ADVERTISEMENT

ಸಿನಿಮಾ ತಿಕ್ಕಲು; ಕಂಬನಿಯ ಒಕ್ಕಲು

​ಪ್ರಜಾವಾಣಿ ವಾರ್ತೆ
Published 24 ಮೇ 2017, 19:30 IST
Last Updated 24 ಮೇ 2017, 19:30 IST
ವಿಜಯ್‌ ವೆಂಕಟ್‌ ಮತ್ತು ರಾಧಿಕಾ ರಾಣಿ
ವಿಜಯ್‌ ವೆಂಕಟ್‌ ಮತ್ತು ರಾಧಿಕಾ ರಾಣಿ   

‘ತಿಕ್ಲ’ – ಯಾರಿಗೆ ಬೈತಿದ್ದೀರಿ ಎಂದು ಕೇಳಬೇಡಿ. ಇದು ಸಿನಿಮಾದ ಶೀರ್ಷಿಕೆ! ವಿಚಿತ್ರ ವಿಚಿತ್ರವಾಗಿ ಹೆಸರಿಟ್ಟರೆ ಜನರು ಆಕರ್ಷಿತರಾಗಿ ಸಿನಿಮಾ ನೋಡಲಿಕ್ಕೆ ಬರುತ್ತಾರೆ ಎಂಬ ಭ್ರಮೆ ಗಾಂಧಿನಗರದಲ್ಲಿ ಮೊದಲಿನಿಂದಲೂ ಇದೆ. ಆ ನಂಬಿಕೆಯ ಮತ್ತೊಂದು ಕೊಂಡಿಯಾಗಿ ‘ತಿಕ್ಲ’ ಸಿನಿಮಾ ರೂಪುಗೊಂಡಿದೆ. ಇದಕ್ಕೆ ‘ಕಂಬನಿಯ ಕಥೆ’ ಎಂಬ ಅಡಿಶೀರ್ಷಿಕೆಯೂ ಇದೆ.

ಒಂದೂವರೆ ವರ್ಷಗಳ ಕಾಲ ಶ್ರಮಿಸಿ ಸಿನಿಮಾ ಪೂರ್ಣಗೊಳಿಸಿರುವ ತಂಡ ಪತ್ರಕರ್ತರ ಮುಂದೆ ಬಂದಿತ್ತು. ಅದು ಸಿನಿಮಾ ಧ್ವನಿಮುದ್ರಿಕೆ ಬಿಡುಗಡೆ ಕಾರ್ಯಕ್ರಮ.

ಸಿನಿಮಾದ ಶೀರ್ಷಿಕೆಗೆ ಸೂಕ್ತವಾದ ವ್ಯಕ್ತಿಯನ್ನೇ ಕರೆಯಬೇಕು ಎಂಬ ಜಾಣ್ಮೆಯ ಕಾರಣಕ್ಕೋ ಏನೋ, ಪ್ರಥಮ್‌ ಕೂಡ ಅಂದು ವೇದಿಕೆಯ ಮೇಲಿದ್ದರು. ಅವರೂ ತಮ್ಮ ಮೇಲಿನ ಭರವಸೆಯನ್ನು ಹುಸಿಗೊಳಿಸದೇ ಕಾರ್ಯಕ್ರಮದುದ್ದಕ್ಕೂ ತಿಕ್ಕಲು ತಿಕ್ಕಲಾಗಿಯೇ ಆಡುತ್ತಿದ್ದರು. ಹೊಸ ನಿರ್ದೇಶಕರ ಕಥೆಯನ್ನು ಆಲಿಸಿದ ಲಹರಿ ವೇಲು ತಮ್ಮ ಬದುಕಿನ ಫ್ಲಾಶ್‌ಬ್ಯಾಕ್‌ಗೊಮ್ಮೆ ಹೋಗಿ ಬಂದರು.

