ADVERTISEMENT

ಯುಗಾದಿಗೆ ಚಿಗುರಿದ ನಗರದ ಮಾರುಕಟ್ಟೆ

ಮಂಜುನಾಥ ರಾಠೋಡ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST
ಯುಗಾದಿಗೆ ಚಿಗುರಿದ ನಗರದ ಮಾರುಕಟ್ಟೆ
ಯುಗಾದಿಗೆ ಚಿಗುರಿದ ನಗರದ ಮಾರುಕಟ್ಟೆ   

ಹಬ್ಬಗಳಿಗೂ ಮಾರುಕಟ್ಟೆಗೂ ನೇರ ಸಂಬಂಧ. ಹಬ್ಬ ಹೊಸ್ತಿಲಲ್ಲಿದ್ದಂತೆಯೇ ಹೂವು, ಹಣ್ಣು, ತರಕಾರಿ, ದಿನಸಿ, ಬಟ್ಟೆ ಇನ್ನೂ ಹಲವು ವಸ್ತುಗಳ ಬೆಲೆಯಲ್ಲಿ ಏರುಪೇರಾಗುವುದು ಸಹಜ.

ಪ್ರಮುಖ ಹಬ್ಬವಾದ ಯುಗಾದಿ ಬಂತೆಂದರಂತೂ ಮಾರುಕಟ್ಟೆ ಗರಿಗೆದರಿ ನಿಲ್ಲುತ್ತದೆ. ಹಬ್ಬ ಹೂವು, ಹಣ್ಣು, ತರಕಾರಿ, ಬಟ್ಟೆ ಹಾಗೂ ಇತರೆ ದಿನಬಳಕೆ ವಸ್ತುಗಳ ಜತೆಗೆ ಮಾವು, ಬೇವುಗಳಿಗೂ ಮಾರುಕಟ್ಟೆ ಒದಗಿಸುತ್ತದೆ ಯುಗಾದಿ.

‘ಹಬ್ಬದ ಮಾರಾಟಕ್ಕೆಂದು ಮುಂಚಿತವಾಗಿಯೇ ದಿನಸಿ ದಾಸ್ತಾನು ಮಾಡಿಕೊಂಡಿರುತ್ತೇವೆ, ಯುಗಾದಿಗೆ ತಯಾರಿಸುವ ಹೋಳಿಗೆ, ಕೋಸಂಬರಿ, ಇನ್ನಿತರ ಖಾದ್ಯಗಳಿಗೆ ಅವಶ್ಯಕವಾದ ದಿನಸಿ ಪದಾರ್ಥಗಳನ್ನು ಎಂದಿಗಿಂತಲೂ ಹೆಚ್ಚಿಗೆ ತಂದಿದ್ದೇವೆ’ ಎಂದು ಭದ್ರಪ್ಪ ಬಡಾವಣೆಯ ದಿನಸಿ ಅಂಗಡಿ ಮಾಲೀಕ ರವಿ ಹೇಳುತ್ತಾರೆ.

ADVERTISEMENT

‘ಬೆಲ್ಲ, ಬೇಳೆ, ಹೆಸರುಕಾಳು, ಮಸಾಲೆ ಪದಾರ್ಥಗಳು, ಹರಳೆಣ್ಣೆಗೆ ಯುಗಾದಿಗೆ ಹೆಚ್ಚು ಬೇಡಿಕೆಯಂತೆ.

ದೊಡ್ಡ ಬ್ರ್ಯಾಂಡೆಡ್ ಬಟ್ಟೆಗಳ ಷೋರೂಮ್‌ಗಳು ರಿಯಾಯಿತಿ ನೀಡಿ ಜನರನ್ನು ಸೆಳೆಯಲು ಪ್ರಯತ್ನಿಸುತ್ತವೆ. ಸಣ್ಣ ಮಳಿಗೆಯವರು ವ್ಯಾಪಾರ ಹೆಚ್ಚಿಗೆ ಆಗುವ ಕಾರಣ ಮಾಮೂಲಿಗಿಂತ ಕಡಿಮೆ ಲಾಭಕ್ಕೆ ಹೆಚ್ಚು ಬಟ್ಟೆ ಮಾರಿ ಲಾಭ ಮಾಡಿಕೊಳ್ಳುತ್ತಾರೆ ಎಂದು, ದೂರುವ ಧಾಟಿಯಲ್ಲಿ ಹೇಳುತ್ತಾರೆ ಹೆಬ್ಬಾಳದ ‘ಫ್ಯಾಷನ್ ಜೋನ್’ ಬಟ್ಟೆ ಮಳಿಗೆ ಮಾಲೀಕ ಪ್ರಮೋದ್ ಕುಮಾರ್.

