ADVERTISEMENT

ಅಜಂ ಖಾನ್‌ ವಿರುದ್ಧ ಪ್ರಕರಣ ದಾಖಲು

ಕಾರ್ಗಿಲ್‌ ಯುದ್ಧ: ವಿವಾದಾತ್ಮಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2014, 19:30 IST
Last Updated 12 ಏಪ್ರಿಲ್ 2014, 19:30 IST

ಗಾಜಿಯಾಬಾದ್‌ (ಪಿಟಿಐ): ಕಾರ್ಗಿಲ್‌ ಯುದ್ಧ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ ಸಮಾಜ­ವಾದಿ ಪಕ್ಷದ (ಎಸ್‌ಪಿ) ಮುಖಂಡ ಅಜಂ ಖಾನ್‌ ಅವರ ವಿರುದ್ಧ ಗಾಜಿಯಾಬಾದ್‌ ಪೊಲೀ­ಸರು ಶನಿ­ವಾರ ಎಫ್‌ಐಆರ್‌ ದಾಖಲಿಸಿ­ದ್ದಾರೆ.

ಇದಲ್ಲದೆ, ಮೋದಿ ಅವರನ್ನು ‘ಕುತ್ತೇ ಕಾ ಬಚ್ಚಾ (ನಾಯಿ ಮರಿ)’ ಎಂದು ಕರೆದಿದ್ದ ಆಜಂ ವಿರುದ್ಧ ಇನ್ನೊಂದು ಎಫ್‌ಐಆರ್‌ ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಅನ್ವಯ ಧಾರ್ಮಿಕ ದ್ವೇಷಕ್ಕೆ ಪ್ರಚೋ­ದನೆ (153ಎ), ರಾಷ್ಟ್ರೀಯ ಏಕತೆಗೆ ಧಕ್ಕೆ ತರುವ ಯತ್ನ (153ಬಿ) ಮತ್ತು ಉದ್ದೇಶಪೂರ್ವಕವಾಗಿ ಹಗೆತನದಿಂದ ಧರ್ಮ ಇಲ್ಲವೆ ಧಾರ್ಮಿಕ ನಂಬಿಕೆ­ಯನ್ನು ಹೀಯಾಳಿಸುವಿಕೆ (295ಎ) ಮತ್ತು ಇನ್ನಿತರ ಕಲಂಗಳ ಅನ್ವಯ ಉತ್ತರ ಪ್ರದೇಶದ ಸಚಿವರೂ ಆಗಿರುವ ಖಾನ್‌ ವಿರುದ್ಧ ಪಟ್ಟಣದ ಮಸೂರಿ ಠಾಣೆ­ಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲು ಮಾಡುವು­ದಕ್ಕೂ ಮೊದಲು ಗಾಜಿಯಾಬಾದ್‌ ಜಿಲ್ಲಾಧಿ­ಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿ­ಕಾರಿ­ಯೊಂದಿಗೆ ಚರ್ಚಿಸಿದರು.

‘ಕಾರ್ಗಿಲ್‌ ಯುದ್ಧದ ವಿಜಯಕ್ಕೆ ಮುಸ್ಲಿ­ಮರು ಕಾರಣವೇ ಹೊರತು ಹಿಂದೂಗಳಲ್ಲ’ ಎಂದು ಈ ತಿಂಗಳ 7­ರಂದು ಮಸೂರಿಯಲ್ಲಿ ನಡೆದ ರ್‍ಯಾಲಿ­ಯಲ್ಲಿ ಅಜಂ ಖಾನ್‌ ಹೇಳಿದ್ದರು.

ಈ ವಿವಾದಾತ್ಮಾಕ ಹೇಳಿಕೆ ನೀಡಿದ್ದ ಕಾರಣಕ್ಕೆ ಚುನಾವಣಾ ಆಯೋಗವು ಅಜಂ ಖಾನ್‌ ಅವರಿಗೆ ಉತ್ತರ ಪ್ರದೇಶ­ದಲ್ಲಿ ಸಾರ್ವಜನಿಕ ಪ್ರಚಾರ ನಡೆಸದಂತೆ ಶುಕ್ರವಾರ ನಿರ್ಬಂಧ ಹೇರಿದೆ.

ಈ ಬಗ್ಗೆ ರಾಂಪುರದಲ್ಲಿ ಪ್ರತಿಕ್ರಿಯೆ ನೀಡಿರುವ ಖಾನ್‌, ‘ನಾನು ತಪ್ಪೇನೂ ನುಡಿಯಲಿಲ್ಲ. ನಾನೊಬ್ಬ ರಾಷ್ಟ್ರೀಯ­ವಾದಿ. ಚುನಾವಣಾ ಆಯೋಗ ಆತುರ­ದಲ್ಲಿ ಈ ಕ್ರಮ ಕೈಗೊಂಡಿದೆ. ಇದನ್ನು ಮರುಪ­ರಿಶೀಲಿಸುವಂತೆ ಕೋರುವೆ’ ಎಂದರು.

