ADVERTISEMENT

ನವಾಜುದ್ದೀನ್ ಮೌನದ ಮಾತು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ನವಾಜುದ್ದೀನ್ ಮೌನದ ಮಾತು
ನವಾಜುದ್ದೀನ್ ಮೌನದ ಮಾತು   
ಮಿತಭಾಷಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ  ‘ಸಿಕ್ಸ್‌ಟೀನ್ ಪಾಯಿಂಟ್‌ ಸಿಕ್ಸ್‌ ಸಿಕ್ಸ್‌’ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಧರ್ಮಕ್ಕೂ ಮಿಗಿಲಾದುದು ‘ಕಲೆ– ಕಲಾವಿದ’ ಎಂದು ಸಾರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿದೆ.
 
‘ಫಿಲ್ಮ್‌ ಪೋಸ್ಟ್’ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್‌ ಆಗಿರುವ ಈ ವಿಡಿಯೊದಲ್ಲಿ ಅವರು ಒಂದು ಮಾತನ್ನೂ ಆಡುವುದಿಲ್ಲ. ಆದರೆ ಬರಹಗಳ ಮೂಲಕ ಅವರು ನೀಡುವ ಅರ್ಥವತ್ತಾದ ಸಂದೇಶವನ್ನು ಮನುಕುಲಕ್ಕೆ ಮುಟ್ಟಿಸುತ್ತಾರೆ.
 
ಕೆಲ ತಿಂಗಳುಗಳ ಹಿಂದೆ, ತನ್ನ ಅಭಿಪ್ರಾಯ ಬರೆದ ಕಾರ್ಡುಗಳನ್ನು ಪ್ರದರ್ಶಿಸುವ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡು ಯುದ್ಧದ ವಿರುದ್ಧ ಧನಿ ಎತ್ತಿದ್ದ ಗುರ್‌ಮೆಹರ್‌ ಕೌರ್ ಹಾದಿಯಲ್ಲೇ ಸಾಗಿರುವ ನವಾಜುದ್ದೀನ್, ತಮ್ಮ ಅಭಿಪ್ರಾಯ ಬರೆದ ಕಾರ್ಡುಗಳನ್ನು ತೋರಿಸುತ್ತಾ ಮನದ ಮಾತು ಹಂಚಿಕೊಂಡಿದ್ದಾರೆ.
 
ತಮ್ಮ ಪರಿಚಯದ ಕಾರ್ಡು ತೋರಿಸುವ ಮೂಲಕ ವಿಡಿಯೊ ಪ್ರಾರಂಭವಾಗುತ್ತದೆ. ನಂತರ ‘ನಾನು ನನ್ನ ಡಿಎನ್‌ಎ ಪರೀಕ್ಷೆ ಮಾಡಿಸಿದೆ ಇದರಲ್ಲಿ ತಿಳಿದುದೇನೆಂದರೆ ನಾನು 16.66% ಹಿಂದು. 16.66% ಮುಸ್ಲಿಂ. 16.66% ಕ್ರಿಶ್ಚಿಯನ್, 16.66 ಸಿಖ್, ಅಷ್ಟೆ ಪ್ರಮಾಣದ ಬುದ್ಧ, ಅಷ್ಟೆ ಪ್ರಮಾಣದಲ್ಲಿ ವಿಶ್ವದ ಇತರ ಧರ್ಮಕ್ಕೂ ಸೇರಿದವನಾಗಿದ್ದೇನೆ. ಆದರೆ ನಾನು ನನ್ನ ಆತ್ಮಸಾಕ್ಷಿಯ ಒಳಹೊಕ್ಕು ಅನ್ವೇಷಣೆ ಮಾಡಿದಾಗ ತಿಳಿದದ್ದು ನಾನು ಶೇ100 ‘ಕಲಾವಿದ’.
 
57 ಸೆಕೆಂಡ್‌ಗಳ ಈ ವಿಡಿಯೊದಲ್ಲಿ ಸಂಭಾಷಣೆಯೇ ಇಲ್ಲ. ಹಿನ್ನೆಲೆ ಸಂಗೀತವೇ ಎಲ್ಲಾ. ಪ್ರತಿ ಧರ್ಮದ ಬೋರ್ಡ್ ತೋರಿಸುವಾಗ ನವಾಜುದ್ದೀನ್  ಆಯಾ ಧರ್ಮವನ್ನು ಬಿಂಬಿಸುವ ಉಡುಪು ಧರಿಸಿರುತ್ತಾರೆ. ಇದು ವಿಡಿಯೊಕ್ಕೆ ವಿಶೇಷ ಪರಿಣಾಮ ಸಿಗುವಂತೆ ಮಾಡಿದೆ.
 
ಅಪ್‌ಲೋಡ್ ಆದ 4 ಗಂಟೆಯ ಒಳಗೆ 8,95,000 ಮಂದಿ  ವಿಡಿಯೊವನ್ನು ವೀಕ್ಷಿಸಿದ್ದಾರೆ. 18 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ನವಾಜುದ್ದೀನ್ ಅವರ ಈ ವಿಡಿಯೊಕ್ಕೆ ಲಕ್ಷಾಂತರ ಮಂದಿ ಮೆಚ್ಚುಗೆಯನ್ನೂ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.