ADVERTISEMENT

ನಾಲ್ಕೈದು ವರ್ಷಗಳಿಂದ ಸಿನಿಮಾದ ತಿಕ್ಕಲು ಹತ್ತಿಸಿಕೊಂಡು ಕೊನೆಗೂ ‘ತಿಕ್ಲ’ನ ಮೂಲಕ ನಿರ್ದೇಶಕರಾದ ಖುಷಿಯಲ್ಲಿ ಆಂಜನೇಯ ಇದ್ದರು. ‘ತಿಕ್ಲ’ ಹುಟ್ಟಿಕೊಂಡ ಬಗೆಯೇ ವಿಚಿತ್ರವಾದದ್ದು. ‘ಸಾಮಾನ್ಯವಾಗಿ ಎಲ್ಲರೂ ಕಥೆ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದು ಹೊರಡುತ್ತಾರೆ. ಆದರೆ ನಾನು ಸಿನಿಮಾ ಮಾಡಬೇಕು ಎಂದು ಹೊರಟ ಮೇಲೆ ಕಥೆ ಕಟ್ಟಿದವನು’ ಎಂದು ಹೇಳಿಕೊಂಡರು ಆಂಜನೇಯ. ಲ್ಯಾಬ್‌ ಟೆಕ್ನಿಷಿಯನ್‌ ಆಗಿದ್ದ ಅವರಿಗೆ ಸಿನಿಮಾ ನಿರ್ದೇಶಿಸುವ ಹುಚ್ಚು ಅಂಟಿಕೊಂಡಿದ್ದು ನಾಲ್ಕು ವರ್ಷಗಳ ಹಿಂದೆ.

‘ಸಿನಿಮಾ ಮಾಡಬೇಕು ಎಂದರೆ ಹಣ ಬೇಕು. ನನ್ನಂಥ ಹೊಸಬರಿಗೆ ಯಾರೂ ನಿರ್ಮಾಪಕರು ಸಿಗುವುದಿಲ್ಲ. ಆದ್ದರಿಂದ ಹಣವೇ ಇಲ್ಲದೇ ಸಿನಿಮಾ ಮಾಡಲು ನಿರ್ಧರಿಸಿದೆ. ಸುಂದರ ನಟಿಯರು ಸಿಗುವುದಿಲ್ಲ ಎಂಬ ಕಾರಣಕ್ಕೆ ಭಿಕ್ಷುಕಿಯನ್ನೇ ಕಥೆಯ ನಾಯಕಿಯನ್ನಾಗಿಸಿದೆ. ರದ್ದಿ ಪೇಪರ್‌ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗನನ್ನು ಕಥಾನಾಯಕನನ್ನಾಗಿಸಿದೆ’ ಎಂದು ಸಿನಿಮಾ ರೂಪುಗೊಂಡ ಬಗೆಯನ್ನು ಅವರು ವಿವರಿಸಿದರು.

ಹಣವಿಲ್ಲದೇ ಆರಂಭಗೊಂಡರೂ ಹಣವಿಲ್ಲದೇ ಸಿನಿಮಾ ಮುಗಿಸುವುದು ಅಸಾಧ್ಯ ಎಂಬ ಅನುಭವ ಆಂಜನೇಯ ಅವರಿಗೆ ಆಗಲು ತುಂಬ ಸಮಯವೇನೂ ತಗುಲಲಿಲ್ಲ. ಆಗ ಅವರ ನೆರವಿಗೆ ಬಂದವರು ಜಕ್ಕನಹಳ್ಳಿ ಶಿವು. ಕಥೆಯನ್ನು ಕೇಳಿ ಭಾವುಕರಾಗಿಯೇ ಅವರು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ.
ವಿಜಯ್‌ ವೆಂಕಟ್‌ ಎಂಬ ಹೊಸ ಹುಡುಗ ಈ ಸಿನಿಮಾದ ನಾಯಕ. ‘ತಿಕ್ಲ’ನಿಗಾಗಿ ಭಿಕ್ಷುಕಿಯಾಗಿರುವುದು  ರಾಧಿಕಾ ರಾಣಿ.

‘ಇದೊಂದು ಫುಟ್‌ಪಾತ್‌ ಪ್ರೇಮಕಥೆ’ ಎಂದರು ನಾಯಕ ವಿಜಯ್‌ ವೆಂಕಟ್‌. ನಾಯಕಿ ರಾಧಿಕಾ ಅವರಿಗೆ ಭಿಕ್ಷುಕಿಯಾಗಿ ನಟಿಸುವುದು ತುಂಬ ಕಷ್ಟವೆನಿಸಿತ್ತಂತೆ.

ಇದೇ ಸಂದರ್ಭದಲ್ಲಿ ಸಿನಿಮಾದ ನಾಲ್ಕು ಹಾಡುಗಳನ್ನು ತೋರಿಸಲಾಯಿತು. ಚಿತ್ರದಲ್ಲಿನ ನಾಲ್ಕು ಹಾಡುಗಳಿಗೆ ಕೆವಿನ್‌. ಎಂ ಸಂಗೀತ ಸಂಯೋಜಿಸಿದ್ದಾರೆ. ರವಿ, ರಕ್ಷಿತ್‌ ಛಾಯಾಗ್ರಹಣ ಚಿತ್ರಕ್ಕಿದೆ.