ಅಜಂ ಖಾನ್‌ ಅವರ ಮೇಲೆ ಹೇರಿ­ರುವ ನಿರ್ಬಂಧ­ವನ್ನು ಹಿಂಪಡೆಯು­ವಂತೆ ತಾವೂ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳುವುದಾಗಿ ಸಮಾಜ­ವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್‌ ಲಖಿಂಪುರ್‌ ಖಿರಿಯಲ್ಲಿ ಹೇಳಿದ್ದಾರೆ.

‘ಪ್ರತೀಕಾರ’ದ ಹೇಳಿಕೆ: ಎಫ್ಐಆರ್‌
ಸಂಬಾಲ್‌: ಕಳೆದ ವರ್ಷ ಮುಜಫ್ಫರ್‌ ನಗರ ಕೋಮು ಗಲಭೆಗೆ ಕಾರಣ­ರಾದ­ವರ ವಿರುದ್ಧ ಈ ಚುನಾವಣೆಯಲ್ಲಿ ‘ಪ್ರತೀಕಾರ ತೀರಿಸಿಕೊಳ್ಳಿ’ ಎಂಬ ಪ್ರಚೋ­ದ­ನಾಕಾರಿ ಹೇಳಿಕೆ ನೀಡಿದ ಆಪಾದನೆ ಮೇಲೆ ಅಜಂ ಖಾನ್‌ ವಿರುದ್ಧ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ತಿಂಗಳ 9ರಂದು ಇಲ್ಲಿ ನಡೆದ ರ್‍್ಯಾಲಿ­ಯಲ್ಲಿ ಖಾನ್‌, ‘ಕೊಲೆ­ಗ­ಡು­­ಕರ ಕೈಗೆ ದೇಶವನ್ನು ಕೊಡ­ಲಾ­ಗದು. ಮುಜ­ಫ್ಫರ್‌ನಗರದಲ್ಲಿ ನಡೆದ ಹತ್ಯೆ­ಗಳಿಗೆ ಕಾರಣರಾದವರ ವಿರುದ್ಧ ಚುನಾವಣೆ­ಯಲ್ಲಿ ಪ್ರತೀಕಾರ ತೀರಿಸಿಕೊಳ್ಳಿ’ ಎಂದು ಅವರು ಹೇಳಿಕೆ ನೀಡಿದ್ದರು. ಅವರ ವಿರುದ್ಧ ಐಪಿಸಿ 153ಎ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ 125ನೇ ಕಲಂ ಅಡಿ ಎಫ್‌ಐಆರ್‌ ದಾಖಲಾಗಿದೆ.

ಅಲ್ಲಾಹ ಕಡುಕೋಪದಿಂದ ರಾಜೀವ್‌ ಹತ್ಯೆ, ಸಂಜಯ್‌ ಸಾವು
ಬಿಜ್ನೋರ್‌ (ಐಎಎನ್‌ಎಸ್‌): ‘ಅಲ್ಲಾಹನ ಕಡುಕೋಪದಿಂದಲೇ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆಯಾಗಿದ್ದು ಮತ್ತು ಅವರ ಸೋದರ ಸಂಜಯ್‌ ಗಾಂಧಿ  ವಿಮಾನ ಅಪಘಾತದಲ್ಲಿ ಸಾವ­ನ್ನ­ಪಿದ್ದು’ ಎಂದು ಅಜಂ ಖಾನ್ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಾರ್ವಜನಿಕ ಪ್ರಚಾರ ಕಾರ್ಯ ನಡೆಸದಂತೆ ನಿಷೇಧಿಸುವುದಕ್ಕೂ ಕೆಲವು ತಾಸು ಮುನ್ನ ಬಿಜ್ನೋರ್‌ನಲ್ಲಿ ಶುಕ್ರ­ವಾರ ನಡೆದ ರ್‍ಯಾಲಿಯಲ್ಲಿ ಅವರು ಮಾತನಾಡಿದರು.

‘ಸಂಜಯ್‌ ಗಂಭೀರ ಅಪರಾಧ ಚಟು­­ವಟಿಕೆಯಲ್ಲಿ ತೊಡಗಿದ್ದರು. ತುರ್ತು ಪರಿಸ್ಥಿತಿ ಕಾಲದಲ್ಲಿ  ಬಲವಂತ­ವಾಗಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ­ಗಳನ್ನು ಮಾಡಿಸಿದರು. ಅದಕ್ಕಾಗಿ ಅವ­ರಿಗೆ ಅಲ್ಲಾಹ ಕ್ರೂರ ರೀತಿಯಲ್ಲಿ ಸಾಯು­ವಂತಹ ಶಿಕ್ಷೆ ವಿಧಿಸಿದ’ ಎಂದರು.

‘ರಾಜೀವ್‌ ಗಾಂಧಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಬೀಗ ತೆಗೆದು ಹಿಂದೂಗಳು ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಟ್ಟು ಅಲ್ಲಾಹನ ಕಡು ಕೋಪಕ್ಕೆ ಗುರಿಯಾಗಿ ಹತ್ಯೆಯಾದರು’ ಎಂದು ಅಜಂ ಹೇಳಿದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನೂ ಟೀಕಿಸಿದ ಅಜಂ, ‘ಹೆಂಡತಿಗೆ ನಿಯತ್ತಾಗಿಲ್ಲದವನು. ದೇಶಕ್ಕೆ ಮೋಸಕ್ಕೆ ಮಾಡುತ್ತಾನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT