ADVERTISEMENT

ಪಟೇಲ್ ಹೋಲಿಕೆ ಮಾಡಿ... ನೆಹರೂ ಬೇಡ!

ಪ್ರಕಾಶ್ ಶೆಟ್ಟಿ ಕಂಡ ಸಿಟಿ ಜನ್ರು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2014, 19:30 IST
Last Updated 18 ಡಿಸೆಂಬರ್ 2014, 19:30 IST
ಪಟೇಲ್ ಹೋಲಿಕೆ ಮಾಡಿ... ನೆಹರೂ ಬೇಡ!
ಪಟೇಲ್ ಹೋಲಿಕೆ ಮಾಡಿ... ನೆಹರೂ ಬೇಡ!   

ನಿಮಗಂಟಿಕೊಂಡಿರುವ ಈ ‘ಕಂಪಾ’ ಜಾತಿ ಅಥವಾ ಊರಿನ ಹೆಸರಾಗಿರಲಿಕ್ಕಿಲ್ಲ ಎಂದು ನನ್ನ ಬಲವಾದ ನಂಬಿಕೆ.
ನಿಜ, ಈ ಯಕ್ಷಗಾನದವರು, ಲೇಖಕರು ಅವರ ಹೆಸರಿನ ಜತೆ ಊರು ಕೂಡ ರಾರಾಜಿಸುವಾಗ ನಾನ್ಯಾಕೆ ನಮ್ಮ ಮನೆಗಿಟ್ಟ ಹೆಸರಿಡಬಾರದೆಂದು ಯೋಚಿಸಿದೆ. ಹಾಗೇ ನಾನು ಕಂಪಲ್ಸರಿಯಾಗಿ ಕಂಪಾ ಗೋಪಿಯಾಗ್ಬಿಟ್ಟೆ.

ನೀವು ಮಾಯ-ಮಂತ್ರ ಮಾಡ್ತೀರಲ್ಲ...ಬೇರೆ ಕೆಲ್ಸ ಇಲ್ವಾ?
ನೋಡಿ, ಒಳ್ಳೆಯ ಉದ್ಯೋಗ ಸಿಗಬೇಕಾದರೆ ಜನಿವಾರ ಅಡ್ದ ಬರುತ್ತೇ ಅಂತ ನನಗೆ ಗೊತ್ತಿತ್ತು. ಹೈಸ್ಕೂಲ್‌ನಲ್ಲಿರುವಾಗಲೇ ನಾನು ಮ್ಯಾಜಿಕ್ ಕಲಿತಿದ್ದೆ. ಮುಂದೆ ಅದೇ ನನ್ನ ವೃತ್ತಿಯಾಯಿತು. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಯಾವನೂ ನನ್ನ ಜಾತಿ ಕೇಳಿಲ್ಲ!

ಅಲ್ಲ ಗೋಪಿ ಅವರೇ, ಬೆಂಗಳೂರಿನಲ್ಲಿ ವರ್ಷಗಳ ಹಿಂದೆ ಮುನ್ನೂರಕ್ಕೂ ಹೆಚ್ಚು ಕೆರೆಗಳಿದ್ದವು. ಈಗ ಬಹುಪಾಲು ಕೆರೆಗಳು ‘ಮಾಯ’ವಾಗಿವೆ. ನಿಮ್ಮದೇನಾದರೂ ಕೈವಾಡವಿದೆಯಾ?
ದೇವರಾಣೆಗೂ ನನಗೆ ಅಂತಹ ಮೇಲ್ಮಟ್ಟದ ಮ್ಯಾಜಿಕ್ ಮಾಡುವುದಕ್ಕೆಲ್ಲಾ ಬರಲ್ಲ. ಬೆಂಗಳೂರಿನಲ್ಲಿದ್ದ ಕೆರೆಗಳನ್ನು ‘ಮಂಗ ಮಾಯ’ ಮಾಡಿದವರು ನಿಜಕ್ಕೂ ಅದ್ಭುತ ಮ್ಯಾಜಿಶಿಯನ್ಸ್. ನಾನು ಅವರ ಮುಂದೆ ಬರೀ ಎಲ್. ಕೆ. ಜಿ.

