ADVERTISEMENT

ಅಗತ್ಯ ವಸ್ತು ದುಬಾರಿ

ಸರಕು ಸಾಗಣೆ ದರ ಏರಿಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2015, 20:08 IST
Last Updated 26 ಫೆಬ್ರುವರಿ 2015, 20:08 IST

ನವದೆಹಲಿ (ಪಿಟಿಐ): ಸರಕು ಸಾಗಣೆ ದರವನ್ನು ಶೇ 10 ರಷ್ಟು ಏರಿಕೆ ಮಾಡುವ ಪ್ರಸ್ತಾವ­ವನ್ನು ಈ ಬಾರಿಯ ಬಜೆಟ್‌ನಲ್ಲಿ ಮಂಡಿಸಿರು­ವುದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ.

ಆಹಾರಧಾನ್ಯ, ಬೇಳೆಕಾಳು, ಸಿಮೆಂಟ್‌, ಕಲ್ಲಿದ್ದಲು ಮತ್ತು ಉಕ್ಕು  ಸೇರಿದಂತೆ ಹಲವು ವಸ್ತುಗಳ ಬೆಲೆ ಹೆಚ್ಚಲಿದೆ. ಸಚಿವ ಸುರೇಶ್‌ ಪ್ರಭು ಅವರು ಮಂಡಿಸಿದ ಬಜೆಟ್‌ನಲ್ಲಿ ಸುಮಾರು 12 ಸರಕುಗಳ ಮೇಲೆ ಶೇ 0.8 ರಿಂದ ಶೇ10 ರಷ್ಟು ದರ ಏರಿಕೆ ಮಾಡುವುದಾಗಿ ಹೇಳಿದ್ದಾರೆ.

ಯೂರಿಯಾ ಸಾಗಣೆ ದರ ಶೇ 10ರಷ್ಟು ಏರಿಕೆಯಾಗಲಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ. ಸುಣ್ಣದ ಕಲ್ಲು, ಕ್ಯಾಲ್ಸಿಯಂ ಕಾರ್ಬೊನೇಟ್‌ ಮತ್ತು   ಡೀಸೆಲ್‌ ಸಾಗಣೆ ವೆಚ್ಚವನ್ನು ಏರಿಕೆ ಮಾಡಿಲ್ಲ.

‘ಯೂರಿಯಾ ಸಾಗಣೆ ದರ ಹೆಚ್ಚಳ ಮಾಡಿರುವುದ­ರಿಂದ ಇದಕ್ಕೆ ನೀಡಲಾಗುತ್ತಿರುವ ಸಬ್ಸಿಡಿ ಮೊತ್ತ  ₹ 3,000ದಿಂದ ₹ 3,300 ಕೋಟಿಗೆ ಏರಲಿದೆ’ ಎಂದು ಭಾರ­ತೀಯ ರಸಗೊಬ್ಬರ ಉತ್ಪಾದ­ಕರ ಸಂಘದ ಸತೀಶ್‌ ಚಂದರ್‌ ಹೇಳಿದ್ದಾರೆ.

‘ಸಿಮೆಂಟ್‌ ಉತ್ಪಾದನೆ ವೆಚ್ಚ ಪ್ರತಿ 50 ಕೆ.ಜಿಗೆ ₹ 2 ರಿಂದ 4 ರಷ್ಟು ಏರಲಿದೆ’ ಎಂದು ದಾಲ್ಮಿಯಾ ಭಾರತ್‌ ಸಿಮೆಂಟ್‌ ಸಮೂಹದ ಮುಖ್ಯ ಕಾರ್ಯನಿರ್ವ­ಹಣಾ­ಧಿಕಾರಿ ಮೋಹೇಂದ್ರ ಸಿಂಗ್ ಹೇಳಿದ್ದಾರೆ.

‘ಸಿಮೆಂಟ್‌ ಬೆಲೆ ಬೇಡಿಕೆ ಮತ್ತು ಪೂರೈಕೆ ಮೇಲೆ ಅವಲಂಬಿತ­ವಾಗಿದೆ. ಈಗಲೇ ಬೆಲೆ ಹೆಚ್ಚಳದ ಬಗ್ಗೆ ನಿರ್ಧಾರ ಮಾಡಲಾಗದು’ ಎಂದು ಅವರು ವಿವರಿಸಿದ್ದಾರೆ.

