ADVERTISEMENT

ಕವಿ ಕಂಡ ಬೆಂಗಳೂರು ಚಳಿ

ಹೇಮಾ ವೆಂಕಟ್
Published 7 ನವೆಂಬರ್ 2013, 19:30 IST
Last Updated 7 ನವೆಂಬರ್ 2013, 19:30 IST

ಮೊದಲ ಮಳೆಗೊಂದು, ಮಾಗಿಯ ಚಳಿಗೊಂದು ಕವಿತೆ ಬರೆಯದ ಕವಿಗಳಿಲ್ಲ. ಸದಾ ಹೊಸತನದ ಹುಡುಕಾಟದಲ್ಲಿರುವ ಕವಿಮನಸು ನಿಸರ್ಗದ ರಮ್ಯತೆಗೆ ತೆರೆದುಕೊಳ್ಳುವ ಬಗೆ ಕವಿತೆಯಾಗುತ್ತದೆ. ಪ್ರೇಮ ಕವಿತೆಗಳು ಹುಟ್ಟುವುದೇ ಚಳಿಗಾಲದಲ್ಲಿ ಎಂದರೂ ತಪ್ಪಲ್ಲ. ಕವಿತೆಯನ್ನೇ ಬಾಳುತ್ತಿರುವ ಕನ್ನಡದ ಕವಿಗಳು ಬೆಂಗಳೂರು ಚಳಿಯನ್ನು ಬಗೆ ಬಗೆಯಲ್ಲಿ ಭಾವಿಸಿದ್ದಾರೆ.

ಬೆಂಗಳೂರು ಹಿಂದೆ ಹೇಗಿತ್ತು, ಈಗ ಹೇಗಾಯ್ತು ಎಂದು ಅವಲೋಕಿಸಿದಾಗ ಒಂದಷ್ಟು ನಿರಾಸೆ, ಇನ್ನೊಂದಿಷ್ಟು ಖುಷಿ ಒಟ್ಟಿಗೇ ಆಗುತ್ತದೆ. ಕೆಂಪೇಗೌಡ ಕಟ್ಟಿದ ಬೆಂಗಳೂರು ಹೇಗಿತ್ತು, ಕಟ್ಟಿಸಿದ ಕೆರೆಗಳು ಎಲ್ಲಿ ಮಾಯವಾದವು, ಸಾಲುಮರಗಳು ಎತ್ತ ಸಾಗಿದವು, ತಲೆ ಎತ್ತಿ ನಿಂತ ಕಾಂಕ್ರೀಟು ಕಟ್ಟಡಗಳು, ಬದಲಾದ ಹವಾಮಾನ ಇವಕ್ಕೆಲ್ಲ ಸಾಕ್ಷಿಯಾಗಿ ಬೆಂಗಳೂರಿನ ಹಿರಿಜೀವಗಳಿವೆ.

ಅದರಲ್ಲೂ ಹತ್ತಾರು ದಶಕಗಳಿಂದ ಬೆಂಗಳೂರಿನಲ್ಲೇ ನೆಲೆನಿಂತ ಸೃಜನಶೀಲ ಕವಿಗಳು ಇಲ್ಲಿನ ಚಳಿಗಾಲವನ್ನು ಹೇಗೆ ಕಂಡಿದ್ದಾರೆ, ಅವರೊಳಗೆ ಗರಿಬಿಚ್ಚಿದ ಬೆಚ್ಚನೆಯ ಭಾವ, ಅವರು ಕಂಡ ಮೊದಲ ಚಳಿಗಾಲ ಹೇಗಿತ್ತು ಎಂದು ಅವರನ್ನೇ ಕೇಳಿದಾಗ ಮಿಶ್ರಭಾವ. ಇಡೀ ಬೆಂಗಳೂರಿನ ಅಂತರಂಗ ಬಹಿರಂಗದ ಪಲ್ಲಟವನ್ನು ಕಂಡ ಕವಿಗಳು ಬಣ್ಣಿಸಿದ್ದಾರೆ.

ಚಳಿ ಬಿಟ್ಟಿದೆ

ADVERTISEMENT

ಅಗಲವಾದ ರಸ್ತೆಗಳು/ರಸ್ತೆಗಳ ಮೇಲಿರುವ ಕಾರುಗಳು/ಈ ಕಾರುಗಳು ಅವಸರದಲ್ಲಿ ಮಾಡುವ ಚೀತ್ಕಾರಗಳು/ ಬೆಂಗಳೂರನ್ನು ಚಳಿಯಿಂದ ಬಿಡಿಸಿದೆ ಎನ್ನುತ್ತಾ ಇಡೀ  ಬೆಂಗಳೂರಿನ ಸ್ಥಿತಿಯನ್ನು ಆಶುಕವಿತೆಯ ಮೂಲಕ ಕಟ್ಟಿಕೊಡುತ್ತಾರೆ.

ಹಳ್ಳಿಯಲ್ಲಿ ಮಕ್ಕಳನ್ನು ಹೆದರಿಸಲು ‘ನಿನ್ನ ಚಳಿ ಬಿಡಿಸುತ್ತೇನೆ’ ಎಂದು ಹಿರಿಯರು ಹೆದರಿಸುತ್ತಾರೆ. ಹಾಗೇ ಈಗ ಬೆಂಗಳೂರಿನ ಚಳಿ ಬಿಟ್ಟಿದೆ ಎನ್ನುವ ಡಾ.ಯು.ಆರ್‌. ಅನಂತಮೂರ್ತಿ. ಇನ್ನೇನು ಹೇಳಲಿ, ಇಲ್ಲಿ ಎಲ್ಲವೂ ಕಡಿಮೆಯಾಗುತ್ತಿದೆ; ಚಳಿ ಮಾತ್ರವಲ್ಲ ಎಂದು ಮಾತು ನಿಲ್ಲಿಸುತ್ತಾರೆ.

ಒಂದಾಗುವ ಕಾಲ

ಬೆಂಗಳೂರಿನ ಪಾಲಿಗೆ ಚಳಿಗಾಲಕ್ಕಿಂತ ಸುಂದರವಾದ ಋತುವಿಲ್ಲ. ಚಳಿಗಾಲ ಎಲ್ಲರನ್ನೂ ಹತ್ತಿರ ತರುತ್ತದೆ. ದೂರ ಮಾಡುವ ಬೇಸಿಗೆಯಂತಲ್ಲ. ದೂರಾದವರು ವಿರಹವೇದನೆಯಿಂದ ಉರಿಯುವ ಕಾಲವಿದು. ಚಳಿಗಾಲ ಸುಂದರ ನೆನಪುಗಳನ್ನು ಕೆದಕುತ್ತದೆ.

ಬಿಸಿಬಿಸಿಯಾಗಿಡುತ್ತದೆ. ಆದರೆ ದಶಕಗಳ ಕಾಲ ಬೆಂಗಳೂರಿನ ಚಳಿಗಾಲವನ್ನು ಅನುಭವಿಸಿ ವಯಸ್ಸಾಗಿರುವ ನನಗೆ ಈಗ ಚಳಿ ಹೆಚ್ಚಾದಂತೆ ಅನಿಸುತ್ತದೆ. ಆದರೆ ಅದು ವಾಸ್ತವವಲ್ಲ. ದೇಹದಲ್ಲಿ ಧಾರಣ ಶಕ್ತಿ ಕಡಿಮೆಯಾದಂತೆ ಎಲ್ಲವೂ ತೀಕ್ಷ್ಣ ಅನಿಸುತ್ತದೆ.

ಈಗ ಬೆಂಗಳೂರಿನ ಚಳಿ ಭಯ ಹುಟ್ಟಿಸುತ್ತದೆ. ಚಳಿಗಾಲದ ಕುರಿತ ಕವಿತೆಯ ಒಂದು ಸಾಲು ಈಗ ನೆನಪಾಗುತ್ತಿದೆ. ಶಿಶಿರದಲಿ ತಟತಟನೆ ಉದುರು ಎಲೆ ನೋಡುತ್ತಾ/ ನಡುಗಿತ್ತು ಮೈ ಕವಿ ವಾಲ್ಮೀಕಿಗೆ
ಅಂತಹ ಚಳಿ ಬೆಂಗಳೂರಿನಲ್ಲಿ ಇತ್ತು.
  -ಎಚ್‌.ಎಸ್‌.ವೆಂಕಟೇಶ ಮೂರ್ತಿ.

