ADVERTISEMENT

‘ಗೌರ್ಮೆಂಟ್‌’ ಬಸ್‌ ಬಂದ ಕಥೆ

ಬಸ್‌ ಬಂತು ಬಸ್‌

​ಪ್ರಜಾವಾಣಿ ವಾರ್ತೆ
Published 23 ಮೇ 2016, 19:30 IST
Last Updated 23 ಮೇ 2016, 19:30 IST
ಶಾಂತಿನಗರದ ಬಸ್‌ ನಿಲ್ದಾಣದಲ್ಲಿರುವ ಕೆ.ಎಸ್‌.ಆರ್‌.ಟಿ.ಸಿ. ಡಂಪ್ಪಿಂಗ್‌ ಯಾರ್ಡ್‌ (1976)-ಚಿತ್ರಗಳು– ಟಿ.ಎಲ್‌. ರಾಮಸ್ವಾಮಿ (ಪ್ರಜಾವಾಣಿ ಆರ್ಕೈವ್ಸ್‌)
ಶಾಂತಿನಗರದ ಬಸ್‌ ನಿಲ್ದಾಣದಲ್ಲಿರುವ ಕೆ.ಎಸ್‌.ಆರ್‌.ಟಿ.ಸಿ. ಡಂಪ್ಪಿಂಗ್‌ ಯಾರ್ಡ್‌ (1976)-ಚಿತ್ರಗಳು– ಟಿ.ಎಲ್‌. ರಾಮಸ್ವಾಮಿ (ಪ್ರಜಾವಾಣಿ ಆರ್ಕೈವ್ಸ್‌)   

ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಜನಸಾಮಾನ್ಯರ ಸಾರಿಗೆ ವ್ಯವಸ್ಥೆಯಾಗಿದೆ. ಮೈಸೂರು ರಾಜ್ಯ ಸರ್ಕಾರ 1948ರಲ್ಲಿ ಮೈಸೂರು ಸರ್ಕಾರ ರಸ್ತೆ ಸಾರಿಗೆ ಇಲಾಖೆ (ಮೈಸೂರು ಗವರ್ನಮೆಂಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ ಡಿಪಾರ್ಟ್‌ಮೆಂಟ್‌– ಎಂಜಿಆರ್‌ಟಿಡಿ) ಆರಂಭಿಸಿತ್ತು.

ಸುಮಾರು ನೂರು ಬಸ್ಸುಗಳಿದ್ದವು. ರಾಜ್ಯದ ಇತರ ಭಾಗಗಳಿಗೆ ಸಾರಿಗೆ ಸಂಪರ್ಕವನ್ನು ಕಲ್ಪಿಸುವ ಮೂಲಕ ಜನರಿಗೆ ಕಡಿಮೆ ದರದಲ್ಲಿ ಸಾರಿಗೆ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಇಲಾಖೆಯನ್ನು ಅಸ್ತಿತ್ವಕ್ಕೆ ತರಲಾಗಿತ್ತು.

ಹೈದರಾಬಾದ್‌ ರಸ್ತೆ ಸಾರಿಗೆ ಇಲಾಖೆ 1932ರಲ್ಲಿ ಸ್ಥಾಪನೆಯಾಗಿತ್ತು. 1936ರಲ್ಲಿ ಹೈದರಾಬಾದಿನಲ್ಲಿ ಹಾಗೂ 1947ರಲ್ಲಿ ಮುಂಬೈನಲ್ಲಿ ರಸ್ತೆ ಸಾರಿಗೆಯನ್ನು ರಾಷ್ಟ್ರೀಕರಣಗೊಳಿಸಲಾಯಿತು. ಇದಕ್ಕೆ 1949ರಲ್ಲಿ ಬೆಳಗಾವಿ ವಿಭಾಗವೂ ಸೇರ್ಪಡೆಗೊಂಡು ‘ರಾಜ್ಯ ರಸ್ತೆ’ (ಸ್ಟೇಟ್‌ ಟ್ರಾನ್ಸ್‌ಪೋರ್ಟ್‌) ಎಂದು ನಾಮಕರಣ ಮಾಡಲಾಯಿತು.  

