ADVERTISEMENT

ಕಾಶಿ ಯಾತ್ರೆಗೆ ವಿಶೇಷ ರೈಲು

ಸತೀಶ ಬೆಳ್ಳಕ್ಕಿ
Published 12 ಫೆಬ್ರುವರಿ 2016, 5:30 IST
Last Updated 12 ಫೆಬ್ರುವರಿ 2016, 5:30 IST
ಕಾಶಿ ಯಾತ್ರೆಗೆ ವಿಶೇಷ ರೈಲು
ಕಾಶಿ ಯಾತ್ರೆಗೆ ವಿಶೇಷ ರೈಲು   

ಪವಿತ್ರ ಗಂಗಾ ನದಿಯ ತಟದಲ್ಲಿರುವ ಕಾಶಿ ಭಕ್ತಿಭಾವಗಳ ತೊಟ್ಟಿಲು. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬ ಹಿಂದೂವಿಗೂ ಒಮ್ಮೆಯಾದರೂ ಕಾಶಿಗೆ ಹೋಗಬೇಕು, ಗಂಗೆಯಲ್ಲಿ ಮಿಂದು ತಮ್ಮ ಪಾಪ ಕರ್ಮಗಳನ್ನೆಲ್ಲಾ ತೊಳೆದುಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ. ಭಕ್ತಿ ಪ್ರವಾಸಕ್ಕೆ ಕಾಶಿ ಜನಪ್ರಿಯವಾಗಿರುವಂತೆ, ಪಿತೃಗಳಿಗೆ ಮೋಕ್ಷ ಕರುಣಿಸುವ ಜಾಗವಾಗಿ ಗಯಾ ಪ್ರಸಿದ್ಧಿ ಪಡೆದಿದೆ.

ಸಾಮಾನ್ಯವಾಗಿ ಜನರು ಐವತ್ತು ವರ್ಷ ದಾಟಿದ ನಂತರ ಕಾಶಿ ಯಾತ್ರೆ ಕೈಗೊಳ್ಳುವ ಇಚ್ಛೆ ಹೊಂದಿರುತ್ತಾರೆ. ಪತಿ–ಪತ್ನಿ ಅಥವಾ ಸಮಾನ ವಯಸ್ಸಿನ ಗೆಳೆಯರೊಂದಿಗೆ ಪ್ರತ್ಯೇಕವಾಗಿ ಕಾಶಿ ಯಾತ್ರೆ ಕೈಗೊಳ್ಳುವುದು ದುಬಾರಿಯ ವಿಚಾರ. ಪ್ರತ್ಯೇಕವಾಗಿ ಹೋದರೆ ವಿಮಾನ/ರೈಲಿನ ಟಿಕೆಟ್‌ ಚಾರ್ಜು, ಊಟ–ತಿಂಡಿ, ವಸತಿ, ಸ್ಥಳೀಯವಾಗಿ ಬಸ್‌ನಲ್ಲಿ ಓಡಾಟ ಹೀಗೆ ಎಲ್ಲದಕ್ಕೂ ತುಂಬ ಹಣ ಖರ್ಚಾಗುತ್ತದೆ. ಎಲ್ಲರಿಗೂ ಅಷ್ಟು ಹಣ ಖರ್ಚು ಮಾಡಿ ಕಾಶಿ ಯಾತ್ರೆ ಮಾಡುವ ಸಾಮರ್ಥ್ಯ ಇರುವುದಿಲ್ಲ. ದೇಹದ ಕಸುವು ಕಳೆದುಕೊಂಡ ನಂತರ ಪ್ರತ್ಯೇಕವಾಗಿ ಯಾತ್ರೆ ಕೈಗೊಳ್ಳುವುದು ಸುರಕ್ಷೆಯ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಈ ಎಲ್ಲ ಕಾರಣಗಳಿಂದ ಅನೇಕರು ಪ್ಯಾಕೇಜ್‌ ಟೂರ್‌ ಮಾಡಲು ತುಂಬ ಆಸಕ್ತಿ ವ್ಯಕ್ತಪಡಿಸುತ್ತಾರೆ. ಹೀಗೆ ಮಾಡುವುದರಿಂದ ಸುರಕ್ಷೆಯ ಜೊತೆಗೆ ಹಣ ಉಳಿತಾಯದ ಲಾಭವೂ ಇದೆ.

