ADVERTISEMENT

'ಫ್ಯಾಮಿಲಿ ಕಿಟ್ಟಿ' ಎಂಬ ಹೊಸ ಕೊಂಡಿ

ಅನಿತಾ ಈ.
Published 21 ಜುಲೈ 2014, 19:30 IST
Last Updated 21 ಜುಲೈ 2014, 19:30 IST

ನೆಂಟರಿಷ್ಟರು ಒಂದೆಡೆ ಸೇರಲು ಸಮಾರಂಭ ನೆಪವಾಗುವುದು ಮಾಮೂಲು. ಆದರೆ ಬಸವೇಶ್ವರನಗರದ ಸರಳಾ ಮತ್ತು ಮಂಜುನಾಥ್‌ ದಂಪತಿ ತಿಂಗಳಿಗೊಂದು ಸಮಾರಂಭ ನಡೆಯಬೇಕು ಎನ್ನುವ ಉಮೇದು ಇಟ್ಟುಕೊಂಡವರು. ಕಳೆದ 25 ವರ್ಷಗಳಿಂದ ‘ಫ್ಯಾಮಿಲಿ ಕಿಟ್ಟಿ’ ಹೆಸರಿನಲ್ಲಿ 14 ಕುಟುಂಬಗಳ ಸಂಬಂಧಿಕರನ್ನು ಪ್ರತಿ ತಿಂಗಳು ಒಂದೆಡೆ  ಸೇರಿಸಿ, ಅವರೊಂದಿಗೆ ತಾವೂ ಸಂಭ್ರಮಿಸುವ ಅಪರೂಪದ ಅಭ್ಯಾಸವನ್ನು ಅವರು ರೂಢಿಸಿದ್ದಾರೆ.

ಪ್ರತಿ ತಿಂಗಳ ಒಂದು ಭಾನುವಾರ ಹದಿನಾಲ್ಕು ಕುಟುಂಬಗಳ ಪೈಕಿ ಒಬ್ಬರ ಮನೆಯಲ್ಲಿ ಎಲ್ಲ ಸದಸ್ಯರು ಸೇರಿ, ಸಂತೋಷವಾಗಿ ಕಾಲಕಳೆಯುತ್ತಾರೆ.

ಮನರಂಜಿಸುವ ಆಟಗಳನ್ನಾಡಿಸಿ, ಗೆದ್ದವರಿಗೆ ಬಹುಮಾನ ಕೊಡುವುದು ವಾಡಿಕೆ. ರಸವತ್ತಾದ ಭೋಜನ ಜತೆಗೆ ದೊಡ್ಡ ಮೊತ್ತದ ಹಣ ಸಿಗುವ ಲಕ್ಕಿ ಡ್ರಾ ಸಹ ಇರುವುದು ವಿಶೇಷ. ಪಾರ್ಟಿ ನಡೆಯುವ ಮನೆಗೆ ಕೆಲವರು ಹಿಂದಿನ ದಿನ ರಾತ್ರಿಯೇ ಬಂದರೆ, ಇನ್ನು ಕೆಲವರು ಭಾನುವಾರ ಬೆಳಿಗ್ಗೆ ಸೇರುತ್ತಾರೆ.

ಬೆಳಗಾಗುತ್ತಿದ್ದಂತೆ ಮನೆಯಲ್ಲಿ ಸಂಭ್ರಮ. ಕುಟುಂಬದ ಪುಟಾಣಿಗಳು ಹೊಸ ಬಟ್ಟೆ ತೊಟ್ಟು ಮನೆ ತುಂಬಾ ಓಡಾಡುವ ಸದ್ದು.

ಮತ್ತೊಂದೆಡೆ ಯುವಕ ಯುವತಿಯರು ಒಂದು ಕೋಣೆಯಲ್ಲಿ ಕುಳಿತು ಸ್ನ್ಯಾಕ್ಸ್‌ ಹಾಗೂ ಕೂಲ್‌ಡಿಂಕ್ಸ್‌ ಸವಿಯುತ್ತಾ ಕಾರ್ಡ್ಸ್‌ ಆಡುತ್ತಾರೆ. ಗೃಹಿಣಿಯರು ಅಡುಗೆ ಮನೆಯಲ್ಲಿ ಬ್ಯುಸಿ. ಎಲ್ಲ ಮುಗಿಯುವ ಹೊತ್ತಿಗೆ ಮಧ್ಯಾಹ್ನ 12 ಗಂಟೆ ಕಳೆಯುತ್ತದೆ.

