ADVERTISEMENT

ಮದುವೆಗೆ ಅವಸರ ಬೇಡ...

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST
ಮದುವೆಗೆ ಅವಸರ  ಬೇಡ...
ಮದುವೆಗೆ ಅವಸರ ಬೇಡ...   

–ಸುನೀತಾ ರಾವ್‌, ಆಪ್ತ ಸಮಾಲೋಚಕಿ

* ನನ್ನ ಅತ್ತೆಯವರು ತೀರಾ ಸಣ್ಣ ವಿಷಯಕ್ಕೂ ವಿಪರೀತ ಬೈಯುತ್ತಾರೆ. ಅವಮಾನ ಮಾಡುತ್ತಾರೆ. ಅತ್ತೆಗೆ ಅಸ್ತಮಾ ಇದೆ. ವಿಪರೀತ ಅತ್ತು ಕರೆದು ಕಿರುಚಾಡಿ ನನ್ನನ್ನು ವಿಲನ್‌ನಂತೆ ಬಿಂಬಿಸಿಬಿಡುತ್ತಾರೆ. ನನ್ನ ನಾದಿನಿಯರು ಸಹ ಬೇಕೆಂದೇ ನನಗೆ ತೊಂದರೆ ಕೊಡುತ್ತಾರೆ. ಮದುವೆ ಮುರಿದುಕೊಂಡು ಹೋಗಿಬಿಡೋಣ ಎನಿಸಿಬಿಡುತ್ತದೆ. ಆದರೆ ನನ್ನ ಗಂಡ ಬಹಳ ಒಳ್ಳೆಯವರು ನನ್ನ ಸಮಸ್ಯೆಗೆ ಪರಿಹಾರ ಹೇಳಿ.
–ದಿವ್ಯಾ

ಮದುವೆಯಾದ ಮೇಲೆ ಹೆಣ್ಣುಮಕ್ಕಳ ಜೀವನದಲ್ಲಿ ಬಹಳ ಬದಲಾವಣೆ ಆಗುತ್ತದೆ. ಇದು ಸಹಜವೇ. ಆ ಹೊಸ ಕುಟುಂಬದಲ್ಲಿ ಇರುವ ಸದಸ್ಯರು ನಮಗೆ ಹೊಂದಾಣಿಕೆ ಆಗಲಿ, ಆಗದೇ ಇರಲಿ ಅವರ ಜೊತೆ ಬಾಳ್ವೆ ನಡೆಸುವುದು ಅನಿವಾರ್ಯ. ನಿಮ್ಮ ಗಂಡ ಒಳ್ಳೆಯವರಾಗಿರುವುದು ನಿಮ್ಮ ಪುಣ್ಯ ಎಂದುಕೊಳ್ಳಿ. ಎಷ್ಟೋ ಮಂದಿ ಹೆಣ್ಣುಮಕ್ಕಳಿಗೆ ಈ ಭಾಗ್ಯವೂ ಇರುವುದಿಲ್ಲ.
ನಿಮ್ಮ ಅತ್ತೆಯವರು ಅನಾರೋಗ್ಯಪೀಡಿತರಾಗಿರುವ ಕಾರಣ, ಈ ರೀತಿ ಪದೇ ಪದೇ ಕಿರಿಕಿರಿ ಅನುಭವಿಸುತ್ತಿರಬಹುದು. ಏನೇ ಇದ್ದರೂ ಒಂದಂತೂ ಸತ್ಯ. ಸೊಸೆಯಾಗಿ ನೀವು ಆ ಮನೆಯಲ್ಲಿ ಒಳ್ಳೆಯ ವಾತಾವರಣವನ್ನು ಸೃಷ್ಟಿ ಮಾಡಲೇಬೇಕು.
ನಿಮ್ಮ ಅತ್ತೆಯವರ ಜೊತೆ ಕೂತು ಅವರ ಕಷ್ಟಸುಖಗಳನ್ನು ನಿಧಾನವಾಗಿ ತಾಳ್ಮೆಯಿಂದ ಕೇಳಿ. ಅವರ ಜೊತೆ ನೀವೂ ಇದ್ದೀರಿ ಎಂದು ಅವರಿಗೆ ತೋರಿಸಿ. ಇದರಿಂದ ಸಮಸ್ಯೆಗೆ ಪರಿಹಾರ  ಸಿಕ್ಕೀತು. ಹೀಗೆ ಮಾಡಲು ಸಾಧ್ಯವಾಗದೇ ಹೋದಲ್ಲಿ ಅಥವಾ ಮಾಡಿದರೂ ಸಮಸ್ಯೆ ಬಗೆಹರಿಯದೇ ಹೋದಲ್ಲಿ ನಿಮ್ಮ ಗಂಡನ ಜೊತೆ ಕೂತು ಮಾತನಾಡಿ. ಅಮ್ಮನ ಜೊತೆ ಜಗಳವಾಡದೇ ನಿಧಾನವಾಗಿ ಅವರಿಗೆ ಈ ವಿಷಯದ ಬಗ್ಗೆ ತಿಳಿವಳಿಕೆ ಹೇಳುವಂತೆ ನಿಮ್ಮ ಗಂಡನಿಗೆ ಹೇಳಿ. ಅವರು ಹೇಳಿದರೆ ಅತ್ತೆ ಖಂಡಿತವಾಗಿಯೂ ಕೇಳುತ್ತಾರೆ. ‘ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಗಾದೆಮಾತು ಕೇಳಿದ್ದೀರಲ್ಲವೇ? ಆದ್ದರಿಂದ ಮಾತಿನಿಂದಲೇ ನೀವೀಗ ಸಮಾಧಾನ ಕಂಡುಕೊಳ್ಳಬೇಕು. ಯಾವ ಕಾರಣಕ್ಕೂ ದುಡುಕು ನಿರ್ಧಾರ ಸಲ್ಲದು.

