ADVERTISEMENT

ಮಾಡೆಲಿಂಗ್‌ನ ಹೊಸ ಮಿಂಚು ನವ್ಯತಾ ರೈ

ಇ.ಎಸ್.ಸುಧೀಂದ್ರ ಪ್ರಸಾದ್
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಮಾಡೆಲಿಂಗ್‌ನ ಹೊಸ ಮಿಂಚು ನವ್ಯತಾ ರೈ
ಮಾಡೆಲಿಂಗ್‌ನ ಹೊಸ ಮಿಂಚು ನವ್ಯತಾ ರೈ   

ಈಕೆ ನಕ್ಕರೆ ಸೌಂದರ್ಯದ ಘನಿ, ನರ್ತಿಸಿದರೆ ಅಪ್ಸರೆ, ಬೈಕ್‌ ಏರಿದರೆ ಟಾಮ್‌ಬಾಯ್‌, ಯೂಟ್ಯೂಬ್‌ ಚಾನಲ್‌ನಲ್ಲಿ ಖ್ಯಾತ ನಟಿಯರ ಸಂಭಾಷಣೆಗೆ ತುಟಿಚಲನೆ ಮಾಡುತ್ತಾ, ಮುಖದಲ್ಲೇ ಭಾವಾಭಿನಯ ತೋರುವ ಚತುರೆ...

ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ಎಂಜಿನಿಯರಿಂಗ್‌ನ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ನವ್ಯತಾ ರೈಗೆ ಮಿಸ್‌ ಧಾರವಾಡ ಕಿರೀಟ ಮುಡಿಗೇರಿಸಿಕೊಳ್ಳಲು ಇಷ್ಟು ಸಾಕಾಯ್ತು.

ದಕ್ಷಿಣ ಕನ್ನಡದ ಮಂಗಳೂರಿನ ಈ ಬೆಡಗಿ ಉತ್ತರ ಕರ್ನಾಟಕದ ಧಾರವಾಡದಲ್ಲಿ ನೆಲೆಸಿ 17 ವರ್ಷಗಳಾಗಿವೆ. ತಂದೆ ವಿಜಯಕುಮಾರ ರೈ ನಿಸ್ಸಾನ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರ್‌. ತಾಯಿ ಲತಾ ರೈ ಸೌಂದರ್ಯ ತಜ್ಞೆ. ಹೀಗಾಗಿ ನವ್ಯತಾ ತಾಯಿಯೊಂದಿಗೆ ಸೌಂದರ್ಯ ಆರೈಕೆ ಪಾಠವನ್ನೂ ತಂದೆಯಿಂದ ಪ್ರಯೋಗಾತ್ಮಕ ಕಲಿಕೆಯನ್ನೂ ರೂಢಿಸಿಕೊಂಡಿದ್ದರ ಪರಿಣಾಮ ಈಗ ಆಕೆ ಮಿಸ್‌ ಧಾರವಾಡದ ಜತೆಗೆ ಯೂಟ್ಯೂಬ್‌ನಲ್ಲಿ ತನ್ನದೇ ಆದ Navyatha.V.Rai ಚಾನಲ್‌ನಲ್ಲಿ ನಿರೂಪಕಿಯಾಗಿ, ನಟಿಯಾಗಿ, ನೃತ್ಯಗಾರ್ತಿಯಾಗಿ ರಂಜಿಸುತ್ತಿದ್ದಾರೆ.

ADVERTISEMENT

‘ರ‍್ಯಾಂಪ್‌ ತುಳಿಯಬೇಕು ಎಂಬುದು ನನ್ನ ಆಯ್ಕೆಯಾಗಿರಲಿಲ್ಲ. ಇದೊಂದು ಬಯಸೇ ಬಂದ ಭಾಗ್ಯ. ಈ ಮೊದಲು ಎಲೈಟ್‌ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ಆಕಸ್ಮಿಕವಾಗಿ ಭಾಗವಹಿಸಿದ್ದೆ. ಅಲ್ಲಿ ಅಂತಿಮ ಸುತ್ತಿಗೂ ಆಯ್ಕೆಯಾಗಿದ್ದೆ. ಆದರೆ ಪರೀಕ್ಷೆ ಇದ್ದ ಕಾರಣ ಸ್ಪರ್ಧೆಯನ್ನು ಮುಂದುವರಿಸಲು ಆಗಿರಲಿಲ್ಲ. ಮಿಸ್ ಧಾರವಾಡದಕ್ಕೆ ಅಂಥ ಯಾವುದೇ ಅಡೆತಡೆಗಳು ಇಲ್ಲದ ಕಾರಣ ಸ್ಪರ್ಧಿಸಿದೆ. ರನ್ನರ್‌ ಅಪ್ ಆಗಬಹುದು ಎಂದೆನಿಸಿತ್ತು, ಆದರೆ ಮೊದಲ ಸ್ಥಾನವೇ ಲಭಿಸಿದ್ದು ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ತಮ್ಮ ಈವರೆಗಿನ ಪಯಣವನ್ನು ನವ್ಯತಾ ಬಿಚ್ಚಿಟ್ಟರು.

