ADVERTISEMENT

‘ಜನ ದ್ವೇಷಿಸಿದರೆ ನಟ ಗೆದ್ದಂತೆ’

ರೇಷ್ಮಾ ಶೆಟ್ಟಿ
Published 26 ಮೇ 2017, 19:30 IST
Last Updated 26 ಮೇ 2017, 19:30 IST
‘ಜನ ದ್ವೇಷಿಸಿದರೆ ನಟ ಗೆದ್ದಂತೆ’
‘ಜನ ದ್ವೇಷಿಸಿದರೆ ನಟ ಗೆದ್ದಂತೆ’   

‘ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಆ ಪ್ರತಿಭೆಗಳು ಅರಳಲು ಸೂಕ್ತ ವೇದಿಕೆ ಇಲ್ಲ. ಈ ಭಾಗದ ಕಲಾಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸಬೇಕು ಎಂಬುದು ನನ್ನ ದೀರ್ಘಕಾಲದ ಕನಸು’ ಎನ್ನುತ್ತಾರೆ ಕಿರುತೆರೆ ನಟ ಸಂತೋಷ್‌ ಉಪ್ಪಿನ.

ವಿಜಯಪುರ ಜಿಲ್ಲೆಯ, ಸಿಂಧಗಿ ತಾಲ್ಲೂಕಿನ ಅಲಮೇಲ ಹುಟ್ಟೂರು. ರಂಗಭೂಮಿಯಿಂದ ನಟನೆಯತ್ತ ಸೆಳೆತ. ಪಿ. ಶೇಷಾದ್ರಿ ಅವರ ‘ಪ್ರತಿಬಿಂಬ’ ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ.  30 ಧಾರಾವಾಹಿ ಮತ್ತು 30 ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ  ನಟನೆಗೆ ರಾಷ್ಟ್ರ, ರಾಜ್ಯ ಪ್ರಶಸ್ತಿಗಳ ಗರಿಯನ್ನು ಮುಡಿಗೇರಿಸಿಕೊಂಡ ಇವರು, ‘ಮೆಟ್ರೊ’ಗೆ ಮಾತಿಗೆ ಸಿಕ್ಕಾಗ...

* ‘ಗಂಗಾ’ ಧಾರಾವಾಹಿ ಬಗ್ಗೆ ನಿಮ್ಮ ಅಭಿಪ್ರಾಯ?
ಒಂದು ಧಾರಾವಾಹಿ ಎಂದರೆ ಅದರಲ್ಲಿ ಎಲ್ಲವೂ ಅಡಕವಾಗಿರುತ್ತದೆ. ನಟನೆ, ಕ್ಯಾಮೆರಾ, ಮ್ಯೂಸಿಕ್‌ ಎಲ್ಲವೂ ಸೇರಿ ಧಾರಾವಾಹಿ ಎನ್ನಿಸಿಕೊಳ್ಳುತ್ತದೆ. ಆದರೆ  ಧಾರಾವಾಹಿಗೆ ಪ್ರಧಾನವಾಗಿ ಬೇಕಿರುವುದು ಸ್ಕ್ರಿಪ್ಟ್‌. ಅದುವೇ ಇಡೀ ಕತೆಯ ಜೀವಾಳ. ಗಂಗಾ ಧಾರಾವಾಹಿಯ ಯಶಸ್ಸಿಗೂ ಇದೇ ಕಾರಣ ಎನ್ನುವುದು ನನ್ನ ಅಭಿಪ್ರಾಯ.

ADVERTISEMENT

* ಎಂಜಿನಿಯರಿಂಗ್ ಹಾದಿ ಬಿಟ್ಟು ನಟನೆಯತ್ತ ಹೊರಳಿದ್ದು?
ನನಗೆ ಬಾಲ್ಯದಿಂದಲೂ ನಟನೆಯ ಮೇಲೆ ಒಲವು ಜಾಸ್ತಿ. ಆದರೆ ಮನೆಯವರಿಗೆ ನಾನು ಓದಿ ಕೆಲಸಕ್ಕೆ ಸೇರಬೇಕು ಎಂಬ ಆಸೆ. ಆ ಕಾರಣಕ್ಕೆ ಮನೆಯವರ ಒತ್ತಾಯಕ್ಕಾಗಿ ಎಂಜಿನಿಯರಿಂಗ್ ಸೇರಿದೆ.

* ನಿಮ್ಮ ಪ್ರಕಾರ ನಟನೆ ಎಂದರೆ?
ನಟನೆ ಎನ್ನುವುದು ನಿರಂತರ ಕಾಮಗಾರಿ. ಅದು ಇಂದು ಹುಟ್ಟಿದ ಹಸುಗೂಸಿನಂತೆ, ಪ್ರತಿದಿನವೂ ಹೊಸ ಪ್ರಪಂಚವನ್ನು ಬೆರಗುಗಣ್ಣಿನಿಂದ ನೋಡುವ ಮಗುವಿನಂತೆ ನಟರು ಹೊಸತನ್ನು ನೋಡುತ್ತಾರೆ. ನಟನೆಗೆ ಸಾವಿಲ್ಲ. ನಟನನ್ನು ತನ್ನೊಳಗೆ ಕಂಡುಕೊಳ್ಳುವವನು ನಿಜವಾದ ನಟ.

