್ಟಿದ ನೆಲದಲ್ಲಿಯೇ ಇದ್ದುಕೊಂಡು ಏನಾದರೂ ಮಾಡೋಣ ಅನ್ನಿಸಿ ಕರ್ನಾಟಕಕ್ಕೆ ಹಾರಿ­ಬಂದೆ.’ ಎಂದು ಹೇಳಿಕೊಳ್ಳುವ ಕಿರಣ್ ಇಲ್ಲಿಗೆ ಬಂದಾಗ ‘ಲೈಫ್‌ ಸೂಪರ್‌ ಗುರು’ ರಿಯಾಲಿಟಿ ಷೋನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು.

ರಿಯಾಲಿಟಿ ಷೋನಲ್ಲಿ ಅವರಿಗೆ ಗೆಲುವು ಸಿಗಲಿಲ್ಲ. ಆದರೆ ಅದರಿಂದ ಹೊರಬಂದ ಮೇಲೆ ಕಿರುತೆರೆಯಿಂದ ಅವಕಾಶಗಳು ಅರಸಿ ಬರತೊಡಗಿದವು. ಹೀಗೆಯೇ ಕಿರುತೆರೆ ನಿರ್ದೇಶಕ ವೆಂಕಟೇಶ ಕೊಟ್ಟೂರು ತಮ್ಮ ಹೊಸ ಧಾರಾವಾಹಿ ‘ದೇವತೆ’ಯಲ್ಲಿ ಅವಕಾಶ ಕೊಟ್ಟರು.

ಹಿಂದಿ ಕಿರುತೆರೆಗೂ ಕನ್ನಡಕ್ಕೂ ನಡುವೆ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದು ಕಿರಣ್‌ ಅನುಭವದ ಮಾತು.
‘ಹಿಂದಿ ಧಾರವಾಹಿಗಳಿಗೂ ಕನ್ನಡಕ್ಕೂ ತುಂಬಾ ವ್ಯತ್ಯಾಸ ಇದೆ. ನಟಿಸಿ ಸೆಟ್‌ನಿಂದ ಹೊರಬಂದ ಮೇಲೆ ಅಲ್ಲಿರುವವರಿಗೂ ನಮಗೂ ಯಾವುದೇ ಸಂಬಂಧ ಇರುವುದಿಲ್ಲ. ಪಾತ್ರ ಮುಗಿದ ಮೇಲೆ ಅಂದಿನ ನಮ್ಮ ಕೆಲಸ ಮುಗಿದ ಹಾಗೆ. ಪಕ್ಕಾ ವೃತ್ತಿಪರತೆ ಅಲ್ಲಿಯದು.

ಆದರೆ ಇಲ್ಲಿ ಹಾಗಲ್ಲ, ಧಾರಾವಾಹಿ ತಂಡ ಎಂದರೆ ಕೂಡು ಕುಟುಂಬ ಇದ್ದ ಹಾಗಿದೆ. ಸಣ್ಣ ಪಾತ್ರಧಾರಿಯೂ ಕುಟುಂಬದ ಸದಸ್ಯ­ನಾಗಿರುತ್ತಾನೆ. ನನಗೆ ಕನ್ನಡ ಸರಿಯಾಗಿ ಬರದಿದ್ದರೂ ಇಲ್ಲಿ ಎಲ್ಲರೂ ಸಹಕರಿಸಿ, ನನ್ನ ನಟನೆಗೆ ನೆರವಾ­ಗುತ್ತಾರೆ. ನನ್ನ ಸಹ ಕಲಾವಿದೆಯೂ ಸಹ ನನ್ನ ತಪ್ಪುಗಳನ್ನು ಗ್ರಹಿಸಿ, ಅದನ್ನು ನನಗೆ ತಿಳಿಸುತ್ತಾರೆ. ಒಟ್ಟಿನಲ್ಲಿ ಕುಟುಂಬ­ದೊಂದಿಗೆ ಇರುವ ಭಾವ ನನ್ನಲ್ಲಿ ಮೂಡಿದೆ. ಇದೇ ರೀತಿ ಹಿಂದಿ ಧಾರಾ­ವಾಹಿಗಳಲ್ಲಿ ಇದ್ದಿದ್ದರೆ ನನಗೆ ಒಂಟಿತನ ಕಾಡುತ್ತಿರಲಿಲ್ಲವೇನೋ.’ ಎನ್ನುತ್ತಾರೆ.