ತರಕಾರಿಯಲ್ಲಿ ಎಷ್ಟು ವೈವಿಧ್ಯ ಇದ್ದರೂ ಯುಗಾದಿಯ ಊಟ ಪೊಗದಸ್ತಾದಂತೆ. ಯುಗಾದಿಗೆ ಇಂತಹುದೇ ತರಕಾರಿ ಹೆಚ್ಚಿಗೆ ಮಾರಾಟವಾಗುತ್ತದೆ ಎನ್ನಲು ಸಾಧ್ಯವಿಲ್ಲ ಆದರೆ ಮಾರಾಟ ಹೆಚ್ಚಾಗುವುದಂತೂ ಮಾಮೂಲಾಗಿದೆ ಎನ್ನುತ್ತಾರೆ ಸಂಜಯ್‌ ನಗರದ ತರಕಾರಿ ವ್ಯಾಪಾರಿ ಸರೋಜಮ್ಮ.

ಹಬ್ಬಕ್ಕೆ ತರಕಾರಿ ಬೆಲೆ ಹೆಚ್ಚಾಗುತ್ತದೆ ಎನ್ನಲಾಗದು, ಮಳೆ ಕೊರತೆಯಿಂದಾಗಿ ತರಕಾರಿ ಬೆಲೆ ಸಾಮಾನ್ಯವಾಗೇ ಹೆಚ್ಚೇ ಇದೆ. ಯುಗಾದಿಗೆ ಎಲೆಕ್ಟ್ರಾನಿಕ್ಸ್‌ ಮಳಿಗೆಗಳು, ಮೊಬೈಲ್‌ ಮಳಿಗೆಗಳು ವಾಹನ ಕಂಪೆನಿಗಳೂ ಪೈಪೋಟಿಗೆ ಬಿದ್ದಂತೆ ರಿಯಾಯಿತಿ ದರ ನೀಡುವುದು ಗ್ರಾಹಕರಿಗೂ ಸಂಭ್ರಮ ತರುತ್ತದೆ.

ಯಲಹಂಕದ ಪೈ ಇಂಟರ್‌ನ್ಯಾಷನಲ್ ಷೋರೂಂನ ವ್ಯವಸ್ಥಾಪಕ ಪ್ರಸಾದ್ ಅವರ ಪ್ರಕಾರ ಯುಗಾದಿಗೆ ಸಾಮಾನ್ಯವಾಗಿ ಮೊಬೈಲ್‌ಗಳು, ಗೃಹೋಪಯೋಗಿ ವಸ್ತುಗಳು, ಎಸಿ, ಫ್ಯಾನ್‌ ಹೆಚ್ಚು ವ್ಯಾಪಾರವಾಗುತ್ತವೆ.

***

ಯುಗಾದಿ ಸಮಯದಲ್ಲಿ ಹೂವಿಗೆ ಬೇಡಿಕೆ ಹೆಚ್ಚು. ಹಾಗಾಗಿ ಮುಂಚಿತವಾಗಿಯೇ ರೈತರನ್ನು ಬುಕ್ ಮಾಡಿಕೊಳ್ಳುತ್ತೇವೆ. ಹಬ್ಬದ ಹಿಂದಿನ ದಿನ ವ್ಯಾಪಾರ ಪ್ರಾರಂಭಿಸುತ್ತೇವೆ.

–ನವೀನ್‌ ಕುಮಾರ್, ಹೂವಿನ ವ್ಯಾಪಾರಿ, ಕೆ.ಆರ್.ಮಾರ್ಕೆಟ್‌

***

ಹಬ್ಬಕ್ಕೆ ರಿಯಾಯಿತಿ ಇರುವುದರಿಂದ ಜನರು ಖರೀದಿಗೆ ಉತ್ಸಾಹ ತೋರಿಸುತ್ತಾರೆ. ಪ್ರತಿದಿನ ನಮ್ಮಲ್ಲಿ ಹಬ್ಬದ ಸಡಗರ ಕಾಣಬಹುದು.

–ಪ್ರಸಾದ್, ವ್ಯವಸ್ಥಾಪಕ, ಪೈ ಇಂಟರ್‌ನ್ಯಾಷನಲ್‌ (ಯಲಹಂಕ)

***

ಉಳಿದ ಹಬ್ಬಗಳಿಗಿಂತಲೂ ಯುಗಾದಿಗೆ ಹೊಸ ಬಟ್ಟೆ ಖರೀದಿಸುವವರ ಸಂಖ್ಯೆ ಹೆಚ್ಚು.

–ಪ್ರಮೋದ್‌ ಕುಮಾರ್, ಫ್ಯಾಷನ್ ಜೋನ್ ಬಟ್ಟೆ ಅಂಗಡಿ ಮಾಲೀಕ, ಹೆಬ್ಬಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.