ADVERTISEMENT

ಅಸ್ಸಾಂ; ಉಗ್ರರ ದಾಳಿ, 10 ಜನರ ಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಮೇ 2014, 10:30 IST
Last Updated 2 ಮೇ 2014, 10:30 IST

ಗುವಾಹಟಿ (ಪಿಟಿಐ): ಅಸ್ಸಾಂನ ಬೋಡೋಲ್ಯಾಂಡ್ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿದ ಎರಡು ಗ್ರಾಮಗಳ ಮೇಲೆ ಗುರುವಾರ ರಾತ್ರಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ಮಾಡಿದ ಉಗ್ರಗಾಮಿಗಳು ಮನಬಂದಂತೆ ಗುಂಡುಹಾರಿಸಿ ಮೂವರು ಮಕ್ಕಳು ಸೇರಿದಂತೆ 10 ಮಂದಿಯನ್ನು ಹತ್ಯೆ ಮಾಡಿದ್ದು, ಹಲವರು ಗಾಯಗೊಂಡಿದ್ದಾರೆ.

ಕೋಕ್ರಝಾರ್ ಜಿಲ್ಲೆಯ ಬಲಾಪರ -1 ಗ್ರಾಮಕ್ಕೆ ನಸುಕಿನ ಜಾವ ಎಕೆ-47 ರೈಫಲ್‌ಗಳೊಂದಿಗೆ ನುಗ್ಗಿದ ಬೋಡೋಲ್ಯಾಂಡ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗಕ್ಕೆ (ಎನ್‌ಡಿಎಫ್‌ಬಿ) ಸೇರಿದ ಸುಮಾರು 20-25 ಉಗ್ರರ ಗುಂಪು ಮೂರು ಮನೆಗಳ ಮೇಲೆ ದಾಳಿ ನಡೆಸಿ ಮನಸೋಇಚ್ಛೆ ಗುಂಡು ಹಾರಿಸಿ ಸ್ಥಳದಲ್ಲಿಯೇ ಏಳು ಜನರನ್ನು ಕೊಂದು ಹಾಕಿದೆ ಎಂದು ಪೊಲೀಸರು ತಿಳಿಸಿದರು.

ಘಟನೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಒಟ್ಟು ಏಳು ಜನರನ್ನು ಹತ್ಯೆ ಮಾಡಲಾಗಿದೆ. ಇಬ್ಬರು ವ್ಯಕ್ತಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಐಜಿಪಿ ಎಲ್.ಆರ್.ಬಿಷ್ಣೋಯ್ ಹೇಳಿದರು.

ಮತ್ತೊಂದು ಘಟನೆಯಲ್ಲಿ ನೆರೆಯ ಬಕ್ಸಾ ಜಿಲ್ಲೆಯಲ್ಲಿ ಇದೇ ಸಂಘಟನೆಗೆ ಸೇರಿದ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಒಂದೇ ಕುಟುಂಬದ ಮೂವರು ಹತ್ಯೆಗೀಡಾಗಿದ್ದು, ಹಸುಗೂಸೊಂದು ತೀವ್ರವಾಗಿ ಗಾಯಗೊಂಡಿದೆ.

ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ನಿಜ್‌ದೆಪೆಲಿ ಎಂಬಲ್ಲಿ ಮನೆಯೊಂದರ ಮೇಲೆ ಇಬ್ಬರು ಶಂಕಿತ ಉಗ್ರರು ದಾಳಿ ನಡೆಸಿ ಗುಂಡು ಹಾರಿಸಿದ ಪರಿಣಾಮ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಅವರನನು ಗೌವಾಹಟಿಯ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.