ADVERTISEMENT

ಸಿಟಿಜನ್ರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ಕನ್ನಡ ರಾಜ್ಯೋತ್ಸವದ ಅಂಗವಾಗಿ ನಿಮ್ಮ ತಲೆ ತಿನ್ನೋಣಾಂತಿದ್ದೇನೆ.
ತಲೆ ತಿನ್ನಿ. ಆದರೆ ನಾನೂ ಅಲ್ಲಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿ ನಿಮ್ಮ ತಲೆ ತಿನ್ನಬೇಕಾಗುತ್ತದೆ. ನೋ ಪ್ರಾಬ್ಲಮ್?

ಪರವಾಗಿಲ್ಲ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ನಿಮ್ಮಂತಹವರ ಬಾಯಿಯಿಂದ ಒಂದಿಷ್ಟಾದರೂ ಕನ್ನಡ ಮಾತನಾಡಿಸಬೇಕೂಂತ ಆಸೆ.  ದೇವಯ್ಯ ಅವರೇ, ಕೊಡಗಿನವರ ಡಿಕ್ಷನರಿಯಲ್ಲಿ ‘ಹೆದರಿಕೆ’ ಎಂಬ ಪದ ಇಲ್ಲಾಂತ ಕೇಳಿದ್ದೇನೆ. ಹೌದಾ?
ನಾನೊಬ್ಬ ಅಪ್ಪಟ ಕೂರ್ಗಿಯಾಗಿ ಹೇಳುತ್ತಿದ್ದೇನೆ... ಮನುಷ್ಯನಲ್ಲಿ ಹೆದರಿಕೆ ಇರಲೇಬೇಕು. ಇಲ್ಲದಿದ್ದರೆ ಆತನಿಗೆ ಸ್ವಯಂ ಆತನೇ ಅಪಾಯಕಾರಿಯಾಗಿಬಿಡುತ್ತಾನೆ! ನಮ್ಮ ಕೊಡಗಿನಲ್ಲಿ ಪ್ರತಿ ಮನೆಯಲ್ಲೊಬ್ಬನಾದರೂ ಭಾರತೀಯ ಸೇನೆಗೆ ಸೇರುತ್ತಿದ್ದರು. ಆದ್ದರಿಂದ ಜನ ನಮ್ಮನ್ನು ‘ಬ್ರೇವ್’ ಎಂದು ಕನ್ಸಿಡರ್ ಮಾಡಿದ್ದಾರೆ.

ನೀವು ಸ್ವಲ್ಪ ಜಾಸ್ತಿಯೇ ಪುಕ್ಕಲು ಇರಬೇಕು... ಸೇನೆಗೆ ಸೇರಿ ದೇಶ ಸೇವೆ ಮಾಡುವ ಬದಲು ಬೆಂಗಳೂರಿನಲ್ಲೇ ಸೇವೆ ಮಾಡುತ್ತಾ ಕಾಲ ಕಳೆದಿರಲ್ಲ?
ಯು ನೋ... ಜನರಲ್ ಕಾರಿಯಪ್ಪ, ಜನರಲ್ ತಿಮ್ಮಯ್ಯರಂತೆ ಈ ದೇವಯ್ಯ ಕೂಡ ಜನರಲ್ ಆಗಬೇಕೆಂದು ಕನಸು ಕಂಡಿದ್ದ. ಆದರೆ ನನ್ನ ಐ ಸೈಟ್ ಸಮಸ್ಯೆಯಾಯಿತು. ಸೇನೆಗೆ ಸೇರಿ ವೈರಿಗಳ ನಾಶ ಮಾಡುವ ಬದಲು ಇಲ್ಲಿ ಬೆಂಗಳೂರಿನಲ್ಲಿ ಪೆಸ್ಟಿಸೈಡ್, ಐ ಮೀನ್... ಕೀಟನಾಶಕ ಕಂಪೆನಿಯ ಸೇಲ್ಸ್ ರೆಪ್ ಆದೆ. ನಂತರ ಗನ್ನಿನ ಬದಲು ಅಟ್ಲೀಸ್ಟ್ ಜರ್ನಲಿಸಂಗಿಳಿದು ಪೆನ್ನು ಹಿಡಿಯೋಣ ಅನಿಸಿತು. ಹದಿನೈದು ವರ್ಷ ‘ಇಂಡಿಯನ್ ಎಕ್ಸ್‌ಪ್ರೆಸ್‌’ನಲ್ಲಿ ಕೆಲಸ ಮಾಡಿದೆ.

