ADVERTISEMENT

ಈ ವರ್ಷದ ನಿರ್ಣಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 19:30 IST
Last Updated 1 ಜನವರಿ 2018, 19:30 IST

ಹೂಡಿಕೆ ಮಾಡುವೆ

68 ವರ್ಷ ಕಳೆದರೂ ದೇವರ ದಯೆಯಿಂದ ಯಾವುದೇ ಆರೋಗ್ಯ ಸಮಸ್ಯೆ ಕಾಡಿಲ್ಲ. ಆರೋಗ್ಯ ಸಮಸ್ಯೆ ಕಾಡಬಹುದು ಎಂಬ ಚಿಂತೆಯಲ್ಲಿಯೇ 2017 ಓಡಿಹೋಯಿತು. 2018 ಹೀಗೆ ಹಾಳಾಗಬಾರದು. ಆಪತ್ಕಾಲಕ್ಕೆಂದು ಈ ವರ್ಷ ಒಂದಿಷ್ಟು ಹಣ ಹೂಡಿಕೆ ಮಾಡುತ್ತೇನೆ.

-ಧರಣೇಂದ್ರ ಬರಮಪ್ಪ ಜವಳಿ,

ADVERTISEMENT

 ಮಧುರ ಚೇತನ ಕಾಲೊನಿ

***

ಅಂಕಣಕ್ಕೆ ಅವಕಾಶ ಕೋರುವೆ

ನಾನು ಶಿಕ್ಷಕ ವೃತ್ತಿಗೆ ಸೇರಿದ ದಿನದಿಂದ ವಿದ್ಯಾರ್ಥಿಗಳಿಗೆ ಗಣಿತವನ್ನು ಸುಲಭವಾಗಿ ಕಲಿಸಲು ಯತ್ನಿಸುತ್ತಿರುವೆ.

ಕಳೆದ ವರ್ಷ ದಿನ ಪತ್ರಿಕೆಗಳಲ್ಲಿ ಗಣಿತದ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಭಯ ಹೋಗಿಸುವುದು ಹೇಗೆ ಎನ್ನುವ ಕುರಿತು ಲೇಖನ ಬರೆದೆ.

ಸ್ಪರ್ಧಾತ್ಮಕ ಗಣಿತವನ್ನು ಪ್ರೌಢ ಹಂತದಲ್ಲಿಯೇ ಮಕ್ಕಳ ಮನದಲ್ಲಿ ಬಿತ್ತಲು ಒಂದು ಮಾಸಪತ್ರಿಕೆಯಲ್ಲಿ ಗಣಿತ ಅಂಕಣಕಾರನಾಗಿ ಬರೆಯುತ್ತಿರುವೆ. ದಿನಪತ್ರಿಕೆ ಗಳಲ್ಲಿ ಗಣಿತದ ಕುರಿತು ಅಂಕಣ ಬರೆಯಲು ಅವಕಾಶ ಪಡೆದುಕೊಳ್ಳುವುದು ನನ್ನ ಈ ವರ್ಷದ ಸಂಕಲ್ಪ.

 -ಎಲ್.ಪಿ. ಕುಲಕರ್ಣಿ,
ಚಾಲುಕ್ಯನಗರ


***

ವಿಮೆ ಅರಿವು ಮೂಡಿಸುವೆ

2017ರಲ್ಲಿ ನಾನು ನಿವೃತ್ತನಾದೆ. ಚಟುವಟಿಕೆ ಇಲ್ಲದಿದ್ದರೆ ಆರೋಗ್ಯ ಹಾಳಾದೀತು ಎಂದು ಮನಸು ಎಚ್ಚರಿಸಿತು. ನನ್ನ ಪ್ರವೃತ್ತಿಯು ಸಮಾಜ ಮುಖಿಯಾಗಬೇಕು.

ಈ ವರ್ಷ ಸಾಧ್ಯವಾದಷ್ಟು ಹೆಚ್ಚು ಜನರನ್ನು ಸಂಪರ್ಕಿಸಿ, ಕುಟುಂಬ ರಕ್ಷಣೆಯಲ್ಲಿ ಜೀವವಿಮೆಯ ಮಹತ್ವ ಮತ್ತು ಅಗತ್ಯದ ಅರಿವು ಮೂಡಿಸುವೆ. ಬರುವ ಅಲ್ಪ ಆದಾಯವನ್ನು ಅನಾಥಾಲಯಕ್ಕೆ ನೀಡುವ ಉದ್ದೇಶವಿದೆ.

-ಶ್ಯಾಮರಾಜ್ ಆತಡಕರ್, ಜಯನಗರ 5ನೇ ಬ್ಲಾಕ್‌

***

‘... ಮದುಮಗಳು’ ಓದುವೆ

ನಾನು ಮೂಲತಃ ಕನ್ನಡ ಸಾಹಿತ್ಯ ವಿದ್ಯಾರ್ಥಿನಿ. ಮದುವೆಯಾದ ಮೇಲೆ ಗಂಡ, ಮಗ ಅಂತ ಅವರ ಕಡೆಗೇ ಹೆಚ್ಚು ಗಮನಕೊಟ್ಟೆ. ಮನೆಕೆಲಸಗಳ ಮಧ್ಯೆ ನನ್ನ ನೆಚ್ಚಿನ ಸಾಹಿತ್ಯ ಕೃತಿಗಳನ್ನು ಓದುವುದನ್ನು ಮುಂದೂಡುತ್ತಲೇ ಬಂದೆ. ನೋಡುನೋಡುತ್ತಲೇ 2017 ಹೀಗೆ ಕಳೆದುಹೋಯಿತು. ಅದಕ್ಕೆ ಕನಿಷ್ಠ ಈ ವರ್ಷವಾದರೂ ನನ್ನ ನೆಚ್ಚಿನ ಲೇಖಕರಾದ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಶಿವರಾಮ ಕಾರಂತ, ನಿರಂಜನ ಅವರ ಕೃತಿಗಳನ್ನು ಓದಬೇಕೆಂದು ಯೋಜನೆ ಮಾಡಿಕೊಂಡಿದ್ದೇನೆ.

ನಗರದಲ್ಲೀಗ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕವೂ ಆರಂಭವಾಗಿರುವುದರಿಂದ ‘ಮದುಮಗಳು’ನಿಂದಲೇ ಸಾಹಿತ್ಯದ ಓದು ಆರಂಭಿಸುವೆ.

_ ಅಂಬಿಕಾ ನವೀನ್, ಹೆಬ್ಬಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.