ಕಾಶಿ ಯಾತ್ರೆಯ ಸೌಭಾಗ್ಯ ಎಲ್ಲರಿಗೂ ಲಭ್ಯವಾಗಬೇಕು ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡು ನಗರದ ಹೆರಿಟೇಜ್‌ ಇಂಡಿಯಾ ಟ್ರಸ್ಟ್‌ ‘ಕಾಶಿ ಯಾತ್ರೆ’ ಎಂಬ ರೈಲು ಪ್ರವಾಸ ಆಯೋಜಿಸಿದೆ. ಈ ಯಾತ್ರೆಯ ವಿಶೇಷತೆ ಏನೆಂದರೆ, ನೈಋತ್ಯ ರೈಲ್ವೆ ಜೊತೆಗೆ ಹೆರಿಟೇಜ್‌ ಇಂಡಿಯಾ ಕೈಜೋಡಿಸಿ, ಕಾಶಿ ಯಾತ್ರಾರ್ಥಿಗಳಿಗಾಗಿಯೇ ಒಂದು ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ. ಈ ರೀತಿ ರೈಲಿನಲ್ಲಿ ಕಾಶಿ ಯಾತ್ರೆ ಆಯೋಜಿಸಿರುವುದು ಕರ್ನಾಟಕದಲ್ಲಿ ಇದೇ ಮೊದಲು. ಈ ರೈಲಿನಲ್ಲಿ ಕಾಶಿ ಯಾತ್ರಾರ್ಥಿಗಳನ್ನು ಹೊರತುಪಡಿಸಿದರೆ ಮತ್ತಿನ್ಯಾವ ಪ್ರಯಾಣಿಕರೂ ಇರುವುದಿಲ್ಲ. ಕಾಶಿ ತಲುಪುವವರೆಗೂ ಈ ರೈಲು ಯಾವ ನಿಲ್ದಾಣದಲ್ಲೂ ನಿಲ್ಲುವುದಿಲ್ಲ. 18 ಬೋಗಿಗಳನ್ನು ಹೊಂದಿರುವ ಈ ರೈಲು 1080 ಯಾತ್ರಾರ್ಥಿಗಳನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿದೆ.

ಕಾಶಿ ಯಾತ್ರೆಗೆ ಸಿದ್ಧಗೊಂಡಿರುವ ವಿಶೇಷ ರೈಲು ಏಪ್ರಿಲ್‌ 23ರಂದು ರಾತ್ರಿ 10ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ಈ ಪ್ಯಾಕೇಜ್‌ ಟೂರ್‌ನಲ್ಲಿ ಹಲವು ವಿಶೇಷತೆಗಳಿವೆ. ರೈಲು ಪ್ರಯಾಣದಿಂದ ಆರಂಭಗೊಳ್ಳುವ ಸವಲತ್ತುಗಳು ಶುದ್ಧ ಸಸ್ಯಾಹಾರಿ ಊಟ, ತಿಂಡಿ (ಬೆಡ್‌ ಟೀ, ಕಾಫಿ, ಉಪಹಾರ, ಟೀ, ಕಾಫಿ, ಮಧ್ಯಾಹ್ನದ ಊಟ, ಸಂಜೆಯ ಕಾಫಿ, ಟೀ ಹಾಗೂ ರಾತ್ರಿ ಊಟ)ವರೆಗೂ ವಿಸ್ತರಣೆಗೊಂಡಿರುತ್ತದೆ. ಕಾಶಿ, ಗಯಾ, ಬೋಧ್‌ಗಯಾ ಪ್ರವಾಸವನ್ನು ಇದು ಒಳಗೊಂಡಿದೆ. ಬೆಂಗಳೂರಿನಿಂದ ಹೊರಟ ಈ ರೈಲು ಏಪ್ರಿಲ್‌ 25ರ ಸಂಜೆ ಸಂಜೆ 6 ಗಂಟೆಗೆ ಕಾಶಿ ರೈಲ್ವೆ ನಿಲ್ದಾಣ ತಲುಪಲಿದೆ.

