ADVERTISEMENT

ಬೆಂಗಳೂರಿನ ಕೆರೆಗಳು

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST

ಬದಲಾವಣೆಯ ದಾರಿಯಲ್ಲಿ ಬಹುದೂರ ಸಾಗಿ ಸಿಲಿಕಾನ್‌ ಸಿಟಿಯಾಗಿ ರೂಪುಗೊಂಡ ಈ ಮಹಾನಗರದ ಇಂದಿನ ಚಹರೆಯ ಹಿಂದೆ ಅಸಂಖ್ಯಾತ ಸಮೃದ್ಧ ಕೆರೆಗಳ ಹುತಾತ್ಮ ಕಥನವೂ ಇದೆ.

1960ರಲ್ಲಿ ಬೆಂಗಳೂರಿನ ಸುತ್ತ ಮುತ್ತ ಸುಮಾರು 280 ಕೆರೆಗಳಿದ್ದವು. ಆದರೆ ಈಗ ಅವುಗಳ ಸಂಖ್ಯೆ ಇಪ್ಪತ್ತರ ಗಡಿ ದಾಟುವುದಿಲ್ಲ.
ಅಂದರೆ ಆ ಕೆರೆಗಳೆಲ್ಲ ಏನಾದವು? ಎಲ್ಲಿ ಹೋದವು?

ಅಂದು ಕೆರೆಗಳಿದ್ದ ಜಾಗದಲ್ಲಿ ತಲೆಯೆತ್ತಿದ ಕಪ್ಪು ಗಾಜುಗಣ್ಣಿನ ಬಹುಮಹಡಿ ಕಟ್ಟಡಗಳು, ಕಪ್ಪುಹೊಗೆಯುಗುಳುವ ಬಸ್‌ಗಳಿಗೆ ಸಾಕ್ಷಿಯಾಗುವ ನಿಲ್ದಾಣಗಳು, ಜನಸಂದಣಿಯಿಂದ ಗಿಜಿಗಿಜಿಗುಡುವ ಮಾರುಕಟ್ಟೆಗಳು, ರೈಲು ನಿಲ್ದಾಣಗಳು, ಆಟದ ಮೈದಾನಗಳು, ಜೋಡಿಸಿದ ಬೆಂಕಿಪೊಟ್ಟಣದಂತಹ ವಸತಿ ನಿವಾಸಗಳು ಈ ಪ್ರಶ್ನೆಗೆ ಉತ್ತರಿಸಬೇಕಷ್ಟೆ.

ಒಂದು ಹಿನ್ನೋಟ
ಬೆಂಗಳೂರಿನ ಕೆರೆಗಳು ಅಂದಾಕ್ಷಣ ನೆನಪಿಗೆ ಬರುವುದೇ ಕೆಂಪಾಂಬುಧಿ, ಧರ್ಮಾಂಬುಧಿ, ಹಲಸೂರು ಕೆರೆ, ಎಡೆಯೂರು ಕೆರೆ, ಲಾಲ್‌ಬಾಗ್‌ ಕೆರೆ, ಸ್ಯಾಂಕಿ ಕೆರೆ, ಸಂಪಂಗಿ ಕೆರೆ ಮುಂತಾದವು. ಬೆಂಗಳೂರಿನ ಬಹುತೇಕ ಕೆರೆಗಳು ನಿರ್ಮಾಣಗೊಂಡಿದ್ದು ನಾಡಪ್ರಭು ಕೆಂಪೇಗೌಡ, ಮೈಸೂರು ಮಹಾರಾಜರು ಮತ್ತು ಬ್ರಿಟಿಷರಿಂದ.

ಕೆಂಪೇಗೌಡ ತನ್ನ ಕುಲದೇವತೆಯಾಗಿದ್ದ ಕೆಂಪಮ್ಮನ ಹೆಸರಿನಲ್ಲಿ  ಕೆಂಪಾಂಬುಧಿ ಕೆರೆಯನ್ನೂ, ಧರ್ಮದೇವತೆಯ ಹೆಸರಿನಲ್ಲಿ ಧರ್ಮಾಂಬುಧಿ ಕೆರೆಯನ್ನೂ ಕಟ್ಟಿಸಿದ. ಆದರೆ ಧರ್ಮಾಂಬುಧಿ ಕೆರೆ ಕೆಂಪೇಗೌಡನಿಗಿಂತಲೂ ಮೊದಲೇ ಅಸ್ತಿತ್ವದಲ್ಲಿತ್ತು ಎನ್ನುವುದರ ಬಗ್ಗೆಯೂ ಇತಿಹಾಸದಲ್ಲಿ ದಾಖಲೆಗಳು ಸಿಗುತ್ತವೆ.