ಅಷ್ಟು ವರ್ಷ ‘ಇಂಡಿಯನ್ ಎಕ್ಸ್‌ಪ್ರೆಸ್‌’ನಲ್ಲಿದ್ರಲ್ಲ, ನಿಮ್ಮ ಜನರಲ್ ನಾಲೆಡ್ಜ್ ಪರೀಕ್ಷಿಸೋಣ... ಬೆಂಗಳೂರಿನಲ್ಲಿ ಬಾಳೆಕುಂದಿ ಸರ್ಕಲ್ ಎಲ್ಲಿ ಬರುತ್ತೆ?
ಫಸ್ಟ್ ಆಫಾಲ್ ಅದು ಬಾಳೆಕುಂದಿ ಅಲ್ಲ, ಬಾಳೆಕುಂದ್ರಿ. ‘ಇಂಡಿಯನ್ ಎಕ್ಸ್‌ಪ್ರೆಸ್‌’ ಬಸ್ ಸ್ಟಾಪ್ಗೇ ಬಾಳೆಕುಂದ್ರಿ ಸರ್ಕಲ್ ಎಂದು ಒರಿಜಿನಲ್ ಹೆಸರಿದೆ. ಆದರೆ ಎಲ್ಲಾ ಬೆಂಗಳೂರಿಗರಿಗೂ ಆ ಜಾಗ ‘ಇಂಡಿಯನ್ ಎಕ್ಸ್‌ಪ್ರೆಸ್‌’ ಆಗಿಯೇ ಪರಿಚಿತ. ಇಂತಹ ವಿಚಿತ್ರಗಳು ಬೆಂಗಳೂರಿನಲ್ಲಿ ಬೇಕಾದಷ್ಟಿವೆ. ಯು ನೋ, ಆಲಮಟ್ಟಿ ಅಣೆಕಟ್ಟು ಕಟ್ಟಿದವರು ಯಾರೂಂತ ಗೊತ್ತಾ? ಅವರೇ ಈ ಬಾಳೆಕುಂದ್ರಿ ! ಸುಮ್ನೆ ಇಂತಹ ಗ್ರೇಟ್‌ಗಳ ಹೆಸರು ಕೊಡ್ತಾರೆ. ಆ ಮೇಲೆ ಆ ಜಾಗವನ್ನು ಬೇರೆ ಹೆಸರಿನಿಂದ ಕರೆಯುತ್ತಾರೆ! ದಿಸ್ ಈಸ್ ಜಸ್ಟ್ ಇನ್ಸಲ್ಟಿಂಗ್, ಯು ನೊ!

ಓಹ್! ಥ್ಯಾಂಕ್ಸ್... ಬಾಳೆಕುಂದ್ರಿ ಬಗ್ಗೆ ಮಾಹಿತಿ ಕೊಟ್ಟು ನನ್ನ ಜನರಲ್ ನಾಲೆಡ್ಜ್ ಹೆಚ್ಚಿಸಿದ್ದೀರಿ. ನಮ್ಮ ಈ ಬೃಹತ್ ನಗರದ ಪಾಲಕರಾಗಿರುವ ಬಿಬಿಎಂಪಿಯ ಬಗ್ಗೆ ಎರಡು ಒಳ್ಳೆಯ ಮಾತು ಆಡಬೇಕಾಗಿ ವಿನಂತಿ.
ಅಹ ಹ್ಹ...ಹ...ಹಾ.....ಯು ನೊ ದ ಫ್ಯಾಕ್ಟ್? ಈ ಬೃಹತ್ ಬೆಂಗಳೂರಿಗೆ ಪಾಲಕರೇ ಇಲ್ಲಾಂದ ಮೇಲೆ ಒಳ್ಳೆಯ ಮಾತು ಆಡುವುದೆಲ್ಲಿಂದ ಬಂತು? ತಮಾಷೆಯಲ್ಲ... ಬಿಬಿಎಂಪಿ ಹೆಸರಿಗಿದೆಯಷ್ಟೆ! ಬಿಲ್ಡಿಂಗ್ಸು, ಶಾಲೆ, ಎಲ್ಲವೂ ಅನ್ಆಥರೈಸ್ಡ್! ಕಸ, ರಸ್ತೆ, ಪರಿಸರ ಮಾಲಿನ್ಯವನ್ನು ಕೇಳುವವರಿಲ್ಲ.

ಅಂದರೆ, ಬೆಂಗಳೂರು ಈಸ್ ಗೋಯಿಂಗ್ ಟು ಡಾಗ್ಸ? ಈಚೆಗಂತೂ ಇಲ್ಲಿ ನಾಯಿಗಳು ಪುಟಾಣಿಗಳನ್ನು ತಿನ್ನೋಕೆ ನೋಡ್ತವೆ!
ಅಷ್ಟೇ ಅಲ್ಲ, ನಾಯಿಗಳು ಬೇರೆ ಬೇರೆ ರೂಪದಲ್ಲೂ ಕಂಡು ಬರುತ್ತವೆ. ಬಹುಶಃ ನಾವು ಪೇಪರ್ ಮೂಲಕ ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ಶಾಲೆಗಳಲ್ಲಿ ಪುಟ್ಟ ಹೆಣ್ಮಕ್ಕಳ ರೇಪ್ ನಡೆಯುತ್ತಿದೆ ಎಂದು ನನಗನಿಸುತ್ತದೆ.