ಕರ್ತವ್ಯ ಮರೆತ ಋತು

ನಿತ್ಯೋತ್ಸವದ ಕವಿ ನಿಸಾರ್‌ ಅಹಮದ್ ಅವರಿಗೆ ಬೆಂಗಳೂರಿನ ಬದಲಾದ ವಾತಾವರಣ ಭ್ರಮ ನಿರಸನ ಮೂಡಿಸಿದೆ. ಅವರು ಹೇಳುತ್ತಾರೆ, ‘1960ರ ದಶಕದಲ್ಲಿ ಇದ್ದ ವಾತಾವರಣ ಈಗಿಲ್ಲ. ಋತುವೂ ತನ್ನ ಕರ್ತವ್ಯ ಮರೆತಿದೆ. ಇಲ್ಲಿನ ಮಳೆ ವಿಚಿತ್ರವಾಗಿದೆ. ಮಳೆ ಬಂದರೆ ಕಂಟಕ ತರುತ್ತದೆ. ಬಿಸಿಲೂ ವಿಪರೀತವಾಗಿ ಸುಡುತ್ತಿದೆ. ರಸ್ತೆಗಳಲ್ಲಿ ಕಾಲಿಡಲೂ ಆಗದಷ್ಟು ವಿದೇಶಿ ವಾಹನಗಳು ತುಂಬಿ ಹೋಗಿವೆ.

ಒಂದೆಡೆ ನಗರೀಕರಣಕ್ಕೆ ಮರಗಳು ಬಲಿಯಾಗಿವೆ. ಮತ್ತೊಂದು ಕಡೆ ಯಾಂತ್ರೀಕರಣದಿಂದ ಹೊಗೆ ಓಝೋನ್‌ ಪದರವನ್ನೇ ಹಾಳುಗೆಡವಿದೆ. ಇದು ಹವಾಮಾನದ ಮೇಲೂ ಪ್ರಭಾವ ಬೀರಿದೆ. ಮಾಸ್ತಿ ಅವರನ್ನು ಚಳಿಗೆ ಹೋಲಿಸಿ ಕವಿತೆ ಬರೆದಿದ್ದೆ ಎಂದು ನೆನಪು ಮಾಡಿಕೊಳ್ಳುತ್ತಾರೆ ನಿಸಾರ್‌. 

ಇವರು ನನ್ನೆದುರಲ್ಲಿ ಹಾದುಹೋದಾಗಲೆಲ್ಲ ಹಳ್ಳಿಗಾಡಿನ ಕಡೆಯ ಸುಪ್ರಸನ್ನತೆಯೊಂದು ನಗರಕ್ಕೆ ಸಂದಂತೆ/ ಬೆಳಗಾದ ಚಳಿಯನ್ನು ಬಿಸಿನೀರು ಮಿಂದಂತೆ ಎದೆ ಸ್ವಚ್ಛಗೊಳ್ಳುತ್ತದೆ. ಹಗುರಕ್ಕೆ ಸಲ್ಲುತ್ತದೆ.

ಚಳಿ ಈಗ ನೆನಪಷ್ಟೇ

ಪ್ರತಿಭಾ ನಂದಕುಮಾರ್ ಅವರು ಚಳಿಯ ಬಗ್ಗೆ ಅನೇಕ ಕವಿತೆ ಬರೆದಿದ್ದಾರೆ. ಆದರೆ ಈಗ ಚಳಿ ನೆನಪಷ್ಟೇ ಅಂತಾರೆ. ‘1969ರಲ್ಲಿ ಮೈಸೂರು ಬಿಟ್ಟು ಬೆಂಗಳೂರಿಗೆ ಬಂದಾಗ ಮೊದಲು ಕಂಡ ಚಳಿಗಾಲ ಜಿ.ಪಿ.ರಾಜರತ್ನಂ ಅವರ ಮಡಿಕೇರಿ ಮೇಲ್‌ ಮಂಜು ಸಾಲುಗಳನ್ನು ನೆನಪಿಗೆ ತಂದಿತ್ತು. ವಾಕಿಂಗ್‌ ಹೋಗುವಾಗ ಹತ್ತಡಿ ದೂರದಲ್ಲಿದ್ದವರು ಕಾಣುತ್ತಿರಲಿಲ್ಲ.

ರಾಗಿ--ಗುಡ್ಡದಿಂದ ಆಚೆಗೇನೂ ಇರಲಿಲ್ಲ. ಮಂಜು, ಹಿತಕರವಾದ ಅನುಭವ. ಬರಬರುತ್ತಾ ಮಂಜಿನ ಬದಲಿಗೆ ಹೊಗೆ ಆವರಿಸಿದೆ. ನವೆಂಬರ್‌ ಬರುತ್ತಿದ್ದಂತೆ ಶಾಲು, ಸ್ವೆಟರ್‌ ಹೊರತೆಗೆಯುವುದೇ ಸಂಭ್ರಮವಾಗಿತ್ತು. ಈಗ ಅದೆಲ್ಲ ಬಳಸದೇ ಚಳಿಗಾಲ ಕಳೆಯುತ್ತಿದೆ. ಚಳಿ ಇಲ್ಲದ ಊರಿನಿಂದ ನಗರಕ್ಕೆ ಬಂದವರಿಗೆ ಮಾತ್ರ ಸ್ವಲ್ಪ ಚಳಿ ಎನಿಸುತ್ತಿದೆ. ಆದರೂ ಕೆಲವೊಮ್ಮೆ ಬೆಳಿಗ್ಗೆ ಬಾಗಿಲು ತೆರೆದಾಗ ಮಂಜು ಕಂಡರೆ ಹಿಂದಿನ ನೆನಪು ಬರುತ್ತದೆ’ ಎನ್ನುತ್ತಾರೆ.

ಗುಂಡಿನ ಕಾಲ
ಕವಿ ಬಿ.ಆರ್. ಲಕ್ಷ್ಮಣ ರಾವ್‌ಗೆ ಚಳಿಗಾಲ ತುಂಬ ಇಷ್ಟವಂತೆ. ಯಾಕೆಂದರೆ, ಚೆನ್ನಾಗಿ ಗುಂಡುಹಾಕಿ ಆರಾಮಾವಾಗಿ ಇರಬಹುದು ಎನ್ನುತ್ತಾರೆ. ಹಿಮದ ಮಬ್ಬು ತರುವ ಚಳಿಗಾಲ ಹಿತಕರವಾಗಿತ್ತು.

ಈಗೆಲ್ಲ ಅದು ನೆನಪಷ್ಟೇ ಎನ್ನುವ ತುಂಟ ಕವಿ ಚಳಿಯ ಕುರಿತು ಬಿಳಿ ತೊಗಲ ಚಿಣ್ಣರಿಗೆ ಬಿಳಿಯ ಸಾವಾಗಿ/ಕರಿತೊಗಲ ಮಣ್ಣರಿಗೆ ತಂಪು ಹಾವಾಗಿ/ತುಂಟ ಸೊಂಟದ ಒಂಟಿ ಜಂಟಿನಿ/ಅವಳಿಮುಖದವಳಿ ಚಳಿ ಎಂದು ಬರೆಯುತ್ತಾರೆ.

ಸ್ಫೂರ್ತಿ ನೀಡಿಲ್ಲ

ಮಲೆನಾಡಿನ ಕವಿ ಸುಬ್ಬು ಹೊಲೆಯಾರ್‌ಗೆ ನಗರದ ಚಳಿ ಯಾವುದೇ ಸ್ಫೂರ್ತಿ ನೀಡಿಲ್ಲ ವಂತೆ. ಅವರು ಹೇಳುತ್ತಾರೆ,‘ಚಳಿಗಾಲ ಎಂದ ತಕ್ಷಣ ಲಂಕೇಶ್‌ ಮೇಸ್ಟ್ರು ನೆನಪಾಗುತ್ತಾರೆ. ಅವರು ಚಳಿಯನ್ನು ಇನ್ನಿಲ್ಲದಂತೆ ಪ್ರೀತಿಸುತ್ತಿದ್ದರು. ಗೆಳೆಯರನ್ನು ಕರೆದು ಗುಂಡಿನ ಪಾರ್ಟಿ ಮಾಡುತ್ತಿದ್ದರು.

ಆದರೆ ಮಲೆನಾಡಿನ ಚಳಿ ನಿಜಕ್ಕೂ ಸ್ಪೂರ್ತಿ ನೀಡುತ್ತದೆ. ಬೆಂಗಳೂರು ಚಳಿ ಭಯ ಹುಟ್ಟಿಸುತ್ತದೆ. 23 ವರ್ಷದಿಂದ ಇಲ್ಲಿದ್ದೇನೆ. ಇಲ್ಲಿನ ಚಳಿಗಾಲವಾಗಲಿ, ಮಳೆಗಾಲವಾಗಲಿ ಮನುಷ್ಯಪರವಾಗಿಲ್ಲ. ಮರ ಕಡಿಯುತ್ತಿರುವ ಬಗ್ಗೆ ‘ನನ್ನನ್ನೇಕೆ ಕಡಿಯುತ್ತಿ ಎಂಬುದನ್ನು ಮರ ಕೇಳಬೇಕು. ಹೊಟ್ಟೆಲಿರುವ ಮಗು ಮಾತಾಡಬೇಕು’ ಎಂದು ಮಾರ್ಮಿಕವಾಗಿ ಹೇಳುತ್ತಾರೆ.

ಆಡಂಬರಕ್ಕೆ ಒಳಗಾಗಿದೆ
‘ನಾಗರೀಕತೆಯ ಮುಂದೆ ಸಂಸ್ಕೃತಿ ಸೋಲುತ್ತೆ ಎಂಬ ದಾರ್ಶನಿಕರ ಮಾತು ಬೆಂಗಳೂರಿಗೆ ಹೇಳಿದಂತಿದೆ ಎನ್ನುತ್ತಾರೆ ಹಿರಿಯ ಕವಿ ಸಾ.ಶಿ. ಮರುಳಯ್ಯ.ಕಳೆದ ಮೂವತ್ತಾರು ವರ್ಷಗಳಿಂದ ನಗರದ  ಬದಲಾವಣೆ ಕಂಡಿದ್ದೇನೆ. ಹಿಂದೆ ಹಿತವಾದ ಚಳಿ ಇತ್ತು. ಮನೆಗಳು ಕಡಿಮೆ ಇದ್ದವು. ಸಾಲುಮರಗಳ ಅಡಿಯಲ್ಲಿ ಹಿತವಾದ ಹೆಜ್ಜೆ ಹಾಕುತ್ತಿದ್ದೆವು. ಸಾಲು ಸಾಲು ತೆಂಗಿನ ಮರಗಳಿದ್ದವು.

ಮನೆ ಮನೆ ಮುಂದೆ ಬಾವಿಗಳಿದ್ದವು. ಈಗ ಜಲವರ್ಗ ಬತ್ತಿದೆ. ನಾನು ಕಂಡಂತೆ ಶೇ 99 ಮರಗಳು ನಾಶವಾಗಿದೆ. ರಸ್ತೆ ಬದಿ ನಡೆಯುವಂತಿಲ್ಲ. ನೈಸರ್ಗಿಕ ಮರಗಳನ್ನು ಕಡಿದು ಕಸ ಉದುರಿಸುವ ಮರಗಳನ್ನು ನೆಟ್ಟಿದ್ದಾರೆ. ಪಾತಾಳಕ್ಕಿಳಿವ ಬೇರುಗಳಿಲ್ಲ. ಮಳೆಗೆ ಮರಗಳೆಲ್ಲ ಧರೆಗಿಳಿಯುತ್ತಿವೆ. ಭವಿಷ್ಯದ ಬಗ್ಗೆ ಯೋಚಿಸಿದರೆ ನಗರದ ಸ್ಥಿತಿ ಗಂಭೀರವಾಗಲಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.