**

ಗಣಪತಿ ಸನ್ನಿಧಿಯಲ್ಲಿ ‘ಕಟ್ಟು ಕಥೆ’
ವಿ. ಮಹದೇವ್ ಮತ್ತು ಎನ್. ಸವಿತಾ ನಿರ್ಮಿಸುತ್ತಿರುವ ‘ಕಟ್ಟುಕಥೆ’ ಚಿತ್ರದ ಚಿತ್ರೀಕರಣ ದೊಡ್ಡ ಗಣಪತಿಯ ಸನ್ನಿಧಿಯಲ್ಲಿ ಆರಂಭವಾಯಿತು. ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಜೂನ್ 10ರವರೆಗೆ ಬೆಂಗಳೂರಿನ ಸುತ್ತಮುತ್ತ ನಡೆಯಲಿದೆ ಎಂದು ನಿರ್ಮಾಪಕ ಮಹದೇವ್ ತಿಳಿಸಿದ್ದಾರೆ.

ಮನು ಬಿ.ಕೆ. ಅವರ ಛಾಯಾಗ್ರಹಣ, ಪ್ರವೀಣ್‍ರಾಜ್ ನಿರ್ದೇಶನ ಚಿತ್ರಕ್ಕಿದೆ. ಈ ಚಿತ್ರದ ಮೂಲಕ ಸೂರ್ಯ ಅವರು ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಸ್ವಾತಿ, ಬೃನಾಲಿ ಶೆಟ್ಟಿ, ಸಂಜನಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. 

ಸ್ಮೈಲ್ ಶ್ರೀನು ಹೊಸ ಸಿನಿಮಾ ಇಬ್ಬರು ನಾಯಕರಿಗೆ ಒಬ್ಬಳೇ ನಾಯಕಿ
ಈ ಹಿಂದೆ ತೂಫಾನ್ ಹಾಗೂ ಬಳ್ಳಾರಿ ದರ್ಬಾರ್ ಎಂಬ ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಇದೀಗ ಸದ್ದಿಲ್ಲದೆ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ.

ತೆಲುಗಿನ ನಿರ್ಮಾಪಕ ಟಿ. ರಾಮಸತ್ಯ ನಾರಾಯಣರಾವ್ ಅವರು ಇದರ ನಿರ್ಮಾಪಕರು.  ಅಭಿರಾಮ್ ಹಾಗೂ ರಿಷಿ ತೇಜ ಅವರು ಈ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರೂ ನಾಯಕರ ಜೊತೆ ಆರ್‍ಎಕ್ಸ್ ಸೂರಿ ಹಾಗೂ ಕ್ರಾಕ್ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಬೆಡಗಿ ಆಕಾಂಕ್ಷಾ, ಡ್ಯುಯೆಟ್ ಹಾಡಲು ಅಣಿಯಾಗಿದ್ದಾರೆ. ಇದರ ಜೊತೆಗೆ ತೆಲುಗು ಚಿತ್ರರಂಗದ ಹೆಸರಾಂತ ಕಲಾವಿದ ಹಾಗೂ ಕನ್ನಡಿಗ ಸುಮನ್ ಅವರೂ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಜೂನ್‌ ತಿಂಗಳಿನಲ್ಲಿ ಚಿತ್ರೀಕರಣ ಆರಂಭವಾಗಲಿದೆ.
 

ಇದು ಜಸ್ಟ್‌ ಆಕಸ್ಮಿಕ!
ಹಿಮಾಯತ್ ಖಾನ್ ನಿರ್ಮಿಸಿ, ನಿರ್ದೇಶಿಸುತ್ತಿರುವ ‘ಜಸ್ಟ್ ಆಕಸ್ಮಿಕ’ ಚಿತ್ರದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ನಡೆಯುತ್ತಿದೆ. ವಿನೋದ್ ಪಾಟೀಲ್, ರಮೇಶ್‌ಭಟ್, ‘ಮುಖ್ಯಮಂತ್ರಿ’ ಚಂದ್ರು, ಸುಧಾ ಬೆಳವಾಡಿ ಮತ್ತಿತರರು ಅಭಿನಯಿಸುತ್ತಿದ್ದಾರೆ. ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಈ ತಿಂಗಳ ಅಂತ್ಯದವರೆಗೆ ನಡೆಯಲಿದೆ ಎಂದು ಕಾರ್ಯಕಾರಿ ನಿರ್ಮಾಪಕ ಬಾಲಕೃಷ್ಣ ಬರಗೂರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.