ಕಾಶಿ ಪುರಪ್ರವೇಶ ಆದ ನಂತರ ಯಾತ್ರಾರ್ಥಿಗಳು ರೈಲು ನಿಲ್ದಾಣದಿಂದ ಮೊದಲೇ ಕಾಯ್ದಿರಿಸಿದ ಅಚ್ಚುಕಟ್ಟಾದ ವಸತಿ ಗೃಹಕ್ಕೆ ತೆರಳಿ ಅಲ್ಲಿ ಸ್ನಾನಾದಿಗಳನ್ನು ಪೂರೈಸಿ, ಗಂಗಾ ನದಿ ತಟದಲ್ಲಿನ ದಶಾಶ್ವಮೇಧ ಘಾಟ್‌ನಲ್ಲಿ ವಿಶ್ವ ಪ್ರಸಿದ್ಧ ‘ಗಂಗಾ ಆರತಿ’ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಲಾಗಿರುತ್ತದೆ. ಭಕ್ತರೆಲ್ಲರೂ ಗಂಗಾ ಆರತಿ ಕಣ್ತುಂಬಿಕೊಂಡು ಪುಳಕಿತರಾಗಬಹುದು. ಆನಂತರ ಊಟ ಪೂರೈಸಿ ವಸತಿಗೃಹದಲ್ಲಿ ವಿಶ್ರಾಂತಿ ತೆಗೆದುಕೊಳ್ಳಬಹುದು.

ಏಪ್ರಿಲ್‌ 26ರ ಬೆಳಿಗ್ಗೆ 6ಕ್ಕೆ ಗಂಗಾನದಿಯಲ್ಲಿ ಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನ ಪಡೆಯಬಹುದು. ಆನಂತರ ಗಂಗಾ ನದಿಯಲ್ಲಿ ದೋಣಿ ವಿಹಾರ ಮಾಡುವ ಅವಕಾಶ ಇರುತ್ತದೆ. ಮಧ್ಯಾಹ್ನದ ಭೋಜನ ಸವಿದ ನಂತರ ಶ್ರೀ ಕಾಳಬೈರವ ದೇವಾಲಯ, ಶ್ರೀ ದುರ್ಗಾ ಮಂದಿರ, ಶ್ರೀ ಹನುಮಾನ್‌ ಮಂದಿರ, ಶ್ರೀ ತುಳಸೀ ಮಾನಸ ಮಂದಿರ ಹಾಗೂ ಬನಾರಸ್‌ ಹಿಂದೂ ವಿಶ್ವವಿದ್ಯಾಲಯಗಳ ವೀಕ್ಷಣೆ ಮಾಡಿದ ನಂತರ ರಾತ್ರಿ ಊಟ ಮಾಡಿ ಗಯಾದ ಕಡೆಗೆ ಪ್ರಯಾಣ ಬೆಳೆಸುವುದು.