ಸಿಮೆಂಟ್ ಬೆಲೆ ಚೀಲಕ್ಕೆ ₹ 5ರಿಂದ ₹ 10 ರಷ್ಟು ಹೆಚ್ಚಳ­ವಾಗುವ ಸಾಧ್ಯತೆ ಇದೆ ಎಂದು ಮತ್ತೊಂದು ಪ್ರಮುಖ ಕಂಪೆನಿ ತಿಳಿಸಿದೆ.

ರೈಲ್ವೆಯಲ್ಲಿ ಮುಂದಿನ ಐದು ವರ್ಷ ಗಳಲ್ಲಿ ₹ 8.5 ಲಕ್ಷ ಕೋಟಿ ಹೂಡಿಕೆ ಮಾಡುವ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಿರುವ ಉಕ್ಕು ಕಂಪೆನಿ­ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೂಡಿಕೆಯ ಪ್ರಸ್ತಾವ ದಿಂದ ಉಕ್ಕಿಗೆ ಬೇಡಿಕೆ ಹೆಚ್ಚಲಿದೆ ಆದರೆ ಸರಕು ಸಾಗಣೆ ದರ ಹೆಚ್ಚಿಸಿರು­ವುದ­ರಿಂದ ಡೀಸೆಲ್‌ ಬೆಲೆ ಇಳಿಕೆಯಾ­ಗಿದ್ದರೂ ಉಕ್ಕಿನ ದರ ಕಡಿಮೆ­ಯಾಗದು ಎಂದು ಹೇಳಿವೆ.
* * *
ಸರಕು ಸಾಗಣೆ ದರ ಏರಿಕೆ ಮಾಡುವುದರಿಂದ ಯೂರಿಯಾ ಬೆಲೆ ಯಲ್ಲಿ ಯಾವುದೇ ಏರಿಕೆ­ಯಾ­­ಗು­ವುದಿಲ್ಲ. ಟನ್‌ಗೆ ₹ 5,360ರ ದರದಲ್ಲೇ ಮಾರಾಟ ಮಾಡ­ಲಾಗುವುದು.
–ಅನಂತ್‌ ಕುಮಾರ್‌ ರಸಗೊಬ್ಬರ ಸಚಿವ

ರೈತರು ಖರೀದಿ ಮಾಡುವ ಯೂರಿಯಾ ಬೆಲೆಯಲ್ಲಿ ಯಾವುದೇ ಏರಿಕೆ ಮಾಡಿಲ್ಲ.
–ಮನೋಜ್‌ ಸಿನ್ಹಾ, ರೈಲ್ವೆ ಖಾತೆ ರಾಜ್ಯ ಸಚಿವ

ADVERTISEMENT

* * *

ಕಲ್ಲಿದ್ದಲು ಸಾಗಣೆ  ದರ ಹೆಚ್ಚಳ: ವಿದ್ಯುತ್‌ ತುಟ್ಟಿ?
ನವದೆಹಲಿ (ಪಿಟಿಐ): ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಕಲ್ಲಿದ್ದಲು ಸಾಗಣೆ ದರವನ್ನು ಶೇ 6.3ರಷ್ಟು ಹೆಚ್ಚಿಸಿರುವುದರಿಂದ ವಿದ್ಯುತ್‌ ಉತ್ಪಾದನಾ ಕಂಪೆನಿಗಳ ವೆಚ್ಚ ಹೆಚ್ಚಳ­ಲಿದ್ದು, ಇದು ವಿದ್ಯುತ್‌ ದರದ ಏರಿಕೆಗೆ ಕಾರಣವಾಗುವ ಸಾಧ್ಯತೆ ಇದೆ.

