ADVERTISEMENT

ಮರೆಯಲಾದೀತೆ ಕದಂಬ ರುಚಿ

ಬಾಲಚಂದ್ರ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಮರೆಯಲಾದೀತೆ ಕದಂಬ ರುಚಿ
ಮರೆಯಲಾದೀತೆ ಕದಂಬ ರುಚಿ   

ಮೈಸೂರಿಗೆ ಹೊರಟಿದ್ದ ನನಗೆ ನೈಸ್ ಜಂಕ್ಷನ್ ದಾಟುವ ಹೊತ್ತಿಗೆ ಹೊಟ್ಟೆ ತಾಳ ಹಾಕುತ್ತಿತ್ತು. ಹಸಿದ ಹೊಟ್ಟಿಯಲ್ಲೇ ಕದಂಬ ವೆಜ್‌ ಒಳಗೆ ಹೆಜ್ಜೆ ಇಟ್ಟೆ. ಮಾರ್ಗದಿಂದ ಕೆಲವೇ ಅಡಿ ದೂರದಲ್ಲಿರುವ ಈ ಹೊಟೆಲ್ ಸಂಪೂರ್ಣ ಹವಾನಿಯಂತ್ರಿತ. ಸಿಬ್ಬಂದಿ ನಗುಮೊಗದಿಂದ ಸೇವೆ ನೀಡುತ್ತಾರೆ.

ನಾನು ಕುಳಿತಿದ್ದ ಟೇಬಲ್‌ ಬಳಿ ಬಂದ ವೇಟರ್‌ ಅವರನ್ನೇ 'ಏನು ತಿನ್ನಬಹುದು' ಎಂದು ಕೇಳಿದೆ. 'ಇಲ್ಲಿ ಸಿಗೋ ಬಿಸಿಬೇಳೆಬಾತ್ ನಿಮಗೆ ಬೇರೆಲ್ಲೂ ಸಿಗದು' ಎಂದು ಹೆಮ್ಮೆ ಹೇಳಿಕೊಂಡರು. ಯಾವುದಕ್ಕೂ ನೋಡೋಣ ಎಂದುಕೊಂಡು ಅದನ್ನೇ ತರಲು ಆರ್ಡರ್ ಮಾಡಿದೆ.

ಕೆಲವೇ ನಿಮಿಷದಲ್ಲಿ ನಾನು ಮಾಡಿದ್ದ ಆರ್ಡರ್ ಟೇಬಲ್ ಮುಂದೆ ತಂದಿಟ್ಟರು. ತುಪ್ಪದ ಘಮ ಮೂಗಿಗೆ ಬಡಿಯಿತು. ಪರಿಮಳವೇ ಇಷ್ಟು ಚಂದ ಇದೆ. ಇನ್ನು ರುಚಿ ಹೇಗಿರಬಹುದು ಎಂದು ಮನಸ್ಸಿನಲ್ಲೇ ಅಂದಾಜಿಸಿದೆ. ರುಚಿ ನಾಲಿಗೆಗೂ ಖುಷಿಕೊಟ್ಟಿತು. ಬಿಸಿಬೇಳೆಬಾತ್‌ ಅಷ್ಟು ತೆಳ್ಳಗೂ ಅಲ್ಲ- ಹಾಗಂತ ವಿಪರೀತ ಗಟ್ಟಿಯೂ ಅಲ್ಲ. ಅದರದ್ದೇ ಆದ ಒಂದು ಹದದಲ್ಲಿ ಇತ್ತು. ಆಮೇಲೆ ಸಿಹಿ ಪೊಂಗಲ್, ಖಾರಬಾತ್‌ಗಳ ರುಚಿಯನ್ನೂ ನೋಡಿದೆ. ಬೆಲೆ ಅಷ್ಟೇನೂ ತುಟ್ಟಿ ಅನಿಸಲಿಲ್ಲ.