ಒಟ್ಟಾರೆ ಎಸ್.ಎಂ, ಕೃಷ್ಣ ಅವರ ‘ಸಿಂಗಪುರ ಕನಸು’ ಠುಸ್ ಆಗಿದೆ. ಅಲ್ಲವೇ?
ಯು ನೋ... ಬೆಂಗಳೂರು ಹೀಗೆ ಗತಿಗೋತ್ರ ಇಲ್ಲದಂತಾಗುವುದಕ್ಕೆ  ಅವರ ಮುದ್ದಿನ ಐಟಿ ಇಂಡಸ್ಟ್ರೀಸೇ ಮುಖ್ಯ ಕಾರಣ. ಈಗ ಈ ಸಿಟಿ ಆಡಾದಿಡ್ಡಿಯಾಗಿ ಬೆಳೆದ್ಬಿಟ್ಟಿದೆ. ಬೇರೆ ಏನೂ ಬೇಡ, ಟನ್‌ಗಟ್ಟಲೆ ಕಸವನ್ನು ಏನು ಮಾಡಬೇಕೆಂದೇ ಸರ್ಕಾರಕ್ಕೆ ಗೊತ್ತಾಗುತ್ತಿಲ್ಲ!

ನಮ್ಮ ಸುಬ್ರಮಣ್ಯ ಸ್ವಾಮಿ ಅಥವಾ ಕೇಜ್ರಿವಾಲ ‘ಬ್ಯಾಚುಲರ್ ಆಫ್ ಆ್ಯಂಟಿ–ಕರಪ್ಷನ್’ ಕೋರ್ಸ್ ಮಾಡಿದರೆ ತುಂಬಾ ಬೇಡಿಕೆ ಬರಬಹುದೇ?
ಅದರ ಅಗತ್ಯ ಇಲ್ಲ. ದೇಶದಲ್ಲಿ ಕರಪ್ಷನ್ ಬಗ್ಗೆ ಅವೇರ್ನೆಸ್ ಬರಬೇಕಾದರೆ ಮೊದಲು ನಮ್ಮ ನಮ್ಮ ಮನೆಯಲ್ಲಿ ತಂದೆ ತಾಯಿಗಳು ಮಕ್ಕಳಿಗೆ ಚಿಕ್ಕಂದಿನಲ್ಲೇ ಪಾಠ ಮಾಡಬೇಕು.

ನಿಜ. ಆದರೆ ಕೆಲವು ಭ್ರಷ್ಟಪ್ಪ ಅಥವಾ ಭ್ರಷ್ಟಮ್ಮರಿಗೆ ಅವರ ಮಕ್ಕಳೇ ಪಾಠ ಕಲಿಸಬೇಕಾಗುತ್ತದೆ! ಅದಿರಲಿ, ನೀವು ನಿಮ್ಮ ಮಗನಿಂದ ಏನಾದರೂ ಕಲಿತ್ತಿದ್ದೀರಾ?
ಯು ನೋ.. ನಾನೊಮ್ಮೆ ಫೇಸ್‌ಬುಕ್ ನಲ್ಲಿ ‘ಐ ಹ್ಯಾವ್ ಎ ಟೀನೇಜರ್ ಅಟ್ ಹೋಮ್ ಹೂ ನೋಸ್ ಎವ್ರಿಥಿಂಗ್’ ಎಂದು ಪೋಸ್ಟ್ ಹಾಕಿದ್ದೆ. ನನಗೆ ಗೊತ್ತಿಲ್ಲದ ವಿಷಯ ನನ್ನ ಮಗನಿಗೆ ಗೊತ್ತಿರುತ್ತೆ!

ನಿಮ್ಮ ಈ ‘ಬಾಡಿ ಬಿಲ್ಡಿಂಗ್’ ಯಾವಾಗ ಆರಂಭಿಸಿದ್ದೀರಿ?
ಯು ನೋ... ನಾನು ಇದಕ್ಕಿಂತಲೂ ದಪ್ಪ ಇದ್ದೆ. ‘ಎಕ್ಸ್ಪ್ರೆಸ್’ನಲ್ಲಿದ್ದಾಗ ಈ ಹಾಳು ವೇಟು ಕಡಿಮೆ ಮಾಡೋಣಾಂತ ಅಸೈನ್ಮೆಂಟ್ ಜಾಗಗಳಿಗೆ ಸೈಕಲ್ ತುಳಿದುಕೊಂಡೇ ಹೋಗುತ್ತಿದ್ದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT