ADVERTISEMENT

ಸರಿಹೋದಳು ಇಲಿಯಾನಾ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಸರಿಹೋದಳು ಇಲಿಯಾನಾ
ಸರಿಹೋದಳು ಇಲಿಯಾನಾ   

ಮಾದಕ ಮೈಮಾಟದ ಗೋವಾ ಸುಂದರಿ ಇಲಿಯಾನಾ ಡಿ ಕ್ರೂಜ್‌ ಕೆಲದಿನಗಳ ಹಿಂದೆ ಹಾಗೇ ಸುಮ್ಮನೆ ಒಂದು ಟ್ವೀಟ್‌ ಮಾಡಿದ್ದರು. ‘ನಮ್ಮನ್ನು ನಾವು ತಿದ್ದಿಕೊಳ್ಳುವ ಹಾದಿಯಲ್ಲಿ ಸ್ವೀಕಾರ ಮನೋಭಾವ ಮೊದಲ ಹೆಜ್ಜೆ. ನಾನು ಪ್ರತಿದಿನ ಪ್ರಯತ್ನಿಸುತ್ತಿದ್ದೇನೆ’. ನಮ್ಮಲ್ಲಿನ ಕೊರತೆಗಳನ್ನು, ದೌರ್ಬಲ್ಯಗಳನ್ನು ಒಪ್ಪಿಕೊಳ್ಳುವುದರಿಂದ ನಮ್ಮನ್ನು ನಾವು ಗೆಲ್ಲುವುದು ಸುಲಭ ಎಂಬುದು ಅವರ ಅನಿಸಿಕೆ.

ಇಲಿಯಾನಾ ಹಾಗೆ ಪೋಸ್ಟ್‌ ಮಾಡಿರುವುದರ ಹಿಂದೆ ಒಂದು ಕತೆಯೇ ಇದೆ. ಮೂರು ವರ್ಷಗಳಿಂದ ಅವರನ್ನು ಹೈರಾಣಾಗಿಸಿದ್ದ ಖಿನ್ನತೆ ಮತ್ತು ತಮ್ಮ ಕುರಿತು ಕೀಳರಿಮೆ ಹೊಂದುವ ‘ಬಾಡಿ ಡಿಸ್ಮಾರ್ಫಿಕ್‌ ಡಿಸಾರ್ಡರ್‌’ (ಬಿಡಿಡಿ) ಎಂಬ ಮಾನಸಿಕ ಸಮಸ್ಯೆಯಿಂದ ಅವರೀಗ ಸಂಪೂರ್ಣವಾಗಿ ಹೊರಬಂದಿದ್ದಾರೆ.

‘ಸರಿಯಾಗಿ ಮೂರು ವರ್ಷಗಳ ಹಿಂದೆ ನನಗೆ ಏನೋ ಒಂದು ರೀತಿಯ ಸಮಸ್ಯೆ ಶುರುವಾಗಿತ್ತು. ಅದೇನೆಂದು ನನಗೇ ಗೊತ್ತಿರಲಿಲ್ಲ. ಕೀಳರಿಮೆಯೂ ಕಾಡುತ್ತಿತ್ತು. ವೈದ್ಯಕೀಯ ಪರಿಭಾಷೆಯಲ್ಲಿ ಅವುಗಳ ಕುರಿತ ವಿವರ ತಿಳಿದುಕೊಂಡ ನಂತರ ನನ್ನಲ್ಲಿನ ದೌರ್ಬಲ್ಯಗಳನ್ನು ಸ್ವೀಕರಿಸಿಬಿಟ್ಟೆ. ಆ ಸ್ವೀಕಾರ ಮನೋಭಾವ ನನ್ನನ್ನು ನಾನು ಗೆಲ್ಲಲು ನೆರವಾಯಿತು’ ಎಂದು ಇಲಿಯಾನಾ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ADVERTISEMENT

ಇತ್ತೀಚೆಗೆ, ಡೆನಿಮ್‌ ಬ್ರ್ಯಾಂಡ್‌ವೊಂದು ಜಾಹೀರಾತಿಗಾಗಿ ಅವರ ವಿಡಿಯೋ ಶೂಟ್‌ ಮಾಡಿದ ವೇಳೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ ‘ಬಾದ್‌ಶಾಹೊ’ ಬೆಡಗಿ.

‘ತಾರುಣ್ಯಕ್ಕೆ ಬಂದಾಗ ನಾನು ತುಂಬಾ ನಾಚಿಕೆ ಸ್ವಭಾವದವಳಾಗಿದ್ದೆ. ನನ್ನ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ. ನಾನು 15ಕ್ಕೆ ಕಾಲಿಟ್ಟಾಗಲೇ ನನ್ನ ದೇಹದ ಆಕಾರದ ಬಗ್ಗೆಯೇ ನನಗೆ ಸಾಕಷ್ಟು ಕೀಳರಿಮೆಗಳಿದ್ದವು. ನನ್ನಲ್ಲಿನ ದೌರ್ಬಲ್ಯಗಳನ್ನು ನಾನು ಸ್ವೀಕರಿಸಿ ಬಗೆಹರಿಸಿಕೊಂಡ ರೀತಿಯನ್ನು ಎಲ್ಲರೂ ಸಕಾರಾತ್ಮಕ ದೃಷ್ಟಿಯಿಂದ ಸ್ವೀಕರಿಸಬೇಕು. ಆ ಉದ್ದೇಶದಿಂದಲೇ ನಾನು ಇದನ್ನು ಹಂಚಿಕೊಂಡಿದ್ದೇನೆ’ ಎಂದಿದ್ದಾರೆ ಇಲಿಯಾನಾ.

ಮನೋಜ್ಞ ಅಭಿನಯ, ಪಾತ್ರಕ್ಕೆ ಬೇಕಾದಂತೆ ಒಗ್ಗಿಕೊಳ್ಳುವ ಜಾಯಮಾನ, ಒಳ್ಳೆಯ ಸಂಗತಿಗಳನ್ನು ಮೆಚ್ಚಿ ಮುಕ್ತವಾಗಿ ಶ್ಲಾಘಿಸುವ ಗುಣದಿಂದ ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ನಿರ್ದೇಶಕರ ನೆಚ್ಚಿನ ನಟಿಯಾಗಿರುವ ಇಲಿಯಾನ ತೂಕ ಈಗ ಇನ್ನಷ್ಟು ಹೆಚ್ಚಾಗಿದೆ.

ವಿದ್ಯಾ ಬಾಲನ್‌ ಅವರ ‘ತುಮ್ಹಾರಾ ಸುಲು’ ಚಿತ್ರದ ಟೀಸರ್‌ ಬಿಡುಗಡೆಯಾದಾಗ ವಿದ್ಯಾ ’ಅವತಾರ’ವನ್ನು ಮೆಚ್ಚಿ ಟ್ವೀಟ್‌ ಮಾಡಿದ್ದರು. ‘ಸಿನಿಮಾ ಬಿಡುಗಡೆಯಾಗುವವರೆಗೆ ಕಾಯಲಾರೆ’ ಎಂದೂ ಬರೆದಿದ್ದರು.

ಹ್ಯಾಟ್ಸಾಫ್‌ ಇಲಿಯಾನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.