‘ಯಾವುದೇ ಕಲಸವಾಗಲಿ ನನಗೆ ಆತ್ಮವಿಶ್ವಾಸ ಇಲ್ಲ ಎಂದಾದರೆ ನಾನು ಅದಕ್ಕೆ ವ್ಯರ್ಥ ಪ್ರಯತ್ನ ಮಾಡಲಾರೆ. ಹಾಗೆಯೇ ಅಂಥ ಯಾವುದೇ ಸವಾಲನ್ನು ಸ್ವೀಕರಿಸಿದರೆ ಅದಕ್ಕೆ ಸಂಪೂರ್ಣ ನ್ಯಾಯ ದೊರಕಿಸುವುದು ನನ್ನ ರೂಢಿ. ಹೀಗಾಗಿ ನನ್ನ ಆಸಕ್ತಿಗಳಿಗೆ ನನ್ನ ಪೋಷಕರು ಪ್ರೋತ್ಸಾಹ ಇರುವುದು ನನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ’ ಎಂದು ಮತ್ತಷ್ಟು ಬೀಗಿದರು.

‘ಸೌಂದರ್ಯ ಸ್ಪರ್ಧೆಗೆ ನನ್ನ ತಾಯಿಯೇ ನನಗೆ ಮೇಕಪ್‌ ಮಾಡಿದ್ದರು. ಅವರು ವಿನ್ಯಾಸಗೊಳಿಸಿದ ಉಡುಪನ್ನೇ ನಾನು ತೊಟ್ಟಿದ್ದೆ. ಆಡಿಷನ್‌ನಿಂದ ಅಂತಿಮ ಸುತ್ತಿನವರೆಗೂ ಅವರು ನನಗೆ ಬೆಂಬಲವಾಗಿ ನಿಂತಿದ್ದರು’ ಎಂದು ಪೋಷಕರ ಬೆಂಬಲವನ್ನು ನವ್ಯತಾ ನೆನೆದರು.

ಓದಿನೊಂದಿಗೆ ಬಹಳಷ್ಟು ಹವ್ಯಾಸಗಳನ್ನು ರೂಢಿಸಿಕೊಂಡಿರುವ ನವ್ಯತಾ, ಫ್ರೀಸ್ಟೈಲ್‌ ನರ್ತಕಿ ಕೂಡಾ. ಅವರ ನೃತ್ಯದ ಕೆಲವೊಂದು ತುಣುಕುಗಳು ಯೂಟ್ಯೂಬ್‌ ಚಾನಲ್‌ನಲ್ಲಿವೆ.

‘ನರ್ತಿಸುವುದು ನನಗಿಷ್ಟ. ಹೀಗಾಗಿ ವೆಸ್ಟರ್ನ್‌, ಪಾಪ್‌ ಹಾಗೂ ಫ್ರೀಸ್ಟೈಲ್‌ನ ಅಭ್ಯಾಸ ಮಾಡಿದೆ. ಹಲವಾರು ನೃತ್ಯ ಕಾರ್ಯಕ್ರಮಗಳನ್ನೂ ನೀಡಿದ್ದೇನೆ. ಅದನ್ನು ಗಮನಿಸಿದ ಹಲವರು ತಾವು ನಡೆಸುವ ನೃತ್ಯ ಸ್ಪರ್ಧೆಗಳಿಗೆ ತೀರ್ಪು ನೀಡಲು ನನ್ನನ್ನು ಕರೆದಿದ್ದಾರೆ. ಇದುವೇ ನನ್ನ ವ್ಯಾಯಾಮ. ಹೀಗಾಗಿ ನಾನು ಯಾವುದೇ ಜಿಮ್‌ನ ಕದ ತಟ್ಟಿಲ್ಲ. ನರ್ತನೆಯಿಂದ ನನ್ನ ದೇಹ ಹಾಗೂ ಮನಸ್ಸು ಎರಡಕ್ಕೂ ಉತ್ತಮ ವ್ಯಾಯಾಮ ಸಿಗುತ್ತಿದೆ’ ಎಂದರು.

ಊಟ ತಿಂಡಿಯಲ್ಲಿ ಅಷ್ಟಾಗಿ ನಿಯಮ ಪಾಲಿಸದ ನವ್ಯತಾಗೆ ಚಿಕ್ಕನ್‌ ಖಾದ್ಯ ಎಂದರೆ ಅಚ್ಚುಮೆಚ್ಚಂತೆ. ಇದನ್ನು ಹೊರತುಪಡಿಸಿ ಕುಚಲಕ್ಕಿ ಮೀನುಸಾರು, ನೀರುದೋಸೆಯೂ ಇವರಿಷ್ಟದ ಊಟವಂತೆ.

‘ನಾನು ಟಾಮ್‌ಬಾಯ್‌ ಕೂಡಾ ಹೌದು’ ಎಂದು ಕಿಸಕ್ಕನೆ ನಕ್ಕ ನವ್ಯತಾ ಬೈಕ್‌ ಜರ್ನಿ ಆರಂಭವಾಗಿದ್ದು ಹೀರೊಹೊಂಡ ಸಿಡಿ 100ನಿಂದ. ಇದರ ಗುರು ಸ್ವತಃ ಅವರ ತಂದೆ. ಹೀಗಾಗಿ ಇಂದಿಗೂ ಆ ಬೈಕ್ ಎಂದರೆ ಇವರಿಗೆ ಅಚ್ಚುಮೆಚ್ಚಂತೆ. ಇಷ್ಟೆಂದ ಮಾತ್ರಕ್ಕೆ ಅವರ ಬೈಕ್‌ ಖಯಾಲಿ ಇಲ್ಲಿಗೇ ಮುಗಿಯಲಿಲ್ಲ. ಕೆಟಿಎಂ ಡ್ಯೂಕ್‌ ಬೈಕ್‌ ಓಡಿಸುತ್ತಾರೆ. ಸದ್ಯ ರಾಯಲ್ ಎನ್‌ಫೀಲ್ಡ್‌ ಸವಾರಿಗೆ ತಯಾರಿ ನಡೆಸಿದ್ದಾರೆ.

ಗ್ರೀಟಿಂಗ್ಸ್‌, ಸ್ಕ್ರಾಪ್‌ ಬುಕ್‌ ಸಿದ್ಧಪಡಿಸುವುದು ನವ್ಯತಾ ಇಷ್ಟಪಡುವ ಮತ್ತೊಂದು ಹವ್ಯಾಸ. ಡಬ್‌ಸ್ಮಾಶ್‌ ಎಂಬ ಖ್ಯಾತ ನಟ, ನಟಿಯರ ಧ್ವನಿಗೆ ಮುಖಾಭಿನಯ ವ್ಯಕ್ತಪಡಿಸುವುದರಲ್ಲೂ ಈಕೆ ಚತುರೆ. ಜೆನೆಲಿಯಾ, ಕಂಗನಾ ರನೌಟ್‌, ರಾಧಿಕಾ ಪಂಡಿತ್‌ ಹೀಗೆ ನಟನಾ ಕೌಶಲ್ಯವನ್ನೂ ಮೆರೆದಿದ್ದಾರೆ.

ಇವರ ಊರು ಮಂಗಳೂರಿನ ಪುತ್ತೂರು. ಹೀಗಾಗಿ ತುಳು ನವ್ಯತಾ ಅವರ ಮಾತೃಭಾಷೆ. ಬಾಲ್ಯ ಕಳೆದದ್ದು ಪುದುಚೆರಿಯಲ್ಲಿ ಈಗಾಗಿ ತಮಿಳು ಮಾತನಾಡಬಲ್ಲರು. ಇದರೊಂದಿಗೆ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳನ್ನೂ ನವ್ಯತಾ ಮಾತನಾಡಬಲ್ಲರು.

