ADVERTISEMENT

ನಾನು ಗರ್ಭಿಣಿ: ಆದ್ರೆ ಹೆಂಗಸಲ್ಲ!

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ನಾನು ಗರ್ಭಿಣಿ: ಆದ್ರೆ ಹೆಂಗಸಲ್ಲ!
ನಾನು ಗರ್ಭಿಣಿ: ಆದ್ರೆ ಹೆಂಗಸಲ್ಲ!   

ಚಿತ್ರರಂಗದಲ್ಲಿ ಒಂದು ದಶಕ ಕಾಲ ದುಡಿದಿರುವ ಸಂಜಯ್‌ ಜನರಿಗೆ ವಿಭಿನ್ನವಾದ ಕಥೆ ಹೇಳಲು ಹೊರಟಿದ್ದಾರೆ. ‘ಐ ಆ್ಯಮ್‌ ಪ್ರೆಗ್ನೆಂಟ್‌’ ಎಂಬ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ‘ಆದರೆ ನಾನು ಹೆಂಗಸಲ್ಲ’ ಎಂದು ಅಡಿಬರಹ ಬರೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ‌‌ಪೋಸ್ಟರ್‌ಗಳಲ್ಲಿ ಭಾವನಾತ್ಮಕತೆ ತುಂಬಿಕೊಂಡಿರುವ ಜನರಿಗೆ ಈ ಚಿತ್ರ ಅರ್ಪಿಸಲಾಗಿದೆ ಎಂದು ಮುದ್ರಿಸಿದ್ದಾರೆ.

ಸಂಜಯ್‌ಗೆ ಯಾರೂ ಮಾಡದ ಕಥೆ ರಚಿಸಿ ಚಂದನವನದಲ್ಲಿ ಭದ್ರನೆಲೆಯೂರುವ ಆಸೆ. ಹಾಗಾಗಿ, ಕಥೆ ಬರೆದು ನಿರ್ದೇಶನ ಮಾಡಲು ಸಿದ್ಧರಾಗಿದ್ದಾರೆ. ಇತ್ತೀಚೆಗೆ ಕಂಠೀರವ ಸ್ಟುಡಿಯೊದಲ್ಲಿ ಈ ಚಿತ್ರದ ಮುಹೂರ್ತ ಕೂಡ ನೆರವೇರಿತು.

‘ಕೆಲವು ವರ್ಷದ ಹಿಂದೆ ಫ್ರಾನ್ಸ್‌ನಲ್ಲಿ 10 ವರ್ಷದ ಬಾಲಕ ಮಗುವಿಗೆ ಜನ್ಮ ನೀಡಿದ್ದ ಸುದ್ದಿ ವರದಿಯಾಗಿತ್ತು. ಆಸ್ಟ್ರೇಲಿಯಾದಲ್ಲಿ 52 ವರ್ಷದ ಪುರುಷ ಗರ್ಭಿಣಿಯಾಗಿದ್ದ ಸುದ್ದಿ ಹರಡಿತ್ತು. ಇಂತಹ ಸೂಕ್ಷ್ಮ ವಿಷಯ ಕುರಿತ ಸಿನಿಮಾ ಏಕೆ ಮಾಡಬಾರದು ಎಂದು ಅನಿಸಿತು. ಹಾಗಾಗಿ, ಇಂತಹ ಕಥೆ ಇಟ್ಟುಕೊಂಡು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದೇನೆ’ ಎಂದರು ಸಂಜಯ್.

ADVERTISEMENT

ಸಮಾಜದಲ್ಲಿ ನಕಾರಾತ್ಮಕ ಕೆಲಸ ಮಾಡಿದರೆ ಬಹುಬೇಗ ಪ್ರಸಿದ್ಧಿಗೆ ಬರುತ್ತಾರೆ. ಸಮಾಜಕ್ಕೆ ಉಪಯೋಗವಾಗುವಂತಹ ಕೆಲಸ ಮಾಡಿದರೆ ಯಾರಿಗೂ ತಿಳಿಯುವುದಿಲ್ಲ. ಚಿತ್ರದಲ್ಲಿ ಈ ಬಗ್ಗೆಯೂ ಹೇಳಲಾಗಿದೆ ಎಂದು ಸಮಜಾಯಿಷಿ ನೀಡಿದರು.

ನಾಯಕ ಪ್ರತಾಪ್ ನಾರಾಯಣ್‌, ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅರ್ಪಿತಾ ಗೌಡ ಈ ಚಿತ್ರದ ನಾಯಕಿ. ಮಾಸ್ಟರ್ ವಿನಯ್ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ನಾಲ್ಕು ಹಾಡುಗಳಿಗೆ ಎಸ್. ಪ್ರದೀಪ್ ವರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಮೆರಿಕದಲ್ಲಿರುವ ಕನ್ನಡತಿ ಡಾ.ಟಿ. ಅಕ್ಷತಾ ರಾಮಚಂದ್ರರಾವ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿಕ್ಕಮಗಳೂರು, ಮಹಾಬಲೇಶ್ವರ, ಮೈಸೂರು ಮತ್ತು ಬೆಂಗಳೂರಿನ ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ರೂಪಿಸಿದೆ. ಈ ಚಿತ್ರಕ್ಕೆ ಅರಿವುಪುಗಳ್‌ ಅವರ ಛಾಯಾಗ್ರಹಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.