ಆಗ ಪ್ರಾರಂಭವಾಗುತ್ತದೆ ನಿಜವಾದ ‘ಕಿಟ್ಟಿ ಪಾರ್ಟಿ’. ಮೊದಲು ಲಕ್ಕಿ ಡ್ರಾ. ಕುಟುಂಬದ ಪ್ರತಿ ಸದಸ್ಯರು ತಮ್ಮ ಕೈಲಾದಷ್ಟು ಹಣ ನೀಡುತ್ತಾರೆ. ಅದು ಸುಮಾರು ₨50–70 ಸಾವಿರದಷ್ಟಾಗುತ್ತದೆ. ದೊಡ್ಡ ಮೊತ್ತ ಕೊಡಲು ಆಗದವರು ಗುಂಪು ಮಾಡಿಕೊಂಡು ಕೈಲಾದಷ್ಟು ಸೇರಿಸಿ ಕೊಡುತ್ತಾರೆ. ಮನೆಗೆ ಬಂದ ಹೊಸ ಅತಿಥಿ ಅಥವಾ ಮಕ್ಕಳ ಕೈಯಿಂದ ಲಕ್ಕಿ ಡ್ರಾನಲ್ಲಿ ಚೀಟಿ ತೆಗೆಸಲಾಗುತ್ತದೆ. ಅದರಲ್ಲಿ ವಿಜೇತರಾದವರಿಗೆ ಸ್ಥಳದಲ್ಲೇ ಹಣ ನೀಡುತ್ತಾರೆ.


‘ಚೀಟಿ ಹೆಸರಲ್ಲಿ ನಿತ್ಯ ನೂರಾರು ಜನ ಮೋಸ ಹೋಗುತ್ತಿದ್ದಾರೆ. ಅದರಿಂದ ನಮ್ಮ ಕುಟುಂಬದವರನ್ನು ತಪ್ಪಿಸುವ ಸಲುವಾಗಿ ಈ ಲಕ್ಕಿ ಡ್ರಾ ಇದೆ. ಇದರಿಂದ ಒಂದೇ ಬಾರಿ ದೊಡ್ಡ ಮೊತ್ತ ಕೈಗೆ ಸಿಗುವುದರಿಂದ ಕುಟುಂಬದ ಅಗತ್ಯಕ್ಕೆ ಬಳಸಿಕೊಳ್ಳಬಹುದು. ಹಣ ಪಡೆದ ಅದೃಷ್ಟವಂತರ ಮನೆಯಲ್ಲೇ ಮುಂದಿನ ತಿಂಗಳ ಕಿಟ್ಟಿ ಆಯೋಜಿಸಲಾಗುತ್ತದೆ. ಒಂದು ವೇಳೆ ಮನೆ ಚಿಕ್ಕದಿದ್ದರೆ, ಹೋಟೆಲ್‌ ಅಥವಾ ಪಾರ್ಟಿ ಹಾಲ್‌ಗಳಲ್ಲಿ ಸಂತೋಷಕೂಟ ಏರ್ಪಡಿಸುತ್ತಾರೆ’ ಎನ್ನುತ್ತಾರೆ ಸರಳಾ.