ಸಾಗಣೆ ದರದಲ್ಲಿ ಮಾಡಿರುವ ಹೆಚ್ಚಳವು ಕಲ್ಲಿದ್ದಲು ವೆಚ್ಚದ ಮೇಲೆ ಪರಿಣಾಮ ಬೀಳಲಿದೆ ಎಂದು ಸರ್ಕಾರಿ ಸ್ವಾಮ್ಯದ ಕೋಲ್‌ ಇಂಡಿಯಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ, ಸಾಗಣೆ ದರವನ್ನು ಗ್ರಾಹಕರೇ ಭರಿ­ಸು­ವುದರಿಂದ ಸಂಸ್ಥೆಯ ಮೇಲೆ ಯಾವುದೇ ಪರಿಣಾಮ ಇಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಸಾಗಣೆ ದರ ಏರಿಕೆಯಿಂದ ವಿದ್ಯುತ್‌ ಉತ್ಪಾದನಾ ವೆಚ್ಚವು 4ರಿಂದ 5 ಪೈಸೆಯಷ್ಟು ಹೆಚ್ಚಲಿದೆ ಎಂದು ಪ್ರಮುಖ ವಿದ್ಯುತ್‌ ಉತ್ಪಾದನಾ ಕಂಪೆನಿ ಎನ್‌ಟಿಪಿಸಿ ಹೇಳಿದೆ. ಸಾಗಣೆ ದರದ ಹೆಚ್ಚಳವು ವಿದ್ಯುತ್‌ ದರದ ಮೇಲೆ ನೇರ ಪರಿಣಾಮ ಬೀರಲಿದೆ. ಆದರೆ, ಇದು ವಿದ್ಯುತ್‌ ಉತ್ಪಾದನಾ ಘಟಕ ಮತ್ತು ಕಲ್ಲಿದ್ದಲು ಗಣಿ ನಡುವಣ ದೂರವನ್ನು ಅವಲಂಬಿಸಿದೆ ಎಂದು ವಿದ್ಯುತ್‌ ಉತ್ಪಾದಕರ ಒಕ್ಕೂಟ (ಎಪಿಪಿ) ಹೇಳಿದ್ದಾರೆ.  ಪ್ರತಿ ಯೂನಿಟ್‌ ವಿದ್ಯುತ್‌ ದರ 5 ಪೈಸೆಯಷ್ಟು ಹೆಚ್ಚಳ­ವಾಗಲಿದೆ ಎಂದು ಅದು ಹೇಳಿದೆ.
* * *
ಟಿಕೆಟ್‌ ವಿತರಣೆಗೆ ಎಟಿಎಂ ಮಾದರಿ ಯಂತ್ರ
ನವದೆಹಲಿ:
ಟಿಕೆಟ್‌ ವಿತರಣೆ ಪದ್ಧತಿಯಲ್ಲಿ ಗಣನೀಯ ಸುಧಾರಣೆ ತರುವುದಾಗಿ ಈ ಬಾರಿಯ ರೈಲ್ವೆ ಬಜೆಟ್‌­ನಲ್ಲಿ ಘೋಷಿಸಲಾಗಿದೆ. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದೆ ಇರುವವರು ಸಹ ರೈಲು ಹೊರಡುವ ಐದು ನಿಮಿಷ ಮೊದಲು ಟಿಕೆಟ್‌ ಪಡೆಯ­ಬಹುದಾಗಿದೆ. ಇದಕ್ಕಾಗಿ ಎಟಿಎಂ ಮಾದರಿಯ ಯಂತ್ರಗಳನ್ನು ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ. ಅಂಗ­ವಿಕಲರು ಸೇರಿದಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅರ್ಹರಾದವರಿಗೆ ರಿಯಾಯಿತಿ ದರದ ಇ – ಟಿಕೆಟ್‌ ನೀಡಲಾಗುತ್ತದೆ.ಸ್ಮಾರ್ಟ್‌ಫೋನ್‌ ಮೂಲಕ ಕಾಯ್ದಿರಿಸುವಿಕೆ ರಹಿತ ಟಿಕೆಟ್‌ ಪಡೆಯಬಹುದು. ಬ್ಯಾಂಕ್‌ ಖಾತೆಗೆ ಹಣ ಮರು ಪಾವತಿಗೂ ವ್ಯವಸ್ಥೆ ಮಾಡಲಾಗಿದೆ. ನಗದು ಹಣ ಇಲ್ಲದೆ ಇದ್ದರೆ ಎಟಿಎಂ ಕಾರ್ಡ್‌್ ಬಳಸಿ ಟಿಕೆಟ್‌ ಪಡೆಯುವುದಕ್ಕೂ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.