ಬ್ರಿಟಿಷರೂ ತಮ್ಮ ಆಡಳಿತದ ಕಾಲದಲ್ಲಿ ಬೆಂಗಳೂರಿನ ಕೆರೆಗಳ ಬಗ್ಗೆ ಸಾಕಷ್ಟು ಆಸ್ಥೆ ತಳೆದಿದ್ದರು. 1866ರ ಕಾಲದಲ್ಲಿ ಚೀಫ್‌ ಕಮಿಷನರ್‌ ಆಗಿದ್ದ ಲೂಯಿಸ್‌ ಬೆಂಥಮ್‌ ಬೌರಿಂಗ್‌ ಯೋಜಿಸಿದ ನಗರದ ಚರಂಡಿ ವ್ಯವಸ್ಥೆ ಮಳೆಗಾಲದಲ್ಲಿ ನೀರು ಸಾಗಿಸುವ ಕಾಲುವೆಯಂತೆ ಕೆಲಸ ಮಾಡಿ, ಅನೇಕ ಕೆರೆಗಳನ್ನು ತುಂಬಿಸುತ್ತಿತ್ತು. ಈ ಕಾಮಗಾರಿಗಾಗಿಯೇ 1866–67ರಲ್ಲಿ ₨ 11,600 ವೆಚ್ಚ ಮಾಡಲಾಗಿತ್ತು.

1895ರವರೆಗೂ ಧರ್ಮಾಂಬುದಿ ಕೆರೆ (ಈಗ ಬಸ್‌ ಸ್ಟೇಷನ್‌), ಮಿಲ್ಲರ್ಸ್‌ ಟ್ಯಾಂಕ್‌ (ದಂಡು ರೈಲು ನಿಲ್ದಾಣದ ಎದುರಿನ ಪ್ರದೇಶ), ಸ್ಯಾಂಕಿ ಮತ್ತು ಹಲಸೂರು ಕೆರೆಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡಲಾಗುತ್ತಿತ್ತು. 1896ರಲ್ಲಿ ಹೆಸರುಘಟ್ಟ ಮತ್ತು 1993ರಲ್ಲಿ ತಿಪ್ಪಗೊಂಡನಹಳ್ಳಿ ಕೆರೆಗಳಿಂದ ನಗರಕ್ಕೆ ನೀರು ಸರಬರಾಜು ಆರಂಭಿಸಲಾಯಿತು. ಕಾವೇರಿ ನೀರಿನ ಯೋಜನೆ ಬಂದದ್ದು 1970ರಲ್ಲಿ.

ಕೆರೆಗಳಿಗೆ ಒದಗಿದ ಕುತ್ತು
ಕರ್ನಾಟಕ ಸರ್ಕಾರ ವಿಧಾನಸಭೆ ಮೂಲಕ ತಂದ ಭೂಸುಧಾರಣಾ ಕಾನೂನಿನ ಬದಲಾವಣೆ ಬೆಂಗಳೂರು ನಗರ ಅನಿಯಂತ್ರಿತವಾಗಿ ಬೆಳೆಯಲು ಅವಕಾಶ ಮಾಡಿಕೊಟ್ಟಿತು. ಈ ಸುಧಾರಣೆ ಹೊಸ ಬಡಾವಣೆಗಳು ಅಣಬೆಯಂತೆ ತಲೆಯೆತ್ತಲು ಎಡೆಮಾಡಿಕೊಟ್ಟಿತು. ಬೆಂಗಳೂರಿನ ಕೆರೆಗಳಿಗೆ ನಿಜವಾದ ಕುತ್ತು ಒದಗಿದ್ದೇ ಈ ಪ್ರಕ್ರಿಯೆಗಳಿಂದ.