ADVERTISEMENT

* ನಾನು ರಾಜಸ್ತಾನ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದೇನೆ. ಆದರೆ ಈ ವಿವಿಯು ಕಪ್ಪುಪಟ್ಟಿಯಲ್ಲಿದೆ. ಇದು ನನ್ನನ್ನು ಆತಂಕಕ್ಕೆ ಈಡು ಮಾಡಿದೆ. ನಾನೀಗ ಏನು ಮಾಡಲಿ ಮಾರ್ಗದರ್ಶನ ನೀಡಿ.
–ರಮೇಶ್‌  (ಹೆಸರು ಬದಲಾಯಿಸಲಾಗಿದೆ)

ವಿಶ್ವವಿದ್ಯಾಲಯವನ್ನು ಕಪ್ಪುಪಟ್ಟಿಗೆ ಸೇರಿಸಿರುವುದು ನೀವು ಪದವಿ ಪಡೆದ ಮೇಲೋ ಅಥವಾ ಪ್ರವೇಶ ಪಡೆಯುವುದಕ್ಕಿಂತ ಮುಂಚೆಯೋ ಎಂಬುದನ್ನು  ಸ್ಪಷ್ಟಪಡಿಸಿಲ್ಲ. ಇದಕ್ಕಿರುವ ಒಂದೇ ಮಾರ್ಗ ಕಾನೂನಿನ ನೆರವನ್ನು ಪಡೆಯುವುದು. ತಡ ಮಾಡದೇ ಒಳ್ಳೆಯ ವಕೀಲರನ್ನು ಸಂಪರ್ಕಿಸಿ.