ADVERTISEMENT

ಬೆಂಗಳೂರು ಶೈಲಿಯ ಬಿಸಿಬೇಳೆಬಾತ್‌ ತುಸು ತೆಳ್ಳಗಿರುತ್ತದೆ. ಆದರೆ ಕದಂಬ ಹೊಟೆಲ್‌ನಲ್ಲಿ ಮಾತ್ರ ಮದ್ರಾಸಿ ಶೈಲಿಯಲ್ಲಿ ಅಂದರೆ ತುಸು ಗಟ್ಟಿಯಾಗಿರುತ್ತದೆ. ಶುದ್ಧ ತುಪ್ಪವನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಬೆಳ್ಳುಳ್ಳಿ ಬಳಕೆ ಇಲ್ಲ. ಹೀಗಾಗಿ ರುಚಿ ಮತ್ತು ಪರಿಮಳ ವಿಶಿಷ್ಟ ಎನಿಸುತ್ತೆ. ಬೆಳ್ಳುಳ್ಳಿ ಬಳಸದ ಅನೇಕ ಖಾದ್ಯಗಳು ಇಲ್ಲಿ ಲಭ್ಯ. ದಕ್ಷಿಣ ಭಾರತದ ಖಾದ್ಯಗಳ ಜೊತೆಗೆ ಉತ್ತರ ಭಾರತದ ತಿನಿಸುಗಳೂ ಇಲ್ಲಿ ಸಿಗುತ್ತವೆ.

ಮಧ್ಯಾಹ್ನದ ಹೊತ್ತಿನಲ್ಲಿ ಕುಟುಂಬದ ಸಮೇತ ಊಟಕ್ಕೆ ತೆರಳುವವರಿಗೂ ಈ ರೆಸ್ಟೊರೆಂಟ್ ಹೇಳಿ ಮಾಡಿಸಿದಂತಿದೆ. ವಿಶಾಲವಾದ ಜಾಗದ ಜತೆಗೆ ನಗೆಮೊಗದ ಸೇವೆ ನೀಡುವ ಸಿಬ್ಬಂದಿ ಇರುವುದರಿಂದ ಊಟ ತಿಂದು ಮುಗಿಸಿದ್ದೇ ಗೊತ್ತಾಗುವುದಿಲ್ಲ. ನಾನು ಹೊಟೆಲ್‍ಗೆ ಭೇಟಿ ನೀಡಿದ್ದಾಗ ಈಶಾನ್ಯ ಭಾರತದ ವಿದ್ಯಾರ್ಥಿನಿಯರು ದಂಡೇ ನೆರೆದಿತ್ತು.

ಹೊಟೆಲ್ ಮಾಲೀಕ ಎಂ.ವಿ.ರಾಘವೇಂದ್ರರಾವ್‌ ಸಹ ಅಲ್ಲಿಯೇ ಮಾತಿಗೆ ಸಿಕ್ಕರು. 'ನನ್ನದು ಕುಂದಾಪುರ ಮೂಲ. ಸುಮಾರು 35 ವರ್ಷಗಳಿಂದಲೂ ಉದ್ಯಮದಲ್ಲಿದ್ದೇನೆ. ಬಿಎಂಟಿಸಿ ಬಸ್ ನಿಲ್ದಾಣದಲ್ಲಿ 1987ರಲ್ಲಿ ಮೊದಲ ರೆಸ್ಟೊರೆಂಟ್ ತೆರೆದೆ. ಈಗ ನಗರದ ವಿವಿಧೆಡೆ ಒಟ್ಟು 9 ರೆಸ್ಟೊರೆಂಟ್‍ ನಡೆಸುತ್ತಿದ್ದೇನೆ. ಬೆಂಗಳೂರಿನಲ್ಲಿ ಕದಂಬ ಎನ್ನುವುದು ಒಂದು ಪ್ರತಿಷ್ಠಿತ ಬ್ರಾಂಡ್ ಆಗಿದೆ' ಎಂದು ಉತ್ಸಾಹದಿಂದ ತಾವು ನಡೆದು ಬಂದ ಹಾದಿ ನೆನಪಿಸಿಕೊಂಡರು.

ಮನೆಗೆ ಊಟೋಪಚಾರ ತಲುಪಿಸುವ ಸೇವೆಯನ್ನೂ ಕದಂಬ ಆರಂಭಿಸಿದೆ. ಆದರೆ ಕನಿಷ್ಠ ಆರ್ಡರ್‌ 25 ಆಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.