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹಾಗೂ ಮಮತಾ ದೀದಿ ಇಬ್ಬರೊಳಗೆ ಸಿಕ್ಕಾಪಟ್ಟೆ ಜಟಾಪಟಿ ಶುರುವಾಗಿರೋದು ನೋಡಿದರೆ ಮುಂದೊಂದು ದಿವಸ ಅಮಿತ್ ಷಾ ನಿಮಗೆ ಫೋನ್ ಮಾಡಿ ದೀದಿಯನ್ನು ಮೊಲವನ್ನಾಗಿ ಪರಿವರ್ತಿಸಬೇಕೆಂದು ಕೇಳಿಕೊಂಡರೆ ರೆಡಿ ಇದ್ದೀರಾ?
ಬಿಜೆಪಿ ಸದಸ್ಯ, ಅದೂ ಪಶ್ಚಿಮ ಬಂಗಾಳದಲ್ಲೇ ಇರುವ ವಿಶ್ವವಿಖ್ಯಾತ ಪಿ.ಸಿ.ಸೊರ್ಕಾರ್ ಜೂನಿಯರ್ ಇದಕ್ಕೆ ಬೆಸ್ಟು ಜನ ಅಂತ ಹೇಳಿ ಈ ಪಾಪದ ಕೆಲಸದಿಂದ ನಾನು ನಯವಾಗಿಯೇ ತಪ್ಪಿಸಿಕೊಳ್ಳುತ್ತೇನೆ.

ಅದೆಲ್ಲ ಇರಲಿ, ನಿಮಗೆ ಮದುವೆಯಾಗುವ ‘ಧೈರ್ಯ’ ಬಂದದ್ದಾದರೂ ಹೇಗೆ?
ನನಗೆ ದಾಂಪತ್ಯ ಜೀವನದ ಬಗ್ಗೆ ಹೆದರಿಕೆಯೇನೂ ಇರಲಿಲ್ಲ. ಆದರೂ ನನಗೆ ಮದುವೆಯಾಗುವ ಧೈರ್ಯ ಬಂದದ್ದು ನನ್ನ ನಾಲ್ವರು ಅಕ್ಕ, ತಂಗಿಯರಿಗೆ ತಾಳಿ ಕಟ್ಟಿಸಿದ ಮೇಲೆಯೇ.

ಕತ್ತೆಯನ್ನು ನೋಡಿದಾಗ ನಿಮಗೆ ‘ಸದ್ಯ ನಾನು ಕತ್ತೆಯಾಗಿ ಹುಟ್ಟಿಲ್ಲ’ವಲ್ಲಾಂತ ಸಮಾಧಾನ ಆಗುತ್ತಾ?
ಖಂಡಿತ. ಆದರೂ ಕೆಲವೊಮ್ಮೆ ನಾವೂ ಎರಡು ಕಾಲಿನ ಕತ್ತೆಗಳಲ್ಲವೇ ಎಂದು ಅನಿಸುವುದುಂಟು.

ಮೊನ್ನೆ ಫೋನಿನಲ್ಲಿ ಒಬ್ಬಾತ  ‘ಮಗಾ... ಮಚ್ಚಾ...ಅಲ್ಲಮ್ಮಾ... ಬೋ..ಮಗನೇ...ಸಾರ್... ಗುರೂ... ’ ಹೀಗೆ ಒಬ್ಬನನ್ನೇ ನಾನಾ ರೀತಿಯಲ್ಲಿ  ಸಂಬೋಧಿಸುತ್ತಾ ಮಾತನಾಡುತ್ತಿದ್ದ. ಫೋನಿನ ಆ ಕಡೆಯ ವ್ಯಕ್ತಿ ನೀವೇ ಆಗಿದ್ದರೆ ಏನು ಮಾಡುತ್ತಿದ್ದಿರಿ?
ಮೊದಲನೆಯದಾಗಿ ನನಗೆ ಅಂತಹ ಭಾಷೆಯಿಲ್ಲದ ಗೆಳೆಯರು ಯಾರೂ ಇಲ್ಲ. ಒಂದು ವೇಳೆ ಯಾವನಾದರೂ ಹಾಗೆ ಮಾತನಾಡಿದರೆ, ‘ನಾನು ವ್ಯಾಪ್ತಿ ಪ್ರದೇಶದಿಂದ ದೂರವಿದ್ದೇನೆ’ ಎಂದು ಹೇಳಿ ಅದೃಶ್ಯವಾಗ್ಬಿಡ್ತೇನೆ. ಎಷ್ಟೆಂದರೂ ನಾನು ಮ್ಯಾಜಿಷಿಯನ್ ಅಲ್ಲವೇ?

ನೋಡೋಕೆ... ಜವಾಹರ್ ಲಾಲ್ ನೆಹರೂವಿಗೂ ನಿಮಗೂ ಹೋಲಿಕೆಯಿದೆಯಲ್ಲ!
ಛೆ ಛೇ! ಸಾಧ್ಯವಿಲ್ಲ!

ನೆಹರೂ ಅವರು ಟೋಪಿ ತೆಗೆದರೆ?
ಓಹ್! ಹಾಗೋ! ಖಾಲಿ ತಲೆಯ ಹೋಲಿಕೆ ಮಾಡುವುದಿದ್ದರೆ ವಲ್ಲಭಬಾಯಿ ಪಟೇಲ್  ಹೋಲಿಕೆ ಮಾಡಿ... ನೆಹರು ಬೇಡ! ನನಗೆ  ನೆಹರು ಕಂಡರೆ ಆಗಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.