ಎಂಜಿಆರ್‌ಟಿಡಿ ಸ್ಥಾಪನೆ ಬಳಿಕ ಖಾಸಗಿ ಬಸ್‌ ಏಜೆನ್ಸಿಗಳನ್ನು ರಾಷ್ಟ್ರೀಕರಣಗೊಳಿಸಿ, ಸರ್ಕಾರಿ ಇಲಾಖೆಯಡಿ ತರಲಾಯಿತು. ಇದರಿಂದಾಗಿ ಹೆಚ್ಚು ಭಾಗಗಳು ಇಲಾಖೆ ವ್ಯಾಪ್ತಿಗೆ ಬಂದವು. ಮೈಸೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಪಿಸಿ ಬಸ್‌ ಕಂಪನಿ 1955ರಲ್ಲಿ ಎಂಜಿಆರ್‌ಟಿಡಿಯಲ್ಲಿ ವಿಲೀನಗೊಂಡಿತು.

1956ರಲ್ಲಿ ರಾಜ್ಯಗಳು ಭಾಷಾವಾರು ಆಧಾರದಲ್ಲಿ ಪುನರ್‌ರಚನೆಗೊಂಡಾಗ ಹೈದರಾಬಾದ್‌ ಮತ್ತು ಮುಂಬೈ ಪ್ರಾಂತ್ಯಗಳ ರಸ್ತೆ ಸಾರಿಗೆ ನಿಗಮಗಳು ರಾಯಚೂರು, ವಿಜಯಪುರ ಹಾಗೂ ಹುಬ್ಬಳ್ಳಿ ವಿಭಾಗಗಳು ಎಂಜಿಆರ್‌ಟಿಡಿಗೆ ಸೇರ್ಪಡೆಯಾದವು.

ವಿವಿಧ ವಿಭಾಗಗಳು ಸೇರ್ಪಡೆಗೊಂಡ ನಂತರ ಎಂಜಿಆರ್‌ಟಿಡಿಯಲ್ಲಿ ಬಸ್‌ಗಳ ಸಂಖ್ಯೆ 825ಕ್ಕೆ ಏರಿತು. 778 ನಿಗದಿತ ಮಾರ್ಗಗಳಲ್ಲಿ ಮುಂಬೈ, ಹೈದರಾಬಾದ್‌ ಹಾಗೂ ಹಳೇ ಮೈಸೂರು ಭಾಗಗಳಲ್ಲಿ ಬಸ್‌ಗಳು ಸಂಚರಿಸುತ್ತಿದ್ದವು.

1957ರಲ್ಲಿ ಎಂಜಿಆರ್‌ಟಿಡಿ 1,100 ಬಸ್‌ಗಳನ್ನು ಹೊಂದುವ ಮೂಲಕ ರಾಷ್ಟ್ರದಲ್ಲೇ ನಾಲ್ಕನೆ ಸ್ಥಾನಕ್ಕೆ ಏರಿತ್ತು. ಜೊತೆಗೆ ಬೆಂಗಳೂರಿನಲ್ಲಿದ್ದ ಪ್ರಾದೇಶಿಕ ಕಾರ್ಯಾಗಾರ 1962ರಲ್ಲಿ ಎಂಜಿಆರ್‌ಟಿಡಿಗೆ ಸೇರ್ಪಡೆಯಾಗಿತು.

ರಸ್ತೆ ಸಾರಿಗೆ ನಿಯಮ 1950ರ ಅಡಿ 1961ರಲ್ಲಿ ಎಂಜಿಆರ್‌ಟಿಡಿ ಮೈಸೂರು ರಾಜ್ಯ ರಸ್ತೆ ಸಾರಿಗೆ ನಿಗಮವಾಗಿ ಪರಿವರ್ತನೆಯಾಯಿತು. ಇದು ಸಹ ರಾಜ್ಯದ ಜನತೆಗೆ ಕಡಿಮೆ ದರದಲ್ಲಿ ಉತ್ತಮ ಹಾಗೂ ಸುರಕ್ಷಿತ ಸಾರಿಗೆ ಸೌಲಭ್ಯ ಒದಗಿಸುವ ಉದ್ದೇಶವನ್ನು ಹೊಂದಿತ್ತು.

ಆಗ 1,518 ಬಸ್ಸುಗಳು ಈ ನಿಗಮದಲ್ಲಿದ್ದವು. 1973ರಲ್ಲಿ ರಾಜ್ಯದ ಹೆಸರು ಕರ್ನಾಟಕ ಎಂದು ಬದಲಾದಾಗ ನಿಗಮದ ಹೆಸರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಂದು ಬದಲಾಯಿಸಲಾಯಿತು. ಅದೇ ವರ್ಷ ನಿಗಮದ ಪ್ರಧಾನ ಕಚೇರಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

1997ರಲ್ಲಿ ರಾಜ್ಯದ ಮೂಲೆ ಮೂಲೆಗೂ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಒದಗಿಸಲು ಕೆ.ಎಸ್‌.ಆರ್‌.ಟಿ.ಸಿ.  ಅನ್ನು ಸ್ವತಂತ್ರ ನಿಗಮಗಳನ್ನಾಗಿ ವಿಂಗಡಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು.

ಅವುಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ.

ಹೊಸ ನಿರ್ವಹಣಾ ಕಾರ್ಯನೀತಿಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ 1986ರಲ್ಲಿ ದೇಶದಲ್ಲೇ ಮೊದಲ ಬಾರಿಗೆ ಸಾರಿಗೆ ಕ್ಷೇತ್ರದಲ್ಲಿ ಗಣಕೀಕೃತ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಯಿತು.

1961ರಲ್ಲಿ ಹಾಸನ ಹಾಗೂ 1968ರಲ್ಲಿ ಕೋಲಾರ ವಿಭಾಗ ಅಸ್ತಿತ್ವಕ್ಕೆ ಬಂದವು. ಬೆಂಗಳೂರಿನಿಂದ ಹೆಚ್ಚಿನ ಬಸ್‌ಗಳು ಕಾರ್ಯ ನಿರ್ವಹಿಸುತ್ತಿದ್ದ ಕಾರಣ ನಗರದಲ್ಲಿ ವಿಶಾಲ ಮತ್ತು ಸುವ್ಯವಸ್ಥಿತವಾದ ಬಸ್‌ ನಿಲ್ದಾಣದ ಅಗತ್ಯವಿತ್ತು.

1967ರಲ್ಲಿ ಬೆಂಗಳೂರು ಬಸ್‌ ನಿಲ್ದಾಣ ಅಂದರೆ ಈಗಿನ ಕೆಂಪೇಗೌಡ ನಿಲ್ದಾಣವನ್ನು ನಿರ್ಮಿಸಲಾಯಿತು. ದೇಶದಲ್ಲಿ ಸುವ್ಯವಸ್ಥಿತವಾಗಿ ರೂಪಿಸಲಾಗಿದ್ದ ಬಸ್‌ ನಿಲ್ದಾಣಗಳಲ್ಲೊಂದಾದ ನಗರದ ಕೆಂಪೇಗೌಡ ಬಸ್‌ ನಿಲ್ದಾಣವನ್ನು ಮತ್ತಷ್ಟು ಸುಂದರಗೊಳಿಸುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿತು.

ಅದಕ್ಕಾಗಿ ₹2.5 ಕೋಟಿ ವೆಚ್ಚದಲ್ಲಿ ಬಸ್‌ ನಿಲ್ದಾಣದಲ್ಲಿ ಎತ್ತರದ ಲೈಟಿಂಗ್‌ ವ್ಯವಸ್ಥೆ, ಭೂ ವಿನ್ಯಾಸ ರೂಪಣೆ, ಸೂಚನಾ ಫಲಕಗಳು ಮತ್ತು ಆಸನಗಳ ವ್ಯವಸ್ಥೆ, ವಾಹನ ನಿಲುಗಡೆ ಕಾಂಕ್ರೀಟ್‌ ಫ್ಲಾಟ್‌ಫಾರಂಗಳ ಪುನರ್‌ ನಿರ್ಮಾಣವಾಯಿತು.

ದಿನೇ ದಿನೇ ಬೆಳೆಯುತ್ತಿರುವ ಬೆಂಗಳೂರಿಗೆ ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಹೀಗಾಗಿ ಕೆಂಪೇಗೌಡ ಬಸ್ ನಿಲ್ದಾಣದ ಮೇಲಿನ ಒತ್ತಡ ನಿವಾರಿಸುವ ಸಲುವಾಗಿ ನಗರದ ನಾಲ್ಕು ದಿಕ್ಕಿನಲ್ಲೂ ಕೆ.ಎಸ್‌.ಆರ್‌.ಟಿ.ಸಿ ಸ್ಯಾಟಲೈಟ್‌ ಬಸ್‌ ನಿಲ್ದಾಣಗಳನ್ನು ನಿರ್ಮಿಸಿದೆ. ಮೈಸೂರು ರಸ್ತೆಯಲ್ಲಿ ಸುಮಾರು ₹ 20 ಕೋಟಿ ವೆಚ್ಚದಲ್ಲಿ ನಗರದಿಂದ ಮೈಸೂರಿಗೆ ತೆರಳುವವರಿಗಾಗಿ ನಿಲ್ದಾಣ ನಿರ್ಮಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.