ADVERTISEMENT

ಜಿಡ್ಡು ಚರ್ಮಕ್ಕೆ ಮನೆಯಲ್ಲೇ ಚಿಕಿತ್ಸೆ

ಪ್ರಕಾಶ ಸುವರ್ಣ ಕಟಪಾಡಿ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಜಿಡ್ಡು ಚರ್ಮಕ್ಕೆ ಮನೆಯಲ್ಲೇ ಚಿಕಿತ್ಸೆ
ಜಿಡ್ಡು ಚರ್ಮಕ್ಕೆ ಮನೆಯಲ್ಲೇ ಚಿಕಿತ್ಸೆ   

ಕಡಲೆ ಹಿಟ್ಟನ್ನು ದಿನಕ್ಕೆ ಮೂರು ಬಾರಿ ಮುಖ ತೊಳೆಯಲು ಉಪಯೋಗಿಸಿದರೆ ಮುಖವು ಕೂಡಾ ಕಡಲೆ ಹಿಟ್ಟಿನಂತೆ ಮೃದುವಾಗುತ್ತದೆ. ಕಡಲೆ ಹಿಟ್ಟಿನ ಫೇಸ್‌ಪ್ಯಾಕ್‌ ತಯಾರಿಸಿಕೊಂಡು ಮುಖದಲ್ಲಿನ ಜಿಡ್ಡಿನ ಅಂಶವನ್ನು ಕಡಿಮೆ ಮಾಡಿಕೊಳ್ಳಬಹುದು.

ಟೊಮೆಟೊವನ್ನು ಕತ್ತರಿಸಿ ಪ್ರತಿದಿನ ಮುಖಕ್ಕೆ ಮಸಾಜ್ ಮಾಡುವುದರಿಂದ ಮುಖದಲ್ಲಿ ಜಿಡ್ಡಿನ ಅಂಶ ಕಡಿಮೆಯಾಗಿ ಮುಖದ ಕಾಂತಿ ವೃದ್ಧಿಸುತ್ತದೆ.

ಪಪ್ಪಾಯ ಮತ್ತು ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್‘ಎ’ಇರುವುದರಿಂದ ಇದರ ಮಸಾಜ್ ಮಾಡಿದಲ್ಲಿ ಚರ್ಮವನ್ನು ಸದಾ ಕಾಂತಿಯುಕ್ತವಾಗಿಟ್ಟುಕೊಳ್ಳಬಹುದು. ಜಿಡ್ಡಿನಾಂಶವನ್ನು ಇದು ಹೋಗಲಾಡಿಸುತ್ತದೆ.

ADVERTISEMENT

ಸೇಬು ಹಣ್ಣಿನಲ್ಲಿರುವ ಜೀವಸತ್ವವು ಚರ್ಮಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಎಣ್ಣೆ ಅಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಬಾಳೆಹಣ್ಣಿಗೆ ನಿಂಬೆರಸ ಹಾಗೂ ಜೇನುತುಪ್ಪವನ್ನು ಸೇರಿಸಿ ಫೇಸ್ ಪ್ಯಾಕ್ ಮಾಡಿಕೊಂಡು 20 ನಿಮಿಷ ಬಿಟ್ಟು ಮುಖ ತೊಳೆದರೆ ಎಣ್ಣೆ ಅಂಶ ನಿವಾರಣೆಯಾಗುವುದು. ಮಾತ್ರವಲ್ಲದೆ ಮುಖದ ಕಾಂತಿ ಕೂಡ ಹೆಚ್ಚುತ್ತದೆ.

ಕಿತ್ತಳೆ ಹಾಗೂ ನಿಂಬೆರಸದಲ್ಲಿ ಸಿಟ್ರಿಕ್ ಆಮ್ಲ ಹೆಚ್ಚಿರುವುದರಿಂದ ಇವುಗಳ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಟ್ಟುಕೊಂಡು ಅದಕ್ಕೆ ಜೇನುತುಪ್ಪ ಸೇರಿಸಿ ಮುಖಕ್ಕೆ ಹಚ್ಚಿದರೆ ಮುಖದಲ್ಲಿನ ಎಣ್ಣೆ ಅಂಶವು ಕಡಿಮೆಯಾಗುತ್ತದೆ.

ಕ್ಯಾರೆಟ್‌ನಲ್ಲಿ ಜೀವಸತ್ವ‘ಎ’ಅಧಿಕವಾಗಿದ್ದು, ಮುಖದ ಸೌಂದರ್ಯ ವರ್ಧನೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಬೆಂಡೆಕಾಯಿಯಲ್ಲಿ ನಾರಿನಾಂಶ ಹೆಚ್ಚಿರುವುದರಿಂದ ಇದರ ಸೇವನೆಯು ಚರ್ಮಕ್ಕೆ ತುಂಬಾ ಒಳ್ಳೆಯದು.

ಸೌತೆಕಾಯಿಯಲ್ಲಿ ಹೆಚ್ಚಿನ ಪ್ರಮಾಣದ ನಾರಿನಾಂಶವಿರುವುದರಿಂದ ಇದು ಚರ್ಮದ ರಕ್ಷಣಾಕಾರ್ಯ ದಲ್ಲಿ ಪ್ರಮುಖ ಪಾತ್ರಹಿಸುತ್ತದೆ. ಸೌತೆಕಾಯಿಯನ್ನು ಕತ್ತರಿಸಿ ಮುಖದ ಮೇಲೆ ಮಸಾಜ್ ಮಾಡಿ ಕೊಂಡರೆ ಎಣ್ಣೆಯುಕ್ತ ಚರ್ಮವನ್ನು ಕಡಿಮೆ ಮಾಡಿಕೊಳ್ಳಬಹುದು.

ರೋಸ್ ವಾಟರ್ ಉಪಯೋಗಿಸಿಕೊಂಡು ಅದಕ್ಕೆ ಹುತ್ತದ ಮಣ್ಣು ಸೇರಿಸಿ ಕಲಸಿ ಅದಕ್ಕೆ ಶುದ್ಧವಾದ ಅರಶಿನವನ್ನು ಬೆರೆಸಿ ಫೇಸ್ ಪ್ಯಾಕ್ ಮಾಡಿಕೊಂಡು ಕೇವಲ 15 ನಿಮಿಷದಲ್ಲಿ ತೆಗೆಯಬೇಕು. ಇದು ಎಣ್ಣೆಯುಕ್ತ ಮುಖಕ್ಕೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ.

ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರತಿ ನಿತ್ಯ ಯಥೇಚ್ಛವಾಗಿ ನೀರನ್ನು ಕುಡಿಯಬೇಕು. ನೀರು ಎಲ್ಲಾ ರೋಗಗಳಿಗೂ ಒಂದು ಸಿದ್ಧೌಷಧವಾಗಿದೆ. ಮಾತ್ರವಲ್ಲದೇ ಚರ್ಮದ ಆರೋಗ್ಯದ ರಕ್ಷಣೆಯಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಆದಷ್ಟು ನೈಸರ್ಗಿಕ ಸೌಂದರ್ಯವರ್ಧಕಗಳನ್ನು ಉಪಯೋಗಿಸಬೇಕು. ಇದರಿಂದ ಚರ್ಮದ ಕಾಂತಿ ಹೆಚ್ಚುವುದಲ್ಲದೇ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ. ನಾವು ಸದಾ ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳನ್ನು ಉಪಯೋಗಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು. ಇದರಿಂದ ಚರ್ಮವು ವಯಸ್ಸಾಗುತ್ತಿದ್ದಂತೆ ತನ್ನ ನೈಜ ಸೌಂದರ್ಯವನ್ನು ಕಳೆದುಕೊಂಡು ಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.