ಊಟದಲ್ಲಿ ವೆಜ್‌, ನಾನ್‌ವೆಜ್‌ ಇರುತ್ತದೆ. ಐದಾರು ರೀತಿಯ ಖಾದ್ಯಗಳು, ಜತೆಗೆ ಒಂದು ತರಹದ ಸಿಹಿ ತಿಂಡಿ ಇದ್ದೇ ಇರುತ್ತದೆ.
ಮಧ್ಯಾಹ್ನ ಭೋಜನ ಮುಗಿಯುತ್ತಿದ್ದಂತೆ ಗೃಹಿಣಿಯರ ಆಟದ ಸಮಯ ಆರಂಭ. ಕಿಟ್ಟಿಯನ್ನು ಆಯೋಜಿಸುವವರು ಪ್ರತಿ ತಿಂಗಳೂ ಹೊಸ ಹೊಸ ಆಟಗಳನ್ನು ಪ್ಲಾನ್‌ ಮಾಡುತ್ತಾರೆ. ಒಮ್ಮೆ ಆಡಿದ ಆಟ ಮರುಕಳಿಸುವಂತಿಲ್ಲ. ಹೊಸ ಆಟ ಹುಡುಕಲು ಕೆಲವರು ಗೂಗಲ್‌ ಸರ್ಚ್‌ ಮೊರೆಹೋದರೆ, ಇನ್ನು ಕೆಲವರು ಸ್ನೇಹಿತರ ಸಹಾಯ ಪಡೆಯುತ್ತಾರೆ. ಒಂದು ನಿಮಿಷದ ಆಟ ಮತ್ತು ‘ಹೌಸಿ ಹೌಸಿ ಗೇಮ್ಸ್’ಗೆ ಆದ್ಯತೆ.
‘ಲಕ್ಕಿ ಲೇಡಿ ಕಂಟೆಸ್ಟ್’ ಪಾರ್ಟಿಯ ಇನ್ನೊಂದು ವಿಶೇಷ. ಅದಕ್ಕಾಗಿ ಕೆಲವು ಸುತ್ತುಗಳಿರುವ ಸ್ಪರ್ಧೆಯನ್ನು ಮಾಡಲಾಗುತ್ತದೆ. ಇದರಲ್ಲಿ ವಿಜೇತರಾಗುವ ಸದಸ್ಯೆಗೆ ‘ಲಕ್ಕಿ ಲೇಡಿ ಆಫ್‌ ದ ಮಂತ್‌’ ಎಂದು ಬಹುಮಾನ ನೀಡುತ್ತಾರೆ.  

‘ಅವಿಭಕ್ತ ಕುಟುಂಬಗಳಿದ್ದ ಕಾಲದಲ್ಲಿ ಸಂಬಂಧಿಕರನ್ನು ನೋಡಲು ಕಾರಣ ಬೇಕಾಗಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹಾಗಾಗಿ ಇಂತಹ ಕಿಟ್ಟಿಗಳ ಅಗತ್ಯ ಇದೆ’ ಎನ್ನುತ್ತಾರೆ ಕವಿತಾ.

ಕಿಟ್ಟಿ ಕೇವಲ ಪಾರ್ಟಿಯಾಗಿ ಉಳಿಯುವುದಿಲ್ಲ. ಇಲ್ಲಿ ಸೇರುವ ಜನರು ವರ್ಷಕ್ಕೊಮ್ಮೆ ಪ್ರವಾಸ ಹಾಗೂ ಪಿಕ್‌ನಿಕ್‌ ಹೋಗುವ ಬಗ್ಗೆ ಪ್ಲಾನ್‌ ಮಾಡಿ, ಹಣ ಒಟ್ಟುಗೂಡಿಸುತ್ತಾರೆ. ಯಾರಾದರೂ ಮನೆಯಲ್ಲೇ ಕುಳಿತು ಏನಾದರೂ ಹೊಸದಾಗಿ ತಯಾರಿಸಿದ್ದೇ ಆದರೆ ಅದನ್ನು ಕಿಟ್ಟಿಗೆ ತಂದು ತೋರಿಸುತ್ತಾರೆ. ಅದು ಯಾರಿಗಾದರೂ ಇಷ್ಟವಾದಲ್ಲಿ ಅಲ್ಲೇ ಒಂದು ಚಿಕ್ಕ ವ್ಯವಹಾರ ಪ್ರಾರಂಭವಾಗುತ್ತದೆ.  

ಸೂರ್ಯ ಕಂತುವ ಹೊತ್ತಿಗೆ ಪಾರ್ಟಿ ಮುಗಿಯುತ್ತದೆ. ಒಂದು ತಿಂಗಳ ‘ರುಟೀನಿ’ನಿಂದ ಹೊರಬಂದ ನಿರುಮ್ಮಳ ಭಾವದಲ್ಲಿ ಮನಸ್ಸುಗಳು ತಂತಮ್ಮ ಮನೆಗಳತ್ತ ಹೆಜ್ಜೆ ಹಾಕುತ್ತವೆ. ಹೋದ ಮೇಲೆ ಮತ್ತೆ ಒಂದು ತಿಂಗಳು ಯಾವಾಗ ಕಳೆಯುತ್ತದೋ ಎನ್ನುವ ನಿರೀಕ್ಷೆ ಮೂಡುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.