* ನಾನು ಹೊರ ರಾಜ್ಯದ ಹುಡುಗನನ್ನೊಬ್ಬನನ್ನು ಪ್ರೀತಿಸುತ್ತಿದ್ದೀನಿ. ಅವನೂ ನನ್ನನ್ನು ತುಂಬಾ ಪ್ರೀತಿಸುತ್ತಾನೆ. ನಮ್ಮ ಪ್ರೀತಿಗೆ ಅವರ ತಾಯಿಯ ಒಪ್ಪಿಗೆ ಸಿಗುತ್ತಿಲ್ಲ. ನಾವೇನು ಮಾಡುವುದು ಮಾರ್ಗದರ್ಶನ ನೀಡಿ.
‌–ಶ್ವೇತಾ (ಹೆಸರು ಬದಲಾಯಿಸಲಾಗಿದೆ)

ಸಂಪ್ರದಾಯ, ಆಚರಣೆ ಎಲ್ಲಾ ವಿಭಿನ್ನ ಆಗುವ ಕಾರಣ ಪ್ರೇಮ ವಿವಾಹವನ್ನು ಇಂದಿಗೂ ಅನೇಕ ಕುಟುಂಬಗಳಲ್ಲಿ ಒಪ್ಪುವುದಿಲ್ಲ. ಅದರಲ್ಲೂ ನೀವು ಬೇರೆ ರಾಜ್ಯದ ಹುಡುಗನನ್ನು ಪ್ರೀತಿಸಿರುವಿರಿ. ಆದ್ದರಿಂದ ಇದು ಅವನ ಪೋಷಕರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇದು ಪೋಷಕರ ತಪ್ಪು ಎಂದು ಕೂಡ ಹೇಳಲು ಸಾಧ್ಯವಿಲ್ಲ. ಏಕೆಂದರೆ ಹೆತ್ತವರಿಗೆ ತಮ್ಮ ಮಕ್ಕಳು ಭವಿಷ್ಯದಲ್ಲಿ ಯಾವುದೇ ತೊಂದರೆಗೆ ಸಿಲುಕಬಾರದು ಎಂದೇ ಇರುತ್ತದೆ ಅಲ್ಲವೇ? ಪ್ರೀತಿ ಮಾಡುವ ಭರದಲ್ಲಿರುವ ಪ್ರೇಮಿಗಳಿಗೆ ಭವಿಷ್ಯದ ಬಗ್ಗೆ ಚಿಂತೆ ಇರುವುದಿಲ್ಲ. ಆದರೆ ಪೋಷಕರು ಹಾಗಲ್ಲ. ಮುಂದಿನ ಎಲ್ಲಾ ಆಗುಹೋಗುಗಳನ್ನು ವಿಚಾರ ಮಾಡುತ್ತಾರೆ. ಅವರು ಕಂಡು–ಕೇಳಿರುವ  ಕೆಟ್ಟ ವಿಷಯಗಳು ಅವರನ್ನು ಇನ್ನಷ್ಟು ಆತಂಕಕ್ಕೆ ಈಡು ಮಾಡುತ್ತವೆ. ಆದ್ದರಿಂದ ನೀವು ಕೂಡ ಮದುವೆ ವಿಷಯದಲ್ಲಿ ತರಾತುರಿ ಮಾಡಬೇಡಿ. ನೀವು ಪ್ರೀತಿಸಿರುವ ಹುಡುಗನ ಪೋಷಕರಿಗೂ ಈ ಮದುವೆ ಇಷ್ಟವಿಲ್ಲದಿದ್ದರೆ ಅದು ನಿಮ್ಮ ಭವಿಷ್ಯಕ್ಕೆ ಧಕ್ಕೆ ಆಗಬಹುದು. ಆದ್ದರಿಂದ ಮೊದಲು ಎರಡೂ ಕಡೆಯ ಪೋಷಕರು ಕೂತು ಮಾತನಾಡುವಂತೆ ಮಾಡಿ. ಅವರ ಪೋಷಕರಿಗೆ ನಿಮ್ಮ ಪೋಷಕರನ್ನು ಪರಿಚಯ ಮಾಡಿಸಿ. ಎರಡೂ ಮನೆಯವರು ಪರಸ್ಪರ ಮಾತನಾಡಿಕೊಂಡರೆ ಸಮಸ್ಯೆ ಬಗೆಹರಿಯಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.