ಫ್ಯಾಂಟಮ್‌ ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿ ನಿರೂಪಕಿಯಾಗಿರುವ ಇವರು, ಆನ್‌ಲೈನ್‌ ಮೂಲಕವೇ ನಟ, ನಟಿಯರ ಹಾಗೂ ಖ್ಯಾತ ನಾಮರ ಸಂದರ್ಶನಗಳನ್ನು ಮಾಡುತ್ತಾರೆ. ಹಲವು ಕಾರ್ಯಕ್ರಮಗಳನ್ನೂ ನಿರೂಪಿಸಿದ್ದಾರೆ. ಇದಕ್ಕಾಗಿ ಇವರಿಗೆ ಸಂಭಾವನೆಯೂ ಇದೆ. ಹೀಗೆಯೇ ಓದಿನ ಜತೆಗೆ ಸಾಂಸ್ಕೃತಿಕ ಲೋಕದಲ್ಲಿ ಮಿಂಚುತ್ತಿರುವ ಇವರಿಗೆ ಇಲ್ಲಿ ಸಿಗುವ ಸಂಭಾವನೆಯೇ ಪಾಕೆಟ್‌ಮನಿಯಂತೆ. ಇವಿಷ್ಟು ಕಲೆ ಹಾಗೂ ಸಾಂಸ್ಕೃತಿಕ ಲೋಕದ ನವ್ಯತಾ ಪಯಣವಾದರೆ, ಇನ್ನು ಕ್ರೀಡಾ ಲೋಕದಲ್ಲೂ ಇವರು ತಮ್ಮ ಛಾಪು ಮೂಡಿಸಿದ್ದಾರೆ. ಚದುರಂಗದಲ್ಲಿ ರಾಜ್ಯಮಟ್ಟದ ಆಟಗಾರ್ತಿಯೂ ಇವರು.  ಇಷ್ಟೆಲ್ಲಾ ಪ್ರತಿಭೆ ಇರುವ ನವ್ಯತಾ ಮಾಡೆಲಿಂಗ್‌ ಅಥವಾ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು.

‘ಮಾಡೆಲಿಂಗ್‌ ಕ್ಷೇತ್ರ ಸೌಂದರ್ಯ ಇರುವವರೆಗೂ ಮಾತ್ರ. ಹೀಗಾಗಿ ಅದನ್ನು ವೃತ್ತಿ ಬದುಕು ಎಂದು ಕರೆಯಲಾಗದು. ಯಾವುದು ದೀರ್ಘಕಾಲದವರೆಗೆ ವೃತ್ತಿಯನ್ನು ಕಟ್ಟಿಕೊಡುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಬೇಕೆಂದಿದ್ದೇನೆ’ ಎನ್ನುವುದು ಅವರ ಉತ್ತರ.

‘ಹಳಿಯಾಳದಲ್ಲಿ ಎಂಜಿನಿಯರಿಂಗ್‌ ಅಂತಿಮ ವರ್ಷದಲ್ಲಿ ಓದುತ್ತಿರುವ ನನಗೆ ಈಗಾಗಲೇ ಕ್ಯಾಂಪಸ್‌ ಮೂಲಕ ನೌಕರಿ ಲಭಿಸಿದೆ. ಬರುವ ಮೇ 1ರಿಂದ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ವೃತ್ತಿ ಬದುಕು ಆರಂಭವಾಗಲಿದೆ. ಈ ನಡುವೆ ಉತ್ತಮ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತಾ ಇಲ್ಲ ಎನ್ನಲಾರೆ’ ಎಂಬುದು ಅವರ ನಿರೀಕ್ಷೆ.

‘ಈಗಾಗಲೇ ಬಿಡುಗಡೆಯಾಗದ ಕೊಂಕಣಿ ಸಿನಿಮಾದಲ್ಲಿ ನಟಿಸಿದ್ದೇನೆ. ಒಂದೊಮ್ಮೆ ಅವಕಾಶ ಸಿಕ್ಕರೆ ಕನ್ನಡ ಹಾಗೂ ತಮಿಳು ಸಿನಿಮಾ ರಂಗದಲ್ಲಿ ನಟಿಸಬೇಕು ಎಂಬ ಆಸೆ ಇದೆ. ಕನ್ನಡದಲ್ಲಾದರೆ ಪುನೀತ್ ರಾಜ್‌ಕುಮಾರ್‌, ಯಶ್‌ ಹಾಗೂ ಸುದೀಪ್‌ ಅವರೊಂದಿಗೆ ನಟಿಸುವಾಸೆ. ತಮಿಳಿನಲ್ಲಿ ಸೂರ್ಯ ಅವರೊಂದಿಗೆ ನಟಿಸಬೇಕು ಎಂಬುದು ಮಹದಾಸೆ’ ಎನ್ನುತ್ತಾರೆ ನವ್ಯತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.