ಅಂದು–ಇಂದು
ನಗರೀಕರಣದ ಕಬಂಧಬಾಹು ಎಲ್ಲಿಯವರೆಗೆ ಚಾಚಿದೆ ಎನ್ನುವುದರ ದ್ಯೋತಕ ಇಂದಿನ ಕೆರೆಗಳ ಸ್ಥಿತಿಗತಿ.  ಈಗಿನ ಸಿಟಿ ಮಾರ್ಕೆಟ್‌ ಇದ್ದ ಜಾಗದಲ್ಲಿ ಸಿದ್ದಿಕಟ್ಟೆ ಎಂಬ ಕೆರೆಯಿತ್ತು. ಧರ್ಮಾಂಬುಧಿ ಕೆರೆ ಇದ್ದ ಜಾಗ ಇಂದಿನ ಕೆಂಪೇಗೌಡ ಬಸ್‌ ನಿಲ್ದಾಣ. ಸಂಪಂಗಿ ಕೆರೆಯಲ್ಲಿ ಕಂಠೀರವ ಕ್ರೀಡಾಂಗಣ ತಲೆಯೆತ್ತಿ ನಿಂತಿದೆ. ಕೋರಮಂಗಲ ಕೆರೆ ಅಂತರರಾಷ್ಟ್ರೀಯ ಕ್ರೀಡಾಗ್ರಾಮವಾಯಿತು. ಬಿನ್ನಿಮಿಲ್‌ ಕೆರೆಯಲ್ಲಿ ಸಾಲುಸಾಲಾಗಿ ಪುರಸಭಾ ಕಟ್ಟಡಗಳು ಎದ್ದುನಿಂತಿವೆ. ತುರಕರ ಕೆರೆಯಲ್ಲಿ ಗಾಯತ್ರಿ ನಗರದ ಆಟದ ಮೈದಾನ ಕಂಗೊಳಿಸುತ್ತಿದೆ. ಜೋಗನಹಳ್ಳಿಯ ಕೆರೆಗಳ ಒಡಲಲ್ಲಿ ಮರಿಯಪ್ಪನ ಪಾಳ್ಯದ ಗಾಯತ್ರಿದೇವಿ ಪಾರ್ಕ್‌ ರೂಪುಗೊಂಡಿದೆ. ಕೆರೆಗಳನ್ನು ಮುಚ್ಚಿಯೇ ನಗರ ಈ ಸೌಲಭ್ಯ ಪಡೆಯಬೇಕಾಗಿ ಬಂದದ್ದು ಎಷ್ಟು ವಿಪರ್ಯಾಸ ಅಲ್ಲವೇ?

ಕೆರೆಗಳ ರಕ್ಷಣೆ
ನಗರದ ಸೌಂದರ್ಯವನ್ನು ಹೆಚ್ಚಿಸುವುದಷ್ಟೇ ಅಲ್ಲ, ಅದರ ಆರೋಗ್ಯ ಕಾಪಾಡುವಲ್ಲಿಯೂ ಕೆರೆಗಳ ಪಾತ್ರ ಬಹುಮುಖ್ಯವಾದದ್ದು ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ಸಂಗತಿ. ಆದರೆ ಕೆರೆಗಳ ರಕ್ಷಣೆಯ ದಾರಿ ಯಾವುದು ಎಂಬ ಪ್ರಶ್ನೆಗೆ ಮಾತ್ರ ಉತ್ತರಿಸುವವರು ಬಹಳ ಕಡಿಮೆ.

ಅಳಿಯುತ್ತಿರುವ ಕೆರೆಗಳನ್ನು ರಕ್ಷಿಸಬೇಕೆಂದರೆ ಸಮುದಾಯ ಸಹಭಾಗಿತ್ವದ ಪಾತ್ರ ದೊಡ್ಡದು. ಇದು ನಮ್ಮ ಬೆಂಗಳೂರು, ಈ ನಗರದ ಸ್ವಾಸ್ಥ್ಯ ನಮ್ಮ ಸ್ವಾಸ್ಥ್ಯವೂ ಹೌದು ಎಂಬ ಪ್ರಜ್ಞೆ ಪ್ರತಿ ನಾಗರಿಕನ ಎದೆಯಲ್ಲಿ ಇದ್ದಾಗ ಮಾತ್ರ ಕೆರೆಗಳ ರಕ್ಷಣೆಯ ಬಗ್ಗೆ ಆಶಾದಾಯಕ ಬೆಳವಣಿಗೆ ಕಾಣಬಹುದೆನೋ?

ಆದರೆ ‘ನಮ್ಮದು’ ಎಂಬ ಸಮಷ್ಠಿಪ್ರಜ್ಞೆಯನ್ನು ನಾಶಗೊಳಿಸುವುದೇ ಮಹಾನಗರದ ಮುಖ್ಯ ಗುಣವಾಗುತ್ತಿರುವಾಗ ಭವಿಷ್ಯದ ಬಗ್ಗೆ ಇರಿಸಿಕೊಳ್ಳುವ ನಂಬಿಕೆಯೂ ಭ್ರಮೆಯಾಗುವುದೇನೋ ಎಂಬ ಆತಂಕವೂ ಕಾಡುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.