ADVERTISEMENT

ಆತ್ಮಹತ್ಯೆ ಅಪರಾಧವಲ್ಲ ಮಸೂದೆ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST

ನವದೆಹಲಿ: ಆತ್ಮಹತ್ಯೆಯನ್ನು ಅಪರಾಧ ವ್ಯಾಪ್ತಿಯಿಂದ ಹೊರಗಿಡುವ ಮತ್ತು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಿಗೆ  ರಕ್ಷಣೆ, ಉತ್ತೇಜನ ಮತ್ತು ಉತ್ತಮ ಚಿಕಿತ್ಸೆ ಪಡೆಯುವ ಹಕ್ಕನ್ನು ಕಲ್ಪಿಸುವ ಮಸೂದೆಯನ್ನು ಲೋಕಸಭೆ ಸೋಮವಾರ ಅಂಗೀಕರಿಸಿದೆ.

‘ಮಾನಸಿಕ ಆರೋಗ್ಯ ರಕ್ಷಣೆ ಮಸೂದೆ–2016’ಯು ಕಳೆದ ವರ್ಷದ ಆಗಸ್ಟ್‌ನಲ್ಲಿ 100ಕ್ಕೂ ಹೆಚ್ಚು ತಿದ್ದುಪಡಿಗಳೊಂದಿಗೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿತ್ತು. ಲೋಕಸಭೆಯಲ್ಲಿ ಸೋಮವಾರ ಮಸೂದೆ ಬಗ್ಗೆ ಚರ್ಚೆ ನಡೆಯಿತು. ಬಹುತೇಕ ಪಕ್ಷಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದವು. ಸದನವು ಧ್ವನಿ ಮತದ ಮೂಲಕ ಮಸೂದೆಯನ್ನು ಅನುಮೋದಿಸಿತು.

‘ಇದು ರೋಗಿ ಕೇಂದ್ರಿತ ಮಸೂದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಪಡೆಯುವ ಹಕ್ಕನ್ನು ಇದು ನೀಡುತ್ತದೆ.
ಎಲ್ಲ ರಾಜ್ಯಗಳು ಮಾನಸಿಕ ಆರೋಗ್ಯಕ್ಕಾಗಿಯೇ ಪ್ರತ್ಯೇಕ ಯೋಜನೆ ರೂಪಿಸುವುದನ್ನು ಇದು ಕಡ್ಡಾಯಗೊಳಿಸುತ್ತದೆ. ರಾಜ್ಯಸಭೆಯಲ್ಲಿ ಅತಿ ಹೆಚ್ಚು ತಿದ್ದುಪಡಿಗಳೊಂದಿಗೆ ಅಂಗೀಕಾರವಾಗಿರುವುದರಿಂದ ಇದು ಐತಿಹಾಸಿಕ ಮಸೂದೆ’ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ  ಅವರು ಹೇಳಿದರು.

ADVERTISEMENT

ಶಿಕ್ಷೆಗೆ ಅರ್ಹನಲ್ಲ
ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವ ವ್ಯಕ್ತಿ, ಆ ಸಂದರ್ಭದಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಎಂದು ಭಾವಿಸಲಾಗುತ್ತದೆ ಮತ್ತು 
ಆತ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಶಿಕ್ಷೆಗೆ ಅರ್ಹನಲ್ಲ ಎಂದು ಮಸೂದೆ ಹೇಳುತ್ತದೆ.
ಈ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದ ನಂತರ 1987ರ ಮಾನಸಿಕ ಆರೋಗ್ಯ ರಕ್ಷಣೆ ಕಾಯ್ದೆ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ನಡ್ಡಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.