* ಗಂಗಾ ಧಾರಾವಾಹಿಯಲ್ಲಿ ನಿಮ್ಮ ಪಾತ್ರ?
ಗಂಗಾದಲ್ಲಿ ನನ್ನದು ಮುಖ್ಯ ಖಳನಟನ ಪಾತ್ರ. ಗಂಗಾ ಧಾರಾವಾಹಿಯ ಓಂಕಾರ್ ರಾವ್‌ ಲಪಟ, ಹೆಣ್ಣುಬಾಕ. ನಟನೆಯಲ್ಲಿ ಪಾತ್ರ ಯಾವುದು ಎನ್ನುವುದು ಮುಖ್ಯವಲ್ಲ, ಆ ಪಾತ್ರಕ್ಕೆ ಹೇಗೆ ಜೀವ ತುಂಬುತ್ತೇವೆ ಎನ್ನುವುದು ಮುಖ್ಯ. 

* ನಿಜ ಜೀವನದ ನಿಮ್ಮ ವ್ಯಕ್ತಿತ್ವದಲ್ಲಿ ಖಳನಟನ ಛಾಪು ಇದೆಯಾ?
ಆಯ್ಯೋ... ಖಂಡಿತಾ ಇಲ್ಲ. ನಾನು ಹೆಣ್ಣಿಗೆ ತುಂಬಾ ಗೌರವ ಕೊಡ್ತೀನಿ. ನಟ ಎಂದರೆ ಕೇವಲ ನಟನೆಯಷ್ಟೇ. ಅದು ಯಾವ ವ್ಯಕ್ತಿಯ ನೈಜ ಬದುಕಿಗೂ ಸಂಬಂಧಿಸಿದ್ದಲ್ಲ. ನೈಜ ಬದುಕಿನಲ್ಲೂ ಇವನೂ ಹೀಗೇನಾ  ಅನ್ನಿಸಿದರೆ, ಅಷ್ಟರ ಮಟ್ಟಿಗೆ ಅವನು ನಟನೆಯಲ್ಲಿ ತೊಡಗಿಕೊಂಡಿದ್ದಾನೆ ಎಂಬುದೇ ಹೊರತು ಅವನು ಧಾರಾವಾಹಿ ಪಾತ್ರದಂತೆ ಅಲ್ಲ.

* ಟಿಆರ್‌ಪಿ ಹಿಂದೆ ಬಿದ್ದಿರುವ ಧಾರಾವಾಹಿಗಳ ಬಗ್ಗೆ ಏನಂತೀರಿ?
ನಿಜವಾಗ್ಲೂ  ಬೇಸರ ಇದೆ. ಟಿಆರ್‌ಪಿ ಎಂಬ ಭ್ರಮೆಯಲ್ಲಿ ಎಲ್ಲರೂ ತೇಲುತ್ತಿದ್ದಾರೆ. ಕೆಟ್ಟದ್ದನ್ನು ವೈಭವೀಕರಿಸುತ್ತಾರೆ. ಅದನ್ನು ಜನ ನೋಡುತ್ತಾರೆ ಕೂಡ. ಸಮಾಜದಲ್ಲಿ ಒಳ್ಳೆಯ ಅಂಶಗಳು ಸಾಕಷ್ಟಿವೆ.  ಅಂತಹ ವಿಷಯಗಳು ಧಾರಾವಾಹಿಗಳಿಗೆ ಪೂರಕವಾಗಬೇಕು.

* ವಿಲನ್‌ ಪಾತ್ರಗಳನ್ನೇ ಹೆಚ್ಚು ಇಷ್ಟ ಪಡ್ತೀರಂತೆ?
ನಂಗೆ ಇದೇ ಪಾತ್ರ ಕೊಡಿ, ಇಂತಹ ಪಾತ್ರ ಮಾತ್ರ ನಾನು ಮಾಡೋದು ಎಂದು ಯಾವತ್ತೂ ಗೆರೆ ಹಾಕಿಕೊಂಡಿಲ್ಲ. ಯಾವ ಪಾತ್ರ ಕೊಟ್ಟರೂ ಮಾಡ್ತೀನಿ. ನಾಯಕ ನಟ, ಕಾಮಿಡಿಯನ್ ಹೀಗೆ ಎಲ್ಲಾ ಪಾತ್ರಗಳಲ್ಲೂ ನಟಿಸಿದ್ದೆ.

**

ಮೀಸೆ ಜಾರಿದ ಕ್ಷಣ...

ಶೂಟಿಂಗ್ ವೇಳೆ ಅನೇಕ ಹಾಸ್ಯ ಪ್ರಸಂಗಗಳು ನಡೆಯುತ್ತಿರುತ್ತವೆ. ಎಷ್ಟೋ ಸೀರಿಯಸ್ ದೃಶ್ಯಗಳು ಕಾಮಿಡಿ ದೃಶ್ಯಗಳಾಗುತ್ತವೆ. ನನಗೆ ಅಂತಹ ಅನುಭವಗಳು ತುಂಬಾ ಆಗಿವೆ. ಅದರಲ್ಲಿ ಒಂದು ಗಂಗಾ ಧಾರಾವಾಹಿಯ ಸೀರಿಯಸ್ ಸನ್ನಿವೇಶದಲ್ಲಿ ನಟಿಸುತ್ತಿರುವಾಗ ಒಮ್ಮೆ ತಟ್ಟನೆ ಮೀಸೆ ಜಾರಿ ಹೋಗಿತ್ತಂತೆ! ಎಲ್ಲರಿಗೂ ನಗುವೋ ನಗು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.