ಏಪ್ರಿಲ್‌ 27ರ ಬೆಳಿಗ್ಗೆ 5ಕ್ಕೆ ಗಯಾ ಪ್ರವಾಸ ಆರಂಭಗೊಳ್ಳಲಿದೆ. ಗಯಾದಲ್ಲಿರುವ ಕರ್ನಾಟಕ ಭವನದಲ್ಲಿ ಪಿಂಡ ಪ್ರದಾನ ಅಥವಾ ಪೂರ್ಣ ದಿನ ವೀಕ್ಷಣಾ ಪ್ರವಾಸ ಏರ್ಪಡಿಸಲಾಗಿದೆ. ವಿಷ್ಣುಪಾದ ಮಂದಿರ ದರ್ಶನ, ಪಿತೃಕಾರ್ಯ, ಬೋಧ್‌ಗಯಾ– ಮಹಾಬೋಧಿ ಮಂದಿರ ವೀಕ್ಷಣೆ ಮಾಡಿ ಗಯಾ ಪ್ರವಾಸವನ್ನು ಸಂಪೂರ್ಣಗೊಳಿಸಬಹುದು. ಕಾಶಿ, ಗಯಾ ಮತ್ತು ಬೋಧ್‌ಗಯಾ ವೀಕ್ಷಣೆ ಮಾಡುವವರೆಗೂ ಯಾತ್ರಾರ್ಥಿಗಳಿಗಾಗಿಯೇ ಕಾದು ನಿಂತಿರುತ್ತದೆ. ಪ್ರವಾಸ ಪೂರ್ಣಗೊಂಡ ನಂತರ ಅಲ್ಲಿಂದ ಹೊರಡುವ ರೈಲು ಏಪ್ರಿಲ್‌ 29ರ ಬೆಳಿಗ್ಗೆ 4.30ಕ್ಕೆ ಬೆಂಗಳೂರು ರೈಲು ನಿಲ್ದಾಣ ತಲುಪಲಿದೆ. 
‘ಹಲವು ವರ್ಷಗಳಿಂದ ಕಾಶಿಯಲ್ಲಿ ನೆಲೆಸಿರುವ ಕರ್ನಾಟಕದವರೇ ಆದ ಚಂದ್ರಶೇಖರ ಸ್ವಾಮೀಜಿ ಅವರು ವಿಶ್ವನಾಥನ ಸನ್ನಿಧಿಯಲ್ಲೊಂದು ಲಿಂಗಾಯತರ ಮಠ ಕಟ್ಟಿಕೊಂಡಿದ್ದಾರೆ.

ಯಾತ್ರಾರ್ಥಿಗಳಿಗೆ ಅಲ್ಲೇ ಊಟದ ವ್ಯವಸ್ಥೆ ಇರುತ್ತದೆ. ಗಯಾದಲ್ಲಿ ಪಿಂಡ ಪ್ರದಾನ, ಪಿತೃ ಕಾರ್ಯ ಮಾಡುವವರಿಗೆ ಅಲ್ಲಿನ ಕರ್ನಾಟಕ ಭವನದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಲವು ವರ್ಷಗಳಿಂದ ಅಲ್ಲೇ ನೆಲೆಸಿರುವ ಉಡುಪಿಯವರಾದ ರಾಘವೇಂದ್ರ ಭಯ್ಯಾಜಿ ಅವರು ಗಯಾದಲ್ಲಿ ಯಾತ್ರಾರ್ಥಿಗಳ ಯೋಗಕ್ಷೇಮ ನೋಡಿಕೊಳ್ಳಲಿದ್ದಾರೆ. ಕಾಶಿ ಮತ್ತು ಗಯಾದಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲು ಅನುಕೂಲವಾಗುವಂತೆ 28 ಲಕ್ಷುರಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಆರು ಹಗಲು, ಏಳು ರಾತ್ರಿಗಳ ಈ ಪ್ರವಾಸಕ್ಕೆ ಒಬ್ಬರಿಗೆ ತಗಲುವ ವೆಚ್ಚ ₹9100. ಹಿರಿಯ ನಾಗರಿಕರಿಗೆ ₹1000 ರಿಯಾಯಿತಿ ಇರುತ್ತದೆ. ಈ ಸೇವೆ ಪಡೆದುಕೊಳ್ಳುವವರಿಗೆ ಮಾರ್ಚ್‌ ಕೊನೆ ವಾರ ಅಂತಿಮ ದಿನಾಂಕವಾಗಿರುತ್ತದೆ’ ಎನ್ನುತ್ತಾರೆ ಹೆರಿಟೇಜ್‌ ಇಂಡಿಯಾ ಟ್ರಸ್ಟ್‌ನ ಅಧ್ಯಕ್ಷ ಗಣೇಶ್‌ ಶರ್ಮ.