ಹಿರಿತೆರೆಯತ್ತ ದೃಷ್ಟಿ
ಸದ್ಯಕ್ಕೆ ಕಿರುತೆರೆ ನಟನೆಯತ್ತಲೇ ಗಮನ ನೆಟ್ಟಿರುವ ಕಿರಣ್‌ಗೆ ಮುಂದೆ ಸಿನಿಮಾ ಜಗತ್ತಿನತ್ತ ಪಯಣ ಬೆಳೆಸುವ ಅಭಿಲಾಷೆಯೂ ಇದೆ. ‘ಖಂಡಿತ ಸಿನಿಮಾದಲ್ಲಿ ನಟಿಸುವ ಆಸೆ ಇದೆ. ಆದರೆ ನಟನೆಯಲ್ಲಿ ನಾನಿನ್ನು ಪಕ್ವಗೊಳ್ಳಬೇಕು. ನಂತರ ಸಿನಿಮಾದಲ್ಲಿ ಅಭಿನಯ’ ಎನ್ನುವುದು ಕಿರಣ್ ನಿಲುವು.

ದೇಹಾಕಾರದ ಆಯಾಮಗಳು
ಕಿರಣ್ ಫಿಟ್‌ನೆಸ್‌ಗಾಗಿ ಸಿಕ್ಕಾಪಟ್ಟೆ ತಲೆಕೆಡಿಸಿಕೊಳ್ಳುತ್ತಾರೆ. ಪ್ರತಿದಿನ ತಪ್ಪದೇ ವರ್ಕ್ಔಟ್‌ ಮಾಡುತ್ತಾರೆ.
ಆಹಾರ ವಿಷಯದಲ್ಲೂ ಅಷ್ಟೇ, ಹೊರಗಡೆ ತಿನ್ನುವುದು ಕಡಿಮೆ. ಎಣ್ಣೆ ಪದಾರ್ಥಗಳಿಂದ ಮೈಲಿ ದೂರ. ಹಣ್ಣುಗ­ಳನ್ನು ಸಾಕೆನ್ನುವಷ್ಟು ಸೇವಿಸುತ್ತಾರೆ.

ಮುಖದ ಕಾಂತಿಯತ್ತಲೂ ಇವರ ಕಾಳಜಿ ಹೆಚ್ಚು. ‘ಹುಡುಗಿಯರಿಗಿಂತ ತುಸು ಜಾಸ್ತಿಯೇ ತ್ವಚೆಯ ಬಗ್ಗೆ ಚಿಂತಿಸುತ್ತೇನೆ. ಮತ್ತು ಅದಕ್ಕಾಗಿ ಕಸರತ್ತು ನಡೆಸುತ್ತೇನೆ. ತ್ವಚೆ ಕಾಪಾಡಿಕೊಳ್ಳಲು ಮನೆಯಲ್ಲೇ ಸಾಧ್ಯವಾದ ಮಟ್ಟಿಗೆ ಫೇಸ್‌ಪ್ಯಾಕ್‌, ಫೇಸ್‌ ಮಸಾಜ್‌ ಇತ್ಯಾದಿ ಮಾಡಿಕೊಳ್ಳುತ್ತಿರುತ್ತೇನೆ. ಆಗಾಗ  ಫೇಶಿ­ಯಲ್‌ ಮಾಡಿ­ಸು­ತ್ತಿರುತ್ತೇನೆ.’ ಎಂದು ತಮ್ಮ ರೂಪಪ್ರೀತಿಯ ಆಯಾಮಗಳನ್ನು ಬಿಚ್ಚಿಡುತ್ತಾರೆ ಕಿರಣ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.