ಅಂದಹಾಗೆ, ಈ ಪ್ಯಾಕೇಜ್‌ನ ಟಿಕೆಟ್‌ಗಳು ಯಾವುದೇ ರೈಲ್ವೆ ಸ್ಟೇಷನ್ ಅಥವಾ ಬುಕಿಂಗ್ ಕೌಂಟರ್‌ಗಳಲ್ಲಿ ಲಭ್ಯವಿರುವುದಿಲ್ಲ. ವಿಶೇಷ ರೈಲಿನಲ್ಲಿ ಕಾಶಿ ಯಾತ್ರೆ ಮಾಡಲು ಬಯಸುವವರು ತಮ್ಮ ವಯಸ್ಸು ಹಾಗೂ ವಿಳಾಸದ ದಾಖಲೆಗಳನ್ನು ನೀಡಬೇಕು. ತಮ್ಮ ಸೀಟುಗಳನ್ನು ಕಾಯ್ದಿರಿಸಲು ಸಂಪರ್ಕಿಸಬೇಕಾದ ದೂರವಾಣಿ 98449 26512. ಇ–ಮೇಲ್: herritageindia.traintours@gmail.com 

ರೈಲಿನಲ್ಲಿ ಮೊದಲ ಯಾತ್ರೆ
ರೈಲಿನಲ್ಲಿ ಕಾಶಿ ಯಾತ್ರೆ ಆಯೋಜಿಸಿರುವುದು ಇದೇ ಮೊದಲು. ನಮ್ಮ ಪ್ರಯತ್ನಕ್ಕೆ ಭಕ್ತರಿಂದ ಉತ್ತಮ ಪ್ರತಿಕ್ರಿಯೆಯೂ ಸಿಗುತ್ತಿದೆ. ಕಳೆದ ಆರು ವರ್ಷಗಳಿಂದ ನಾವು ಭಕ್ತಿ ಪ್ರವಾಸವನ್ನು ಏರ್ಪಡಿಸುತ್ತಾ ಬರುತ್ತಿದ್ದೇವೆ. ನಾನು ಗಮನಿಸಿರುವಂತೆ ಪ್ರತಿವರ್ಷ ಭಕ್ತಿ ಪ್ರವಾಸ ಕೈಗೊಳ್ಳುವ ಪ್ರವಾಸಿಗರಲ್ಲಿ  ಶೇ 10ರಿಂದ 15ರಷ್ಟು ಹೆಚ್ಚಳವಾಗಿದೆ.

ಕಾಶಿ ಯಾತ್ರೆಗೆ ವಯಸ್ಸಾದವರೇ ಹೆಚ್ಚಾಗಿ ಬರುವುದರಿಂದ ಅವರ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಮುಂಜಾಗ್ರತೆ ವಹಿಸಿದ್ದೇವೆ. ಕಾಶಿ ಯಾತ್ರೆಗೆ ನೋಂದಣಿ ಮಾಡಿಸುವವರಲ್ಲಿ ಕೆಲವರು ವೈದ್ಯರೂ ಸಹ ಇರುತ್ತಾರೆ. ಅಂತಹವರಿಗೆ ನಾವು ಟಿಕೆಟ್‌ ದರದಲ್ಲಿ ರಿಯಾಯಿತಿ ನೀಡಿ ಅವರ ಸೇವೆಯನ್ನು ಪ್ರವಾಸದ ವೇಳೆ ಪಡೆದುಕೊಳ್ಳುತ್ತೇವೆ. ಜೊತೆಗೆ ರೈಲು ಪ್ರಯಾಣದ ವೇಳೆ ಸದಾಕಾಲ ನಮ್ಮ ಜೊತೆ ಒಬ್ಬರು ಶುಶ್ರೂಷಕಿ ಇರುತ್ತಾರೆ. ನಾವು ರೈಲ್ವೆ ಇಲಾಖೆಯೊಂದಿಗೆ ಸಹಯೋಗ ಹೊಂದಿರುವುದರಿಂದ ವಿಶೇಷ ರೈಲಿನ ಚೀಫ್‌ ಆಪರೇಟಿಂಗ್‌ ಆಫೀಸರ್‌ ಸದಾ ನಮ್ಮ ಸಂಪರ್ಕದಲ್ಲಿ ಇರುತ್ತಾರೆ. ಯಾತ್ರಾರ್ಥಿಗಳಲ್ಲಿ ಯಾರಿಗಾದರೂ ಸೀರಿಯಸ್‌ ಆದರೆ ಮುಂದಿನ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ವೈದ್ಯಕೀಯ ಸೇವೆ ಒದಗಿಸಲು ಅವರು ಸಹಕಾರ ನೀಡುತ್ತಾರೆ.
–ಗಣೇಶ ಶರ್ಮ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.